ಮುಗಿಯದ ಸೀಮೆಎಣ್ಣೆ ಗೋಳು; ಸಂಕಷ್ಟದಲ್ಲಿ ನಾಡದೋಣಿ ಮೀನುಗಾರರು
Team Udayavani, Oct 21, 2022, 1:15 PM IST
ಬೈಂದೂರು: ಕರಾವಳಿ ಭಾಗದ ಮೀನುಗಾರರಿಗೆ ಸಮರ್ಪಕ ಸೀಮೆ ಎಣ್ಣೆ ಪೂರೈಕೆ ಯಾಗದ ಹಿನ್ನೆಲೆಯಲ್ಲಿ ಸಂಕಷ್ಟ ಪಡುವಂತಾಗಿದೆ. ಮೀನುಗಾರಿಕಾ ಆರಂಭಗೊಂಡು ಎರಡೂವರೆ ತಿಂಗಳು ಕಳೆದಿದೆ. ಆದರೆ ಇದುವರಗೆ ಸರಕಾರ ಸೀಮೆಎಣ್ಣೆ ಪೂರೈಸದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ನಾಡದೋಣಿ ಮೀನುಗಾರರು ಆತಂಕಪಡುವಂತಾಗಿದೆ. ಔಟ್ ಬೋರ್ಡ್ ಎಂಜಿನ್ ಅಳವಡಿಸಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುತ್ತಿರುವ ನಾಡದೋಣಿಗಳಿಗೆ ರಾಜ್ಯ ಸರಕಾರ ಒದಗಿಸುತ್ತಿರುವ ಮಾಸಿಕ ತಲಾ 150 ಲೀಟರ್ ಸೀಮೆ ಎಣ್ಣೆ ಪ್ರಮಾಣವನ್ನು 300 ಲೀಟರ್‌ಗೆ ಹೆಚ್ಚಿಸಿದೆ. ಆ ಪ್ರಮಾಣದ ಸೀಮೆಎಣ್ಣೆಯನ್ನು ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ತಲಾ 150 ಲೀಟರ್ ಸೀಮೆಎಣ್ಣೆ ಮಾತ್ರ ಪ್ರತೀ ತಿಂಗಳಿಗೆ ಒದಗಿಸುತ್ತಿದ್ದಾರೆ. ಆದರೆ ಈ ಬಾರಿ ಅದು ಕೂಡ ದೊರೆತಿಲ್ಲ.
ಕೇಂದ್ರ ಸರಕಾರದ ಆದೇಶದಲ್ಲಿ 2021-22ನೇ ಸಾಲಿಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುಮಾರು 4,514 ಮೀನುಗಾರಿಕಾ ದೋಣಿಗಳಿಗೆ 3,540 ಕೆ.ಎಲ್. ಪ್ರಮಾಣದ ಸೀಮೆಎಣ್ಣೆಯನ್ನು ವಿಶೇಷ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಲಾಗಿದೆ.
ಸೀಮೆಎಣ್ಣೆ ಹಂಚಿಕೆ
2021ರ ಎಪ್ರಿಲ್‌ನಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿರುವ 4,514 ಮೀನುಗಾರಿಕಾ ದೋಣಿಗಳಿಗೆ 1,355 ಕೆ.ಎಲ್. ಸೀಮೆಎಣ್ಣೆಯನ್ನು ಹಂಚಿಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಸುಮಾರು 2,610 ಮೀನುಗಾರಿಕಾ ದೋಣಿಗಳಿಗೆ ಪರವಾನಿಗೆ ನೀಡಲಾಗಿದೆ. ಹೊಸದಾಗಿ ಸುಮಾರು 2,500 ದೋಣಿಗಳಿಗೆ ಪರ್ಮಿಟ್ ನೀಡಲಾಗಿದೆ.
ಆದರೆ ಹೊಸದಾಗಿ ಪರ್ಮಿಟ್ ನೀಡಿದ 2,500 ದೋಣಿ ಗಳಿಗೆ ಸೀಮೆಎಣ್ಣೆ ಪ್ರಮಾಣ ನಿಗದಿಪಡಿಸದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈ ಹಿಂದೆ ಪರ್ಮಿಟ್ ಹೊಂದಿದ 2,610 ಮೀನುಗಾರಿಕಾ ದೋಣಿಗಳಿಗೆ ಹಂಚಿಕೆಯಾದ 783 ಕೆ.ಎಲ್. ಸೀಮೆಎಣ್ಣೆಯನ್ನು 5,110 ದೋಣಿಗಳಿಗೂ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಪ್ರತೀ ದೋಣಿಗಳಿಗೂ ಕೇವಲ 150ಲೀ. ಸೀಮೆಎಣ್ಣೆಯನ್ನು ಹಂಚಿಕೆ ಮಾಡಿಕೊಳ್ಳಬೇಕಾಗಿದೆ.
ಮಾರುಕಟ್ಟೆಯಲ್ಲಿಯೂ ದೊರೆಯುತ್ತಿಲ್ಲ
ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಖರೀದಿಸಿ ಮೀನು ಗಾರಿಕೆ ನಡೆಸುವ ಎಂದರೂ ಅಲ್ಲಿಯೂ ದೊರಕುತ್ತಿಲ್ಲ ಎನ್ನುವುದು ಮೀನುಗಾರರು ಅಭಿಪ್ರಾಯ. ಔಟ್‌ಬೋರ್ಡ್ ಎಂಜಿನ್‌ಗೆ ಸೀಮೆಎಣ್ಣೆ ಅತ್ಯಗತ್ಯ ವಾಗಿರುವುದರಿಂದ ಪರ್ಮಿಟ್ ಹೊಂದಿದ ಎಲ್ಲ ದೋಣಿ ಗಳಿಗೂ ತಲಾ 300 ಲೀ.ನಂತೆ ಪ್ರತೀ ತಿಂಗಳು ಸೀಮೆಎಣ್ಣೆ ಹಂಚಿಕೆ ವ್ಯವಸ್ಥೆ ಮಾಡಬೇಕು ಎಂದು ಮೀನುಗಾರರು ಆಗ್ರಹಿಸುತ್ತಿದ್ದಾರೆ.
ಭರವಸೆ ಮಾತ್ರ: ಈ ಬಾರಿ ಮೀನುಗಾರಿಕೆ ಋತು ಆರಂಭಗೊಂಡು ಸುಮಾರು ಎರಡೂವರೆ ತಿಂಗಳು ಕಳೆದರೂ ಇದುವರೆಗೂ ಸೀಮೆಎಣ್ಣೆ ಹಂಚಿಕೆ ಮಾಡಿಲ್ಲ, ರಾಜ್ಯ ಸರಕಾರ ಪ್ರತೀ ನಾಡದೋಣೆಯವರಿಗೆ ತಲಾ ಮಾಸಿಕ 300 ಲೀ ಸೀಮೆಎಣ್ಣೆಯನ್ನು ವಿತರಿಸುತ್ತೇವೆ ಎಂದು ಭರವಸೆ ನೀಡಿತ್ತು, ಆದರೆ ಈಗ ಅದು ಹುಸಿಯಾಗಿದೆ, ಇನ್ನಾದರೂ ಸರಕಾರ ಎಚ್ಚೆತ್ತು ಪರ್ಮಿಟ್ ಹೊಂದಿದ ಎಲ್ಲ ಮೀನುಗಾರಿಕಾ ದೋಣಿಗಳಿಗೂ ತಲಾ ಮಾಸಿಕ 300 ಲೀ. ಸೀಮೆಎಣ್ಣೆ ಹಂಚಿಕೆ ಮಾಡಬೇಕು ಇಲ್ಲದಿದ್ದರೆ ಕರಾವಳಿಯ ಮೂರು ಜಿಲ್ಲೆಯ ಮೀನುಗಾರರು ಸಂಘಟಿತರಾಗಿ ಉಗ್ರ ಹೋರಾಟ ಮಾಡಲಾಗುವುದು. – ನಾಗೇಶ ಖಾರ್ವಿ ಅಳ್ವೆಕೋಡಿ, ಮೀನುಗಾರಿಕಾ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.