15 ದಿನಗಳಿಂದ ಕುಡಿಯಲು ನೀರಿಲ್ಲದೆ ಕಂಗಾಲಾದ ಜನತೆ
ಉಡುಪಿ ನಗರಸಭೆ ವ್ಯಾಪ್ತಿ ; ಪೈಪ್‌ಲೈನ್ ಸೋರಿಕೆ ದುರಸ್ತಿ ಬದಲು ನೀರಿನ ಗೇಟ್‌ವಾಲ್ವ್ ಬಂದ್
Team Udayavani, Oct 2, 2020, 6:37 AM IST
ಉಡುಪಿ: ಕುಡಿಯುವ ನೀರಿನ ಪೈಪ್ ಒಡೆದು ಹೋದರೆ ಸಾಮಾನ್ಯವಾಗಿ ದುರಸ್ತಿ ಮಾಡಲಾಗುತ್ತದೆ. ಆದರೆ ಉಡುಪಿ ನಗರಸಭೆ ಪೈಪ್‌ಲೈನ್ ದುರಸ್ತಿ ಬದಲಿಗೆ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ನೀರಿನ ಗೇಟ್‌ವಾಲ್ವ್ ಬಂದ್ ಮಾಡಿದೆ. ಇದರಿಂದ ಸಾರ್ವಜನಿಕರಿಗೆ ನೀರಿಲ್ಲವಾಗಿದೆ.
ಮಣಿಪಾಲದ ಈಶ್ವರ ನಗರದ ಮೂಲಕ ಹಾದು ಹೋಗುವ ರಾ.ಹೆ. 169 (ಎ)ರ ಸಮೀಪ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹೋಗಿ ಸುಮಾರು ಒಂದೂವರೆ ತಿಂಗಳಿನಿಂದ ನೀರು ಪೋಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಸಾಕಷ್ಟು ದೂರು ನೀಡಿದ ಬಳಿಕ ನಗರಸಭೆ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಿ, ಪೈಪ್‌ಲೈನ್ ಸರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಆಗಿದ್ದೇ ಬೇರೆ.
ಗೇಟ್‌ವಾಲ್ವ್ ಬಂದ್!
ಇದೀಗ ಅಧಿಕಾರಿಗಳು ನಗರದಲ್ಲಿ ಸೋರಿಕೆಯಾಗುತ್ತಿರುವ ಪೈಪ್‌ಲೈನ್ ದುರಸ್ತಿ ಮಾಡುವ ಬದಲಾಗಿ, ನೀರಿನ ಗೇಟ್‌ವಾಲ್ವ್ ಅನ್ನೇ ಬಂದ್ ಮಾಡಿ ದ್ದಾರೆ. ಇದರಿಂದ ಈಶ್ವರನಗರದ ಬಿಗ್‌ಬಾಸ್ ಸಮೀಪದ ಮನೆ, ಅಂಗಡಿಗಳಿಗೆ ಕುಡಿಯುವ ನೀರು ಪೂರೈಕೆ ಕಡಿತಗೊಂಡಿದೆ. ಜನರು ಮಳೆಗಾಲದಲ್ಲಿಯೂ ನೀರಿಗಾಗಿ ಪರದಾಡುವಂತಾಗಿದೆ. ಈ ಬಗ್ಗೆ ವಿಚಾರಿಸಿದಾಗ ನೀರು ಪೋಲಾಗುವುದನ್ನು ತಪ್ಪಿಸಲು ನೀರನ್ನೇ ಬಂದ್ ಮಾಡಲಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ದುರಸ್ತಿಯಾದ ಬಳಿಕ ನೀರು ಪೂರೈಕೆ ಆರಂಭವಾಗುತ್ತದೆ ಎನ್ನುವ ಉತ್ತರ ಸಿಗುತ್ತಿದೆ. ಆದರೆ ಎಷ್ಟು ದಿನ ಬೇಕಾಗುತ್ತದೆ ಎಂಬುದಕ್ಕೆ ಉತ್ತರವಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಶೀಘ್ರ ಹೊಸ ಪೈಪ್‌ಲೈನ್
ಈಶ್ವರ ನಗರದ ಮೂಲಕ ರಾ.ಹೆ. 169 (ಎ)ವಿಸ್ತರಣೆ ಸಂದರ್ಭ ನೀರಿನ ಪೈಪ್‌ಲೈನ್ ಮೇಲೆ ಕಾಂಕ್ರೀಟ್ ಹಾಕಲಾಗಿದೆ. ಇದರಿಂದಾಗಿ ಹಳೆ ಪೈಪ್‌ಲೈನ್ ಸ್ಥಗಿತಗೊಳಿಸಿ, ಹೊಸ ಪೈಪ್‌ಲೈನ್ ಅಳವಡಿಸುವ ಯೋಚನೆ ಇದೆ. ಮುಂದಿನ ಎರಡು ದಿನದಲ್ಲಿ 250 ಮೀಟರ್ ಹೊಸ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗುತ್ತದೆ.
– ಮೋಹನ್‌ರಾಜ್, ಎಇಇ ನಗರಸಭೆ, ಉಡುಪಿ.
ಹೊಸ ಗುತ್ತಿಗೆದಾರರ ನೇಮಿಸಲು ಮನವಿ
ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇತ್ತೀಚೆಗೆ ನಡೆದ ನಗರಸಭೆಯ ಕುಂದುಕೊರತೆಸಭೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾವಿಸಲಾಗಿತ್ತು. ಶಾಸಕರು ಕುಡ್ಸೆಂಪ್ ಮೂಲಕ ಕುಡಿಯುವ ನೀರಿನ ಸಮಸ್ಯೆಗೆ ತುರ್ತು ಕಾಮಗಾರಿ ನಡೆಸುವಂತೆ ನಗರಸಭೆಗೆ ಸೂಚನೆ ನೀಡಿದ್ದಾರೆ. ಕುಡಿಯುವ ನೀರಿನ ನಿರ್ವಹಣೆಗೆ ಹೊಸ ಗುತ್ತಿಗೆದಾರರನ್ನು ನೇಮಿಸುವಂತೆ ನಗರಸಭೆಗೆ ಕೋರಲಾಗಿದೆ.
-ಮಂಜುನಾಥ್ ಮಣಿಪಾಲ, ನಗರಸಭಾ ಸದಸ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.