ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿರುವುದು ದೇಶಕ್ಕೇ ಹೆಮ್ಮೆ. ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗಾವಕಾಶ, ಬಡವರಿಗೆ ಸೌಲಭ್ಯ, ನಿರುದ್ಯೋಗ ಸಮಸ್ಯೆ ನಿವಾರಣೆ ಸಹಿತ ಎಲ್ಲ ರಂಗಗಳ ವಿಷಯಗಳು ಕೂಡ ಸೇರಲಿದೆ ಎಂಬ ವಿಶ್ವಾಸ ನನಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಸಲಹೆ ಪಡೆದಿರುವುದು ಆಕೆ ಪಕ್ಷಾತೀತವಾಗಿ ಕೆಲಸ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆ.
– ಕಸ್ತೂರಿ ಪಂಜದ.ಕ.ಜಿ.ಪಂ. ಉಪಾಧ್ಯಕ್ಷೆ
ಪ್ರಜೆಗಳಿಗೂ ಹೆಮ್ಮೆ
ಮಹತ್ವದ ಖಾತೆ, ದೇಶದ ಅಭಿವೃದ್ಧಿಯ ಪ್ರತೀಕವಾದ ಬಜೆಟ್ ಮಂಡನೆಯ ಅವಕಾಶ ಮಹಿಳೆಯೊಬ್ಬರಿಗೆ ಸಿಕ್ಕಿರುವುದು ಪ್ರಜೆಗಳಿಗೂ ಹೆಮ್ಮೆ. ಇದು ಮಹಿಳಾ ಸಶಕೀಕರಣದ ಪ್ರತ್ಯಕ್ಷ ಸಂಕೇತ. ಎಂತಹ ಜವಾಬ್ದಾರಿಯನ್ನು ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತೇವೆ ಎಂಬುದನ್ನು ನಿರ್ಮಲಾ ಸೀತಾರಾಮ್ ಅವರು ಸಾಬೀತುಪಡಿಸಿದ್ದಾರೆ. ಸೀಮಿತ ಅವಕಾಶಗಳನ್ನು ಪಡೆಯುತ್ತಿದ್ದ ಮಹಿಳೆಗೆ ಮಹತ್ವದ ಖಾತೆ ನೀಡಿರುವ ಪ್ರಧಾನಿ ಕಾರ್ಯ ಶ್ಲಾಘನೀಯ.
-ಮೀನಾಕ್ಷಿ ಶಾಂತಿಗೋಡು, ದ.ಕ.ಜಿ.ಪಂ. ಅಧ್ಯಕ್ಷರು
ಕಾತರದಿಂದ ಕಾಯುತ್ತಿದ್ದೇವೆ
ದೇಶದ ಆರ್ಥಿಕತೆಯನ್ನು ನಿಭಾಯಿಸುವ ಜವಾಬ್ದಾರಿ ಹೊಂದಿ ರುವ ನಿರ್ಮಲಾ ಸೀತಾರಾಮನ್ ಬಗ್ಗೆ ಇಡೀ ದೇಶವೇ ಕಾತರ ಹೊಂದಿದೆ. ಈಗಾಗಲೇ ರಕ್ಷಣಾ ಸಚಿವೆಯಾಗಿ ಮಹತ್ತರ ಜವಾಬ್ದಾರಿ ನಿರ್ವಹಿಸಿರುವ ನಿರ್ಮಲಾ ಅವರು ಹಣಕಾಸು ಸಚಿವೆಯಾಗಿರುವುದು ನಮ್ಮೆಲ್ಲರ ಹೆಮ್ಮೆ. ನಿರುದ್ಯೋಗ ಸಮಸ್ಯೆ, ಕೃಷಿಕ್ಷೇತ್ರದಲ್ಲಿನ ಸವಾಲುಗಳು, ಜಿಎಸ್‌ಟಿ ಬಗೆಗಿನ ಗೊಂದಲಗಳ ನಿವಾರಣೆ ಮಾಡುವರೆಂಬ ವಿಶ್ವಾಸವಿದೆ.
ಡಾ| ವೀಣಾ ಕುಮಾರಿ ಬಿ.ಕೆ. ಪ್ರಿನ್ಸಿಪಾಲ್, ಡಾ| ಎನ್‌ಎಸ್‌ಎಎಂ ಕಾಲೇಜು, ನಿಟ್ಟೆ
ಮಧ್ಯಮ ವರ್ಗದ ಮಹಿಳೆಯಿಂದ ನಿರೀಕ್ಷೆ
ಮುಂದಿನ ಹಂತದ ಆರ್ಥಿಕ ಪ್ರಗತಿಗೆ ಬೇಕಾಗಿರುವ ಸುಧಾರಣ ಕ್ರಮಗಳನ್ನು ಜಾರಿಗೊಳಿಸುವ ಮಹತ್ವದ ಜವಾಬ್ದಾರಿಯನ್ನು ನಿರ್ಮಲಾ ಸೀತಾರಾಮನ್ ಹೆಗಲಿಗೇರಿಸಿದ್ದಾರೆ. ಅನುಭವಿ ನಿರ್ಮಲಾ ಅವರಿಂದ ಒಂದು ಉತ್ತಮ ಬಜೆಟ್ ನಿರೀಕ್ಷಿಸಿಬಹುದಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಸಾಮಾನ್ಯರಂತೆ ಬದುಕುತ್ತಿರುವ ಅವರಿಂದ ಅಪಾರ ನಿರೀಕ್ಷೆ ಇದೆ.
-ಮಿತ್ರಪ್ರಭಾ ಹೆಗ್ಡೆ, ಪ್ರಾಂಶುಪಾಲರು, ಎಸ್‌ವಿ ಮಹಿಳಾ ಕಾಲೇಜು, ಕಾರ್ಕಳ
ಯಶಸ್ವಿಯಾಗಿ ನಿಭಾಯಿಸಬಲ್ಲರು
ಸ್ವತಂತ್ರ ಭಾರತದ ಮೊತ್ತಮೊದಲ ಪೂರ್ಣಾವಧಿ ವಿತ್ತ ಸಚಿವೆಯಾಗಿ ಬಜೆಟ್ ಮಂಡಿಸಲಿದ್ದಾರೆ. ಈಗ ಅವರು ನೀಡಲಿರುವ ಬಜೆಟ್ ಬಗ್ಗೆ ಬೆಟ್ಟದಷ್ಟು ನಿರೀಕ್ಷೆಗಳು ನಮ್ಮೆಲ್ಲರದ್ದು. ದೇಶದ ಅತ್ಯಂತ ಸೂಕ್ಷ್ಮ ಸಂರಚನೆಯಾದ ಮನೆಯ ಹಣಕಾಸಿನ ಆಗುಹೋಗು, ಆಯವ್ಯಯ ನಿಭಾಯಿಸುವ ಜವಾಬ್ದಾರಿಯನ್ನು ಆಯಾ ಮನೆಯ ಸ್ತ್ರೀ ಯಶಸ್ವಿಯಾಗಿ ನಿಭಾಯಿಸುತ್ತಾಳೆ. ಇದೇ ರೀತಿ ನಿರ್ಮಲಾ ಅವರು ನಿಭಾಯಿಸುವರು.
ಡಾ| ಯಶೋದಾ ರಾಮಚಂದ್ರ ಪ್ರಿನ್ಸಿಪಾಲ್, ಅಮರಜ್ಯೋತಿ ಪ.ಪೂ. ಕಾಲೇಜು ಸುಳ್ಯ
ಮಹಿಳಾ ಸಮಾಜಕ್ಕೆ ಸಂತಸ
ಅವರು ಬಜೆಟ್ ಮಂಡಿಸುತ್ತಿರುವುದೇ ಇಡೀ ಮಹಿಳಾ ಸಮಾಜಕ್ಕೆ ಸಂತಸದ ಸಂಗತಿ. ನಾವೆಲ್ಲ ಖುಷಿ ಪಡುವಂತಹ ಸಾಧನೆಯನ್ನು ನಿರ್ಮಲಾ ಮಾಡಿದ್ದಾರೆ. ಮಹಿಳೆಯರಿಗೆ ಇದೊಂದು ಐತಿಹಾಸಿಕ ಕ್ಷಣ. ಎಲ್ಲರೂ ಮೆಚ್ಚುವಂತಹ ಬಜೆಟ್ನ್ನು ಅವರು ಮಂಡಿಸಲಿದ್ದಾರೆ ಎನ್ನುವ ವಿಶ್ವಾಸ ನಮಗೆಲ್ಲರಿಗಿದೆ. ಮೊದಲೆಲ್ಲ ಕೇವಲ ಮನೆ ಕೆಲಸಕ್ಕೆ ಸೀಮಿತವಾಗಿದ್ದ ಮಹಿಳೆಯರು ಈಗ ಈ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಶ್ರೇಷ್ಠ ಸಾಧನೆ.
– ಕಾವೇರಿ, ಮೀನುಗಾರ್ತಿ, ಕುಂದಾಪುರ
ಮಹಿಳೆಯರ ಹೆಮ್ಮೆ
ಸಂದೇಹವೇ ಇಲ್ಲ, ನಿರ್ಮಲಾ ಸೀತಾರಾಮನ್ ನಾವೆಲ್ಲ ಹೆಮ್ಮೆ ಪಡಬೇಕಾದ ಓರ್ವ ಗಟ್ಟಿ ಗುಂಡಿಗೆಯ ಮಹಿಳೆ. ಮಹಿಳೆಯ ಕೆಲಸ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತ ಅನ್ನುವ ಪುರುಷ ಕೇಂದ್ರಿತ ಸಮಾಜದಲ್ಲಿ ಬೆಳೆದವರು ನಾವು. ಇದನ್ನೆಲ್ಲ ಮೆಟ್ಟಿನಿಂತು, ಉನ್ನತ ಸಾಧನೆ ಮಾಡಿದ ಸಾಧಕಿಯರು ಹಲವರಿದ್ದಾರೆ. ಅಂಥವರಲ್ಲೊಬ್ಬರು ನಿರ್ಮಲಾ. ಇಂದಿನ ಸಂದರ್ಭದಲ್ಲಿ ಮಹಿಳೆ ಬಜೆಟ್ ಮಂಡಿಸುವುದು ದೊಡ್ಡ ಸಾಹಸವೆಂದೇ ಹೇಳಬೇಕು.
– ಪಾರ್ವತಿ ಜಿ. ಐತಾಳ್, ನಿವೃತ್ತ ಉಪನ್ಯಾಸಕಿ, ಸಾಹಿತಿ ಕುಂದಾಪುರ
ಎಲ್ಲ ಮಹಿಳೆಯರಿಗೂ ಆದರ್ಶ
ಹೆಣ್ಣು ಎಂದರೆ ಮಾಯೆ ಎಂದರು ಎಲ್ಲರೂ! ಹೌದು ಆಕೆ ಮಾಯೆಯೇ. ಎಲ್ಲ ಹುದ್ದೆ- ಅದು ಸಣ್ಣದಿರಲಿ ದೊಡ್ಡದಿರಲಿ; ನಾಜೂಕಾಗಿ ನಿಭಾಯಿಸಿ ಯಶಸ್ಸನ್ನು ಕಾಣುವ ಮಾಯೆ ಆಕೆಯಲ್ಲಡಗಿದೆ. ಹೆಣ್ಣು ಎಲ್ಲ ಸ್ತರಗಳಲ್ಲಿಯೂ ಮೇಲೇರಿದ್ದಾಳೆ. ಯಶಸ್ಸನ್ನು ಕಂಡಿದ್ದಾಳೆ. ಮಹಿಳೆ ಕೂಡ ದೇಶದ ಹಣಕಾಸು ಸಚಿವೆಯಾಗಲು ಸಂಸ್ಕೃತಿ ಭರಿತ ನಮ್ಮ ದೇಶದಲ್ಲಿ ಸಾಧ್ಯವಾಗಿದೆ. ನಿರ್ಮಲಾ ಸೀತಾರಾಮನ್ ಪ್ರತಿ ಹೆಣ್ಣಿಗೂ ಆದರ್ಶ.
ಮಮ್ತಾಜ್, ಕಾನೂನು ಅಧಿಕಾರಿ (ಕಿರಿಯ) ಉಡುಪಿ
ಆಕೆ ಅನುಭವಿ
ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆ ಬಜೆಟ್ ಮಂಡನೆ ಮಾಡುತ್ತಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಅರ್ಥಶಾಸ್ತ್ರಜ್ಞೆಯಾಗಿ ರುವ ನಿರ್ಮಲಾ ಸೀತಾರಾಮನ್ ಈ ಹಿಂದಿನ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ. ನಷ್ಟದಲ್ಲಿರುವ ಸಾರ್ವಜನಿಕ ಉದ್ದಿಮಗಳಿಗೆ ಪುನಶ್ಚೇತನ ನೀಡಿ ಉದ್ಯೋಗ ಸೃಷ್ಟಿ, ನೀರಿನ ಸಮಸ್ಯೆ ಪರಿಹಾರಕ್ಕಾಗಿ ಶೀಘ್ರವಾಗಿ ನದಿ ಜೋಡಣೆಗೆ ಆದ್ಯತೆ, ಕೃಷಿ ಮಾರುಕಟ್ಟೆ ವಿಸ್ತರಣೆ ಅಗತ್ಯ.
ಸೌಮ್ಯಲತಾ ಎನ್. ಸಂತೋಷ್ ಕುಮಾರ್, ಅಬಕಾರಿ ನಿರೀಕ್ಷಕಿ ಬೆಳ್ತಂಗಡಿ
ಪೂರ್ವ ಕಾರ್ಯ ವೈಖರಿಯೇ ಸಾಕ್ಷಿ
ಸಾಮಾನ್ಯ ಕುಟುಂಬ ದಿಂದ ಬಂದು ಶ್ರಮ ಮತ್ತು ಕಾರ್ಯವೈಖರಿ ಯಿಂದ ರಕ್ಷಣಾ ಸಚಿವರಾಗಿ ದೇಶದ ಭದ್ರತೆಯನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದವರು ನಿರ್ಮಲಾ ಸೀತಾರಾಮನ್. ಮಹಿಳೆಯೇ ಮನೆಯ ಆರ್ಥಿಕ ಸ್ಥಿತಿಯನ್ನು ನಿರ್ವಹಣೆ ಮಾಡುವ ಸಂಸ್ಕೃತಿ ಭಾರತದಲ್ಲಿದೆ. ಈಗ ಪ್ರಥಮ ಪೂರ್ಣಾವಧಿ ಮಹಿಳಾ ಆರ್ಥಿಕ ಸಚಿವರಾಗಿ ಭಾರತವನ್ನು ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಿಸುವ ಪ್ರಯತ್ನ ನಡೆಸುವುದು ನಿರೀಕ್ಷಿತ. ಇದಕ್ಕೆ ನಿರ್ಮಾಲಾ ಅವರ ಈ ಹಿಂದಿನ ಕಾರ್ಯವೈಖರಿ ಸಾಕ್ಷಿಯಾಗಿದೆ.
-ಪುಷ್ಪಾ ಜಿ. ರಾವ್, ಉಪಾಧ್ಯಕ್ಷರು, ಪವರ್ ಸಂಘಟನೆ ಉಡುಪಿ
ಆಕೆ ನಮ್ಮೆಲ್ಲರ ಪ್ರತಿನಿಧಿ
ನಿರ್ಮಲಾ ಸೀತಾರಾಮನ್ ಬಜೆಟ್ ಬಾರತೀಯ ಮಹಿಳೆಯರಿಗೆಲ್ಲ ಹೆಮ್ಮೆ ತರುವ ವಿಚಾರ. ಅವರನ್ನು ಪಕ್ಷಾತೀತವಾಗಿ ಬೆಂಬಲಿಸುವಂತಹ ಪ್ರೌಢಿಮೆ ಮಹಿಳೆಯರದಾಗಿದೆ. ಮಹಿಳೆ ಮನೆ ಮಾತ್ರವಲ್ಲದೆ ದೇಶದ ಅರ್ಥ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲಳು ಎಂಬುದರ ಸಾಕ್ಷಿಯಂತೆ ನಿರ್ಮಲಾ ಸೀತಾರಾಮನ್ ನಮ್ಮೆಲ್ಲರ ಪ್ರತಿನಿಧಿಯಾಗಿ ಅರ್ಥಪೂರ್ಣ ಮತ್ತು ಬಡವರಿಗೆ ಪೂರಕರಾಗಿರುವ ಬಜೆಟ್ ಮಂಡನೆ ಮಾಡುವ ವಿಶ್ವಾಸವಿದೆ.
-ಲೋಕೇಶ್ವರಿ ವಿನಯಚಂದ್ರ, ಮಹಿಳಾ ಮಂಡಳಿ ಒಕ್ಕೂಟಗಳ ಗೌರವಾಧ್ಯಕ್ಷೆ
ಆಕೆ ಬಜೆಟ್ ಓದುವ ಕ್ಷಣವನ್ನು ಕಾಯುತ್ತಿದ್ದೇನೆ
ನಿರ್ಮಲಾ ಸೀತಾರಾಮನ್ ಬಜೆಟ್ ಓದಲು ಎದ್ದುನಿಲ್ಲುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ಮಹಿಳೆ ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸಬಲ್ಲಳು ಎಂಬುದಕ್ಕೆ ಆಕೆ ಉತ್ತಮ ನಿರ್ದೇಶನ. ಅವರಿಗೆ ಇನ್ನೊಂದು ಮಹತ್ವದ ಖಾತೆ ನೀಡಿರುವುದು ಉಲ್ಲೇಖಾರ್ಹ. ನಿರುದ್ಯೋಗ ಸಮಸ್ಯೆ, ಜಿಎಸ್‌ಟಿ ಗೊಂದಲ ಮತ್ತು ನೋಟು ಅಪಮೌಲ್ಯದಿಂದಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮೇಲಾದ ಪರಿಣಾಮಗಳ ಬಗ್ಗೆ ದೂರದೃಷ್ಟಿಯ ಬಜೆಟ್ ಮಂಡಿಸುವರು ಎಂಬ ನಂಬಿಕೆ ಇದೆ.
-ಗೀತಾ ಬಾಯಿ, ಕ್ರೀಡಾಪಟು
ಸಾಧನೆ ಮಾಡುವ ಮಹಿಳೆಗೆ ಸ್ಫೂರ್ತಿ
ರಕ್ಷಣಾ ಸಚಿವೆಯಾಗಿ ಅತ್ಯುನ್ನತ ಕಾರ್ಯನಿರ್ವಹಿಸಿದ ನಿರ್ಮಲಾ ಸೀತಾ ರಾಮನ್ ಹಣಕಾಸು ಸಚಿವರಾಗಿಯೂ ದೇಶವನ್ನು ಮುನ್ನಡೆಸ ಬಲ್ಲ ಸಮರ್ಥ ಮಹಿಳೆ. ಅವರ ಧೈರ್ಯ, ಪರಿಶ್ರಮ, ತಾಳ್ಮೆ, ವ್ಯಕ್ತಿತ್ವಗಳು ಸಾಧನೆ ಮಾಡಬೇಕು ಎನ್ನುವ ಮಹಿಳೆಯರಿಗೆ ಸ್ಫೂರ್ತಿ. ಹಾಗಾಗಿ ಯಾವುದೇ ಕ್ಷೇತದಲ್ಲೂ ಮಹಿಳಾ ಶಕ್ತಿ ಕಡಿಮೆ ಅಲ್ಲ; ಅವಕಾಶ ಸಿಕ್ಕರೆ ಮಹಿಳೆ ತಾನೇನು ಅನ್ನುವುದನ್ನು ನಿರೂಪಿಸಬಲ್ಲಳು ಅನ್ನುವುದಕ್ಕೆ ನಿರ್ಮಲಾ ಪ್ರತ್ಯಕ್ಷ ಉದಾಹರಣೆ.
-ಎಂ. ಮೀನಾಕ್ಷಿ ಗೌಡ, ಮಾಜಿ ಅಧ್ಯಕ್ಷೆ, ಸುಳ್ಯ ಕಸಾಪ
ಮಹಿಳೆಯರಿಗೆ ಸ್ಫೂರ್ತಿ
ಎಲ್ಲ ಮಹಿಳಾ ಸಾಧಕರೂ ಸ್ಫೂರ್ತಿಯೇ ಯಾವುದೇ ಉನ್ನತ ಹುದ್ದೆ ಅಥವಾ ಸಾರ್ವಜನಿಕ ಸೇವೆಯಲ್ಲಿ ಮಹಿಳೆಯರಿದ್ದರೆ ಸ್ತ್ರೀ ಎಂಬುದಾಗಿ ನೋಡದೆ ಆ ಹುದ್ದೆಯನ್ನಷ್ಟೇ ನೋಡಬೇಕು. ನಿರ್ಮಲಾ ಸೀತಾರಾಮನ್ ಅವರಂತೆ ಯಾವ ಮಹಿಳೆ ಉನ್ನತ ಹುದ್ದೆಯಲ್ಲಿದ್ದರೂ ಅವರು ಇತರರಿಗೆ ಸ್ಫೂರ್ತಿಯಾಗುತ್ತಾರೆ. ಗ್ರಾ.ಪಂ, ಜಿ.ಪಂ.ಗಳಲ್ಲಿಯೂ ಮಹಿಳೆಯರು ಉತ್ತಮ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.
-ಸಿಂಧೂ ರೂಪೇಶ್ ಸಿಇಒ ಉಡುಪಿ ಜಿ.ಪಂ.
ಉತ್ತಮ ಅವಕಾಶ ಲಭಿಸಿದೆ
ದೇಶದ ಪ್ರಥಮ ಮಹಿಳಾ ಪ್ರಧಾನಿ ಯಾಗಿ ಇಂದಿರಾ ಗಾಂಧಿ, ಪ್ರಥಮ ಮಹಿಳಾ ರಾಷ್ಟ್ರಪತಿ ಯಾಗಿ ಪ್ರತಿಭಾ ಪಾಟೀಲ್ ಮಾದರಿ ಕಾರ್ಯ ಮಾಡಿದ್ದಾರೆ. ಈಗ ಪ್ರಥಮ ಹಣಕಾಸು ಸಚಿವೆ ಯಾಗಿ ಕಾರ್ಯನಿರ್ವಹಿಸುವ ಅವಕಾಶ ನಿರ್ಮಲಾ ಸೀತಾರಾಮನ್ ಅವರಿಗೆ ಲಭಿಸಿದೆ. ದೇಶದ ಆರ್ಥಿಕತೆ ಯನ್ನು ಉತ್ತಮಗೊಳಿಸಿ, ಕುಸಿದಿರುವ ರೂಪಾಯಿ ಮೌಲ್ಯವನ್ನು ಮತ್ತೆ ಉತ್ತಮ ಪಡಿಸುವ ಕಾರ್ಯ ಮಾಡಬಲ್ಲರು. ಒಬ್ಬ ಮಹಿಳೆಯಾಗಿ ಅವರಿಂದ ಹೆಚ್ಚಿನ ನಿರೀಕ್ಷೆಯನ್ನು ನಾವು ಇರಿಸಿಕೊಂಡಿದ್ದೇವೆ.
-ಮಮತಾ ಗಟ್ಟಿ, ಜಿ.ಪಂ. ಸದಸ್ಯೆ
ಮಹಿಳಾ ಸ್ವಾವಲಂಬನೆ ನಿಜವಾಗುತ್ತಿದೆ
ದೇಶದಲ್ಲಿ ಹಿಂದಿನಿಂದಲೂ ಮಹಿಳಾ ಸ್ವಾವಲಂಬನೆಯ ಕುರಿತು ಸಾಕಷ್ಟು ಕೇಳಿ ಬರುತ್ತಿತ್ತು. ಈಗ ಅದು ನಿಜವಾಗುತ್ತಿದೆ. ಇದಕ್ಕಾಗಿ ಮಹಿಳೆಯರು ಮಾತ್ರವಲ್ಲ, ದೇಶದ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ಮಹಿಳೆಯರಿರಲಿ, ಯಾರೇ ಇರಲಿ; ಪ್ರತಿಯೊಬ್ಬರಿಗೂ ಕರ್ತವ್ಯ ನಿಷ್ಠೆ ಅತಿ ಅಗತ್ಯ. ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದಾಗ ನಮಗೆ ಅವಕಾಶಗಳು ಒದಗಿ ಬರುವ ಜತೆಗೆ ಎಲ್ಲರೂ ನೆನಪಿಟ್ಟುಕೊಳ್ಳುತ್ತಾರೆ. ನಿರ್ಮಲಾ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
-ರಶ್ಮಿ ಎಸ್.ಆರ್., ತಹಶೀಲ್ದಾರ್, ಬಂಟ್ವಾಳ
ಅವರನ್ನು ಕಾಣುವಾಗ ಆಶಾಭಾವನೆ
ಇದುವರೆಗೆ ಮಹಿಳೆ ಯರಿಗೆ ಮುಖ್ಯವಾದ ಖಾತೆಯನ್ನು ನೀಡುತ್ತಿರ ಲಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ನೀಡು ತ್ತಿದ್ದರು. ರಕ್ಷಣಾ ಖಾತೆ ನಿರ್ವಹಿಸಿದ ನಿರ್ಮಲಾ ಸೀತಾರಾಮನ್ ಉತ್ತಮ ಬಜೆಟ್ ಮಂಡಿಸುತ್ತಾರೆಂಬ ನಿರೀಕ್ಷೆ ಇದೆ. ದಿಟ್ಟ, ನೇರ ಮಾತು ಗಳ ಅವರನ್ನು ನೋಡುವಾಗ ರಾಜಕೀಯಕ್ಕೆ ಮಹಿಳೆ ಯರು ಹೋಗಬೇಕು; ಧೈರ್ಯ ಇರುವವರಿಗೆ ಸ್ಥಾನ ಇದೆ ಎಂಬ ಆಶಾಭಾವನೆ ಮೂಡಿದೆ. ಭ್ರಷ್ಟಾಚಾರ, ಸ್ವಾರ್ಥ ನೋಡುತ್ತಿದ್ದ ನಮಗೆ ಇವರನ್ನು ನೋಡು ವಾಗ ದೇಶಕ್ಕಾಗಿ ಏನಾದರೂ ಮಾಡೋಣ ಎನಿಸುತ್ತದೆ.
-ವಸಂತಿ ರಾವ್ ಕೊರಡ್ಕಲ್,ಉಡುಪಿ ಜಿಲ್ಲಾ ಮಹಿಳಾ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ