ವಾತಾವರಣದ ಪರಿಣಾಮ: ಶೇಂಗಾ ಇಳುವರಿ ಕುಂಠಿತ ಭೀತಿ
ಚಳಿ ಕಡಿಮೆಯಾಗುತ್ತಿದ್ದಂತೆ ರೋಗ ಬಾಧೆ-ಎಚ್ಚರ ಅಗತ್ಯ
Team Udayavani, Feb 10, 2022, 5:26 PM IST
ಕೋಟ: ಕರಾವಳಿಯಲ್ಲಿ ಈ ಬಾರಿ ಡಿಸೆಂಬರ್ ತನಕ ಮಳೆಯಾದ್ದರಿಂದ ಶೇಂಗಾ (ನೆಲಗಡಲೆ ) ಬಿತ್ತನೆಗೆ ಸಮಸ್ಯೆಯಾಗಿತ್ತು. ಹೀಗಾಗಿ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆ ಬೆಳೆದಿಲ್ಲ. ಪ್ರಸ್ತುತ ಚಳಿಯ ವಾತಾವರಣ ಮುಂದುವರಿದಿರುವುದರಿಂದ ಇಳುವರಿಯ ಮೇಲೆ ಹೊಡೆತ ಬೀಳುವ ಆತಂಕ ರೈತರಲ್ಲಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ, ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗುತ್ತದೆ ಹಾಗೂ ಸುಮಾರು 4 ಸಾವಿರಕ್ಕೂ ಹೆಚ್ಚು ಶೇಂಗಾ ಬೆಳೆಗಾರರು ಜಿಲ್ಲೆಯಲ್ಲಿದ್ದಾರೆ. ಅಂದಾಜು 1,700-2,000 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆಯುತ್ತಾರೆ. ಇಲ್ಲಿ ಸಂಪೂರ್ಣ ಒಣಭೂಮಿಯಲ್ಲಿ ಶೇಂಗಾ ಬೆಳೆಯುವುದರಿಂದ ನವೆಂಬರ್ ಆರಂಭದಲ್ಲಿ ಭೂಮಿಯನ್ನು ಹದಮಾಡಲು ಆರಂಭಿಸಿ ಡಿಸೆಂಬರ್‌ನಲ್ಲಿ ಬೀಜ ಬಿತ್ತನೆ ಮಾಡಲಾಗುತ್ತಿತ್ತು. ಆದರೆ ಈ ಋತುವಿನಲ್ಲಿ ಅಕಾಲಿಕ ಮಳೆಯಿಂದಾಗಿ ಭೂಮಿ ತೇವಾಂಶ ಹೆಚ್ಚಾಗಿ ಬೀಜ ಬಿತ್ತನೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಕಷ್ಟು ಹಿನ್ನಡೆಯಾಗಿ ಡಿಸೆಂಬರ್ ಕೊನೆಯಲ್ಲಿ ಬಿತ್ತನೆ ನಡೆದಿದೆ. ಬಿತ್ತನೆ ತಡವಾದ್ದರಿಂದ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಹಲವು ರೈತರು ಶೇಂಗಾದಿಂದ ದೂರವಾಗಿ ಭತ್ತದ ಕಡೆ ಮುಖ ಮಾಡಿದ್ದರು.
ಚಳಿಯಿಂದ ಇಳುವರಿ ಕುಸಿತ
ಶೇಂಗಾ ಗಿಡ ಹೂ ಬಿಟ್ಟಾಗ ಭೂಮಿಯೊಳಗೆ ಕಾಯಿ ಕಟ್ಟುತ್ತದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾದಷ್ಟು ಗಿಡ ಬೆಳೆಯುವುದು ತಡವಾಗುತ್ತದೆ. ಈ ಬಾರಿ ಚಳಿಯ ವಾತಾವರಣ ಅಕಾಲಿಕವಾಗಿ ಮುಂದುವರಿದಿರು ವುದರಿಂದ ಫಸಲು ಕಟ್ಟುವುದು 10-12 ದಿನ ತಡವಾಗಬಹುದು. ಇದರಿಂದ ಇಳುವರಿ ಮೇಲೂಸ್ವಲ್ಪ ಮಟ್ಟಿಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನುವುದು ಬೇಸಾಯಗಾರರ ಅಭಿಪ್ರಾಯವಾಗಿದೆ.
ಚಳಿ ಕಡಿಮೆಯಾಗುತ್ತಿದ್ದಂತೆ ಎಚ್ಚರಿಕೆ ಅಗತ್ಯ
ಚಳಿ ಕಡಿಮೆಯಾಗುತ್ತಿದ್ದಂತೆ ಶೇಂಗಾ ಗಿಡ ಗಳಲ್ಲಿ ರೋಗ ಬಾಧೆಗಳು ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಈ ಹಂತದಲ್ಲಿ ಗಿಡಗಳ ಆರೈಕೆಯ ಕುರಿತು ಎಚ್ಚರಿಕೆ ವಹಿಸಬೇಕು ಹಾಗೂ ರೋಗ ಬಾಧೆಗಳು ಕಂಡು ಬಂದಲ್ಲಿ ತತ್‌ಕ್ಷಣ ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಪರಿಹಾರ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ.
ಆತಂಕಪಡುವ ಅಗತ್ಯವಿಲ್ಲ
ಶೇಂಗಾ ಬಿತ್ತನೆ ತಡವಾದ್ದರಿಂದ ಇಳುವರಿಯ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುವುದಿಲ್ಲ. ಆದರೆ ಪ್ರಸ್ತುತ ಚಳಿಯ ವಾತಾವರಣ ಮುಂದುವರಿದಿರುವುದರಿಂದ ಕಾಯಿ ಕಟ್ಟಲು ಸ್ವಲ್ಪ ಸಮಸ್ಯೆಯಾಗಬಹುದು. ಈ ಹಂತದಲ್ಲಿ ಹೆಚ್ಚುವರಿ ಆರೈಕೆಗಳು ಅಗತ್ಯವಿಲ್ಲ. ಚಳಿಗಾಲ ಮುಗಿಯುತ್ತಿದ್ದಂತೆ ರೋಗ ಬಾಧೆಯ ಕುರಿತು ಎಚ್ಚರ ಅಗತ್ಯ.
-ನವೀನ್, ಬೇಸಾಯ ತಜ್ಞರು, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ
100 ಹೆಕ್ಟೇರ್‌ಗೂ ಅಧಿಕ ಕುಸಿತ
2019- 20ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಸುಮಾರು 1800-1820 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿತ್ತು. 2020-21ನೇ ಸಾಲಿನಲ್ಲಿ 1740 ಹೆಕ್ಟೇರ್ ಬೆಳೆದಿದ್ದು, ಈ ಬಾರಿ 1661 ಹೆಕ್ಟೇರ್ ವ್ಯಾಪ್ತಿಯಲ್ಲಿ ಶೇಂಗಾ ಬೆಳೆಯಲಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಸುಮಾರು 100 ಹೆಕ್ಟೇರ್‌ನಷ್ಟು ಬೆಳೆ ಈ ಬಾರಿ ಕುಸಿತವಾಗಿದೆ.
ಶೇಂಗಾ ಬೆಳೆಯ ವಿವರ
2020- 2021ನೇ ಸಾಲಿನಲ್ಲಿ
ಉಡುಪಿ ತಾಲೂಕು
(ಬ್ರಹ್ಮಾವರ, ಕಾಪು ಒಳಗೊಂಡು): 418 ಹೆ.
ಕುಂದಾಪುರ ತಾಲೂಕು
(ಬೈಂದೂರು ಒಳಗೊಂಡು): 1,322 ಹೆ.
ಒಟ್ಟು: 1,740 ಹೆ.
2021- 2022ನೇ ಸಾಲಿನಲ್ಲಿ
ಉಡುಪಿ ತಾಲೂಕು
(ಬ್ರಹ್ಮಾವರ, ಕಾಪು ಒಳಗೊಂಡು): 350 ಹೆ.
ಕುಂದಾಪುರ ತಾಲೂಕು
(ಬೈಂದೂರು ಒಳಗೊಂಡು ): 1,311 ಹೆ.
ಒಟ್ಟು : 1,661 ಹೆ.
– ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.