Kaup: ಪುರಸಭೆಗೆ ಪಾಪನಾಶಿನಿ ನೀರು; 4 ಓವರ್‌ಹೆಡ್ ಟ್ಯಾಂಕ್ ನಿರ್ಮಾಣ
4 ಸಾವಿರ ಮನೆಗಳಿಗೆ ಶುದ್ಧ ನೀರು ಪೂರೈಸುವ ಬೃಹತ್ ಯೋಜನೆ ಕಾಮಗಾರಿ ಪೂರ್ಣ: ಉದ್ಘಾಟನೆಗೆ ಕ್ಷಣಗಣನೆ
Team Udayavani, Dec 3, 2024, 4:59 PM IST
ಕಾಪು: ಪಾಪನಾಶಿನಿ ಹೊಳೆಯಲ್ಲಿ ಹರಿದು ಬರುವ ನೀರನ್ನು ಕುರ್ಕಾಲು ಅಣೆಕಟ್ಟು ಬಳಿ ಸಂಗ್ರಹಿಸಿ, ಕಾಪು ಪುರಸಭೆ ವ್ಯಾಪ್ತಿಯ ಸುಮಾರು ನಾಲ್ಕು ಸಾವಿರ ಮನೆಗಳಿಗೆ ಪೂರೈಸುವ ಬೃಹತ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳುವ ನಿರೀಕ್ಷೆಯಿದೆ.
ಕಾಪು ಪುರಸಭೆ ವ್ಯಾಪ್ತಿ ಮತ್ತು ಕುರ್ಕಾಲು ಮತ್ತು ಸುತ್ತಮುತ್ತಲಿನ ಏಳು ಗ್ರಾಮಗಳಿಗೆ ನೀರು ಪೂರೈಸುವ 57.02 ಕೋಟಿ ರೂಪಾಯಿ ಮೊತ್ತದ ಬೃಹತ್ ಯೋಜನೆಗೆ ರಾಜ್ಯ ಸರಕಾರ 2018ರಲ್ಲಿ ಅನುದಾನದ ಅನುಮೋದನೆ ನೀಡಿತ್ತು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮೂಲಕ 2021ರಲ್ಲಿ ಟೆಂಡರ್ ಅಂತಿಮಗೊಳಿಸಿ 8 ಎಂಎಲ್‌ಡಿ ನೀರು ಸಂಗ್ರಹ ಮತ್ತು ಶುದ್ಧೀಕರಣ ಘಟಕ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರು ಪ್ರಾರಂಭಿಸಿದ್ದರು.
ಕಾಮಗಾರಿ ಮುಂದುವರಿದು ಪುರಸಭೆ ಮತ್ತು ಅಕ್ಕಪಕ್ಕದ ಗ್ರಾಮಗಳಾದ ಕುರ್ಕಾಲು, ಮೂಡಬೆಟ್ಟು – ಏಣಗುಡ್ಡೆ, ಕೋಟೆ – ಮಟ್ಟು, ಇನ್ನಂಜೆ ಮತ್ತು ಪಾಂಗಾಳ ಗ್ರಾಮಗಳಿಗೆ ನೀರು ಹರಿಸಲು ಕುರ್ಕಾಲು ಗ್ರಾಮದ ಮಣಿಪುರ ಸೇತುವೆಯ ಪಾಪನಾಶಿನಿ ನದಿಯ ಬಳಿ ಇಂಟೆಕ್‌ವೆಲ್ ನಿರ್ಮಾಣ, ಜಾಕ್‌ವೆಲ್ ಮತ್ತು ಪಂಪ್ ಹೌಸ್, ಸಂಪರ್ಕ ಪೈಪ್‌ಲೆ„ನ್, ಪಂಪಿಂಗ್ ಯಂತ್ರಗಳ ಸರಬರಾಜು ಮತ್ತು ನಿರ್ಮಾಣ, ಎಂಎಸ್ ಕಚ್ಚಾ ನೀರು ಏರು ಕೊಳವೆ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
7.10 ಎಂಎಲ್‌ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ
ಪುರಸಭೆ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಕುರ್ಕಾಲು ಗ್ರಾ.ಪಂ. ವ್ಯಾಪ್ತಿಯ ಕುಂಜಾರುಗಿರಿ ಬಳಿ 7.10 ಎಂಎಲ್‌ಡಿ ಸಾಮರ್ಥಯದ ನೀರು ಶುದ್ಧೀಕರಣ ಘಟಕ ಮತ್ತು ಶುದ್ಧ ನೀರಿನ ಜಲಸಂಗ್ರಹಗಾರ ನಿರ್ಮಿಸಲಾಗಿದೆ. ಶುದ್ಧ ನೀರು ಕುಂಜಾರುಗಿರಿಯಿಂದ ಸುಭಾಸ್‌ನಗರ, ಶಂಕರಪುರ, ಇನ್ನಂಜೆ, ಕಲ್ಯಾ ಮೂಲಕ ಪೈಪ್‌ಲೈನ್‌ನಲ್ಲಿ ಕಾಪು ಪುರಸಭೆ ವ್ಯಾಪ್ತಿಗೆ ಸರಬರಾಜ ಆಗಲಿದೆ.
3,200 ಮನೆಗಳಿಗೆ ನಲ್ಲಿ ಸಂಪರ್ಕ
ಕಾಪು ಪಟ್ಟಣಕ್ಕೆ ನೀರು ಪೂರೈಕೆಗಾಗಿ ಸೂಕ್ತ ಸಾಮರ್ಥಯದ ಪಂಪ್ ಸೆಟ್ ಮತ್ತು ಸಂಪು ಕಮ್ ಪಂಪ್ ಹೌಸ್ ನಿರ್ಮಾಣವಾಗಿದೆ. ನೀರು ಸಂಗ್ರಹಿಸಲು ಉಳಿಯಾರಗೋಳಿ, ಪಡು ಗ್ರಾಮಗಳಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್, ಮಲ್ಲಾರು ಪಕೀರಣಕಟ್ಟೆಯಲ್ಲಿ 10 ಲಕ್ಷ ಲೀ. ಸಾಮರ್ಥಯದ ಟ್ಯಾಂಕ್ ಮತ್ತು ಪ್ರಥಮ ಹಂತದಲ್ಲಿ ಪುರಸಭೆ ವ್ಯಾಪ್ತಿಯಲ್ಲಿ 31.00 ಕಿ. ಮೀ. ವಿತರಣಾ ಜಾಲ ನಿರ್ಮಿಸಲಾಗಿದೆ. ಸುಮಾರು 3200 ಮನೆಗಳಿಗೆ ಸಂಪರ್ಕ ಕಲ್ಪಿಸಿ 3 ವರ್ಷಗಳ ನಿರ್ವಹಣೆಯನ್ನು ಮಂಡಳಿ ಮಾಡಲಿದೆ. ಪ್ರಾಯೋಗಿಕವಾಗಿ ನೀರು ಪೂರೈಕೆ ಮಾಡ ಲಾಗಿದೆ. ಡಿಸೆಂಬರ್‌ವರೆಗೆ ಉಳಿದ ಮನೆಗಳಿಗೂ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಳ್ಳಲಿದೆ.
ಗ್ರಾಮಗಳಿಗೂ ನೀರು
ಕಾಮಗಾರಿ ಪೂರ್ಣಗೊಂಡಿದೆ. ಮುಂದೆ ಕುರ್ಕಾಲು ಮತ್ತು ಕಾಪು ನಡುವಿನ ಏಳು ಗ್ರಾಮಗಳಿಗೆ ನೀರು ಪೂರೈಸುವ ಯೋಜನೆಯ ಬಗ್ಗೆ 27.60 ಕೋಟಿ ರೂ. ಮೊತ್ತದ ಯೋಜನೆಯ ವಿಸ್ತ್ರತ ಅಂದಾಜು ಪಟ್ಟಿಯನ್ನು ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಇಲಾಖೆ ವತಿಯಿಂದ ಅನುಷ್ಠಾನಗೊಳ್ಳಲಿರುವ ಈ ಯೋಜನೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಅನುಮೋದನೆಗೆ ಪ್ರಯತ್ನಿಸಲಾಗುವುದು.
-ಸುರೇಶ್ ಶೆಟ್ಟಿ ಗುರ್ಮೆ, ಶಾಸಕರು, ಕಾಪು
ನಲ್ಲಿ ಸಂಪರ್ಕಕ್ಕಾಗಿ ಪಟ್ಟಿ
ಈಗಾಗಲೇ ಟ್ಯಾಂಕ್‌ಗಳನ್ನು ನಿರ್ಮಿಸಿದ್ದು ಕೆಲವೊಂದು ಕಾಮಗಾರಿಗಳು ಪ್ರಗತಿಯಲ್ಲಿರುವಾಗಲೇ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ನಲ್ಲಿ ನೀರು ಸಂಪರ್ಕ ಪಡೆಯಲು ಬಾಕಿಯಿರುವ ಮನೆಗಳ ಪಟ್ಟಿ ಸಿದ್ಧಪಡಿಸಿ ನೀಡುವಂತೆ ಪುರಸಭೆ ಸದಸ್ಯರಿಗೆ ತಿಳಿಸಲಾಗಿದೆ.
-ನಾಗರಾಜ ಸಿ., ಮುಖ್ಯಾಧಿಕಾರಿ, ಕಾಪು ಪುರಸಭೆ
ಪ್ರಾಯೋಗಿಕವಾಗಿ ಆರಂಭ
ಕಾಮಗಾರಿಗಳನ್ನು ಸೆಪ್ಟಂಬರ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಪ್ರಾಯೋಗಿಕವಾಗಿ ನೀರು ಪೂರೈಕೆಯನ್ನು ಆರಂಭಿಸಲಾಗಿದೆ. ಅಮೃತ್ – 2 ಯೋಜನೆ ಯಡಿ ಆರಂಭಿಸಿರುವ ಕಾಮಗಾರಿಯನ್ನೂ ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲಾಗುವುದು.
-ರಕ್ಷಿತ್ ರಾವ್, ಸಹಾಯಕ ಎಂಜಿನಿಯರ್, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬ
ಕಾಪು ಪುರಸಭೆ ಮತ್ತು ಸುತ್ತಲಿನ ಏಳು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬೃಹತ್ ಯೋಜನೆಗೆ 2018ರಲ್ಲಿ ಶಾಸಕ ವಿನಯ್ ಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದಾಗ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಮುಂದೆ ಲಾಲಾಜಿ ಆರ್. ಮೆಂಡನ್ ಅವರ ಶಾಸಕತ್ವದಲ್ಲಿ 2021ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಪ್ರಸ್ತುತ 2024ರಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ. 2018ರಲ್ಲಿ ಅನುಮೋದನೆ ದೊರಕಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಕುಂಟುತ್ತಾ ಸಾಗಿ ಬಂದ ಯೋಜನೆಯು 2024ಕ್ಕೆ ಪೂರ್ಣಗೊಳ್ಳುವ ಹಂತ ತಲುಪಿದೆ.
ಡಿಸೆಂಬರ್ ಅಂತ್ಯಕ್ಕೆ ಅಮೃತ್ 2 ಯೋಜನೆ ಪೂರ್ಣ
ಕೇಂದ್ರ ಸರಕಾರ ಪುರಸ್ಕೃತ ಅಮೃತ – 2 ಯೋಜನೆಯಡಿ 33 ಕೋಟಿ ರೂ. ಮೊತ್ತದಲ್ಲಿ ಅನುಮೋದನೆಗೊಂಡಿರುವ ಇದೇ ಕಾಮಗಾರಿಯನ್ನು ಮುಂದುವರೆಸಿ ಮೂಳೂರು ಗ್ರಾಮಕ್ಕೆ 5 ಲಕ್ಷ ಲೀಟರ್ ಸಾರ್ಮರ್ಥ್ಯ ಟ್ಯಾಂಕ್ ಮತ್ತು ಪುರಸಭೆ ವ್ಯಾಪ್ತಿಯಲ್ಲಿ 72 ಕಿ.ಮೀ. ವಿತರಣಾ ಜಾಲವನ್ನು ಕಲ್ಪಿಸಿ, 2000 ಗೃಹ ಸಂಪರ್ಕ ಒದಗಿಸಲಾಗುತ್ತಿದೆ. ಅಮೃತ 2 ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು ಎಲ್ಲಾ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
7 ಗ್ರಾಮಗಳಿಗೆ ನೀರು ಪೂರೈಸುವ 27.60 ಕೋ. ರೂ. ಪ್ರಸ್ತಾವನೆ ಸಲ್ಲಿಕೆ
ಕಾಪು ಪುರಸಭೆ ಹೊರತುಪಡಿಸಿ ಕುರ್ಕಾಲು ಪಾಪನಾಶಿನಿ ಹೊಳೆಯ ನೀರನ್ನು ಅವಲಂಭಿಸಿರುವ ಕುರ್ಕಾಲು, ಏಣಗುಡ್ಡೆ – ಮೂಡಬೆಟ್ಟು, ಕೋಟೆ – ಮಟ್ಟು, ಇನ್ನಂಜೆ ಮತ್ತು ಪಾಂಗಾಳ ಗ್ರಾಮಗಳ ಟ್ಯಾಂಕ್‌ಗಳಿಗೆ ನೀರು ಸರಬರಾಜು ಮಾಡಲು ಅಗತ್ಯವಿರುವ ಪೈಪ್‌ಲೆ„ನ್, ಪಂಪುಗಳು, ಪಂಪ್ ಹೌಸ್ ಹಾಗೂ ಇತರ ಕಾಮಗಾರಿಗಳಿಗಾಗಿ ಸುಮಾರು 27.60 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧ ಪಡಿಸಿ ಅಂದಾಜು ಪಟ್ಟಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದ್ದು ಅನುಮೋದನೆ ಹಂತದಲ್ಲಿದೆ. ಇದಕ್ಕೆ ಪೂರಕವೆಂಬಂತೆ ಕಾಪು ಪುರಸಭೆ ನೀರು ಹರಿಸಲು ಸಿದ್ಧವಾಗಿರುವ ಕುಂಜಾರುಗಿರಿ ನೀರು ಶುದ್ಧೀಕರಣ ಘಟಕದಲ್ಲಿ ಕುರ್ಕಾಲು ಮತ್ತು ಸುತ್ತಲಿನ ಗ್ರಾಮಗಳ ಅವಶ್ಯಕತೆಗೆ ಬೇಕಾಗುವ 2.1 ಎಂಎಲ್‌ಡಿ ಸಗಟು ನೀರನ್ನು ಕಾದಿರಿಸಲಾಗಿದೆ.
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.