Karkala: ಜಾನಪದ ವೈವಿಧ್ಯ ಶಾಲೆ, ಕಾಲೇಜು ಪಠ್ಯದಲ್ಲಿರಬೇಕು
ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ| ಕೆ. ಗುಣಪಾಲ ಕಡಂಬ ಅಭಿಮತ
Team Udayavani, Dec 4, 2024, 3:40 PM IST
ಕಾರ್ಕಳ: ಶಾಲೆ, ಕಾಲೇಜುಗಳ ಪಠ್ಯದಲ್ಲಿ ನಮ್ಮ ಜಾನಪದ ಸಂಸ್ಕೃತಿ, ವೈವಿಧ್ಯತೆಗಳಿಗೆ ಒತ್ತು ನೀಡಬೇಕು. ಮಕ್ಕಳಲ್ಲಿ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ಅರಿವು ಮೂಡಿಸಬೇಕು. ಕನ್ನಡ ಸಾಹಿತ್ಯವನ್ನೂ ಶ್ರೀಮಂತಗೊಳಿಸಿದ ಯಕ್ಷಗಾನ, ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿ ಅವರಲ್ಲಿ ಹೆಮ್ಮೆ ಮೂಡುವಂತೆ ಮಾಡಬೇಕು: ಇದು ಜಾನಪದ ವಿದ್ವಾಂಸ ಪ್ರೊ| ಕೆ. ಗುಣಪಾಲ ಕಡಂಬ ಅವರ ಅಭಿಮತ.
ಕಡಂಬ ಅವರು ಶಿರ್ಲಾಲುವಿನಲ್ಲಿ ಡಿ. 6ರಂದು ನಡೆಯಲಿರುವ 21ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು. ಇರ್ವತ್ತೂರಿನ ನಾಗರಾಜ್ ಕಡಂಬ, ಜಯಾವತಿ ದಂಪತಿ ಪುತ್ರರಾದ ಇವರು ಮೂಡುಬಿದಿರೆ ಜೈನ್ ಪ.ಪೂ. ಕಾಲೇಜಿನಲ್ಲಿ 27 ವರ್ಷ ಪ್ರಾಧ್ಯಾಪಕರಾಗಿ, 5 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಂಬಳ ಮತ್ತು ತುಳುನಾಡು ಜಾನಪದ ಬಗ್ಗೆ ಲೇಖನ ಮತ್ತು ಸಂಶೋಧನಾ ಬರಹಗಳನ್ನು ಬರೆದಿದ್ದಾರೆ. ರಾಜ್ಯಮಟ್ಟದ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು. ಕೃಷಿ ಕ್ಷೇತ್ರದಲ್ಲಿಯೂ ವಿಶೇಷ ಸಾಧನೆ ಜತೆಗೆ ಹಲವು ಪುರಸ್ಕಾರಗಳು ಇವರಿಗೆ ದೊರೆತಿದೆ. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಜತೆಗಿನ ಸಂದರ್ಶನದ ವಿವರ ಇಲ್ಲಿದೆ.
-ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಗತಿ ಮತ್ತು ಸುಧಾರಣೆಗೆ ನಿಮ್ಮ ಪರಿಹಾರವೇನು?
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತಿದೆ. ಕೆಲವು ಊರಿನಲ್ಲಿ ಶಾಲೆಗಳ ಕಿಟಕಿ, ಬಾಗಿಲುಗಳು ಮುರಿದು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿಯಲ್ಲಿದೆ. ಕೆಲವು ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳು, ಊರಿನ ಜನರ ಸಹಕಾರದಿಂದ ಉತ್ತಮ ಶಿಕ್ಷಣದ ಜತೆಗೆ, ಹಾಜರಾತಿಯೂ ಇದೆ. ಸರಕಾರದ ಜತೆಗೆ ಊರಿನ ಜನರು ಶಾಲೆಯ ಉಳಿವಿಗೆ ಕೊಡುಗೆ ನೀಡಬೇಕು. ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಉಳಿಸಲು, ಮೂಲಸೌಕರ್ಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು. ಸರಕಾರವು ಗ್ರಾಮೀಣ ಶಾಲೆಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು.
-ಮಕ್ಕಳಿಗೆ ಭಾಷಾಭಿಮಾನ ಮೂಡಿಸುವಲ್ಲಿ ಪೋಷಕರ ಪಾತ್ರ ಹೇಗಿರಬೇಕು?
ಇಂಗ್ಲಿಷ್ ವ್ಯಾಮೋಹದಿಂದ ಹೊರಬರಬೇಕು. ಮಕ್ಕಳ ಸರ್ವಂಗೀಣ ಬೆಳವಣಿಗೆಗೆ ಇಂಗ್ಲಿಷ್, ಹಿಂದಿ ಸಹಿತ ಎಲ್ಲ ಭಾಷೆಗಳೂ ಬೇಕು.
ಈ ನೆಲದ ಭಾಷೆಯನ್ನು ಗೌರವಿಸುವುದು, ಕಲಿಸುವುದು ಇಲ್ಲಿನ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ನಮ್ಮ ಭಾಷೆಯ ಮೂಲಕ ಪರಿಚಯಿಸುವ ಕೆಲಸ ಪೋಷಕರಿಂದಲೇ ಆರಂಭಗೊಳ್ಳಬೇಕು. ಇಂಗ್ಲಿಷ್ ಮಾತನಾಡಿದರೆ, ಕಲಿತರೆ ದೊಡ್ಡ ಜ್ಞಾನಿ ಎಂಬುದು ಮೂರ್ಖತನ. ಸ್ಥಳೀಯ ಸಂಸ್ಕೃತಿ, ಆಚಾರ, ವಿಚಾರಗಳನ್ನು ಸಹಿತ ಪ್ರಾಥಮಿಕ ಹಂತದವರೆಗೂ ಇಂಗ್ಲಿಷ್ ಒಂದು ಕಲಿಕೆ ಭಾಗವಾಗಿ ಉಳಿದ ಶಿಕ್ಷಣ ಕನ್ನಡದಲ್ಲಿಯೇ ಮಗು ಪಡೆಯಬೇಕು.
-ನಾಡು ನುಡಿಗಾಗಿ ಕನ್ನಡಪರ ಸಂಘಟನೆ ಕೊಡುಗೆ ಯಾವ ರೀತಿ ಅನುಕೂಲವಾಗುತ್ತಿದೆ ?
ಭಾಷೆಯ ವಿಚಾರವಾಗಿ ಕನ್ನಡಪರ ಸಂಘಟನೆ, ಒಕ್ಕೂಟಗಳ ಹೋರಾಟ, ಅಭಿಮಾನ ಒಪ್ಪುವಂತದ್ದೆ. ಆದರೆ ರಾಜಕೀಯ ಹಿನ್ನೆಲೆ ಮತ್ತು ಬೇರೊಂದು ಲಾಭದ ದೃಷ್ಟಿಕೋನದ ಉದ್ದೇಶದಿಂದ ಭಾಷೆಯ ವಿಷಯ ಸಹಿತ ಯಾವ ವಿಚಾರದಲ್ಲಿಯೂ ಹೋರಾಟ, ಪ್ರತಿಭಟನೆಗಳು ನಡೆಯಬಾರದು. ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ, ಉತ್ತಮ ಸಮಾಜ ನಿರ್ಮಾಣಕ್ಕೆ ಕೆಲಸ ಮಾಡಬೇಕು.
-ಸಾಹಿತ್ಯ ಸಮ್ಮೇಳನ ಜನರಿಗೆ ಹತ್ತಿರ ವಾಗುತ್ತಿದೆಯಾ?
ಸಾಹಿತ್ಯ ಸಮ್ಮೇಳನವು ಜನರಿಗೆ ಹತ್ತಿರವಾಗುವ ರೀತಿಯಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಆಚರಿಸಲ್ಪಡುತ್ತಿವೆ. ಕನ್ನಡದ ಹಬ್ಬವಾಗಿ ಮನೆ, ಮನಗಳಲ್ಲಿ ಸಾಹಿತ್ಯ ಸಮ್ಮೇಳನ ರಾರಾಜಿಸಬೇಕು. ಆದರೆ ಗೋಷ್ಠಿ ಮತ್ತು ವಿಚಾರ ಮಂಥನಗಳಲ್ಲಿ ಜನರ ಕೊರತೆ ಕಾಣುತ್ತದೆ. ಬೆರಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸುತ್ತಾರೆ. ಎಲ್ಲ ಸಾರ್ವಜನಿಕರೂ ಸಮ್ಮೇಳನದಲ್ಲಿ ಭಾಗವಹಿಸಬೇಕು.
-ಯುವಜನರಲ್ಲಿ ಸಾಹಿತ್ಯದ ಅಭಿರುಚಿ ಕುಗ್ಗಿದೆಯಾ?
ಎಂಜಿನಿಯರಿಂಗ್, ವೈದ್ಯಕೀಯ ಮುಂತಾದ ಶಿಕ್ಷಣವನ್ನು ಪಡೆಯುವುದು, ಅಂಕಗಳಿಕೆ ಶಿಕ್ಷಣವೇ ಜೀವನದಲ್ಲಿ ಸಾಧನೆ ಎಂಬಂತೆ ಸಮಾಜದಲ್ಲಿ ಬಿಂಬಿತವಾದ ಪರಿಣಾಮ ಸಾಹಿತ್ಯದಲ್ಲಿ ಯುವಜನರ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್‌ನಲ್ಲಿಯೂ ಹೆಚ್ಚಿನ ಸಮಯವನ್ನು ಕಳೆಯುತ್ತ ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಪ್ರೊ| ಕೆ. ಗುಣಪಾಲ ಕಡಂಬ
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.