Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
ದ್ವಿಪಥ ರಸ್ತೆಯಿಂದ ತಿರುವಿನಲ್ಲಿ ಹೊಂಡ ಗುಂಡಿಯ ಸಿಂಗಲ್ ರೋಡ್‌ಗೆ ಇಳಿಯುವಾಗ ಅಪಾಯ
Team Udayavani, Nov 15, 2024, 2:43 PM IST
ಮಣಿಪಾಲ: ಮಣಿಪಾಲದಿಂದ ಈಶ್ವರ ನಗರ ದಾಟಿ ಪರ್ಕಳಕ್ಕೆ ಹೋಗುವ ಸುಮಾರು 600 ಮೀಟರ್ ರಸ್ತೆ ನಿತ್ಯ ಅಪಘಾತ ತಾಣವಾಗಿ ಮಾರ್ಪಟ್ಟಿದೆ. ಈಶ್ವರ ನಗರದ ಕೆಳಪರ್ಕಳ ಆರಂಭವಾಗುವ ರಸ್ತೆ ಭಾಗದಲ್ಲಿ ಪ್ರತಿ ದಿನ ಎನ್ನುವಂತೆ ಅಪಘಾತಗಳು ಸಂಭವಿಸುತ್ತಿವೆ. ಸೋಮವಾರವಷ್ಟೇ ಈಶ್ವರ ನಗರದಿಂದ ಪರ್ಕಳ ಕಡೆಗೆ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಎಂಟು ಮಂದಿ ಗಾಯಗೊಂಡಿದ್ದರು.
ಅಪಘಾತಕ್ಕೆ ಕಾರಣವೇನು?
ಮಣಿಪಾಲದಿಂದ ಹಿರಿಯಡ್ಕ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಈಶ್ವರ ನಗರದವರೆಗೆ ದ್ವಿಪಥ ರಸ್ತೆ ಇದ್ದು, ಪರ್ಕಳದ ಬಳಿಕವೂ ದ್ವಿಪಥ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಈಶ್ವರ ನಗರದಿಂದ ಪರ್ಕಳದವರೆಗೆ ರಸ್ತೆ ಅಗಲೀಕರಣ ಕಾನೂನು ತೊಡಕಿನಿಂದಾಗಿ ನಿಂತಿದೆ.
ಅಗಲ ಕಿರಿದಾದ ರಸ್ತೆ
ಈಶ್ವರ ನಗರದಿಂದ ಪರ್ಕಳದವರೆಗೆ ತಗ್ಗಿಗೆ ಇಳಿದು ಸುತ್ತು ಬಳಸಿ ಹೋಗಬೇಕು. ಹೆದ್ದಾರಿ ಅಗಲೀಕರಣದ ವೇಳೆ ನೇರ ರಸ್ತೆ ಮಾಡಲು ಯೋಜಿಸಲಾಗಿದೆ. ಆದರೆ, ಅದಕ್ಕೆ ಕಾನೂನು ತೊಡಕು ಇದ್ದು, ಈಗ ಹಳೆ ರಸ್ತೆಯಲ್ಲೇ ಸಾಗಬೇಕು. ಆದರೆ ಈ 600 ಮೀಟರ್ ಭಾಗ ಅಗಲ ಕಿರಿದಾಗಿದೆ ಮತ್ತು ಹೊಂಡಗುಂಡಿಗಳಿಂದ ಆವೃತವಾಗಿದೆ.
ಆಡಳಿತಕ್ಕೆ ಜಾಣಕುರುಡು
ಇನ್ನು ಕೆಳಪರ್ಕಳದ ಇನ್ನೊಂದು ತುದಿ (ಕೆನರಾ ಬ್ಯಾಂಕಿನಿಂದ ಗೋಪಾಲಕೃಷ್ಣ ದೇವಸ್ಥಾನ ವರೆಗೆ)ಯೂ ಅಪಾಯಕಾರಿ ಪ್ರದೇಶವೇ ಆಗಿದೆ. ಮೊದಲೇ ಕಿರಿದಾದ ರಸ್ತೆ. ಅದೂ ಅರ್ಧಭಾಗ ಸಂಪೂರ್ಣ ನಾಶವಾಗಿರುವ ಕಾರಣ ವಾಹನಗಳೆಲ್ಲ ಅನಿವಾರ್ಯವಾಗಿ ‘ರಾಂಗ್‌ಸೈಡ್’ ನಲ್ಲಿಯೇ ಸಾಗುತ್ತ ಅಪಾಯವನ್ನು ಆಹ್ವಾನಿಸುತ್ತವೆ.
ಏರಿನಲ್ಲಂತೂ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲಿಯೂ ಸರಕು ಸಾಗಾಟ ವಾಹನಗಳು ಮೇಲೇರಲಾರದೆ ದಿನಗಟ್ಟಲೆ ಹೆದ್ದಾರಿಯಲ್ಲೇ ಬಾಕಿಯಾಗುವುದು ಮಾಮೂಲು. ನ. 9ರಂದು ಗ್ರಾನೈಟ್ ಹೇರಿಕೊಂಡು ಬಂದ ಲಾರಿ ಮೇಲೇರ ಲಾರದೆ ಹಿಮ್ಮುಖವಾಗಿ ಚಲಿಸಿ ಗ್ಯಾರೇಜಿಗೆ ನುಗ್ಗಿದ ಕಾರಣ ಹಲವು ದ್ವಿಚಕ್ರ ವಾಹನಗಳು ಹಾನಿಗೀಡಾಗಿತ್ತು.
ವಾಹನದ ನಿಯಂತ್ರಣ ತಪ್ಪಿಸುವ ಗುಂಡಿಗಳು
ಮಣಿಪಾಲ ಭಾಗದಿಂದ ಚತುಷ್ಪಥ ಹೆದ್ದಾರಿ ಇರುವುದರಿಂದ ವಾಹನಗಳು ಸಹಜವಾಗಿ ವೇಗವಾಗಿ ಬರುತ್ತವೆ. ಕೆಳಪರ್ಕಳಕ್ಕೆ ಬರುತ್ತಿದ್ದಂತೆ ರಸ್ತೆಯೇ ಇಲ್ಲವೇನೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕೆಲವರಿಗೆ ಇಲ್ಲಿ ತಿರುವು ಇದೆ ಎನ್ನುವುದೇ ಗೊತ್ತಾಗದೆ ನೇರ ಹೋಗಿ ಆಯತಪ್ಪಿ ಬೀಳುತ್ತಾರೆ. ಇನ್ನು ಕೆಲವರಿಗೆ ಕೊನೆಯ ಕ್ಷಣದಲ್ಲಿ ರಸ್ತೆ ಇಲ್ಲದಿರುವುದರ ಅರಿವಾಗಿ ಬಲಕ್ಕೆ ತಿರುಗಿಸಿದಾಗ ಹೊಂಡ ಗುಂಡಿ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಬೀಳುತ್ತಾರೆ.
ಇದು ಮಣಿಪಾಲದಿಂದ ಇಳಿಯು ವಾಗಿನ ಸಮಸ್ಯೆ ಒಂದೇ ಅಲ್ಲ, ಪರ್ಕಳದಿಂದ ಈಶ್ವರ ನಗರಕ್ಕೆ ಹತ್ತಿಕೊಂಡು ಬರುವಾಗಲೂ ಇದೇ ಸಮಸ್ಯೆ. ಹೊಂಡ ಗುಂಡಿಗಳ ರಸ್ತೆಯನ್ನು ಏರಲಾಗದೆ ದೊಡ್ಡ ವಾಹನಗಳು ಏದುಸಿರು ಬಿಡುತ್ತವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.