Hebri: ನಮಗೆ ಕಾಲು ಸಂಕ ಬೇಕು: ಹೊಳೆ ಉಕ್ಕಿದರೆ ಅವರು ಅಲ್ಲೆ ,ಇವರು ಇಲ್ಲೆ !
ಸ್ವಲ್ಪ ನೀರಿದ್ದರೆ ಮಕ್ಕಳನ್ನು ದೊಡ್ಡವರು ದಾಟಿಸುತ್ತಾರೆ, ಉಕ್ಕೇರಿದರೆ ದೊಡ್ಡವರೂ ಲೆಕ್ಕಕ್ಕೇ ಇಲ್ಲ!
Team Udayavani, Aug 1, 2024, 11:59 AM IST
ಅಜೆಕಾರು: ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಕ ಪರಿಸರದ ಮೇಲಡ್ಕ ಭಾಗದ ಮಕ್ಕಳು ಬೆಳಗ್ಗೆ ಮಳೆ ಬಂದರೆ ಶಾಲೆಗೆ ರಜೆ ಹಾಕಬೇಕು, ಸಂಜೆ ಮಳೆ ಬಂದರೆ ಶಾಲೆಯಿಂದ ಮನೆಗೆ ಬಾರಲಾಗದೆ ಪಕ್ಕದ ಮನೆಯಲ್ಲಿ ಆಶ್ರಯ ಪಡೆಯಬೇಕು!
ಮೇಲಡ್ಕ ಭಾಗದ ಮಕ್ಕಳು ಶಾಲೆಗೆ ಹೋಗಬೇಕಾದರೆ ಏಳು ಕಿ.ಮೀ. ದೂರದ ಮುದ್ರಾಡಿಗೆ ಹೋಗಬೇಕು. ಹಾಗೆ ಹೋಗುವ ದಾರಿಯಲ್ಲಿ ಇರುವುದೇ ಈ ಹೊಳೆ. ನೀರು ಕಡಿಮೆ ಪ್ರಮಾಣದಲ್ಲಿದ್ದರೆ ಮನೆಯವರು ಎತ್ತಿಕೊಂಡು ಹೋಗಿ ಆಚೆದಡ ಸೇರಿಸುತ್ತಾರೆ. ಒಂದು ವೇಳೆ ಉಕ್ಕಿ ಹರಿಯುತ್ತಿದ್ದರೆ ದೊಡ್ಡವರಿಗೂ ದಾಟಲು ಸಾಧ್ಯವಿಲ್ಲ. ಅಷ್ಟು ಭಯಾನಕ ಸೆಳೆತವಿರುತ್ತದೆ ನದಿಗೆ.
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಸುರಿದ ಮಳೆ ನೀರನ್ನು ಹೊತ್ತು ತರುವ ಹೊಳೆ ಇದು. ಯಾವಾಗ ಬೇಕೆಂದರೂ ಉಕ್ಕಿ ಹರಿಯಬಹುದು. ನದಿ ದಾಟುವಾಗಲೇ ಅದು ಉಕ್ಕಿ ಹರಿದರೂ ಅಚ್ಚರಿ ಇಲ್ಲ. ಯಾಕೆಂದರೆ ಗುಡ್ಡ ಭಾಗದಿಂದ ನೀರು ಧುಮ್ಮಿಕ್ಕಲು ಹೆಚ್ಚು ಸಮಯವೇನೂಬೇಕಿಲ್ಲ. ಹಾಗಾಗಿ ನೀರು ಕಡಿಮೆ ಇದ್ದರೂ ಜನರು ಈ ಹೊಳೆಯನ್ನು ದಾಟಲು ಹಿಂದೆ ಮುಂದೆ ನೋಡುತ್ತಾರೆ. ಹಾಗಂತ, ಹೊಳೆಯನ್ನು ದಾಟದಿದ್ದರೆ ಅವರಿಗೆ ಜೀವನವೇ ಇಲ್ಲ. ಯಾಕೆಂದರೆ, ಮುದ್ರಾಡಿಯನ್ನು ತಲುಪಲು ಅವರಿಗೆ ಬೇರೆ ದಾರಿಯೇ ಇಲ್ಲ.
ಹೊಳೆ ಕಾಯುವುದು ನಿತ್ಯ ಕಾಯಕ
ಹೊಳೆ ದಾಟಲು ಒಂದು ಕಿರು ಸೇತುವೆ ಅಥವ ಕಾಲು ಸಂಕ ನಿರ್ಮಾಣ ಮಾಡಿಕೊಡುವಂತೆ ಸುಮಾರು ಎರಡು ದಶಕಗಳಿಂದ ಆಡಳಿತ ವರ್ಗಕ್ಕೆ ಮನವಿ ಮಾಡಲಾಗುತ್ತಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮಕ್ಕಳು ಶಾಲೆಗೆ ಹೊಗುವ, ಬರುವ ಸಮಯದಲ್ಲಿ ಹೊಳೆ ಕಾಯುವುದೇ ಇಲ್ಲಿನವರ ನಿತ್ಯ ಕಾಯಕವಾಗಿದೆ.
ಏನೇನು ಸಮಸ್ಯೆ?
ಮಳೆಗಾಲ ಬಂದರೆ ಯಾವುದೇ ವಾಹನ ಹೊಳೆ ದಾಟುವುದಿಲ್ಲ. ಹೀಗಾಗಿ ಮಳೆ ಮುನ್ನವೇ ಮನೆಯ ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿ ಕೊಂಡಿರಬೇಕು.
ವರಂಗ ಪೇಟೆಯಲ್ಲಿರುವ ಪಡಿತರ ಕೇಂದ್ರದಿಂದ ತಿಂಗಳ ಪಡಿತರ ತರಬೇಕಾದರೂ ಸಂಕಷ್ಟ. ರಿಕ್ಷಾದವರು ಬರುವುದಿಲ್ಲ. ಹೀಗಾಗಿ ಹೊತ್ತುಕೊಂಡೇ ಬರಬೇಕು. ನೀರನ್ನು ದಾಟಿಯೇ ಹೋಗಬೇಕು.
ಒಂದು ವೇಳೆ ಹೊಳೆ ದಾಟಿ ಹೊರಗೆ ಹೋದ ಮೇಲೆ ನೀರು ಉಕ್ಕಿದರೆ ಮರಳಿ ಮನೆಗೆ ಬರುವುದು ಸಾಧ್ಯವಿಲ್ಲ. ಆಗೆಲ್ಲ ನೆರೆಮನೆಯೇ ಇವರಿಗೆ ಆಸರೆ.
ನಮ್ಮ ಮಕ್ಕಳಿಗೆ ರಕ್ಷಣೆ ಯಾಕಿಲ್ಲ?
ಕಳೆದ 25 ವರ್ಷಗಳಿಂದ ಈ ಭಾಗಕ್ಕೆ ಒಂದು ಕಾಲು ಸಂಕ ಮಾಡಿಕೊಡಿ ಎಂದು ಬೇಡಿಕೆ ಇಟ್ಟಿದ್ದರೂ ಈವರೆಗೆ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ ಎಂಬುದು ಸ್ಥಳೀಯ ಮಹಿಳೆಯರ ಅಳಲು. ಎಲ್ಲರಿಗೂ ಸಿಗುವ ಮೂಲ ಸೌಕರ್ಯ ನಮ ಗೇಕೆ ಸಿಗುವುದಿಲ್ಲ, ನಮ್ಮ ಮಕ್ಕಳುಶಿಕ್ಷಣ ಪಡೆಯಬಾರದ ಎಂಬ ಪ್ರಶ್ನೆ ಇವರದ್ದು. ಇಲ್ಲಿ 10ಕ್ಕೂ ಅಧಿಕ ಕುಟುಂಬಗಳು ಮಳೆಗಾಲದಲ್ಲಿ ಸಂಕಷ್ಟಕ್ಕೆ ಬೀಳುತ್ತವೆ.
ಮರದ ಸಂಕವೂ ನಿಲ್ಲುವುದಿಲ್ಲ
ಇಲ್ಲಿನ ದೊಡ್ಡ ಸಮಸ್ಯೆ ಏನೆಂದರೆ ಇಲ್ಲಿ ಮರದ ಕಾಲು ಸಂಕ ನಿರ್ಮಿಸಲು ಸಾಧ್ಯವೂ ಇಲ್ಲ. ಮೇಲ್ನೋಟಕ್ಕೆ ಇದು ನಿರಾಳವಾಗಿ ಹರಿಯುವ ಹೊಳೆಯಂತೆ ಕಂಡರೂ ವೇಗ ಅಪಾರ. ಅದರಲ್ಲೂ ನೀರು ಉಕ್ಕಿದಾಗ ರುದ್ರ ನರ್ತನವೆ. ಹೀಗಾಗಿ ಇಲ್ಲಿ ಮರದ ಕಾಲು ಸಂಕ ನಿರ್ಮಿಸಿದರೆ ಅದು ಯಾವಾಗ ಬೇಕೆಂದರೂ ಕೊಚ್ಚಿ ಕೊಂಡು ಹೋಗಬಹುದು. ಹೀಗಾಗಿ ಇತ್ತೀಚೆಗೆ ಜನರು ಕಾಲು ಸಂಕವನ್ನು ನಿರ್ಮಿಸುವುದನ್ನೇ ಬಿಟ್ಟಿದ್ದಾರೆ. ಹೀಗಾಗಿ. ನೀರಿನೊಡನೆ ಸೆಣಸಾಡಿ ಜೀವನ ಸಾಗಿಸುವುದೇ ಅನಿವಾರ್ಯ ಎಂಬ ಸ್ಥಿತಿಯಾಗಿದೆ.
ಆರೋಗ್ಯ ಹದಗೆಟ್ಟರೆ ದೇವರೇ ಗತಿ
ಈ ಭಾಗದ ಜನರಿಗೆ ಮಳೆಗಾಲದಲ್ಲಿ ಆರೋಗ್ಯ ಹದಗೆಟ್ಟರೆ ದೇವರೆ ಗತಿ. ಕೆಲವು ವರ್ಷದ ಹಿಂದೆ ಅತ್ತೆಯವರಿಗೆ ಸೌಖ್ಯ ಇಲ್ಲದಾಗ ಬಟ್ಟೆಯಲ್ಲಿ ಕಟ್ಟಿ ಹೊತ್ತುಕೊಂಡು ಹೋಗಿದ್ದರು. ನನಗೆ ಸೌಖ್ಯ ಇಲ್ಲದಾಗ ಹೊತ್ತುಕೊಂಡೇ ಹೋಗಿದ್ದು ಎಂದು ಸ್ಥಳೀಯ ಮಹಿಳೆ ಸುರೇಖಾ ಹೇಳುತ್ತಾರೆ.
– ಜಗದೀಶ್ ಅಂಡಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Malpe: ಮೀಟಿಂಗ್ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು
Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.