Udupi: ಮಳೆ ಬಿಡುವು: ಗುಂಡಿ ಮುಚ್ಚಲು ಸಕಾಲ
ಬಾಯ್ದೆರೆದ ಗುಂಡಿಗಳಿಗೆ ಸಿಗಲಿ ಶೀಘ್ರಮುಕ್ತಿ ,ಅಪಘಾತಕ್ಕೆ ಆಹ್ವಾನ ನೀಡುವ ಗುಂಡಿಗಳು
Team Udayavani, Jul 29, 2024, 4:52 PM IST
ಉಡುಪಿ: ನಗರದ ಹಲವು ಕಡೆಗಳಲ್ಲಿ ಯಮರೂಪಿ ಗುಂಡಿಗಳು ಬಲಿ ತೆಗೆದುಕೊಳ್ಳಲು ಹೊಂಚು ಹಾಕಿ ಕಾಯುತ್ತಿವೆ. ಅಪಾಯಕಾರಿ ರಸ್ತೆ ಗುಂಡಿಗಳನ್ನು ಮುಚ್ಚಲು ಇದು ಸಕಾಲವಾಗಿದ್ದು, ಈಗಾಗಲೆ ಮಳೆ ಪ್ರಮಾಣವು ಕೊಂಚ ತಗ್ಗಿರುವುದರಿಂದ
ತಾತ್ಕಾಲಿಕ ನೆಲೆಯಲ್ಲಿ ಗುಂಡಿ ಮುಚ್ಚುವ ನೆಲೆಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ನಾಗರಿಕರು ವಿನಂತಿಸಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದ ರಸ್ತೆಗಳಲ್ಲಿ ಗುಂಡಿಗಳು ಬೀಳಲು ಆರಂಭಗೊಂಡಿದ್ದು, ಕಳೆದ ಪರ್ಯಾಯ ಅವಧಿಯಲ್ಲಿ ಕೆಲವು ಕಡೆಗಳಲ್ಲಿ ಗುಂಡಿಗಳಿದ್ದ ರಸ್ತೆಯನ್ನು ತೇಪೆ ಹಾಕಿ ಕೆಲವು ಕಡೆಗಳಲ್ಲಿ ಫೇವರ್ ಫಿನಿಶಿಂಗ್ ಮಾಡಲಾಗಿತ್ತು. ಒಂದೆರಡು ಮಳೆಯಾಗುತ್ತಿದ್ದಂತೆ ಹಲವು ಕಡೆಗಳಲ್ಲಿ ಗುಂಡಿಗಳು ಗೋಚರವಾಗುತ್ತಿದೆ. ನಗರದ ಎಸ್ ವಿಸಿ ಬ್ಯಾಂಕ್, ಜಾಮೀಯ ಮಸೀದಿ ಕಾಂಪ್ಲೆಕ್ಸ್ ಎದುರುಭಾಗದಲ್ಲಿ ರಸ್ತೆಗಳ ಮೇಲ್ಪದರ ಸಂಪೂರ್ಣ ಕಿತ್ತುಹೋಗಿ ಡಾಮರು ಇಲ್ಲದಂತಾಗಿದೆ.
ಬ್ರಹ್ಮಗಿರಿಯಲ್ಲಿ, ಕಿದಿಯೂರು ಹೊಟೇಲ್ ಮುಂಭಾಗ, ಮಣಿಪಾಲ ಕಾಯಿನ್ ಸರ್ಕಲ್, ಟೈಗರ್ ಸರ್ಕಲ್ ಪ್ರದೇಶದಲ್ಲಿ ಅಪಾಯಕಾರಿ ಗುಂಡಿಗಳನ್ನು ಕಾಣಬಹುದು. ಈ ಗುಂಡಿಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವ ಮಾರ್ಗದಲ್ಲಿ ಅಪಾಯಕಾರಿ ಗುಂಡಿಗಳಿವೆ. ವಾಹನಗಳ ದಟ್ಟಣೆ ನಡುವೆಯೂ ಗುಂಡಿಯಲ್ಲಿ ಎದ್ದುಬಿದ್ದು ಓಡಾಡುವ ಪರಿಸ್ಥಿತಿ ವಾಹನ ಸವಾರರದ್ದು. ವೇಗದಿಂದ ಚಲಿಸುವ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಗಳಲ್ಲಿ ನೀರು ಇರುವುದರಿಂದ ಅಪಾಯ ಅರಿವಿಗೆ ಬರುವುದಿಲ್ಲ. ಕೊಂಚ ಎಚ್ಚರ ತಪ್ಪಿದರೂ ಗುಂಡಿಯಿಂದಾಗಿ ನಿಯಂತ್ರಣ ತಪ್ಪಿ ಕೆಳಗೆ ಬೀಳುತ್ತಾತೆ. ಮಳೆ ಕಡಿಮೆ ಇರುವುದರಿಂದ ತಾತ್ಕಲಿಕ ನೆಲೆಯಲ್ಲಿ ರಸ್ತೆಗಳನ್ನು ದುರಸ್ಥಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುಗಮ ಸಂಚಾರಕ್ಕೆ ವ್ಯವಸ್ಥೆ ನಗರದಲ್ಲಿರುವ ಅಪಾಯಕಾರಿ ರಸ್ತೆ ಗುಂಡಿಗಳನ್ನು ಸರಿಪಡಿಸುವ ಬಗ್ಗೆ ಈಗಾಗಲೇ ಯೋಜನೆ ರೂಪಿಸಲಾಗಿತ್ತು. ಮಳೆಯ ಬಿಡುವು ನೋಡಿಕೊಂಡು ಕೆಲಸ ಆರಂಭಿಸಲಾಗುತ್ತದೆ. ಎರಡು ದಿನ ಮಳೆಬಿಟ್ಟರೂ ಗುಂಡಿ ಮುಚ್ಚುವ ಕೆಲಸ ನಡೆಯಲಿದೆ. ಸ್ವಲ್ಪ ಮಳೆಯಾದರೂ ವೆಟ್‌ಮಿಕ್ಸ್ ಕೊಚ್ಚಿಹೋಗಿ ಮತ್ತೆ ಗುಂಡಿಯಾಗುತ್ತದೆ. ಈಗಾಗಿ ಮಳೆ ಸ್ವಲ್ಪ ಕಡಿಮೆಯಾದ ಅನಂತರ ವ್ಯವಸ್ಥಿತವಾಗಿ ವೆಟ್‌ಮಿಕ್ಸ್ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
– ರಾಯಪ್ಪ, ಪೌರಾಯುಕ್ತರು, ನಗರಸಭೆ.
ಪೆರಂಪಳ್ಳಿ ರಸ್ತೆ ಕಥೆ ಕೇಳ್ಳೋರಿಲ್ಲ
ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ಮಾರ್ಗದ ರಸ್ತೆ ಓಡಾಟ ಸಂಕಷ್ಟದಿಂದ ಕೂಡಿದೆ. ಇಲ್ಲಿನ ರೈಲ್ವೇ ಸೇತುವೆ ಮೇಲಿನ ಸ್ಲ್ಯಾಬ್‌ನ ಡಾಮರು ಪದರ ಸಂಪೂರ್ಣ ಕಿತ್ತುಹೋಗಿ ಗುಂಡಿಗಳಿಂದ ಕೂಡಿದೆ. ಕಾರು, ದ್ವಿಚಕ್ರ ವಾಹನಗಳು ಗುಂಡಿಗಳನ್ನು ತಪ್ಪಿಸಿಕೊಂಡು ಹೋಗುವುದೇ ಸವಾಲು. ಅಲ್ಲಿಂದ ಮುಂದಕ್ಕೆ ಸಾಯಿರಾಧ ಗ್ರೀನ್‌ವ್ಯಾಲಿ ಸಮೀಪದಿಂದ ಮಣಿಪಾಲ ಹೋಗುವ ಅರ್ಧ ಕಿ.ಮೀ. ರಸ್ತೆ ಅತ್ಯಂತ ದುಃಸ್ಥಿತಿಯಿಂದ ಕೂಡಿದ್ದು, ಇಲ್ಲಿನ ಬೃಹತ್ ಗಾತ್ರದ ಗುಂಡಿಗಳು ಅಪಾಯಕಾರಿಯಾಗಿ ಪರಿಣಮಿಸಿವೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ರಸ್ತೆ ಇದಾಗಿದ್ದು, ಮಳೆಗಾಲಕ್ಕೆ ಮುನ್ನ ಯಾವುದೇ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಒಂದಿಷ್ಟು ಭಾಗವನ್ನು ಇನ್ನೂ ಅಭಿವೃದ್ಧಿ ಪಡಿಸದೆ ಅರ್ಧಕ್ಕೆ ಬಿಡಲಾಗಿದೆ. ವಾಹನ ಸವಾರರ ಗೋಳು ಕೇಳುವವರಿಲ್ಲ ಎಂದು ಸವಾರರು ಅಳಲು ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.