ಮೈತ್ರಿ ಸರಕಾರದ ಮೇಲೆ ವಿಶ್ವಾಸವಿರದ ರಾಹುಲ್: ಸೂಲಿಬೆಲೆ
Team Udayavani, Apr 12, 2019, 6:30 AM IST
ಶಿರ್ವ: ರಾಜ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ರಾಹುಲ್‌ಗಾಂಧಿಗೆ ವಿಶ್ವಾಸವಿಲ್ಲ. ಕರ್ನಾಟಕದಲ್ಲಿ ಮೋದಿ ಅಲೆ ಇದೆ ಎಂದು ಅರಿತ ರಾಹುಲ್ ಪಲಾಯನ ಮಾಡಿ ಕೇರಳದ ವಯನಾಡಿನಲ್ಲಿ ಚುನಾವಣೆಗೆ ನಿಂತಿದ್ದಾರೆ ಎಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಬುಧವಾರ ಶಿರ್ವ ರಿಕ್ಷಾ ನಿಲ್ದಾಣದ ಬಳಿ ನಡೆದ ಟೀಂ ಮೋದಿ ವತಿಯಿಂದ ನಡೆದ ದೇಶಕ್ಕಾಗಿ ಮೋದಿ, ಮೋದಿಗಾಗಿ ನಾವು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
70 ವರ್ಷಗಳ ಇತಿಹಾಸದಲ್ಲಿ ಜಾತಿ, ಅಂತಸ್ತು ಬದಿಗಿರಿಸಿ ಸಾಧನೆ ನೋಡಿ
ಮತ ನೀಡಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ನಿಜಕ್ಕೂ ಮತ್ತೂಮ್ಮೆ ದೇಶದ ಚುಕ್ಕಾಣಿ ಹಿಡಿಯಬೇಕು. ಭಾರತದ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದ್ದು ಜನತೆ ಎಚ್ಚೆತ್ತುಕೊಳ್ಳದಿದ್ದರೆ ದೇಶ ಮುಂದಿನ 50 ವರ್ಷಗಳವರೆಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ.
ಜಾತಿ-ಧರ್ಮಗಳ ನಡುವೆ ಒಡಕು ಮೂಡಿಸಿ ಮತ ಪಡೆಯುತ್ತಿದ್ದವರಿಗೆ
ಭ್ರಷ್ಟಾಚಾರ ರಹಿತ ಮೋದಿ ಮಾದರಿಯಿಂದ ಅಪಾರ ನಷ್ಟವಾಗಿದೆ ಎಂದವರು ಹೇಳಿದರು.
ಮೋದಿಯವರ ನೋಟ್‌ಬ್ಯಾನ್‌ನಿಂದಾಗಿ 15 ಲಕ್ಷ ಕೋ.ರೂ. ಬ್ಯಾಂಕ್‌ಗಳಿಗೆ ಹರಿದು ಬಂತು. ಆಯಿಲ್ ಬಾಂಡ್ ಸಾಲ ತೀರಿಸಲಾಯಿತು. ಪ್ರಪಂಚದಲ್ಲಿ ವಿದೇಶೀ ಹೂಡಿಕೆ ಚೀನಾದ ಬಳಿಕ ನಮ್ಮ ದೇಶದಲ್ಲೇ ಅತಿ ಹೆಚ್ಚು ಆಗುವಂತೆ ಮಾಡಿದರು. ಜಿಡಿಪಿಯಲ್ಲಿ ದೇಶ ವಿಶ್ವದಲ್ಲಿಯೇ ಮೂರನೇ
ಸ್ಥಾನದತ್ತ ಮುನ್ನುಗ್ಗುವಂತಾಗಿ ದೇಶದ ಆರ್ಥಿಕತೆ ಬಲಿಷ್ಠವಾಗಿದ್ದು
ಜಾಗತಿಕ ಮಟ್ಟದಲ್ಲಿ ಇಡೀ ದೇಶಕ್ಕೆ ಗೌರವ ಸಿಗುವಂತಾಗಿದೆ ಎಂದರು.
ಹಿರಿಯರಾದ ತಿಮ್ಮಪ್ಪ ನಾಯಕ್ ವೇದಿಕೆಯಲ್ಲಿದ್ದರು. ಮುಖಂಡರಾದ ಸುರೇಶ್ ಶೆಟ್ಟಿ ಗುರ್ಮೆ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕುತ್ಯಾರ್ ನವೀನ್ ಶೆಟ್ಟಿ, ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಕೋಡು, ಗಿರಿಧರ ಪ್ರಭು, ಕೆ.ಸುಂದರ ಪ್ರಭು, ಗೀತಾಂಜಲಿ ಸುವರ್ಣ,ಪವಿತ್ರಾ ಶೆಟ್ಟಿ, ವಾರಿಜಾ ಪೂಜಾರ್ತಿ, ಬೆಳ್ಳೆ ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ, ಸಂತೋಷ್ ಕುಮಾರ್‌ಮೂಡುಬೆಳ್ಳೆ ಉಪಸ್ಥಿತರಿದ್ದರು.
ಶಿರ್ವ ಟೀಂ ಮೋದಿ ಸಂಚಾಲಕ ಸದಾನಂದ ಎಸ್. ಸ್ವಾಗತಿಸಿದರು.ಕುತ್ಯಾರು ಪ್ರಸಾದ್ ಶೆಟ್ಟಿ ನಿರೂಪಿಸಿ,ಜಯಪ್ರಕಾಶ್ ಪ್ರಭು ವಂದಿಸಿದರು.