Udupi; ಸವಾಲುಗಳ ನಡುವೆ ಡ್ರ್ಯಾಗನ್ ಫ್ರೂಟ್ ಬೆಳೆಗೆ ರೈತರ ಆಸಕ್ತಿ
ಕಾರ್ಕಳ ಭಾಗದಲ್ಲಿ 6 ಹೆಕ್ಟೇರ್, ಕುಂದಾಪುರ, ಉಡುಪಿಯಲ್ಲಿ ತಲಾ 2 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ
Team Udayavani, Aug 25, 2024, 4:20 PM IST
ಉಡುಪಿ: ಜಿಲ್ಲೆಯಲ್ಲಿ ಹಲವು ಸವಾಲುಗಳ ನಡುವೆಯೂ ಡ್ರ್ಯಾಗನ್ ಫ್ರೂಟ್ ಅಲ್ಲಲ್ಲಿ ಯಶಸ್ವಿಯಾಗುತ್ತಿದ್ದರೆ, ಇನ್ನೊಂದೆಡೆ ಇಳುವರಿ ಕುಸಿತವು ಬೆಳೆಗಾರರಲ್ಲಿ ತಲೆಬಿಸಿಗೆ ಕಾರಣವಾಗುತ್ತಿದೆ
ಭತ್ತ, ಅಡಕೆ, ಬಾಳೆ, ತೆಂಗು, ಕಾಳು ಮೆಣಸು ಕರಾವಳಿಯಲ್ಲಿ ಸಾಮಾನ್ಯ ಕೃಷಿಯಾಗಿದ್ದು, ಕಳೆದ ಐದಾರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬೆರಳಣಿಕೆಯಷ್ಟು ಕೃಷಿಕರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಸಾಹಸ ಆರಂಭಿಸಿದ್ದರು. ಹವಾಮಾನ, ನೀರು ಮೊದಲಾದ ದೃಷ್ಟಿಯಿಂದ ಬಯಲು ಸೀಮೆ ಪ್ರದೇಶಗಳಲ್ಲಿ ಮಾತ್ರ ಡ್ರ್ಯಾಗನ್ ಫ್ರೂಟ್ ಸಮರ್ಪಕವಾಗಿ ಬೆಳೆಯುತ್ತದೆ. ಕರಾವಳಿ ಹವಾಮಾನವು ಈ ಬೆಳೆಗೆ ತದ್ವಿರುದ್ಧವಾಗಿದ್ದರೂ ಇಲ್ಲಿನ ಕೆಲವು ಕೃಷಿಕರು ಲಾಭದಾಯಕ ದೃಷ್ಟಿಕೋನವಲ್ಲದೇ ಪ್ರಯೋಗಾತ್ಮಕವಾಗಿ ಬೆಳೆದು ಒಳ್ಳೆಯ ಇಳುವರಿ ಪಡೆದಿದ್ದಾರೆ.
ಆರಂಭದಲ್ಲಿ ಕಾರ್ಕಳ ಭಾಗದಲ್ಲಿ ಕೆಲವು ಕೃಷಿಕರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಆರಂಭಿಸಿದ್ದು ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 3 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಇದೀಗ ಕಾರ್ಕಳ ಭಾಗದಲ್ಲಿ 6 ಹೆಕ್ಟೇರ್, ಕುಂದಾಪುರ ಹಾಗೂ ಉಡುಪಿಯಲ್ಲಿ ತಲಾ 2 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆ ಬೆಳೆಯಲಾಗುತ್ತಿದೆ. ಕೆಲವರು ಲಾಭ ಕಂಡುಕೊಂಡರೆ, ಇನ್ನು ಕೆಲವರು ನಷ್ಟ ಎದುರಿಸುತ್ತಿದ್ದಾರೆ.
ಮಾರುಕಟ್ಟೆ ದರ ಏರಿಳಿತ
ಜುಲೈ ಸೀಸನ್ ತಿಂಗಳಾಗಿದ್ದು, ಹೊರ ಜಿಲ್ಲೆ ಸಹಿತ ಸ್ಥಳೀಯವಾಗಿಯೂ ಹಣ್ಣು ಪೂರೈಕೆ ಉತ್ತಮವಾಗಿರುತ್ತದೆ, 150-200 ರೂ. ಇತ್ತು. ಇದೀಗ ಪೂರೈಕೆ ಕಡಿಮೆಯಾಗಿದ್ದು, ಕೇರಳ, ಮಹಾರಾಷ್ಟ್ರ, ಬೆಂಗಳೂರು ಮಾರುಕಟ್ಟೆಗಳಿಂದ ಪೂರೈಕೆಯಾಗುತ್ತಿದೆ. ಸಾಗಾಟ ವೆಚ್ಚ ಸೇರಿರುವುದರಿಂದ ಬೆಲೆ ಹೆಚ್ಚಿರುತ್ತದೆ ಕೆಜಿಗೆ 250-280 ದರವಿದೆ ಎಂದು ಮಣಿಪಾಲದ ಹಣ್ಣು ತರಕಾರಿ ವ್ಯಾಪಾರಿ ರಮೇಶ್ ಹೇಳುತ್ತಾರೆ
ಕೃಷಿ ವಿಜ್ಞಾನಿಗಳು ಏನು ಹೇಳುತ್ತಾರೆ?
ನೀರಿನಾಂಶ ಕಡಿಮೆ ಇರುವ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಉತ್ತಮ ಇಳುವರಿ ಕೊಡುತ್ತದೆ. ಇದು ಜೂನ್-ಜುಲೈ ತಿಂಗಳಿನಲ್ಲಿ ಹಣ್ಣು ಬರುವ ಬೆಳೆ. ಕರಾವಳಿ ಭಾಗದಲ್ಲಿ ಮಳೆ ಹೆಚ್ಚಿರುವುದರಿಂದ ಬೆಳೆಗೆ ಸಮಸ್ಯೆಗಳಾಗುವ ಸಾಧ್ಯತೆ ಹೆಚ್ಚು. ಫಂಗಸ್ ಕಾಟ, ನೀರಿನಾಂಶ ಹೆಚ್ಚಳದಿಂದ ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆಯು ಇದೆ. ಇದಕ್ಕೆ ಕೆಲವು ಪರಿಹಾರಗಳು ಲಭ್ಯವಿದೆ. ನೈಸರ್ಗಿಕವಾಗಿ ವಾತಾವರಣ ಅನುಕೂಲವಾಗಿದ್ದರೆ ಅಧಿಕ ವೆಚ್ಚದ ಅಗತ್ಯವಿಲ್ಲ. ಉತ್ಪಾದನೆ ವೆಚ್ಚ ಅಧಿಕವಾಗಿ ಬೆಳೆಗಾರರಿಗೆ ಆರ್ಥಿಕ ನಷ್ಟವು ಆಗಬಹುದು. ಯೂಟ್ಯೂಬ್ ವೀಡಿಯೋಗಳನ್ನು ನೋಡಿಕೊಂಡು ಡ್ರ್ಯಾಗನ್ ಫ್ರೂಟ್ ಬೆಳೆಯುವ ಮುನ್ನ ಅಗತ್ಯ ಮಾಹಿತಿಗಳನ್ನು ತಜ್ಞರು, ಬೆಳೆಗಾರರಿಂದ ಪಡೆಯಬೇಕು. ಮಾರುಕಟ್ಟೆ ಮೌಲ್ಯವನ್ನು ತಿಳಿಯಬೇಕು. ಈಗಾಗಲೇ ಬೆಳೆ ಬೆಳೆದ ಕೃಷಿಕರೊಂದಿಗೆ ಮುಕ್ತವಾಗಿ ಚರ್ಚಿಸಿ ಮುಂದುವರಿಯಬೇಕು ಎಂದು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದ ವಿಜ್ಞಾನಿ ಡಾ| ಚೈತನ್ಯ ಎಚ್. ಎಸ್. ತಿಳಿಸಿದ್ದಾರೆ.
ಆರೋಗ್ಯ ದೃಷ್ಟಿಯಿಂದ ಉತ್ತಮ
ಡ್ರ್ಯಾಗನ್ ಫ್ರೂಟ್ ಬಾಯಿಗೆ ರುಚಿಕರವಲ್ಲದಿದ್ದರೂ ಆರೋಗ್ಯ ದೃಷ್ಟಿಯಿಂದ ಉತ್ತಮ ಬೇಡಿಕೆ ಹೊಂದಿದೆ ಎಂಬುದು ಬೆಳೆಗಾರರ ಅಭಿಪ್ರಾಯ. ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು ಕ್ಯಾಲ್ಸಿಯಂ, ಕಬ್ಬಿನಾಂಶ ಹಾಗೂ ವಿಟಮಿನ್ ಅಂಶಗಳನ್ನು ಹೊಂದಿರುವ ಈ ಹಣ್ಣು ಹೆಚ್ಚಾಗಿ ಜ್ಯೂಸ್ ಮಾಡಿ ಉಪಯೋಗಿಸಲಾಗುತ್ತದೆ.
ಮಾಹಿತಿ ತಿಳಿದು ಬೆಳೆಯಬೇಕು
ನಾಲ್ಕು ವರ್ಷಗಳಿಂದ ಅರ್ಧ ಎಕರೆ ಜಾಗದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆಯುತ್ತಿದ್ದೇವೆ. ಈ ಬೆಳೆಯ ನಿರ್ವಹಣೆ ಬಾಯಿ ಮಾತಿಗೆ ಹೇಳುವಷ್ಟು ಸುಲಭ ಇರುವುದಿಲ್ಲ. ಹೆಚ್ಚು ಮಳೆ ಸುರಿದಾಗ ಬೆಳೆಗೆ ತೊಂದರೆಯಾಗುತ್ತದೆ. ಹಣ್ಣುಗಳು ಕೊಳೆತು ನಷ್ಟವು ಸಂಭವಿಸುತ್ತದೆ. ಕೀಟ ಬಾಧೆಯೂ ಇರುತ್ತದೆ. ಹೆಚ್ಚು ಸೂಕ್ಷ್ಮ ಮುತುವರ್ಜಿಯಿಂದ ಎಲ್ಲ ಮಾಹಿತಿ ತಿಳಿದು ಬೆಳೆಯಬೇಕು. ಅಂಗಡಿ, ಮಾರುಕಟ್ಟೆಗೆ ಮಾರಾಟ ಮಾಡುವುದಿಲ್ಲ. ಮನೆಯಲ್ಲಿಯೇ ಗ್ರಾಹಕರಿಗೆ ಕೆಜಿಗೆ 250-300 ರೂ.ಗೆ ಮಾರಾಟ ಮಾಡುತ್ತೇವೆ.
-ಇಗ್ನೇಶಿಯಸ್ ಡಿ’ಸೋಜಾ, ಪಾಂಬೂರು
ಯಶಸ್ವಿಯಾಗುವ ವಿಶ್ವಾಸ
ಒಂದು ಎಕ್ರೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆದಿದ್ದು, ಈಗಾಗಲೇ 1 ವರ್ಷ 10 ತಿಂಗಳು ಕಳೆದಿದೆ. ಆರಂಭದಲ್ಲಿ ಮಳೆಯಿಂದಾಗಿ 1.50 ಕ್ವಿಂಟಲ್ ಕಾಯಿ ಕೊಳೆತು ಹೋಗಿತ್ತು. ಇದೀಗ ಮತ್ತೆ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ. ಕೃಷಿ ವಿಜ್ಞಾನಿಗಳು, ತೋಟಗಾರಿಕೆ ಇಲಾಖೆಯಿಂದಲೂ ಮಾಹಿತಿಗಳನ್ನು ಪಡೆದಿದ್ದೇನೆ. ಕರಾವಳಿ ಹವಾಮಾನವು ಈ ಬೆಳೆಗೆ ಕೆಲವು ಸಮಸ್ಯೆಗಳು ತಂದೊಡ್ಡುತ್ತವೆ. ಆದರೆ ನಿರ್ವಹಣೆ ಬಗ್ಗೆ ಹೆಚ್ಚಿನ ಒತ್ತು ನೀಡುತ್ತ, ಪೂರಕ ಕ್ರಮಗಳನ್ನು ಕೈಗೊಂಡಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಸ್ಥಳೀಯವಾಗಿ ಒಂದಿಷ್ಟು ಪ್ರಮಾಣದ ಬೆಳೆಯನ್ನು ಕೆಜಿಗೆ 150 ರೂ.ನಂತೆ ಮಾರಾಟ ಮಾಡಿದ್ದೇನೆ.
– ವಾಸು ಜೆ. ಕೆ., ಜಡ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.