ಕಾಪು ಮಾರಿಯಮ್ಮನ ಅನುಗ್ರಹವೇ ನನಗೆ ಶ್ರೀರಕ್ಷೆ : ಮಿಸ್ ಇಂಡಿಯಾ ಸಿನಿ ಶೆಟ್ಟಿಯ ಮನದ ಮಾತು
Team Udayavani, Jul 19, 2022, 10:51 PM IST
ಕಾಪು : ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರು ಮಂಗಳವಾರ ರಾತ್ರಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾಪು ಶ್ರೀ ಮಾರಿಯಮ್ಮ ದೇವಿಯ ಭಕ್ತೆಯಾಗಿರುವ ಸಿನಿ ಶೆಟ್ಟಿ ಅವರು ಮಿಸ್ ಇಂಡಿಯಾ ಪ್ರಶಸ್ತಿ ವಿಜೇತರಾದ ಬಳಿಕ ಪ್ರಥಮ ಬಾರಿಗೆ ಕಾಪು ಹೊಸ ಮಾರಿಗುಡಿಗೆ ಭೇಟಿ ನೀಡಿದ್ದು ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ದೇವಸ್ಥಾನದ ವತಿಯಿಂದ ಅರ್ಚಕ ಶ್ರೀಧರ ತಂತ್ರಿ ಅವರ ಮೂಲಕವಾಗಿ ಪ್ರಸಾದ ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಅವರು, ತಾನು ಮಾರಿಯಮ್ಮ ದೇವಿಯ ಭಕ್ತೆಯಾಗಿದ್ದು ಎಳೆವೆಯಿಂದಲೂ ತಂದೆ, ತಾಯಿಯೊಂದಿಗೆ ಇಲ್ಲಿಗೆ ಬರುತ್ತಿದ್ದೆ. ಈಗ ಮಿಸ್ ಇಂಡಿಯಾಗಿ ಆಗಿ ಬರುತ್ತಿರುವದಕ್ಕೆ ಮಾರಿಯಮ್ಮ ದೇವಿಯ ಅನುಗ್ರಹವೇ ಮುಖ್ಯ ಕಾರಣವಾಗಿದೆ. ಮುಂದೆ ಅಮ್ಮನ ಅನುಗ್ರಹದಿಂದ ಮಿಸ್ ವರ್ಲ್ಡ್ ಆಗಿಯೂ ಬರುವಂತಾಗಲಿ ಎಂದು ಪ್ರಾರ್ಥನೆಯನ್ನು ದೇವರ ಮುಂದಿಟ್ಟಿದ್ದೇನೆ ಎಂದರು.
ಪ್ರಸ್ತುತ ಕಾಪು ಶ್ರೀ ಹೊಸ ಮಾರಿಗುಡಿ ಜೀರ್ಣೋದ್ಧಾರಗೊಳ್ಳುತ್ತಿದ್ದು ಜೀರ್ಣೋದ್ಧಾರಕ್ಕೆ ತಮ್ಮ ಮನೆಯ ವತಿಯಿಂದ 99 ಶಿಲಾ ಸೇವೆ ನೀಡುತ್ತಿದ್ದೇವೆ. ಇದೇ ರೀತಿಯಲ್ಲಿ ಜಗದಗಲಕ್ಕೆ ಹರಡಿರುವ ಮಾರಿಯಮ್ಮ ದೇವಿಯ ಭಕ್ತರೆಲ್ಲರೂ ಶಿಲಾ ಸೇವೆ ನೀಡುವ ಮೂಲಕ ಮಾರಿಗುಡಿಯ ಜೀರ್ಣೋದ್ಧಾರದಲ್ಲಿ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಇದನ್ನೂ ಓದಿ : ಸ್ಮಾರ್ಟ್ ಸಿಟಿ ಕಾಮಗಾರಿ 2023 ಜೂನ್ ವೇಳೆಗೆ ಪೂರ್ಣ: ಸಚಿವ ಬೈರತಿ ಬಸವರಾಜ್
ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ ಮಾತನಾಡಿ, ಮಿಸ್ ಇಂಡಿಯಾ ಸ್ಪರ್ಧೆಗೆ ಹೋಗುವ ಮುನ್ನ ಮಾರಿಗುಡಿಗೆ ಬಂದು ಹೋಗಿದ್ದು, ಸ್ಪರ್ಧೆಯಲ್ಲಿ ಗೆದ್ದು ಬಂದ ಕಾರಣ ಮಾರಿಪೂಜೆ ಸೇವೆ ಯ ಹರಕೆ ಹೊತ್ತಿದ್ದು, ಮುಂದಿನ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲೂ ಗೆದ್ದು ಬರುವಂತಾಗಲು ಎಲ್ಲರ ಆಶೀರ್ವಾದ ಸಿಗುವಂತಾಗಲಿ ಎಂದು ಆಶಿಸಿದರು.
ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮನೋಹರ ಶೆಟ್ಟಿ, ಗಂಗಾಧರ ಸುವರ್ಣ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ನಡಿಕೆರೆ ರತ್ನಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ದೊರಕಳಗುತ್ತು, ರವಿರಾಜ ಶೆಟ್ಟಿ ಪಂಜಿತ್ತೂರುಗುತ್ತು, ರತ್ನಾಕರ ಹೆಗ್ಡೆ ಕಲೀಲಬೀಡು, ರಮೇಶ್ ಶೆಟ್ಟಿ ಕೊಲ್ಯ, ಲೀಲಾಧರ ಶೆಟ್ಟಿ, ನಿರ್ಮಲ್ ಕುಮಾರ್ ಹೆಗ್ಡೆ, ಜಗದೀಶ್ ಬಂಗೇರ, ಶಿಲ್ಪಾ ಜಿ. ಸುವರ್ಣ, ಗೌರವ್ ಶೇಣವ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.