ಪಡುಬಿದ್ರಿ ಪೇಟೆ: ಪೂರ್ಣಗೊಳ್ಳದ ಸರ್ವಿಸ್ ರಸ್ತೆ ಕಾಮಗಾರಿ
Team Udayavani, Mar 30, 2019, 6:30 AM IST
ಪಡುಬಿದ್ರಿ: ಹೆದ್ದಾರಿ ಗುತ್ತಿಗೆದಾರ ಕಂಪೆನಿ ಅವಾಂತರದಿಂದಾಗಿ ಪಡುಬಿದ್ರಿ ಪೇಟೆ ಸರ್ವಿಸ್ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುವ ಮಂದಿಗೆ ಧೂಳು ನಿತ್ಯ ನೈವೇದ್ಯವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಬದಿಯ ಸರ್ವಿಸ್ ರಸ್ತೆ, ಪಡುಬಿದ್ರಿ ಪೇಟೆಯಲ್ಲಿ ಅಳವಡಿಸದ ಸಿಗ್ನಲ್ ಲೈಟು, ಉರಿಯದ ಹೆದ್ದಾರಿ ದೀಪ, ಅಪಘಾತಕ್ಕೆ ರಹದಾರಿಯೆಂಬಂತೆ ಹೆದ್ದಾರಿ ಬದಿ ಗುತ್ತಿಗೆದಾರ ಬಿಟ್ಟು ಹೋಗಿರುವ ಬೃಹತ್ ಮರಗಳ ಕಾಂಡಗಳಿಂದ ಮಾನವ ಜೀವಕ್ಕೆ ಬೆಲೆಯಿಲ್ಲದ ಪರಿಸ್ಥಿತಿ ಪಡುಬಿದ್ರಿಯಲ್ಲಿ ನಿರ್ಮಾಣಗೊಂಡಿದೆ.
ಪರಿಸರ ಕುರಿತಾದ ದಂಡನೆ ನ್ಯಾಯಾಧೀಕರಣ, ಸರಕಾರ ನಿಯಮಗಳಿಗೆ ಅನುಸರಿಸಿ ಪೊಲೀಸ್, ಆರ್‌ಟಿಒ ಅವರಿಂದ ನಾವು ಚಲಾಯಿಸುವ ವಾಹನದಲ್ಲಿ ಎಮಿಶನ್ ಸರ್ಟಿಫಿಕೇಟ್ ಇಲ್ಲದಿದ್ದರೂ ಸಹಸ್ರಾರು ರೂಪಾಯಿ ದಂಡವನ್ನು ನ್ಯಾಯಾಲಯದಲ್ಲಿ ಕಟ್ಟಬೇಕಾಗುತ್ತದೆ. ಆದರೆ ಪಡುಬಿದ್ರಿಯಂತಹ ಪಟ್ಟಣದಲ್ಲಿ ತಿಂಗಳಾನುಗಟ್ಟಲೆ ಹೆದ್ದಾರಿ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಧೂಳು ತಿನ್ನುತ್ತಾ ಸಾಗಬೇಕಿರುವ ಸ್ಥಳೀಯ ಜನತೆಯ ಆರೋಗ್ಯದ ಮೇಲಾಗುವ ಪರಿಣಾಮಗಳಿಗಾಗಿ ಯಾರಿಗೆ ದಂಡನೆಯಾಗಬೇಕು ಎನ್ನುವುದೇ ಸದ್ಯಕ್ಕೆ ಯಕ್ಷಪ್ರಶ್ನೆಯಾಗಿದೆ.
ಹದಿನೈದು ದಿನಗಳಲ್ಲಿ ಮುಗಿಸಬೇಕಾದ ಮೌಖೀಕ ಆದೇಶ ಹಿಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ವರ್ಗಾವಣೆಗೊಳ್ಳುವ ಮೊದಲು ಪಡುಬಿದ್ರಿಯ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ನವಯುಗ ಅಧಿಕಾರಿಯನ್ನೂ ನೀವಿಲ್ಲಿನ ರಸ್ತೆಯಲ್ಲಿ ಪಾದಚಾರಿಯಾಗಿ ಸಂಚರಿಸಬಲ್ಲಿರೇ ಎಂದೂ ಪ್ರಶ್ನಿಸಿದ್ದರು. ಧೂಳುಮಯ ರಸ್ತೆಗೆ ನೀರು ಚಿಮ್ಮಿಸದಿರುವುದನ್ನು ಆಕ್ಷೇಪಿಸಿದ್ದರು. ಹದಿನೈದು ದಿನಗಳೊಳಗಾಗಿ ಸರ್ವಿಸ್ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಮೌಖೀಕ ಆದೇಶವನ್ನೂ ನವಯುಗ ನಿರ್ಮಾಣ ಕಂಪೆನಿ ಅಧಿಕಾರಿ ಶಂಕರ್ ರಾವ್‌ಗೆ ನೀಡಿದ್ದರು.
ಆದರೆ ಪ್ರಿಯಾಂಕಾ ವರ್ಗಾವಣೆ ಹಿಂದೆಯೇ ಎಲ್ಲವೂ ಬದಲಾವಣೆಯಾಗಿದೆ. ಜನರು ಮಾತ್ರ ಧೂಳು ತಿನ್ನುತ್ತಲೇ ಸಾಗುತ್ತಿದ್ದಾರೆ.
ಒಳಚರಂಡಿ ಕಾಮಗಾರಿಯೂ ಅರೆಬರೆಯಾಗಿ ಸಾಗಿದೆ. ಅರ್ಧಂಬರ್ಧ ಕಾಮಗಾರಿಗಳಾಗಿ ಹೆದ್ದಾರಿ ಮಧ್ಯದ ವಿದ್ಯುದ್ದೀಪಗಳೂ ಉರಿಯದೇ ರಾತ್ರಿಯ ವೇಳೆ ಆಯತಪ್ಪಿ ಅಯೋಮಯ ಪರಿಸ್ಥಿತಿ.
ಒಳಚರಂಡಿಯ ಹೊಂಡಕ್ಕೆ ಪಡುಬಿದ್ರಿ ಪೇಟೆಯ ಅಲ್ಲಲ್ಲಿ ಬಿದ್ದರೆ ಇದುವೇ ಮರಣ ಗುಂಡಿಯಾಗುವುದರಲ್ಲಿ ಸಂದೇಹವಿಲ್ಲ. ಕಬ್ಬಿಣದ ಸರಳುಗಳು ನೇರವಾಗಿ ಕಣ್ಣಿಗೋ, ಹೊಟ್ಟೆಗೋ ಸೇರಿಕೊಂಡು ಶಾಶ್ವತ ಅಂಗವೈಕಲ್ಯಕ್ಕೂ ಇವು ಕಾರಣವಾಗಬಲ್ಲಂತಹ ಸ್ಥಿತಿ ಪಡುಬಿದ್ರಿಯಲ್ಲಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮೊದಲು ಕ್ರಮ ಕೈಗೊಳ್ಳುವುದೂ ಅಗತ್ಯವೆನಿಸಿದೆ.
ಧೂಳಿನ ಸಮಸ್ಯೆಯನ್ನು ಗುತ್ತಿಗೆದಾರರು ಪರಿಹರಿಸಲಿ
ಬೆಳಗಾಗುತ್ತಲೇ ಪಡುಬಿದ್ರಿಯ ಪಶ್ಚಿಮ ಬದಿಯ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರವೂ ಅಧಿಕವಿರುತ್ತದೆ. ಮುಖ್ಯ ಪಟ್ಟಣ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಹಾಗೂ ಜನಸಂದಣಿಯ ಪಡುಬಿದ್ರಿ ಬೀಚ್ ಪ್ರದೇಶಗಳಿಗೆ ಹೋಗಿ ಬರುವ ಮಂದಿಯೂ ಅಧಿಕವಾಗಿದ್ದು ಈ ಪರಿಸರದ ಒಂದೆರಡು ಶಾಲಾ ಮಕ್ಕಳೂ ಧೂಳು ತಿನ್ನುತ್ತಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಮೂಡು ಬದಿಯ ಸರ್ವಿಸ್ ರಸ್ತೆಗೆ ಡಾಮರೀಕರಣವು ಬಾಕಿಯಿದ್ದು ಇದನ್ನೂ ನಿರ್ವಹಿಸಲು ಹೆದ್ದಾರಿ ಗುತ್ತಿಗೆದಾರ ಕಂಪೆನಿಗೆ ಇನ್ನೂ ಕಾಲವೊದಗಿ ಬಂದಿಲ್ಲ.
ಮತ್ತೆ ಡೆಡ್‌ಲೈನ್ ನಿಗದಿ
ಪಡುಬಿದ್ರಿಯ ಸರ್ವಿಸ್ ರಸ್ತೆ ಕಾಮಗಾರಿ, ಪೂರ್ಣಗೊಳ್ಳದ ಒಳಚರಂಡಿ ವ್ಯವಸ್ಥೆಗಳಿಗೆ ಮುಂದಿನ ದಿನಗಳಲ್ಲಿ ಒಂದು ಡೆಡ್‌ಲೈನ್ ನಿಗದಿಪಡಿಸಿ ಗುತ್ತಿಗೆದಾರ ಕಂಪೆನಿಯಿಂದ ಕಾಮಗಾರಿ ಮುಗಿಸುವಂತಾಗಲು ಕ್ರಮವನ್ನು ಕೈಗೊಳ್ಳುವೆವು.
– ಹೆಪ್ಸಿಬಾ ರಾಣಿ ಕೊರ್ಲಪಾಟಿ , ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.