![1-sidda](https://www.udayavani.com/wp-content/uploads/2025/02/1-sidda-1-415x226.jpg)
![1-sidda](https://www.udayavani.com/wp-content/uploads/2025/02/1-sidda-1-415x226.jpg)
Team Udayavani, Jan 29, 2025, 4:11 PM IST
ಮಲ್ಪೆ: ಕಳೆದ ಹಲವು ವರ್ಷಗಳಿಂದ ಕೋಡಿಬೆಂಗ್ರೆ – ಹಂಗಾರಕಟ್ಟೆ ಹೊಳೆಗೆ ಸೇತುವೆ ನಿರ್ಮಾಣ ಮಾಡಬೇಕೆಂದು ಕೋಡಿಬೆಂಗ್ರೆಯ ಗ್ರಾಮಸ್ಥರು ಜನಪ್ರತಿನಿಧಿಗಳನ್ನು, ಅಧಿ ಕಾರಿಗಳನ್ನು ಆಗ್ರಹಿಸುತ್ತಲೇ ಬಂದಿದ್ದರೂ, ಇದುವರೆಗೂ ಬೇಡಿಕೆ ಈಡೇರಲಿಲ್ಲ. ಹೀಗಾಗಿ ಸರಕಾರಿ ಹಾಗೂ ಇನ್ನಿತರ ಕೆಲಸಕ್ಕೆ ಎರಡು ಕಿ.ಮೀ. ದೂರ ತಲುಪಲು 40 ಕಿ.ಮೀ. ಸುತ್ತು ಬಳಸಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಡಿಬೆಂಗ್ರೆಯು ಕೋಡಿ ಗ್ರಾಮ ಪಂಚಾಯತ್‌ಗೆ ಸೇರಿದ್ದು, ಸುಮಾರು 90 ವರ್ಷಗಳ ಹಿಂದೆ ನೈಸರ್ಗಿಕ ವೈಪರೀತ್ಯದಿಂದ ಸುವರ್ಣ ನದಿಯು ತನ್ನ ಪಥವನ್ನು ಬದಲಿಸಿ ಬೆಂಗ್ರೆಯಲ್ಲಿ ಸಮುದ್ರವನ್ನು ಸೇರುವ ಮೂಲಕ ಕೋಡಿ ಹಾಗೂ ಬೆಂಗ್ರೆಯನ್ನು ಬೇರ್ಪಡಿಸಿ ಅಲ್ಲಿ ಅಳಿವೆ ನಿರ್ಮಾಣವಾಯಿತು. ಇದರಿಂದ ಕೋಡಿಬೆಂಗ್ರೆಯ ಜನ ನಿತ್ಯ ಬವಣೆ ಪಡುವಂತಾಯಿತು.
ಕೋಡಿಬೆಂಗ್ರೆಯ ನಾಗರಿಕರು ಗ್ರಾಮದ ಕೇಂದ್ರ ಸ್ಥಾನಕ್ಕೆ ರಸ್ತೆ ಮೂಲಕ ವಾಹನದಲ್ಲಿ ಹೋಗುವುದಾದರೆ 9 ಗ್ರಾಮಗಳನ್ನು ದಾಟಿ ಹೋಗಬೇಕು. ಪಡುತೋನ್ಸೆ, ಮೂಡುತೋನ್ಸೆ, ಉಪ್ಪೂರು ಗ್ರಾಮಗಳನ್ನು ದಾಟಿ ಬ್ರಹ್ಮಾವರ, ಸಾಸ್ತಾನ ಪೇಟೆಗೆ ಸುಮಾರು 40 ಕಿ.ಮೀ. ಕ್ರಮಿಸಿ ಬರಬೇಕಾದಂತಹ ಪರಿಸ್ಥಿತಿ ಇದೆ. ಮಕ್ಕಳು, ರೋಗಿಗಳು, ಗರ್ಭಿಣಿಯರು ಆಸ್ಪತ್ರೆಗೆ ಹೋಗಬೇಕಾದರೆ ದೂರದ ಉಡುಪಿಗೆ ಹೋಗಬೇಕು. ಶಾಲಾ ಕಾಲೇಜುಗಳಿಗೆ ಕೂಡಾ ಕಲ್ಯಾಣಪುರ ಅಥವಾ ಉಡುಪಿಯನ್ನು ಆಶ್ರಯಿಸಬೇಕು ಎನ್ನುತ್ತಾರೆ ಸ್ಥಳೀಯರಾದ ಮನೋಹರ ಕುಂದರ್ ಕೋಡಿಬೆಂಗ್ರೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿ
ಕೋಡಿ ಬೆಂಗ್ರೆ ತುದಿಯಲ್ಲಿ ರಮಣೀಯವಾದ ಡೆಲ್ಟಾ ಬೀಚ್ ಇದೆ. ಸಮುದ್ರ ಮತ್ತು ನದಿಗಳು ಸೇರುವ ಮನಮೋಹಕವಾದ ತ್ರಿವೇಣಿ ಸಂಗಮವಿದೆ. ಹಿನ್ನೀರಿನಲ್ಲಿ ಬೋಟ್‌ಹೌಸ್ ಸಂಚಾರ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದುರ್ಗಾಪರಮೇಶ್ವರೀ ದೇವಸ್ಥಾನವೂ ಇಲ್ಲಿದ್ದು ಪ್ರತಿನಿತ್ಯ ಇಲ್ಲಿ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿ ಸೇತುವೆ ನಿರ್ಮಾಣವಾದರೆ ಈ ಪ್ರದೇಶವು ಜನಪ್ರಿಯ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತದೆ.
ಖರ್ಚು, ಸಮಯ ವ್ಯರ್ಥ
ಪ್ರಮುಖವಾಗಿ ಗರ್ಭಿಣಿಯರು ಮತ್ತು ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ವೃದ್ಧರು, ಅಶಕ್ತರಿಗೆ ಸರಕಾರದ ಸವಲತ್ತುಗಳನ್ನು ಪಡೆಯುವ ಪಂಚಾಯತ್‌ಗೆ ಭೇಟಿ ಕೊಡುವುದು ಕಷ್ಟ ಸಾಧ್ಯವಾಗುತ್ತಿದೆ. ವಾಹನಕ್ಕೆ ತಗಲುವ ಇಂಧನದ ಖರ್ಚು ಹಾಗೂ ಸಮಯದ ಉಳಿತಾಯವಾಗುತ್ತದೆ.
-ನಾಗರಾಜ್ ಬಿ. ಕುಂದರ್ ಕೋಡಿಬೆಂಗ್ರೆ, ಸ್ಥಳೀಯರು
ಅನುಷ್ಠಾನಕ್ಕೆ ಪ್ರಯತ್ನ
ಮೀನುಗಾರಿಕಾ ದೋಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎತ್ತರದ ಸೇತುವೆ ನಿರ್ಮಾಣ ಮಾಡುವಲ್ಲಿ ಪಿಡಬ್ಲ್ಯುಡಿ ಇಲಾಖೆಯಿಂದ ಈಗಾಗಲೇ 200 ಕೋ. ರೂ. ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿದೆ. ಮಾತ್ರವಲ್ಲದೆ ಕೇಂದ್ರ ಸರಕಾರ ಇಲ್ಲಿನ ಕೆಲವೊಂದು ತಾಂತ್ರಿಕ ನಿಮಯವನ್ನು ಸರಿಪಡಿಸಿ ಸೇತುವೆ ನಿರ್ಮಾಣ ಮಾಡುವಲ್ಲಿಯೂ ಮುಂದಾಗಿದೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿ ಯೋಜನೆ ಅನುಷ್ಠಾನಕ್ಕೆ ಎಲ್ಲ ಪ್ರಯತ್ನ ಮಾಡಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಸಂಸದರು
ಸೇತುವೆ ಯಾಕೆ ಮುಖ್ಯ?
– ಕೋಡಿ ಬೆಂಗ್ರೆ 2.5 ಕಿ.ಮೀ. ವಿಸ್ತೀರ್ಣವನ್ನು ಹೊಂದಿದೆ. ಒಟ್ಟು 275 ಕುಟುಂಬಗಳಿವೆ. ಶೇ. 8ಂರಷ್ಟು ಜನರ ಮುಖ್ಯ ಕಸುಬು ಮೀನುಗಾರಿಕೆ.
– ವಿದ್ಯುತ್, ಕುಡಿಯುವ ನೀರು ಸರಬರಾಜು ಕೆಮ್ಮಣ್ಣು ಗ್ರಾಮದ ಮೂಲಕ ಇದೆ. ಪೊಲೀಸ್ ಠಾಣೆ ಮಲ್ಪೆ ವ್ಯಾಪ್ತಿ ಗೊಳಪಟ್ಟಿದೆ.
– ಸೇತುವೆಯಾದರೆ ಕೋಡಿಗೆ ಕೇವಲ ಎರಡು ಕಿ.ಮೀ.ನಲ್ಲಿ ತಲುಪಬಹುದು.
– ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡ ಕೋಟ, ಕುಂದಾಪುರ, ಕೋಡಿ, ಸಾಸ್ತಾನ ಜನರಿಗೆ ಮಲ್ಪೆಗೆ ತೆರಳಲು ಹತ್ತಿರ.
-ನಟರಾಜ ಮಲ್ಪೆ
Siddaramaiah; ಮಾರ್ಚ್ 3 ರಿಂದ ವಿಧಾನಸಭೆ ಅಧಿವೇಶನ, ಬಜೆಟ್ ದಿನಾಂಕ ತಿಳಿಸಿದ ಸಿಎಂ
Anandapura:ಮನೆಗೆ ಆಕಸ್ಮಿಕ ಬೆಂಕಿ; ಅಪಾರ ನಷ್ಟ; ಶಾಸಕ ಗೋಪಾಲಕೃಷ್ಣ ಬೇಳೂರು ಸ್ಥಳಕ್ಕೆ ಭೇಟಿ
Dubai Garden Glow: ಅದ್ಭುತ ಮ್ಯಾಜಿಕ್ ಪಾರ್ಕ್ “ಗ್ಲೋ ಗಾರ್ಡನ್ ದುಬಾೖ’
ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು
Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು
You seem to have an Ad Blocker on.
To continue reading, please turn it off or whitelist Udayavani.