ಪರ್ಯಾಯ ಅವಧಿಯಲ್ಲಿ 16 ಕೋ.ರೂ. ಕಾಮಗಾರಿ: ಪೇಜಾವರ ಶ್ರೀ
Team Udayavani, Dec 29, 2017, 12:03 PM IST
ಉಡುಪಿ: ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ಮಠ ಮತ್ತು ಪಾಜಕ ಕ್ಷೇತ್ರದಲ್ಲಿ ಒಟ್ಟು ಸರಿ ಸುಮಾರು 16 ಕೋ.ರೂ. ಮೌಲ್ಯದ ವಿವಿಧ ಕಾಮಗಾರಿಗಳು ನಡೆದಿವೆ. ಮತ್ತಷ್ಟು ಕೆಲಸಗಳು ಬಾಕಿ ಇವೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
3.5 ಕೋ.ರೂ. ವೆಚ್ಚದಲ್ಲಿ ಶ್ರೀಕೃಷ್ಣ ಮಠದ ಒಳಪೌಳಿ, 3 ಕೋ.ರೂ. ವೆಚ್ಚದಲ್ಲಿ ಮಧ್ವಾಂಗಣ ನಿರ್ಮಾಣ, 2 ಕೋ.ರೂ. ವೆಚ್ಚದಲ್ಲಿ ವಸತಿಗೃಹ ನಿರ್ಮಾಣ, 2 ಕೋ.ರೂ. ವೆಚ್ಚದಲ್ಲಿ ಡಾರ್ಮೆಟ್ರಿ, 50 ಲ.ರೂ. ವೆಚ್ಚದಲ್ಲಿ ಯಾತ್ರಿನಿವಾಸ ಕಾಮಗಾರಿ, 5 ಕೋ.ರೂ. ವೆಚ್ಚದಲ್ಲಿ ಪಾಜಕದಲ್ಲಿ ಆನಂದ ತೀರ್ಥ ಶಾಲೆ ಸೇರಿದಂತೆ ಸುಮಾರು 16 ಕೋ.ರೂ.ಗಳ ಕಾಮಗಾರಿಗಳು ನಡೆದಿವೆ. ಇವುಗಳಲ್ಲಿ ಬಹುತೇಕ ಈಗಾಗಲೇ ಪೂರ್ಣಗೊಂಡಿವೆ. ಪರ್ಯಾಯ ಅವಧಿಯಲ್ಲಿ ಸಂಕಲ್ಪಿಸಿದ ಹಲವು ಕೆಲಸಗಳು ಪೂರ್ಣಗೊಂಡಿವೆ. ಇನ್ನು ಕೆಲವು ಬಾಕಿ ಉಳಿದಿವೆ. ಭಕ್ತರು ನೀಡಿದ ಹಣವನ್ನು ಶ್ರೀಕೃಷ್ಣ ಮಠ, ಸಾಮಾಜಿಕ ಕೆಲಸಗಳಿಗೆ ಪೂರ್ಣವಾಗಿ ವ್ಯಯಿಸಿದ್ದೇನೆ ಎಂದು ಪೇಜಾವರ ಶ್ರೀಗಳು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪೀಠ ಇಳಿದ ಅನಂತರ…
ಪರ್ಯಾಯ ಪೀಠ ಇಳಿದ ಅನಂತರ ಬೆಂಗಳೂರಿನ ಮಾರ್ತಹಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆಯನ್ನು ಪೂರ್ಣಗೊಳಿಸುವುದು, ಶಿವಮೊಗ್ಗದಲ್ಲಿ ಸಾರ್ವಜನಿಕ ವಿದ್ಯಾರ್ಥಿನಿಲಯ ಸ್ಥಾಪನೆ, ಹುಬ್ಬಳ್ಳಿ ಬುಡರ ಸಂಗಿಯ ಶಿಕ್ಷಣ ಸಂಸ್ಥೆಯ ಅಭಿವೃದ್ಧಿ ಮೊದಲಾದ ಸಾಮಾಜಿಕ ಕಾರ್ಯಗಳತ್ತ ಗಮನ ನೀಡುತ್ತೇನೆ. ಮಾಡಲು ತುಂಬಾ ಕೆಲಸವಿದೆ ಎಂದು ಶ್ರೀಗಳು ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪೇಜಾವರ ಶ್ರೀಗಳು, “6ನೇ ಬಾರಿಗೆ ಪೀಠವೇರುವುದಿಲ್ಲ. ದೇಹಾರೋಗ್ಯ ಕೂಡ ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುವುದು ಕಷ್ಟ. ಸದ್ಯ ಆರೋಗ್ಯದಿಂದ ಇದ್ದೇನೆ. ಮುಂದೆ ಶಿಷ್ಯರನ್ನೇ ಪೀಠವೇರಿಸುತ್ತೇನೆ. ಅದಕ್ಕೆ ಶಿಷ್ಯರು ಕೂಡ ಒಪ್ಪಿದ್ದಾರೆ. ನಾನು ಅವರಿಗೆ ಮಾರ್ಗದರ್ಶನ ನೀಡುತ್ತೇನೆ ಎಂದು ಹೇಳಿದರು. ಮಧ್ವಾಂಗಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ಕುರಿತು ಇನ್ನೂ ಸ್ಪಷ್ಟವಾಗಿಲ್ಲ ಎಂದು ಶ್ರೀಗಳು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.