ಕರೆಂಟ್ ಹೋದರೆ ನೆಟ್ವರ್ಕ್ ಸ್ಥಗಿತ
ಕಾಪು ತಾ|ನಲ್ಲಿ ಕಾಡುತ್ತಿದೆ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆ
Team Udayavani, Jul 15, 2022, 3:05 PM IST
ಕಾಪು: ಕಾಪು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ನೆಟ್ವರ್ಕ್ ಸಮಸ್ಯೆ ಜನರನ್ನು ಅತಿಯಾಗಿ ಕಾಡುತ್ತಿದೆ. ಬಹುತೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳಿದ್ದರೂ ಅಗತ್ಯದ ಸಂದರ್ಭಗಳಲ್ಲಿ ನೆಟ್ವರ್ಕ್ ಸಿಗದೆ ಸಂಪರ್ಕ ವಂಚಿತರಾಗಿ ಜನರು ಪರದಾಡುವಂತಾಗಿದೆ.
ತಾಲೂಕಿನಲ್ಲಿ 14 ಕಡೆ ಬಿಎಸ್‌ಎನ್‌ಎಲ್ ಟವರ್‌ಗಳು ಇವೆ. ಟವರ್‌ಗಳೆಷ್ಟು ಇದ್ದರೂ ಪ್ರಯೋಜನವೇನು? ಕರೆಂಟ್ ಹೋದ ಕೂಡಲೇ ಟವರ್ ಆಫ್ ಆಗಿ ಹೆಚ್ಚಿನ ಕಡೆಗಳಲ್ಲಿ ಸಿಗ್ನಲ್ ಮಾಯವಾಗುತ್ತದೆ. ಗ್ರಾಹಕ ಸ್ನೇಹಿಯಾಗುವ ಉದ್ದೇಶದೊಂದಿಗೆ ಅಲ್ಲಲ್ಲಿ ಟವರ್ ನಿರ್ಮಿಸಿ ಸಿಗ್ನಲ್ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೂ, ಟವರ್‌ನಡಿಯಲ್ಲಿ ಇದ್ದರೂ ಸಿಗ್ನಲ್ ದೊರಕುತ್ತಿಲ್ಲ.
3 ಜಿ, 4ಜಿ ಯುಗದಲ್ಲಿ ಎಲ್ಲ ಕಡೆಗಳಲೂ ನೆಟ್ವರ್ಕ್ ಸಿಗುತ್ತದೆ ಎಂದು ನಂಬಿಕೊಂಡು ಜನ ತಮ್ಮ ಮನೆ, ಕಚೇರಿ ಗಳಲ್ಲಿದ್ದ ಸ್ಥಿರ ದೂರವಾಣಿ ಸಹಿತ ಖಾಸಗಿ ಮೊಬೈಲ್ ಸಿಮ್ ಗಳಿಗೆ ಬದಲಾಗಿ ಬಿಎಸ್‌ಎನ್‌ಎಲ್ ಸಿಮ್‌ಗಳನ್ನು ಹಾಕಿಸಿಕೊಂಡಿದ್ದರು. ಕೆಲವು ವರ್ಷಗಳ ಕಾಲ ನೆಟ್ವರ್ಕ್ ಉತ್ತಮ ರೀತಿಯಲ್ಲಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ನೆಟ್ವರ್ಕ್‌ಗೆ ಗ್ರಹಣ ಬಡಿದಂತಾಗಿದೆ.
ಸಮಸ್ಯೆಯೇನು? ತಾಲೂಕಿನ 11 ಎಕ್ಸ್‌ಚೇಂಜ್‌ಗಳನ್ನು ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿ ಅಧಿಕಾರಿಗಳು ಮತ್ತು ಸಿಬಂದಿಗಳ ಕೊರತೆಯಿದೆ. ಒಬ್ಬರೇ ಮೇಲ್ವಿಚಾರಕರಿದ್ದು, ಅವರೊಂದಿಗೆ ಮೂರು ಮಂದಿ ಟೆಕ್ನಿಶಿಯನ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ನೆಟ್ವರ್ಕ್ ಸಮಸ್ಯೆಗೆ ತುರ್ತು ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಟವರ್‌ಗಳಿದ್ದು ಟವರ್‌ಗಳಲ್ಲಿ ಬ್ಯಾಟರಿ ಬ್ಯಾಕಪ್ ಕಡಿಮೆಯಿದೆ. ಜನರೇಟರ್‌ಗಳು ಇರುವಲ್ಲಿ ನಿರ್ವಹಣೆಯಿಲ್ಲದೆ ಸೊರಗಿ ಹೋಗಿವೆ. ಕರೆಂಟ್ ಹೋದಾಗ ಎಂಜಿನ್ ಆಫ್ ಆಗುತ್ತದೆ, ಅದನ್ನು ಆನ್ ಮಾಡಲು ಸೂಕ್ತ ಸಿಬಂದಿಗಳ ಕೊರತೆಯಿದೆ. ಬ್ಯಾಟರಿ ಬ್ಯಾಕ್ ಅಪ್ ಇಲ್ಲದ ಪರಿಣಾಮ ರಿಸ್ಟಾರ್ಟ್ ಆಗಲು ಸಮಯ ತೆಗೆದುಕೊಳ್ಳುತ್ತಿದೆ.
ಸಿಬಂದಿ ಕೊರತೆ: ಕಾಪು, ಕಟಪಾಡಿ, ಪಡುಬಿದ್ರಿ, ಪಿಲಾರು, ಶಂಕರಪುರ, ಶಿರ್ವ, ಹೆಜಮಾಡಿ ದೂರವಾಣಿ ಸಂಪರ್ಕ ಕೇಂದ್ರಗಳಿದ್ದು ಪಣಿಯೂರು ಮತ್ತು ಉಚ್ಚಿಲ, ಪಲಿಮಾರು, ಅಜ್ಜರಕಾಡು ಸಬ್ ಎಕ್ಸ್‌ಚೇಂಜ್‌ಗಳಿವೆ. ಇಲ್ಲಿ ಎಸ್‌ಡಿಇ, ಜೆಟಿಒ, ಜೆಇ, ಟೆಕ್ನಿಶಿಯನ್, ಕಚೇರಿ ನಿರ್ವಹಣೆ ಹೀಗೆ ಅಧಿಕಾರಿಗಳು ಸೇರಿ 3-5 ಮಂದಿ ಸಿಬಂದಿ ಕರ್ತವ್ಯದಲ್ಲಿರಬೇಕಿತ್ತು. ಆದರೆ ವಿಆರ್‌ಎಸ್ ನಿಯಮದಿಂದಾಗಿ ಹೆಚ್ಚಿನವರೆಲ್ಲ ರಾಜೀನಾಮೆ ಕೊಟ್ಟು ಮನೆ ಹೋಗಿದ್ದು, ಪ್ರಸ್ತುತ 11 ಎಕ್ಸ್‌ಚೇಂಜ್‌ಗಳಲ್ಲಿ ಒಬ್ಬರೇ ಜೆಟಿಒ ಮತ್ತು 3 ಮಂದಿ ಟೆಕ್ನಿಶಿಯನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೇವೆ ವಿಳಂಬ: ನೆಟ್ವರ್ಕ್ ಸಮಸ್ಯೆಯಿಂದಾಗಿ ಗ್ರಾ.ಪಂ. ಸಹಿತವಾಗಿ ಸರಕಾರಿ ಕಚೇರಿಗಳಿಗೆ ಬರುವ ಜನರು ಕೆಲಸ ಕಾರ್ಯಗಳಿಗಾಗಿ ಕಚೇರಿಗಳಿಗೆ ಅಲೆಯಬೇಕಾಗಿದೆ. ಬ್ಯಾಂಕ್ ಗಳು, ಅಂಚೆ ಕಚೇರಿ, ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಪಡಿತರ ಅಂಗಡಿ, ಶಾಲೆ, ಗ್ರಾ.ಪಂ. ಕಚೇರಿಗಳು, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ನಾಡ ಕಚೇರಿ ಹೀಗೆ ಎಲ್ಲ ಕಡೆಗಳಲ್ಲೂ ಬಿಎಸ್‌ಎನ್‌ಎಲ್ ನೆಟ್ವರ್ಕ್‌ನ್ನೇ ಅವಲಂಬಿಸಿದ್ದಾರೆ. ಸರಕಾರಿ ಕಚೇರಿಗಳಲ್ಲಂತೂ ಪ್ರತಿಯೊಂದು ಕೆಲಸ ಕಾರ್ಯಗಳನ್ನು ಆನ್‌ಲೈನ್ ಮೂಲಕವೇ ನಡೆಸಬೇಕಾಗಿದ್ದು ಬಹುತೇಕ ಕಡೆಗಳಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸೌಲಭ್ಯವನ್ನೇ ಹೊಂದಿರುವುದರಿಂದ ಕೆಲಸ ನಿರ್ವಹಣೆಗೆ ತೊಂದರೆಯಾಗುತ್ತಿದೆ. ನೆಟ್ವರ್ಕ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆ ಮತ್ತು ಜನರ ಶಾಪದಿಂದ ತಪ್ಪಿಸಿಕೊಳ್ಳಲು ಸಿಬಂದಿ ವೈಯಕ್ತಿಕ ನೆಲೆಯಲ್ಲಿ ಅನ್ಯ ನೆಟ್‌ವರ್ಕ್‌ನ ಡೋಂಗಲ್ ಬಳಸಿ ಕಚೇರಿ ಕೆಲಸ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಸರಕಾರಿ ಕಚೇರಿಗಳಲ್ಲಿ, ಬ್ಯಾಂಕ್ ಗಳಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳು ಸಕಾಲಕ್ಕೆ ದೊರೆಯುತ್ತಿಲ್ಲ.
ಎಲ್ಲೆಲ್ಲಿ ಸಮಸ್ಯೆ?
ಕಾಪು, ಎರ್ಮಾಳು, ಉಚ್ಚಿಲ, ಪಣಿಯೂರು, ಪಡುಬಿದ್ರಿ, ಪಾಂಗಾಳ, ಹೆಜಮಾಡಿ, ನಂದಿಕೂರು, ಪಲಿಮಾರು, ಪಿಲಾರು, ಶಿರ್ವ, ಬಂಟಕಲ್ಲು, ಶಂಕರಪುರ, ಕಟಪಾಡಿಯಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳಿವೆ. ಕಾಪು, ಪಣಿಯೂರು, ಉಚ್ಚಿಲ, ಮಲ್ಲಾರು, ಪಾಂಗಾಳ, ಇನ್ನಂಜೆ, ಬಂಟಕಲ್ಲು ಸೇರಿದಂತೆ ಬಹುತೇಕ ಕಡೆಗಳಲ್ಲಿ ಕರೆಂಟ್ ಹೋಯಿತೆಂದರೆ ತತ್‌ಕ್ಷಣ ನೆಟ್ವರ್ಕ್ ಆಫ್ ಆಗಿ ಬಿಡುತ್ತದೆ. ಕೆಲವೆಡೆ ಟವರ್‌ನಲ್ಲಿ ಇರುವ ಬ್ಯಾಟರಿ ಎಂಜಿನ್ ಆನ್ ಆದ ಕೂಡಲೆ ನೆಟ್ವರ್ಕ್ ಬರುತ್ತದೆಯಾದರೂ, ಕೆಲವೆಡೆ ಮತ್ತೆ ಕರೆಂಟ್ ಬಂದು 10-15 ನಿಮಿಷಗಳ ಬಳಿಕ ನೆಟ್ವರ್ಕ್ ಸಿಗುತ್ತಿದೆ.
ಬ್ಯಾಟರಿ ಬ್ಯಾಕಪ್ ಸಮಸ್ಯೆ: ಟವರ್ ಮತ್ತು ಎಕ್ಸ್‌ಚೇಂಜ್‌ಗಳಲ್ಲಿ ಬ್ಯಾಟರಿ ಬ್ಯಾಕಪ್‌ನ ಸಮಸ್ಯೆ ಇರುವುದರಿಂದ ಕರೆಂಟ್ ಹೋದ ಕೂಡಲೇ ನೆಟ್ವರ್ಕ್ ಬ್ರೇಕ್ ಆಗುತ್ತಿದೆ. ಕೆಲವು ಕಡೆಗಳಲ್ಲಿ ಬ್ಯಾಟರಿ, ಡಿಜಿ, ಇನ್ವರ್ಟರ್, ಜನರೇಟರ್ ಸೌಲಭ್ಯಗಳಿದ್ದು ಅಲ್ಲಿ ಕರೆಂಟ್ ಹೋದ ಕೂಡಲೇ ವ್ಯವಸ್ಥೆ ಜೋಡಿಸಿ ನೆಟ್ವರ್ಕ್ ಒದಗಿಸಲಾಗುತ್ತದೆ. ಆದರೆ ಕೆಲವು ಕಡೆಗಳಲ್ಲಿ ಜನರೇಟರ್ ನಿರ್ವಹಣೆಯಿಲ್ಲದೆ ತುಕ್ಕು ಹಿಡಿದಿದೆ. ಹೆಚ್ಚಿನ ಕಡೆಗಳಲ್ಲಿ ಮೂಲಸೌಕರ್ಯಗಳ ಜೋಡಣೆಯಾಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮತ್ತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. -ಕೃಷ್ಣ ನಾಯ್ಕ, ಎಸ್‌ಡಿಇ, ಬಿಎಸ್‌ಎನ್‌ಎಲ್ ಮೊಬೈಲ್
ಟವರ್ ನಿರ್ವಹಣೆ ಕೊರತೆ: ಕಾಪು ತಾ| ಮಾತ್ರವಲ್ಲದೆ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿಯೂ ವಿವಿಧೆಡೆ ಬಿಎಸ್‌ಎನ್‌ಎಲ್ ನೆಟ್ವರ್ಕ್ ಸಮಸ್ಯೆಯಿದ್ದು ಈ ಬಗ್ಗೆ ಸಾರ್ವಜನಿಕರಿಂದಲೂ ದೂರು ಕೇಳಿ ಬರುತ್ತಿವೆ. ಬಿಎಸ್‌ಎನ್‌ಎಲ್ ಟವರ್‌ಗಳ ನಿರ್ವಹಣೆಯ ಕೊರತೆಯಿಂದ ಹೀಗಾಗುತ್ತಿದ್ದು, ಅಲ್ಲಿ ವಿದ್ಯುತ್ ಸಂಪರ್ಕ ಜೋಡಣೆಗೆ ಇಲಾಖೆಯಿಂದ ಒತ್ತಾಯವಿದೆ. ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಸಮಸ್ಯೆ ನಿವಾರಣೆ ಬಗ್ಗೆ ಸರಕಾರದ ಮಟ್ಟದಲ್ಲೂ ಚರ್ಚೆ ನಡೆದಿದೆ. ಬಿಎಸ್‌ಎನ್‌ಎಲ್ ನಿರ್ವಹಣೆ ಕಷ್ಟವಾಗುತ್ತಿದ್ದು, ನಿರಂತರ ಜ್ಯೋತಿ ಯೋಜನೆಯಡಿ ಟವರ್‌ಗಳಿಗೆ ಮತ್ತು ದೂರವಾಣಿ ಕೇಂದ್ರಗಳಿಗೆ ವಿದ್ಯುತ್ ಜೋಡಣೆಗೆ ಕೇಂದ್ರ ಸರಕಾರ ಚಿಂತನೆ ನಡೆಸಿದೆ. –ಶೋಭಾ ಕರಂದ್ಲಾಜೆ, ಸಂಸದರು ಮತ್ತು ಕೇಂದ್ರ ಸಚಿವರು
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.