ಬ್ರಹ್ಮಾವರದಲ್ಲಿ ಇಎಸ್‌ಐ ಆಸ್ಪತ್ರೆಗೆ ಜಾಗ ಗುರುತು
Team Udayavani, Sep 30, 2022, 3:17 PM IST
ಉಡುಪಿ: ಜಿಲ್ಲೆಯಲ್ಲಿ 100 ಬೆಡ್ ಗಳ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾಡಳಿತವು ಬ್ರಹ್ಮಾವರದಲ್ಲಿ 5 ಎಕರೆ ಜಾಗವನ್ನು ಗುರುತಿಸಲಾಗಿದೆ. ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ದೇಶಾದ್ಯಂತ 100 ಬೆಡ್‌ಗಳ 23 ಇಎಸ್‌ಐ ಆಸ್ಪತ್ರೆಗಳನ್ನು ಮಂಜೂರು ಮಾಡಿದ್ದು, ಅದರಲ್ಲಿ ಉಡುಪಿ ಜಿಲ್ಲೆಯು ಒಂದಾಗಿದೆ.
ಜಿಲ್ಲಾಡಳಿತ ಗುರುತು ಮಾಡಿದ್ದ ಜಾಗವನ್ನು ಇಎಸ್‌ಐ ಮತ್ತು ಇಎಸ್‌ಐಸಿ ಉನ್ನತ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎರಡು ದಿನಗಳ ಹಿಂದೆ ಇಎಸ್‌ಐ ಕಾರ್ಪೊರೇಶನ್ ಕರ್ನಾಟಕ ಪ್ರಾಂತೀಯ ನಿರ್ದೇಶಕರು, ಇಎಸ್‌ಐ ವೈದ್ಯಕೀಯ ವಿಭಾಗದ ನಿರ್ದೇಶಕರು, ಇಎಸ್‌ಐಸಿ ವೈದ್ಯಕೀಯ ಅಧಿಕಾರಿ, ಇಎಸ್‌ಐಸಿ ಎಂಜಿನಿಯರ್‌ಗಳ ತಂಡ, ಜಿಲ್ಲಾಧಿಕಾರಿಯೊಂದಿಗೆ ಜಂಟಿಯಾಗಿ ಪರಿಶೀಲನೆ ನಡೆಸಿದ್ದಾರೆ.
ಬ್ರಹ್ಮಾವರವೇ ಉತ್ತಮ ಸ್ಥಳ
ಇಡೀ ಜಿಲ್ಲೆಗೆ ಹೃದಯ ಭಾಗವಾಗಿರುವ ಬ್ರಹ್ಮಾವರವೇ ಇಎಸ್‌ಐ ಆಸ್ಪತ್ರೆ ನಿರ್ಮಾಣಕ್ಕೆ ಉತ್ತಮ ಸ್ಥಳವಾಗಿದೆ. ಉಡುಪಿ ನಗರ ದಲ್ಲಿ ಈಗಾಗಲೇ ಸ್ಥಳಾಭಾವವಿದೆ. ಉಡುಪಿ ಹೊರತಾದ ಕುಂದಾಪುರ ಮತ್ತು ಕಾರ್ಕಳ ತಾಲೂಕು ಕೇಂದ್ರಗಳು ಲಾಗಾಯ್ತಿನಿಂದ ಇರುವುದರಿಂದ ಇಲ್ಲಿಯೂ ನಗರ ಪ್ರದೇಶಗಳಲ್ಲಿ ಸ್ಥಳಾಭಾವವಿದೆ. ಉಡುಪಿ ಬಿಟ್ಟರೆ ಕುಂದಾಪುರ ಮತ್ತು ಕಾರ್ಕಳ ತಾಲೂಕಿನವರಿಗೆ ಅನುಕೂಲವಾಗುವುದು ಮಧ್ಯದಲ್ಲಿರುವ ಬ್ರಹ್ಮಾವರ. ಬ್ರಹ್ಮಾ ವರವೀಗ ಹೊಸ ತಾಲೂಕು ಕೇಂದ್ರವಾಗಿರುವ ಕಾರಣ ಅಲ್ಲಿ ಅಭಿವೃದ್ಧಿಗೆ ಅವಕಾಶಗಳಿವೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಲಕ್ಷ ವಿಮಾ ಸದಸ್ಯರು
ಜಿಲ್ಲೆಯಲ್ಲಿ ಇಎಸ್‌ಐಗೆ ಸಂಬಂಧಿಸಿ ವೈದ್ಯಕೀಯ ಕ್ಲಿನಿಕ್ ಅನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಸಿಬಂದಿ ಕೊರತೆ ನೀಗಿಸಬೇಕು. ಸುಸಜ್ಜಿತ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಹಲವು ವರ್ಷಗಳಿಂದ ಕಾರ್ಮಿಕ ವಲಯದ ಬೇಡಿಕೆಯಾಗಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಇಎಸ್‌ಐ ಸೌಲಭ್ಯ ಹೊಂದಿರುವ 1 ಲಕ್ಷ ಕುಟುಂಬ ವಿಮಾದಾರರು ಇದ್ದಾರೆ. ಕಾರ್ಕಳ, ಮಣಿಪಾಲ, ಕುಂದಾಪುರ ಉಡುಪಿ ಸಹಿತ 111 ಇಎಸ್‌ಐ ಡಿಸ್ಪೆನ್ಸರಿ ಕ್ಲಿನಿಕ್‌ಗಳಿದ್ದು, 9 ವೈದ್ಯರ ಹುದ್ದೆಯಲ್ಲಿ ಮೂರು ಹುದ್ದೆ ಮಾತ್ರ ಭರ್ತಿಯಾಗಿದೆ.
100 ಬೆಡ್‌ಗಳ ಸುಸಜ್ಜಿತ ಆಸ್ಪತೆ
ಇಎಸ್‌ಐ ಆಸ್ಪತ್ರೆ 100 ಬೆಡ್‌ಗಳ ಬೃಹತ್ ಸುಸಜ್ಜಿತ ಆಸ್ಪತ್ರೆಯಾಗಿದ್ದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೌಕರ್ಯದಂತೆ ಎಲ್ಲ ವೈದ್ಯಕೀಯ ವಿಭಾಗವನ್ನು ಒಳಗೊಂಡ ಆಸ್ಪತ್ರೆಯಾಗಿರುತ್ತದೆ. ಆಯಾ ವಿಭಾಗಕ್ಕೆ ತಜ್ಞ ವೈದ್ಯರು, ಅಧೀಕ್ಷಕರು, ದಾದಿಯರನ್ನು ನೇಮಿಸಲಾಗುತ್ತದೆ. ಕಾರ್ಮಿಕ ವರ್ಗ ಉತ್ಕೃಷ್ಟ ಆರೋಗ್ಯ ಸೇವೆ ಪಡೆಯುವ ಎಲ್ಲ ಸೇವೆಗಳು ಇಎಸ್‌ಐ ಆಸ್ಪತ್ರೆ ಹೊಂದಿರಲಿದೆ ಎಂದು ಇಎಸ್‌ಐ ವೈದ್ಯರು ತಿಳಿಸಿದ್ದಾರೆ.
ವರದಿ ಬಂದ ಬಳಿಕವೇ ಅಧಿಕೃತ: ಜಿಲ್ಲೆಗೆ ಇಎಸ್‌ಐ ಆಸ್ಪತ್ರೆ ಮಂಜೂರಾದ ಬಳಿಕ ಜಾಗ ಗುರುತಿಸಲು ಸರಕಾರದ ಸೂಚನೆ ಬಂದ ಹಿನ್ನೆಲೆಯಲ್ಲಿ ಬ್ರಹ್ಮಾವರದಲ್ಲಿ 5 ಎಕ್ರೆ ಸರಕಾರಿ ಜಾಗವನ್ನು ಗುರುತು ಮಾಡಲಾಗಿದ್ದು, ಇಎಸ್‌ಐ ಮತ್ತು ಇಎಸ್‌ಐಸಿ ಅಧಿಕಾರಿಗಳು ಭೇಟಿ ಜಾಗ ಪರಿಶೀಲಿಸಿದ್ದಾರೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಅವರ ವರದಿ ಬಂದ ಬಳಿಕವೇ ಅಧಿಕೃತವಾಗಬೇಕು. – ಕೂರ್ಮಾ ರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.