ಪತ್ತೆಗೆ ಸರ್ವ ಕ್ರಮ: ಎಂ.ಬಿ. ಪಾಟೀಲ್
Team Udayavani, Jan 6, 2019, 4:26 AM IST
ಮಲ್ಪೆ: ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಗೋವಾ ಮತ್ತು ಮಹಾರಾಷ್ಟ್ರ ವ್ಯಾಪ್ತಿಯಲ್ಲಿಯೂ ವ್ಯಾಪಕ ಶೋಧ ನಡೆಯುತ್ತಿದೆ. ಉನ್ನತ ಮಟ್ಟದ ತನಿಖೆಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಶನಿವಾರ ಮಲ್ಪೆ ಬಂದರಿಗೆ ಆಗಮಿಸಿ ಮೀನುಗಾರ ಮುಖಂಡರ ಜತೆ ಮಾತುಕತೆ ನಡೆಸಿದರು. ಮೀನುಗಾರಿಕೆ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಸಭೆ ಕರೆದು ಮೀನುಗಾರರೊಂದಿಗೆ ಚರ್ಚಿಸಿಲ್ಲ, ಮೀನುಗಾರರ ಮನೆಗೆ ಆಗಮಿಸಿ ಸಾಂತ್ವನ ಹೇಳುವ ಕನಿಷ್ಠ ಸೌಜನ್ಯ ತೋರಿಸಿಲ್ಲ. ಮೀನುಗಾರರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಎಂದು ಗೃಹ ಸಚಿವರ ಮುಂದೆ ಮೀನುಗಾರ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವರ ಜತೆ ಚರ್ಚೆ
ಇಲ್ಲಿನ ಆಳಸಮುದ್ರ ಮೀನುಗಾರರು ಗೋವಾ ಮತ್ತು ಮಹಾರಾಷ್ಟ್ರ ಭಾಗಕ್ಕೆ ಮೀನುಗಾರಿಕೆಗೆ ತೆರಳಿದ ಸಂದರ್ಭ ಹಲ್ಲೆ, ಮೀನು ಲೂಟಿ ನಡೆಯುತ್ತಿದ್ದು, ಕ್ರಮ ಕೈಗೊಳ್ಳುವಂತೆ ಮೀನುಗಾರರು ಆಗ್ರಹಿಸಿದರು. ಗೋವಾ, ಮಹಾರಾಷ್ಟ್ರ ಗೃಹ ಸಚಿವರ ಜತೆ ಚರ್ಚಿಸಿ ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.
ಪ್ರಮೋದ್ ಮಧ್ವ ರಾಜ್, ಡಾ| ಜಿ. ಶಂಕರ್, ಯಶ್‌ಪಾಲ್ ಎ. ಸುವರ್ಣ, ಸತೀಶ್ ಕುಂದರ್ ಉಪಸ್ಥಿತರಿದ್ದರು.
ನಾಪತ್ತೆಯಾದವರ ಮನೆಗಳಿಗೆ ಭೇಟಿ
ನಾಪತ್ತೆಯಾದ ಮೀನುಗಾರರಾದ ಬಡಾನಿಡಿಯೂರು ಪಾವಂಜಿಗಡ್ಡೆಯ ಚಂದ್ರಶೇಖರ್ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಆವರ ಮನೆಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಇಂದು ಪ್ರತಿಭಟನೆ
ರವಿವಾರ ಮಲ್ಪೆಯಿಂದ ಕಾಲ್ನಡಿಗೆಯಲ್ಲಿ ಬೆಳಗ್ಗೆ 9 ಗಂಟೆಗೆ ಹೊರಟು ಕರಾವಳಿ ಬೈಪಾಸ್‌ನಲ್ಲಿ ತಿರುಗಿ ಮೇಲ್ಸೇತುವೆ ಮೂಲಕ ಅಂಬಲಪಾಡಿ ಬೈಪಾಸ್‌ಗೆ ಬಂದು ಅಲ್ಲಿ ರಾಸ್ತಾ ರೋಕೋ ನಡೆಸಲಾಗುವುದು.
ಕಂಟೈನರ್ ಪತ್ತೆ: ತರುಣ್ ಭಾರತ್ ವರದಿ
ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಾಲವಣ್ ಮತ್ತು ರತ್ನಗಿರಿ ನಡುವೆ ಮೀನುಗಳನ್ನು ತುಂಬುವ 3 ಕಂಟೈನರ್‌ಗಳು ಶುಕ್ರವಾರ ಪತ್ತೆಯಾಗಿದ್ದು, ಇವುಗಳ ಮೇಲೆ “ಎಸ್‌ಟಿ’ ಎಂಬ ಸಂಕೇತಾಕ್ಷರ ಇರುವುದರಿಂದ ಸುವರ್ಣ ತ್ರಿಭುಜ ಬೋಟ್‌ಗೆ ಸೇರಿದ್ದಾಗಿರಬಹುದು ಎಂದು ಮರಾಠಿಯ ತರುಣ್ ಭಾರತ್ ಪತ್ರಿಕೆ ವರದಿ ಮಾಡಿದೆ. ಅಲ್ಲಿನ ಪೊಲೀಸರು ಸನಿಹದ ಕರ್ನಾಟಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಯುತ್ತಿದೆ.
ಡಾ| ಜಯಮಾಲಾ, ಐಜಿಪಿ ಸಾಂತ್ವನ
ಮಲ್ಪೆ: ನಾಪತ್ತೆಯಾಗಿರುವ ಮೀನುಗಾರರಾದ ಚಂದ್ರಶೇಖರ್ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಮನೆಗೆ ಶನಿವಾರ ಸಚಿವೆ ಡಾ| ಜಯಮಾಲಾ ಮತ್ತು ಪ. ವಲಯ ಐಜಿಪಿ ಅರುಣ್ ಚಕ್ರವರ್ತಿ ಭೇಟಿ ನೀಡಿ ಸಾಂತ್ವನ ಹೇಳಿದರು. ದೂರು ಬಂದ ದಿನದಂದಲೇ ಕಾರ್ಯ ಪ್ರವೃತ್ತರಾಗಿದ್ದೇವೆ. ಆತಂಕ ಬೇಡ, ನಿಮ್ಮ ಜತೆ ನಾವಿದ್ದೇವೆ ಎಂದು ಐಜಿಪಿ ತಿಳಿಸಿದರು.
ಇಂದು ಮೀನುಗಾರಿಕೆ ಬಂದ್
ಮಂಗಳೂರು: ಮಲ್ಪೆ ಮೀನುಗಾರರ ಸಂಘ ಆಯೋಜಿಸಿರುವ ರಾಸ್ತಾ ರೋಕೋ ಚಳವಳಿಯನ್ನು ಬೆಂಬಲಿಸಿ ನಗರದ ಬಂದರು ರವಿವಾರ ಪೂರ್ಣ ಬಂದ್ ಆಗಲಿದೆ. 500ಕ್ಕೂ ಅಧಿಕ ಮಂದಿ ಮೀನುಗಾರರು ಉಡುಪಿಗೆ ತೆರಳಿ ಭಾಗವಹಿಸಲಿದ್ದಾರೆ. ಮೀನುಗಾರಿಕೆ ಸಂಘಟನೆಗಳು ಬೆಂಬಲ ಸೂಚಿಸಿವೆ.
ರಾಜ್ಯದ ನಿರ್ಲಕ್ಷ್ಯ- ಹೆಗಡೆ: ನಾಪತ್ತೆ ಪ್ರಕರಣದಲ್ಲಿ ರಾಜ್ಯ ಸರಕಾರ ನಿರ್ಲಕ್ಷ್ಯ ಹಾಗೂ ಉದಾಸೀನ ತೋರಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದು ಮೀನುಗಾರರ ಪತ್ತೆಗೆ ಸಹಕರಿಸುವಂತೆ ವಿನಂತಿಸಿದ್ದೇನೆ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.