ಕುಂಜೂರು : ವಾರುಣಿ ಹೂಳು ಎತ್ತುವ ಕೆಲಸವೇ ತುರ್ತಿನದು; ಅಭಿವೃದ್ಧಿಗಾಗಿ ತಪಸ್ಸು ನಿರತ ಗ್ರಾಮ
Team Udayavani, Jul 28, 2022, 2:40 PM IST
ಕಾಪು: ಕುಂಜೂರು, ಎಲ್ಲೂರು ಗ್ರಾ.ಪಂ ನಲ್ಲಿ ಬರುವ ಊರಷ್ಟೇ ಅಲ್ಲ; ತಾಯಿ ಬೇರು. ವಾರುಣಿ ತಟದಲ್ಲಿರುವ ಊರಿಗೂ ಭಾರ್ಗವ ಮುನಿಗೂ ಸಂಬಂಧವಿದೆ. ಧಾರ್ಮಿಕವಾಗಿಯೂ ಬಹಳ ವಿಶೇಷತೆ ಹೊಂದಿರುವ ಕುಂಜೂರಿಗೆ ಅಭಿವೃದ್ಧಿ ಕಾಲ ಕೂಡಿ ಬರಬೇಕಿದೆ.
ಎಲ್ಲೂರು ಗ್ರಾ.ಪಂ. ನ 2, 3 ಮತ್ತು 4 ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗಿರುವ ಹಿಂದಿನ ಕಂದಾಯ ಗ್ರಾಮ ಈ ಕುಂಜೂರು. ಎಲ್ಲೂರು, ಅದಮಾರು, ಉಚ್ಚಿಲ, ಬೆಳಪು ಗ್ರಾಮಗಳ ಗಡಿಯೊಂದಿಗೆ ಹಂಚಿಕೊಂಡಿ ರುವ ಊರಿದು. ವಾರುಣಿ ತಟದಲ್ಲಿ ಒತ್ತೂ ತ್ತಾಗಿ ಮರಗಳು ಬೆಳೆದಿರುವ ‘ಕುಂಜ’ದಿಂದ ಗುರುತಿಸಲ್ಪಡುವ ಊರಿದು. ಉಚ್ಚಿಲ- ಪಣಿಯೂರು-ಮುದರಂಗಡಿ ರಸ್ತೆಯ ಬಲಭಾಗ ಮತ್ತು ಎರ್ಮಾಳು- ಅದಮಾರು- ಮುದರಂಗಡಿ ರಸ್ತೆಯ ಎಡಭಾಗದಲ್ಲಿ ಬರುವ ಎತ್ತರ ಮತ್ತು ತಗ್ಗು ಪ್ರದೇಶಗಳಿಂದ ಕೂಡಿದ ಎಲ್ಲೂರು ಗ್ರಾಮದ ಪಶ್ಚಿಮದ ಕೊನೆ ಎಂದರೆ ಕುಂಜೂರು ಮನೆಯಿಂದ ತೊಡಗಿ ಪೂರ್ವ ದಿಕ್ಕಿನ ಮಾಣಿಯೂರುವರೆಗಿನ ಕುಂಜೂರು ಹಿಂದೆ ಗ್ರಾಮವಾಗಿತ್ತು, ಕಂದಾಯ ವ್ಯವಸ್ಥೆ ಯಡಿ ವಿಭಜನೆಯಾದಾಗ ಎಲ್ಲೂರು ಗ್ರಾಮ ವಾಯಿತು, ಕುಂಜೂರು ಕರೆ ಅಥವಾ ವಾರ್ಡ್ ಆಗಿ ಉಳಿಯಿತು.
ಗ್ರಾಮದ ಜನಸಂಖ್ಯೆ 3.650. ಭತ್ತದ ಕೃಷಿ ಮತ್ತು ಹೈನುಗಾರಿಕೆ ಇಲ್ಲಿನವರ ಪ್ರಧಾನ ಕಸುಬು. ತರಕಾರಿ ಬೆಳೆ, ತೆಂಗು, ಅಡಕೆ, ಮಲ್ಲಿಗೆ ಕೃಷಿಯನ್ನೂ ಮಾಡುವವರಿದ್ದಾರೆ.
ಕುಂಜೂರಮ್ಮ ಗ್ರಾಮ ದೇವರು
ಎಲ್ಲೂರು ಸೀಮೆಗೆ ಶ್ರೀ ವಿಶ್ವೇಶ್ವರ ದೇವಸ್ಥಾನ ಸೀಮೆ ದೇಗುಲ. ಕುಂಜೂರು ಶ್ರೀ ದುರ್ಗಾ ದೇವಸ್ಥಾನ ಗ್ರಾಮ ದೇಗುಲ. ಎಲ್ಲೂರು ದೇವಸ್ಥಾನ ಇರುವ ಪ್ರದೇಶವೂ ಕುಂಜೂರು ಗ್ರಾಮದ ಭಾಗ. ಈ ಗ್ರಾಮವು ಬೆಳಪು, ಬಡಾ, ತೆಂಕ ಗ್ರಾಮಗಳ ಬಾರ್ಡರ್‌ಗೆ ತಾಗಿಕೊಂಡಿದ್ದು, ಕುಂಜೂರಿನಲ್ಲಿ ಹಾದು ಹೋಗುವ ರೈಲ್ವೇ ಟ್ರ್ಯಾಕ್ ಎರಡೂ ಭಾಗಗಳನ್ನು ವಿಭಜಿಸಿದೆ.
ವಾರುಣಿಯೇ ಸಮಸ್ಯೆಯೇ?
ಎಲ್ಲೂರು – ಮುದರಂಗಡಿ ದಳಂತ್ರ ಕೆರೆ ಯಿಂದ ಪ್ರಾರಂಭಗೊಂಡು ಎಲ್ಲೂರು – ಕುಂಜೂರು ಮೂಲಕ ಹಾದು ಬರುವ 6 ಕಿ.ಮೀ. ಉದ್ದದ ಹೊಳೆಯೇ ಈ ಗ್ರಾಮದ ಉಗಮಕ್ಕೆ ಕಾರಣವೆನ್ನಲಾಗುತ್ತದೆ. ಕುಂಜಪುರದ ವಾರುಣಿ ತಟದಲ್ಲಿ ತಪ್ಪಸನ್ನಾಚರಿಸಿದ ಭಾರ್ಗವ ಮುನಿ ಇಲ್ಲಿ ಶ್ರೀ ದುರ್ಗೆ ಯನ್ನು ಪ್ರತಿಷ್ಟಾಪಿಸಿದರಂತೆ. ಅದೇ ಈಗ ಕುಂಜೂರು. ಈ ಗ್ರಾಮದ ಉದಯಕ್ಕೆ ಕಾರಣವಾಗಿದ್ದ ವಾರುಣಿ ಇಂದು ಇಲ್ಲಿಯ ಕೃಷಿಕರ ನೋವಿಗೆ ಕಾರಣವಾಗುತ್ತಿದ್ದಾಳೆ ಎನ್ನಲಾಗುತ್ತಿದೆ. ಹೊಳೆಯ ಉದ್ದಕ್ಕೂ ಗಿಡಗಂಟಿಗಳು ಬೆಳೆದಿದ್ದು, ಹೂಳು ತುಂಬಿದೆ. ಇದರಿಂದ ಕೃತಕ ನೆರೆಯ ಭೀತಿ ಆವರಿಸಿದೆ.
ಉಪ ಆರೋಗ್ಯ ಕೇಂದ್ರ
ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರವಾಗಬೇಕು. ಕುಂಜೂರಿನ ಮೂಲಕ ಹಾದು ಹೋಗುವ ತೋಡು ಅಥವಾ ಹೊಳೆಯ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಆಗಿರುವ ರಸ್ತೆಗಳ ಅಭಿವೃದ್ಧಿ, ಐದು ಸೆಂಟ್ಸ್ ಕಾಲನಿ ಸಹಿತವಾಗಿ ಎಲ್ಲಾ ಮನೆಗಳಿಗೂ ಜಲ ಜೀವನ್ ಮಿಷನ್ ಯೋಜನೆ ಮೂಲಕ ನೀರು ಒದಗಿಸಬೇಕು. ಯುಪಿಸಿಎಲ್ ತಟದಲ್ಲಿದ್ದರೂ ಗ್ರಾಮಸ್ಥರನ್ನು ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ. ಲೋ ವೋಲ್ಟೇಜ್ ಸಮಸ್ಯೆಗೆ ಶಾಶ್ವತ ಮುಕ್ತಿ, ತ್ಯಾಜ್ಯ ವಿಲೇವಾರಿಗೂ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕಿದೆ.
ಅಸಹಾಯಕತೆಯೇ ಇಲ್ಲಿಯ ಕಥೆ
ಗ್ರಾಮದಲ್ಲಿ ಮನೆ ನಿವೇಶನಕ್ಕೆ ಜಾಗ ವಿದ್ದರೂ ತಾಂತ್ರಿಕ ಕಾರಣಗಳಿಂದಾಗಿ ಅದನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತಿಲ್ಲ. ಗ್ರಾಮಕ್ಕೆ ತಾಗಿ ಬಿಎಸ್‌ಎನ್‌ಎಲ್ ಟವರ್ ಇದ್ದರೂ ಇದರ ಸಂಪರ್ಕಕ್ಕೆ ಪರದಾಡ ಬೇಕಿದೆ. ಕೆಲವೆಡೆ ದಾರಿ ದೀಪಗಳ ನಿರ್ವಹಣೆ ಆಗಬೇಕು. ಹಳೆ ಮನೆ ದುರಸ್ತಿಗೆ ಗ್ರಾ. ಪಂ. ಅನುದಾನ ಒದಗಿಸಿದರೆ ಪ್ರಯೋಜನವಾಗ ಲಿದೆ. ಗ್ರಾಮದ ಜನತೆ ಹೆಚ್ಚಿನ ವೈದ್ಯಕೀಯ ಸೌಲಭ್ಯಕ್ಕೆ ಮುದರಂಗಡಿ, ಪಡುಬಿದ್ರಿ, ಕಾಪು, ಉಡುಪಿಯನ್ನು ಅವಲಂಬಿಸಬೇಕಿದೆ. ಅದಮಾರಿನಲ್ಲಿ ಪಶು ವೈದ್ಯಕೀಯ ಆಸ್ಪತ್ರೆಯಿದೆ. ಆದರೆ ಸಿಬಂದಿ ಕೊರತೆಯಿಂದ ಪ್ರಯೋಜನಕ್ಕೆ ಬಾರದಂತಾಗಿದೆ.
ಜಟಿಲ ಸಮಸ್ಯೆಗಳಿವು
ಮೂರ್‍ನಾಲ್ಕು ದಶಕಗಳ ಹಿಂದಿನವರೆಗೂ ಗ್ರಾಮಸ್ಥರು ಸೊಪ್ಪು ಕಡಿಯುತ್ತಿದ್ದ ಗುಡ್ಡ ಪ್ರದೇಶ ಈಗ ಕುಂಜೂರು ದುರ್ಗಾ ನಗರ ಬಡಾವಣೆಯಾಗಿದೆ. ಸರಕಾರಿ ವಸತಿ ನಿವೇಶನದಲ್ಲಿ ವಾಸಿಸುತ್ತಿರುವ ಕೆಲವು ಕುಟುಂಬಗಳಿಗೆ ತಾಂತ್ರಿಕ ಕಾರಣಗಳಿಂದಾಗಿ ಹಕ್ಕು ಪತ್ರ ವಿತರಣೆಯಾಗಿಲ್ಲ. ಈ ಬಡಾವಣೆಗೆ ತಾಗಿಕೊಂಡ ರೈಲ್ವೇ ಟ್ರ್ಯಾಕ್‌ನಿಂದಲೂ ಕೆಲವು ಕುಟುಂಬ ಗಳಿಗೆ ಹಕ್ಕು ಪತ್ರ ಸಿಗುತ್ತಿಲ್ಲ. ಈ ಸಮಸ್ಯೆ ಬಗೆಹರಿಯಬೇಕಿದೆ.
ಅನುದಾನ ನಿರೀಕ್ಷೆ: ಇಲ್ಲಿಯ ಹೊಳೆಯ ಹೂಳೆತ್ತುವಿಕೆ ಬಗ್ಗೆ ಈಗಾಗಲೇ ಯೋಜನೆ ಹಾಕಿಕೊಂಡಿದ್ದು ದೊಡ್ಡ ಮೊತ್ತದ ಕಾರಣ ವಿಳಂಬವಾಗುತ್ತಿದೆ. ಸಂಸದರು ಮತ್ತು ಉಸ್ತುವಾರಿ ಸಚಿವರಿಂದ ಅನುದಾನ ನಿರೀಕ್ಷಿಸಲಾಗುತ್ತಿದೆ. -ಜಯಂತ್ ಕುಮಾರ್, ಅಧ್ಯಕ್ಷರು, ಎಲ್ಲೂರು ಗ್ರಾ. ಪಂ.
ತ್ಯಾಜ್ಯ ಎಸೆಯುವಿಕೆ ತಡೆಗಟ್ಟಿ: ಕುಂಜೂರು ಹೊಳೆಯ ಹೂಳೆತ್ತದೆ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತದೆ. ತ್ಯಾಜ್ಯ ಎಸೆಯುವಿಕೆಗೆ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕು. –ಸುರೇಶ್ ದೇವಾಡಿಗ, ಕೃಷಿಕರು, ಕುಂಜೂರು
-ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.