Katapady: ಗೊಂಬೆ ಹೇಳುತೈತೆ, ಮತ್ತೆ ಹೇಳುಥೈ ಥೈ.. ಆರಾಧಿಸೋ, ಆಸ್ವಾದಿಸೋ ಪುರಾಣ,ಪ್ರಕೃತಿಯೇ
ಉದ್ಯಾವರದಲ್ಲಿ ದಸರಾ ಗೊಂಬೆ ಆರಾಧನೆಯ ಮೆರುಗು
Team Udayavani, Oct 10, 2024, 4:06 PM IST
ಕಟಪಾಡಿ: ನವರಾತ್ರಿಯ ಪುಣ್ಯ ಪರ್ವಕಾಲದಲ್ಲಿ ಪುರಾಣ ಕಥೆಗಳನ್ನು ಕಣ್ಣೆದುರು ದೃಶ್ಯಗಳಲ್ಲಿ ಬಿಂಬಿಸುವ ಹಾಗೂ ಪ್ರಕೃತಿ ಆರಾಧನೆಯ ದ್ಯೋತಕವಾಗಿ ಚಿತ್ತಾಕರ್ಷಕ ಗೊಂಬೆಯನ್ನು ಕೂರಿಸಿ ಆರಾಧಿಸುವ ವಿಶೇಷವಾದ ನವರಾತ್ರಿ ದಸರಾ ಆರಾಧನ ಪದ್ಧತಿಯು ಉಡುಪಿ ಜಿಲ್ಲೆಯ ಉದ್ಯಾವರದಲ್ಲಿ ಕಾಣಸಿಗುತ್ತಿದೆ.
ನವರಾತ್ರಿಯಲ್ಲಿ ಎಲ್ಲೆಡೆ ಶಕ್ತಿ ಆರಾಧನೆಯು ನಡೆಯುತ್ತಿದ್ದರೂ, ಇಲ್ಲಿನ ಗೊಂಬೆ ಮನೆ ಎಂದೇ ಪ್ರಸಿದ್ಧಿ ಪಡೆದಿರುವ ಉದ್ಯಾವರ ಸಂಪಿಗೆನಗರ ಯು. ವಾಸುದೇವ ಭಟ್, ಸೀತಾ ಭಟ್ ದಂಪತಿ ಮನೆಯಲ್ಲಿ ಮೂರು ಪೀಳಿಗೆಯ ಮಂದಿ ಸೇರಿ ಗೊಂಬೆ ಆರಾಧನೆಯನ್ನು ನಡೆಸುತ್ತಿದ್ದಾರೆ.
ಬೊಂಬೆ ಹೇಳುತೈತೆ ಮತ್ತೆ ಹೇಳುಥೈ ಥೈ …. ಆರಾಧಿಸೋ, ಆಸ್ವಾದಿಸೋ ಪುರಾಣ, ಪ್ರಕೃತಿಯೇ ಎಂಬಂತೆ ಇಲ್ಲಿನ ಗೊಂಬೆಗಳು ಶ್ರೀ ಕೃಷ್ಣನ ಬಾಲ್ಯ ಲೀಲೋತ್ಸವದ ಕಥಾನಕದೊಂದಿಗೆ ಮೆರುಗನ್ನು ಪಡೆದುಕೊಂಡಿದ್ದು, ಶ್ರೀ ರಾಮ ಪಟ್ಟಾಭಿಷೇಕ, ವಿಶ್ವರೂಪ ದರ್ಶನ, ದ್ರೌಪದಿ ವಸ್ತ್ರಾಪಹರಣ, ಉರಿಯುವ ಅರಗಿನ ಅರಮನೆಯಿಂದ ಒಡಹುಟ್ಟಿದವರನ್ನು ಎತ್ತಿ ಕರೆದೊಯ್ಯುವ ಭೀಮಸೇನ, ಶರಶಯ್ಯೆಯಲ್ಲಿನ ಭೀಷ್ಮಾಚಾರ್ಯರು, ಕಂಸವಧೆ, ಗಜೇಂದ್ರ ಮೋಕ್ಷ, ಬಕಾಸುರನ ಊಟ, ಕಾರಾಗೃಹದಲ್ಲಿ ಶ್ರೀ ಕೃಷ್ಣನ ಜನನ, ಕಂದ ಕೃಷ್ಣನನ್ನು ಬುಟ್ಟಿಯಲ್ಲಿರಿಸಿ ಯಮುನಾ ನದಿ ದಾಟಿಸುವ ತಂದೆ ವಸುದೇವ, ಮೊಲೆ ಹಾಲು ಕುಡಿದು ಪೂತನಿ ಸಂಹಾರ, ಬೆಣ್ಣೆ ಕದಿಯುವ ಕೃಷ್ಣ, ಯಶೋಧೆ ಕಟ್ಟಿ ಹಾಕಿರುವುದು, ವಿಶ್ವರೂಪ ದರ್ಶನ, ಕಾಲಿಯಾ (ರಾಕ್ಷಸ) ಸಂಹಾರ, ಗೋವರ್ಧನ ಗಿರಿಧಾರಿ ಕೃಷ್ಣ, ಕಂಸ ವಧೆ, ರಾಧಾ ಕೃಷ್ಣರೊಂದಿಗಿನ ವೃಂದಾವನ, ಸಮುದ್ರ ಮಥನ, ರಾವಣ ದರ್ಬಾರ್, ರಾವಣ ಸಂಹಾರ, ದಶಾವತಾರ, ಅಷ್ಟ ಲಕ್ಷ್ಮಿಯರು, ಕಾಡು ಮನುಷ್ಯರ ಹುಲಿ ಬೇಟೆ, ರೈತರ ಎತ್ತಿನ ಬಂಡಿ, ಶಬರಿಮಲೈ, ಪಳನಿ, ತಿರುಪತಿ ವೆಂಕರಮಣ, ಪುರಿ ಜಗನ್ನಾಥ, ಪಂಡರಾಪುರ ಹಾಗೂ ಪ್ರಸ್ತುತ ಅಯೋಧ್ಯೆಯ ಶ್ರೀರಾಮ ಪ್ರಮುಖ ಆಕರ್ಷಣಾ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.
ಇದರೊಂದಿಗೆ ಟ್ವಿನ್ ಟವರ್, ವಿದೇಶಿ ನೃತ್ಯಧಾರಿಗಳು ಸಹಿತ ಕೌಲಾಲಂಪುರ, ದುಬೈ, ಮಲೇಷ್ಯಾ, ರಷ್ಯಾ ಸಹಿತ ವಿದೇಶದಲ್ಲಿಯೂ ಖರೀದಿಸಿ ಗೊಂಬೆಗಳು ಆಕರ್ಷಿಸುತ್ತಿದೆ. ಹಳೆ ಭಾರತದಲ್ಲಿ ಮೈಸೂರು, ಕೇರಳ, ತಮಿಳ್ನಾಡು, ಆಂಧ್ರ ರಾಜ್ಯಗಳಲ್ಲಿ ಕಂಡು ಬರುವ ಗೊಂಬೆ ಆರಾಧನೆಯು ಉಡುಪಿ ಉದ್ಯಾವರದಲ್ಲಿ 52 ರ ಸಂಭ್ರಮ ಕಾಣುತ್ತಿರುವುದು ವಿಶೇಷ ಆಕರ್ಷಣೆಯೂ ಆಗಿದೆ.
ಸಾವಿರಕ್ಕೂ ಅಧಿಕ ಗೊಂಬೆಗಳು ಇಲ್ಲಿ ಜತೆಗಿರಿಸಿ ಆರಾಧಿಸುತ್ತಿದ್ದು, ನವರಾತ್ರಿಯ ಆರಂಭದಲ್ಲಿ ಕಲಶವನ್ನು ಏರಿಸಿ ದುರ್ಗೆಯ ಬೊಂಬೆಯನ್ನು ಇರಿಸಿ ಪೂಜಿಸಿ ಸಂಜೆ ಮಹಿಳೆಯರು ಜೊತೆ ಸೇರಿ ಸಂಗೀತ ಭಜನೆಯೊಂದಿಗೆ ಆರತಿ ಬೆಳಗಿಸುವುದು ಪೂಜಾ ಸಂಪ್ರದಾಯವಾಗಿದೆ. ಇನ್ನು 400ರಷ್ಟು ಶಾಲೆ ವಿದ್ಯಾರ್ಥಿಗಳ ದಂಡು, ಬ್ರಾಹ್ಮಣ ಪರಿಷತ್‌ನ 150 ಜನರು ಸಹಿತ ಸುಮಾರು 1500ಕ್ಕೂ ಅಧಿಕ ಮಂದಿ ವೀಕ್ಷಣೆಗಾಗಿಯೇ ಬರುವುದರ ಜೊತೆಗೆ ಭಕ್ತಿ ಭಾವನೆಯನ್ನು ಪ್ರಕಟಿಸುವುದು ಕಂಡು ಬರುತ್ತಿದೆ.
ಗೇರು ಹಣ್ಣು ಕೂಡ ಸಂಗ್ರಹದಲ್ಲಿದ್ದು ಮರ, ಮಣ್ಣು, ಪಿಂಗಾಣಿಗಳಿಂದ ಸಿದ್ಧಪಡಿಸಿದ ಗೊಂಬೆಗಳು ಇಲ್ಲಿ ಆರಾಧಿಸಲ್ಪಡುತ್ತಿದ್ದು, ಪೂಜಿಸಲ್ಪಟ್ಟ ದುರ್ಗೆಯ ಗೊಂಬೆಯನ್ನು ಅಡ್ಡಲಾಗಿ ಮಲಗಿಸಿ ವಿಸರ್ಜನೆಯ ಕ್ರಮವನ್ನು ಅನುಸರಿಸಿ ಈ ಬಾರಿಯ ದಸರಾ ಗೊಂಬೆಯ ಆರಾಧನೆಯು ಸಂಪನ್ನಗೊಳ್ಳಲಿದೆ.
ನವರಾತ್ರಿಯ ಸಂದರ್ಭ ಎಲ್ಲರೂ ಬ್ಯುಸಿ ಇರುವುದರಿಂದ 15 ದಿನಗಳ ಕಾಲ ಈ ಗೊಂಬೆಯ ಪೂಜೆಯನ್ನು ನಡೆಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಣೆಗೆ ಬರುತ್ತಿದ್ದಾರೆ ಎಂದು ಮನೆ ಮಂದಿ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.
ನನ್ನ ತಂದೆ, ತಾಯಿ ಜತೆಯಾಗಿ ಹೈದರಾಬಾದ್‌ನಲ್ಲಿ 1973ರಲ್ಲಿ ಆರಂಭಿಸಿದ್ದ ಈ ಗೊಂಬೆ ಆರಾಧನೆಯ ಪದ್ಧತಿಯು ಇದೀಗ 52 ವರ್ಷಕ್ಕೆ ಕಾಲಿರಿಸಿದೆ. ಇದೀಗ ನನ್ನ ಜತೆ ಪತ್ನಿ ಸೀತಾ ಭಟ್, ಪುತ್ರರಾದ ಮುರಲಿಕೃಷ್ಣ ಭಟ್, ಮುರಹರಿ ಕೃಷ್ಣ, ಸೊಸೆಯರಾದ ಪ್ರಸನ್ನಕುಮಾರಿ ಭಟ್, ಅಶ್ವಿನಿ ಭಟ್ ಮೊಮ್ಮಕ್ಕಳಾದ ಕೃಪಾ ಭಟ್, ಚರಿತ್ ಹೆಚ್ಚು ಮುತುವರ್ಜಿ ವಹಿಸುತ್ತಿದ್ದಾರೆ. ಹಾಗಾಗಿ ಗೊಂಬೆ ಆರಾಧನೆ ಪದ್ಧತಿಯನ್ನು ನಮ್ಮ ನಾಲ್ಕನೇ ಪೀಳಿಗೆಗೆ ಮುಂದುವರೆಯುತ್ತಿರುವುದು ಸಂತಸ. –ಯು. ವಾಸುದೇವ ಭಟ್, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್.
-ವಿಜಯ ಆಚಾರ್ಯ ಉಚ್ಚಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.