ಲಾಕ್ ಡೌನ್ ನಡುವೆಯೇ ಮನೆ ರಿಪೇರಿ ಮಾಡಿಕೊಟ್ಟು ಮಾದರಿಯಾದ ಸತ್ಯದ ತುಳುವೆರ್ ಜವನೆರ್
Team Udayavani, Jul 19, 2020, 3:49 PM IST
ಕಾಪು: ಕೋವಿಡ್-19 ವೈರಸ್ ರೋಗಾಣು ಹರಡುವಿಕೆಯ ಆತಂಕಕ್ಕೆ ಸಿಲುಕಿ ಸಂಕಷ್ಟಕ್ಕೆ ಸಿಲುಕಿರುವ ಉಡುಪಿ- ಮಂಗಳೂರಿನ ಕುಟುಂಬಗಳ ಸಮಸ್ಯೆಗೆ ಸ್ಪಂದಿಸುವ ಸಲುವಾಗಿ ಅಸ್ತಿತ್ವಕ್ಕೆ ಬಂದಿರುವ ಸತ್ಯದ ತುಳುವೆರ್ ತಂಡದ ಸದಸ್ಯರು ಜು.19ರ ರವಿವಾರದ ಲಾಕ್ ಡೌನ್ ಪ್ರಯುಕ್ತ ಇನ್ನಂಜೆ ಗ್ರಾಮದ ಮಡುಂಬುವಿನಲ್ಲಿ ಶ್ರಮದಾನ ನಡೆಸಿ, ಮಾದರಿಯಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಇನ್ನಂಜೆ ಗ್ರಾಮದ ಮಡುಂಬುವಿನ ವಿಶ್ವನಾಥ ಆಚಾರ್ಯ ಅವರ ಮನೆಯ ಒಂದು ಪಾರ್ಶ್ವ ಕುಸಿದಿತ್ತು. ಇದರಿಂದಾಗಿ ಅವರ ಮನೆಗೂ ಅಪಾಯದ ಭೀತಿ ಉಂಟಾಗಿತ್ತು.
ಇಲೆಕ್ಟ್ರೀಷಿಯನ್ ವೃತ್ತಿ ನಡೆಸುತ್ತಿರುವ ವಿಶ್ವನಾಥ ಆಚಾರ್ಯ ಅವರು ಕೋವಿಡ್-19 ಕಾರಣದಿಂದಾಗಿ ಮೂರುವರೆ ತಿಂಗಳಿನಿಂದ ಸರಿಯಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಅವಧಿಯಲ್ಲೇ ಮನೆಯೂ ಕುಸಿತಕ್ಕೊಳಗಾದ ಕಾರಣ ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಈ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಬಂದ ಸತ್ಯದ ತುಳುವೆರ್ ಉಡುಪಿ-ಮಂಗಳೂರು ತಂಡವು ರವಿವಾರದ ಲಾಕ್ ಡೌನ್ ಪ್ರಯುಕ್ತದ ತಮ್ಮ ಬಿಡುವಿನ ದಿನವನ್ನು ಇವರ ಮನೆ ರಿಪೇರಿಗೆಂದು ಮೀಸಲಿಟ್ಟು ಮಾದರಿಯಾಗಿದ್ದಾರೆ.
ಕಲ್ಯಾಣಪುರ, ಉಪ್ಪೂರು, ಹಿರಿಯಡಕ, ಮಲ್ಪೆ, ತೊಟ್ಟಂ, ಮಟ್ಟು, ಪಾಂಗಾಳ, ಹೆಬ್ರಿ, ಕುರ್ಕಾಲು, ಹೆಜಮಾಡಿ ಮೊದಲಾದೆಡೆಗಳ ಮೂವತ್ತಕ್ಕೂ ಅಧಿಕ ಮಂದಿ ಶ್ರಮಾದಾನದಲ್ಲಿ ಪಾಲ್ಗೊಂಡಿದ್ದು, ಮನೆ ರಿಪೇರಿಗೆ ಬೇಕಾದ ಸಾಮಾಗ್ರಿ ಮತ್ತು ಲೇಬರ್ ಗೆ ಸುಮಾರು 20 ಸಾವಿರ ಖರ್ಚು ತಗುಲಿದ್ದು, ಅದನ್ನು ತಂಡದ ಸದಸ್ಯರೇ ಭರಿಸಿದ್ದಾರೆ. ಮರದ ತುಂಡು ಪಕ್ಕಾಸುಗಳನ್ನು ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ ಅವರು ಒದಗಿಸಿದ್ದಾರೆ.
ಸತ್ಯದ ತುಳೆವೆರ್ ತಂಡದ ಗೌರವಾಧ್ಯಕ್ಷ ಕುರ್ಕಾಲು ದಿನಕರ ಶೆಟ್ಟಿ, ಅಧ್ಯಕ್ಷ ಪ್ರವೀಣ್ ಬಂಗೇರ ಮಲ್ಪೆ, ಕಾರ್ಯದರ್ಶಿ ರಿತೇಶ್ ಬಂಗೇರ ಮಲ್ಪೆ, ಕೋಶಾಧಿಕಾರಿ ಶಿವಪ್ರಸಾದ್ ಕುರ್ಕಾಲು, ಭಾರತೀಯ ಭೂಸೇನೆಯ ಯೋಧ ಶಿವಪ್ರಕಾಶ್ ಮಲ್ಪೆ ಮೊದಲಾದವರು ಸಹಯೋಗ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.