ರಸ್ತೆಯ ಇಕ್ಕೆಲಗಳಲ್ಲಿ ಕಸ: ಕಡಿವಾಣಕ್ಕೆ ಆಗ್ರಹ
Team Udayavani, Jun 3, 2020, 5:18 AM IST
ಮಲ್ಪೆ: ಸ್ವಚ್ಛತೆಗೆ ಆಡಳಿತ ಹಗಲಿರುಳು ಶ್ರಮಿಸುತ್ತಿದ್ದರೂ, ರಸ್ತೆ ಬದಿ ತ್ಯಾಜ್ಯ ಎಸೆಯುವ, ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಹೋಗುವ ಪ್ರವೃತ್ತಿ ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವುದು ನಗರ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವುದರ ಜತೆಗೆ ಮಳೆಗಾಲದಲ್ಲಿ ರೋಗ ಭೀತಿ ಉಂಟು ಮಾಡಿದೆ.
ಕೊಳೆತ ತ್ಯಾಜ್ಯಗಳನ್ನು ನಾಯಿಗಳು, ಕಾಗೆಗಳು ತಿನ್ನುತ್ತ ಎಲ್ಲೆಡೆ ಎಸೆಯುತ್ತಿವೆ. ಲಾಕ್‌ಡೌನ್ ಆರಂಭದಲ್ಲಿ ವಾಹನ ಮತ್ತು ಜನರ ಓಡಾಟ ಕಡಿಮೆ ಇದ್ದಿದ್ದರಿಂದ ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಎಸೆಯುವಿಕೆ ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿತ್ತು. ಲಾಕ್‌ಡೌನ್ ಸಡಿಲಿಕೆಯಾದ ದಿನದಿಂದ ಮತ್ತೆ ಕಸದ ರಾಶಿಗಳು ರಾರಾಜಿಸಲಾರಂಭಿಸಿದ್ದು, ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆದಿವುಡುಪಿ ಸಂತೆ ಮಾರುಕಟ್ಟೆಯ ಹೊರೆಗೆ, ಪಂದುಬೆಟ್ಟು ಮಸೀದಿ ಎದುರು, ಪಂದುಬೆಟ್ಟುವಿನಿಂದ ಕಲ್ಮಾಡಿ ವರೆಗಿನ ರಸ್ತೆಯ ಇಕ್ಕೆಲಗಳಲ್ಲಿ, ಕೊಡವೂರು ಜೇಮ್ಸ್ ಕಂಪೌಂಡ್-ಪಡ್ಲನೆರ್ಗಿ ಜಂಕ್ಷನ್, ಕಿದಿಯೂರು ಮಜ್ಜಿಗೆ ಪಾದೆ ಬಳಿ, ಕನ್ನರ್ಪಾಡಿ ರಸ್ತೆ, ಲಕ್ಷ್ಮೀನಗರ ಮುಖ್ಯ ರಸ್ತೆಯ ಇಕ್ಕೆಲ, ಕೆಳಾರ್ಕಳಬೆಟ್ಟು ಪೊಟ್ಟುಕರೆ ರಸ್ತೆ ಬದಿ ಕಸ ಎಸೆಯಲಾಗುತ್ತಿದೆ.
ಎಚ್ಚರಿಕೆಗೆ ಬೆಲೆಯೇ ಇಲ್ಲ
ತ್ಯಾಜ್ಯ ಎಸೆಯುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರೂ, ಕಸವನ್ನು ಎಸೆದು ಹೋಗುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಪ್ರತಿದಿನ ಮನೆ ಮನೆಗೆ ಭೇಟಿ ನೀಡಿ ಕಸ ತೆಗೆದುಕೊಂಡು ಹೋಗುತ್ತಾರೆ. ಆದರೆ ನಗರಸಭೆಗೆ ಹೊಂದಿಕೊಂಡಿರುವ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಕಸ ವಿಲೇಗೆ ಯಾರೂ ಬರುತ್ತಿಲ್ಲ. ಹಾಗಾಗಿ ಅತ್ತ ನಗರಸಭೆಯೂ ಇಲ್ಲ. ಇತ್ತ ಗ್ರಾ.ಪಂ. ಕೂಡ ಇಲ್ಲದೆ ಅತಂತ್ರರಾಗಿದ್ದೇವೆ ಎನ್ನುತ್ತಾರೆ ಅವರು.
ನಿರ್ದಾಕ್ಷಿಣ್ಯ ಕ್ರಮ ಅಗತ್ಯ
ಸಂಬಂಧಪಟ್ಟ ಆಡಳಿತ ಎರಡು ಮೂರು ದಿನಗಳಿಗೆ ಕಸವನ್ನು ತೆರವುಗೊಳಿಸಿದರೂ ಮಾರನೇ ದಿನವೇ ಅಷ್ಟೆ ಎತ್ತರದಲ್ಲಿ ಕಸದ ರಾಶಿ ಪ್ರತ್ಯಕ್ಷವಾಗುತ್ತದೆ. ಕೊಡವೂರು ಜೇಮ್ಸ್ ಕೌಂಪೌಂಡ್-ಪಡ್ಲನೆರ್ಗಿ ಜಂಕ್ಷನ್ ಬಳಿ ಕಣ್ಣೆದುರೆ ರಾಜಾರೋಷವಾಗಿ ಕಸ ಎಸೆದು ಹೋಗುತ್ತಾರೆ. ರಸ್ತೆಗಳು ಕಸ ವಿಲೇವಾರಿ ಸ್ಥಳಗಳಾಗಿ ಮಾರ್ಪಟ್ಟಿವೆ. ಕಸ ಎಸೆಯವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
– ಪ್ರಶಾಂತ್ ಸನಿಲ್,
ಜೇಮ್ಸ್ ಕಂಪೌಂಡ್, ಸ್ಥಳೀಯರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.