Temple History: ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನ; ಹಿನ್ನೆಲೆ, ಇತಿಹಾಸ,ವಿಶೇಷಗಳು


Team Udayavani, Mar 18, 2024, 1:07 PM IST

9-temple

ಪುರಾತನ ದೇವಾಲಯದ ವಾಸ್ತು ವಿನ್ಯಾಸವನ್ನು ಗೌರವಿಸುತ್ತಾ, ನಿರ್ಮಾಣದಲ್ಲಿ ಬಳಕೆಯಾದ ಶಿಲಾ ಶಿಲ್ಪಗಳನ್ನು ಯಥಾವತ್ತಾಗಿ ಮರು ಜೋಡಿಸಿ ಪುನಾರಚಿಸುವ ಸಾಹಸವೊಂದು ಇತಿಹಾಸ – ಪುರಾಣ – ಜನಪದದ ಹಿನ್ನೆಲೆಯೊಂದಿಗೆ ಜನಪ್ರಿಯವಾಗಿರುವ ವಡಭಾಂಡೇಶ್ವರದ ಭಗವಾನ್ ವಾಸುದೇವ ಶ್ರೀಕೃಷ್ಣನ ಜೇಷ್ಠ ಸಹೋದರ ವಡಭಾಂಡದ ಶ್ರೀ ಬಲರಾಮ ದೇವರ ದೇವಳದಲ್ಲಿ ನಡೆಯುತ್ತಿದೆ.

ಈ ಇಚ್ಛಾಶಕ್ತಿ – ಸಾಹಸ ಪ್ರವೃತ್ತಿ ಪ್ರಧಾನವಾದ ಪುನರುದ್ಧಾರ –  ಜೀರ್ಣೋದ್ಧಾರಕ್ಕೆ ಏಳು ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ಮೂಲಸ್ಥಾನ ಶ್ರೀಬಲರಾಮ ದೇವರು ಪ್ರತ್ಯಕ್ಷಕ್ಕೆ ಸ್ಕಂದನಾಗಿ ದರ್ಶನ ನೀಡುತ್ತಾರೆಯಾದರೂ “ಬಲರಾಮ ದೇವರೆಂದೇ” ಪ್ರಖ್ಯಾತರು.

ಪ್ರತಿಮಾ ಲಕ್ಷಣಕ್ಕಿಂತಲೂ ಸನ್ನಿಹಿತ ಸನ್ನಿಧಾನದ ಸನ್ನುತಿ “ಬಲರಾಮ ದೇವರು” ಎಂಬುದೇ ಆಸ್ತಿಕರ ಒಪ್ಪಿಗೆ. ಇದೇ ಜನಜನಿತ ಸಾನ್ನಿಧ್ಯ ವಿಶೇಷ. ಇಂತಹ ವಿಶಿಷ್ಟ ಸನ್ನಿಧಿಯೊಂದರ ಪುನರುದ್ಧಾರಕ್ಕೆ ಸಂಕಲ್ಪಸಲಾಗಿದೆ. ಐತಿಹಾಸಿಕ ಮಹತ್ವದ ಧಾರ್ಮಿಕ ಸ್ಥಾಪನೆಯೊಂದರ ಪುನರುತ್ಥಾನವು ಪುನರ್ನವ ಎಂದು ಹೆಗ್ಗಳಿಕೆಗೆ ಪಾತ್ರವಾಗುವಂತೆ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಆಸ್ತಿಕರು, ಪರಂಪರೆ ಬಯಸುವ ಚರಿತ್ರೆ ಗೌರವಿಸುವವರು ಹಾಗೂ ಭಕ್ತರು ಆಗಮಿಸಿ ಬಹುವೆಚ್ಚದ ಜೀರ್ಣೋದ್ಧಾರ ಸಾಂಗವಾಗಿ ನೆರವೇರುವಂತೆ ತನು – ಮನ – ಧನದ ಸಹಕಾರ ನೀಡಬೇಕೆಂದು ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಬಿನ್ನಹಿಸಿದೆ.

ಹಿನ್ನೆಲೆ

ವಡಭಾಂಡ ಎಂಬ ಮಹರ್ಷಿಯೊಬ್ಬರು ತಪಸ್ಸನ್ನಾಚರಿಸುತ್ತಿದ್ದ ಪುಣ್ಯಭೂಮಿ. ಈ ಮಹರ್ಷಿಗೆ ಮಹಾವ್ಯಾಧಿಯೊಂದು ಬಾಧಿಸುತ್ತದೆ. ಈ ವ್ಯಾಧಿಯ ಪರಿಹಾರಾರ್ಥ ಸುಬ್ರಹ್ಮಣ್ಯ ದೇವರನ್ನು ಆರಾಧಿಸುತ್ತಾರೆ. ವ್ಯಾಧಿ ಮುಕ್ತರಾದ ಬಳಿಕ ಸುಬ್ರಹ್ಮಣ್ಯ ದೇವರನ್ನು ಪ್ರತಿಷ್ಠಾಪಿಸುತ್ತಾರೆ. ಹೀಗೆ ವಡಭಾಂಡ ಮಹರ್ಷಿಯಿಂದ ಸಂಕಲ್ಪಿತ ಪುಣ್ಯಕ್ಷೇತ್ರವೇ ವಡಭಾಂಡೇಶ್ವರ ಎಂದಾಯಿತು.

ದ್ವೈತ ಸಿದ್ಧಾಂತದ ದ್ರಷ್ಟಾರ, ದಾರ್ಶನಿಕ ಆಚಾರ್ಯಮಧ್ವರು ಕಡಲಿನಲ್ಲಿ ಬಿರುಗಾಳಿಗೆ ಸಿಲುಕಿ ಅಪಾಯದ ಸ್ಥಿತಿಯಲ್ಲಿದ್ದ ಹಡಗೊಂದನ್ನು ತನ್ನ ಕಾವಿ ಬಟ್ಟೆಯನ್ನು ಬೀಸಿ ನಿಯಂತ್ರಿಸುತ್ತಾರೆ. ಹಡಗಿನ ಒಡೆಯನು ಬಹುಮಾನವಾಗಿ ಮುತ್ತು ರತ್ನಾದಿಗಳನ್ನು ಆಚಾರ್ಯರಿಗೆ ಸಲ್ಲಿಸಲು ಅವುಗಳನ್ನು ನಿರಾಕರಿಸುತ್ತಾರೆ. ಆದರೆ ಹಡಗಿನಲ್ಲಿದ್ದ ಮೂರು ಮಣ್ಣಿನ (ಗೋಪಿಯ) ದೊಡ್ಡ ಮುದ್ದೆಗಳನ್ನು ಮಾತ್ರ ಪಡೆಯುತ್ತಾರೆ. ಈ ಮೂರು ಮಣ್ಣಿನ ಉಂಡೆ ಅಥವಾ ಮುದ್ದೆಯೊಂದಿಗೆ ಉಡುಪಿಗೆ ಮರಳುವಾಗ ಒಂದು ಮುದ್ದೆ ಕೆಳಗೆ ಉರುಳಿ ಬೀಳುತ್ತದೆ. ಒಡೆದು ಒಳಗಿದ್ದ ಸುಂದರ  ಮೂರ್ತಿಯೊಂದು ಗೋಚರಿಸುತ್ತದೆ.ಅದೇ ಬಲರಾಮ ಮೂರ್ತಿ. ಮಣ್ಣಿನ (ಗೋಪಿಯ) ಮೂರ್ತಿ ಬಿದ್ದ ಸ್ಥಳದಲ್ಲೆ ಆ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ‌ ಅಥವಾ ಸ್ಥಾಪನೆಗೆ ವ್ಯವಸ್ಥೆಮಾಡುತ್ತಾರೆ. ಇದೇ ಬಲರಾಮ ಕ್ಷೇತ್ರ.

ಉಳಿದೆರಡು ಮುದ್ದೆಗಳಲ್ಲಿ ಒಂದು ಉಡುಪಿಯ‌ ಪೊಡವಿಗೊಡೆಯ ಶ್ರೀಕೃಪ್ಣ, ಅಷ್ಟಮಠಾಧೀಶರಿಂದ ಪೂಜೆಗೊಳ್ಳುವ ಮಧ್ವಾಚಾರ್ಯರ ಮಂಗಳಭೂಮಿಯ ಆರಾಧ್ಯ ದೇವರು.

ಇನ್ನೊಂದು ಜನಾರ್ದನ ಪ್ರತಿಮೆ ಎನ್ನಲಾಗುತ್ತದೆ. ಈ ಜನಾರ್ದನ ಪ್ರತಿಮೆಯನ್ನು ಎರ್ಮಾಳಿನ ದೇವಳಕ್ಕೆ ಸ್ವತಃ ಆಚಾರ್ಯರೇ ಕೊಡುತ್ತಾರೆ ಎಂಬುದು ಒಂದು ಕಥೆ.

ಇತಿಹಾಸ

ಚತುರಸ್ರಾಕಾರದ ಶಿಲಾಮಯ ಗರ್ಭಗುಡಿ ದ್ವಿತಲದ ರಚನೆ ಷಡ್ವರ್ಗ ಕ್ರಮದಲ್ಲಿ ನಿರ್ಮಿಸಲಾಗಿದೆ. ಈ ಶಿಲಾಮಯ ಗರ್ಭಗುಡಿಯು ಪುರಾತನ ರಚನೆಯಾಗಿದೆ. ಮೂಲಸ್ಥಾನ ಮೂರ್ತಿಗಿಂತಲೂ ಪುರಾತನ‌ ಎಂಬುದು ಪ್ರತ್ಯಕ್ಷಕ್ಕೆ ಸ್ಪಷ್ಟವಾಗುತ್ತದೆ. ಮೂಲಸ್ಥಾನ ಸನ್ನಿಧಾನವು ಶಿಲಾಪ್ರತಿಮೆಯಾಗಿದೆ. 13ನೇ ಶತಮಾನದ ನಿರ್ಮಿತಿ ಎಂಬುದು ಇತಿಹಾಸ ತಜ್ಞ ಡಾ.ಪಿ.ಗುರುರಾಜ ಭಟ್ಟರ ಅಭಿಪ್ರಾಯ. ದ್ವಿಬಾಹು ಮೂರ್ತಿಯು ಆಕರ್ಷಕವಾಗಿದೆ. ಪ್ರಭಾವಳಿಯನ್ನು ಹೊಂದಿದೆ. ಸಮಭಂಗದಲ್ಲಿ ನಿಂತ ಪ್ರತಿಮೆಯ ಎಡಕೈ ಕಟಿ ಅವಲಂಬಿತವಾಗಿದೆ. ಬಲಕೈಯಲ್ಲಿ ವಜ್ರ (ನಾಗಾಂಡ ಅಥವಾ  ಪದ್ಮ) ಹಿಡಿದುಕೊಂಡಂತಿದೆ.

ಬಲಿಮೂರ್ತಿಯು ಮಯೂರವಾಹನವಾಗಿದ್ದು‌ ಸುಂದರವಾಗಿದೆ ಹದಿನಾಲ್ಕನೇ ಶತಮಾನದ ರಚನೆ ಎಂದು ಗುರುರಾಜ ಭಟ್ಟರು ಮಾಡಿದ ಕಾಲ ನಿರ್ಣಯ.

ಗರ್ಭಗುಡಿ

ಪೂರ್ವಾಭಿಮುಖವಾಗಿರುವ ಗರ್ಭಗುಡಿಯ ಅಧಿಷ್ಠಾನವು ಪಾದಬಂಧ ಕ್ರಮದಲ್ಲಿದೆ. ಭಿತ್ತಿಯು ಶಾಸ್ತ್ರೀಯ ಕ್ರಮದ ನಿರ್ಮಿತಿ. ಭಿತ್ತಿಯು ಭಿತ್ತಿಸ್ತಂಭ, ಘನದ್ವಾರ ಗಳಿಂದ ಅಲಂಕೃತ ವಾಗಿದೆ.

ಪ್ರಸ್ತರ(ಕೆಳಗಿನ ಛಾವಣಿ)ವು ಶಿಲಾಮಯವಾಗಿದೆ. ಗ್ರೀವವು(ಷಡ್ವರ್ಗ ಕ್ರಮದಲ್ಲಿ ನಾಲ್ಕನೇ ಹಂತ, ಮೇಲಿನ ಹಾಗೂ ಕೆಳಗಿನ ಛಾವಣೆಗಳ ನಡುವಿನ  ಕುತ್ತಿಗೆಯಂತಹ‌‌ ಭಾಗ) ಭಿತ್ತಿಯ ರಚನೆಗೆ ಪೂರಕವಾಗಿದೆ. ಗ್ರೀವದ ದಿಕ್ಕುಗಳಲ್ಲಿ ಪೂರ್ವಾಧಿಯಾಗಿ ಪರಾವಾಸುದೇವ, ದಕ್ಷಿಣಾ ಮೂರ್ತಿ, ನರಸಿಂಹ, ಸ್ಕಂದ ಪ್ರತಿಮೆಗಳಿವೆ. ಇವು ಶಾಸ್ತ್ರೀಯವಾಗಿ ಇರುವಂತಹುದು. ಹಾರುಸಿಂಹದ ಪ್ರತಿರೂಪದ ಶಿಲಾ ಪ್ರತೀಕಗಳು ಇವೆ. ಇವುಗಳನ್ನೇ ಮತ್ತೆ ನೆಲೆಗೊಳಿಲಾಗುವುದು.

ಸ್ಥೂಪಿ ಎಂದರೆ ಮೇಲಿನ ಛಾವಣಿ.ಅದಕ್ಕಿಂತ ಮೇಲೆ ಶಿಖರ – ಆರನೇ ಹಂತ.ಈ ಶಿಖರದ ಭಾಗವು ಶಿಲೆಯದ್ದೇ ಆಗಿದೆ.ಸಮಗ್ರ ಶಿಲಾ ರಚನೆಗೆ ಅನುಗುಣವಾದ ಪ್ರಮಾಣದಲ್ಲಿದೆ,ಮರು ಸ್ಥಾಪಿಸಲಾಗುವುದು.

ಗರ್ಭಗುಡಿಯ ಮುಂಭಾಗದ ಭಿತ್ತಿಯಲ್ಲಿ ಇಕ್ಕೆಲಗಳಲ್ಲಿ  ಅಲಂಕಾರಿಕವಾಗಿ ನವಿಲಿನ ಉಬ್ಬು ಚಿತ್ರವಿದೆ.ದ್ವಾರದಲ್ಲಿ ದ್ವಾರದೇವತೆಗಳ ಉಬ್ಬಿಕಾಣುವಂತೆ ಕತ್ತಿದ‌ ಶಿಲ್ಪಗಳಿವೆ. ಇಂತಹ ಪ್ರಾಚೀನತೆಗೆ ಆಧಾರವಾಗಬಲ್ಲ ಎಲ್ಲಾ ಪುರಾತನ ನಿರ್ಮಿತಿಗಳನ್ನು ಯಥಾವತ್ತಾಗಿ ಅಳವಡಿಸುವ ಕೆಲಸ ನಡೆಯುತ್ತಿದೆ. ಗರ್ಭಗುಡಿಯ ಸುತ್ತಲೂ ಹನ್ನೆರಡು ಶಿಲಾ ಸ್ತಂಭಗಳು ಇರುತ್ತವೆ.ಮೂಲ ನಿರ್ಮಾಣದಲ್ಲಿ ಹಾಗೆಯೇ ಇದ್ದವುಗಳನ್ನೆ ಮತ್ತೆ ಅಳವಡಿಸಲಾಗುವುದು.

ಈಗಾಗಲೆ ಗರ್ಭಗುಡಿ,ತೀರ್ಥಮಂಟಪ ಹಾಗೂ ಅಗ್ರಸಭೆಯ ಪುರಾತನ ನಿರ್ಮಿತಿಗಳನ್ನು ಬಿಚ್ಚಿತೆಗೆದು ಗರ್ಭಗುಡಿಗೆ ಷಡಾಧಾರ ಸ್ಥಾಪನೆಯಂತಹ ಮೂಲಸ್ಥಾನ ದೇವರ ಪ್ರತಿಮೆ ಪ್ರತಿಷ್ಠೆಗೆ‌ ಪೂರ್ವಭಾವೀಯಾದ ಧಾರ್ಮಿಕ ವಿಧಿ ನಡೆದು ಮರುನಿರ್ಮಾಣಕಾರ್ಯ ಆರಂಭವಾಗಿದೆ.

ಭಿನ್ನಗೊಂಡ ಶಿಲೆಯ ಭಾಗಗಳನ್ನು ಹೊಸತಾಗಿ ನಿರ್ಮಿಸಿ ಮರುಜೋಡಣೆಯ  ಕಾರ್ಯ ನಡೆಯುತ್ತಿದೆ.

ತೀರ್ಥಮಂಟಪ

ದೇವಾಲಯ ನಿರ್ಮಾಣದ ಊರ್ಧ್ವಮುಖ ರಚನೆಯಂತೆ ಗರ್ಭಗುಡಿ ನಿರ್ಮಾಣವಾದರೆ, ತಿರ್ಯನ್ಮುಖ (ಸರಳ ರೇಖೆಯಂತಹ ರಚನೆ ಅಂದರೆ ಗರ್ಭಗುಡಿಯ ಮುಂಭಾಗದ ರಚನೆಗಳು) ನಿರ್ಮಿತಿಯಲ್ಲಿ ತೀರ್ಥಮಂಟಪವು ಎರಡನೇ ಹೆಜ್ಜೆ. ತೀರ್ಥಮಂಟಪವು ಏಕತಲದ ರಚನೆ,ಅಧಿಷ್ಠಾನವು ಪಾದಬಂಧ ಕ್ರಮದಲ್ಲಿದೆ.

ಹದಿನಾರು ಕಂಬಗಳಿರುವ ವಿಭಿನ್ನ ಶೈಲಿಯ ತೀರ್ಥಮಂಟಪ ಇದಾಗಿದೆ.ನಾಲ್ಕು ಕಂಬಗಳು ಮಂಟಪದ ಒಳಸುತ್ತಿನಲ್ಲಿವೆ. ಇವುಗಳನ್ನು ಬಳಸಿಕೊಂಡು ಹೊರಸುತ್ತಿನಲ್ಲಿ ಹನ್ನೆರಡು ಕಂಬಗಳಿವೆ. ಒಳಸುತ್ತಿನ ನೈಋತ್ಯ ದಿಕ್ಕಿನಲ್ಲಿರುವ‌ ಕಂಬದಲ್ಲಿ ಗಣಪತಿಯ ಉಬ್ಬು ಶಿಲ್ಪವಿದೆ. ಹಾಗೆಯೇ ವಾಯುವ್ಯ ದಿಕ್ಕಿನ ಕಂಬದಲ್ಲಿ ಅನ್ನಪೂರ್ಣೇಶ್ವರೀ (ದುರ್ಗೆ)ಯ ಉಬ್ಬು ಶಿಲ್ಪವಿದೆ. ಇವೆರಡು ಸನ್ನಿಧಾನಗಳನ್ನು ಉಪಸ್ಥಾನ ಸನ್ನಿಧಿಗಳೆಂದು‌ ಗುರುತಿಸಬಹುದು. ಹಳೆಯ ಆದರೆ ಆಕರ್ಷಕ ಕರ್ಣ ಮುಚ್ಚಿಕೆಯ ಸಂಯೋಜನ ಕ್ರಮ ಹಾಗೂ ವಿನ್ಯಾಸದಿಂದ ಗಮನಸೆಳೆಯುತ್ತದೆ. ನಡುವೆ ಗರುಡನ ಆಕೃತಿಯನ್ನು‌ ಪಡಿಮೂಡಿಸಲಾಗಿದೆ.

ಸುತ್ತುಪೌಳಿಯು ಕೆಂಪುಕಲ್ಲಿನ‌ ರಚನೆ. ಹಂಚು‌ಹೊದಿಸಲ್ಪಟ್ಟಿದ್ದಾಗಿತ್ತು.ಒಳಗೆ ತೆರೆದುಕೊಂಡಂತ್ತಿದ್ದು  ಶಿಲಾ ಕಂಬಗಳಿವೆ.ಈ ಕಂಬಗಳನ್ನು‌ ಮತ್ತೆ ಯಥಾವತ್ತಾಗಿ ಬಳಸಿಕೊಳ್ಳಲಾಗುವುದು.

ಅಗ್ರಸಭೆ

ತೀರ್ಥಮಂಟಪಕ್ಕಿಂತ ಮುಂಭಾಗದ ಕಟ್ಟಡ.

ದೇವಳ ಒಳಪ್ರವೇಶದ ನಡೆಯ ಎರಡು ಬದಿಯಲ್ಲಿರುವ ಚಾವಡಿಯಂತಹ ನಿರ್ಮಾಣವೇ ಅಗ್ರಸಭೆ. ಅಗ್ರಸಭೆಯ ಪ್ರಧಾನ ಎರಡು ಕಂಬಗಳಲ್ಲಿ – ಪಶ್ಚಿಮಾಭಿಮುಖವಾಗಿ ಬಲದಲ್ಲಿ ಗರುಡ ಹಾಗೂ ಎಡದಲ್ಲಿ ಮುಖ್ಯಪ್ರಾಣನ ಉಬ್ಬಿದಂತೆ ಕೆತ್ತಲಾದ ಶಿಲ್ಪಗಳಿವೆ. ಈ ಕಂಬಕ್ಕೆ‌ಸಮಾನಾಂತರವಾಗಿ ಎರಡು ಆನೆಗಳ ಪ್ರತಿರೂಪಗಳಿವೆ.ಮೂರು ಕರ್ಣಮುಚ್ಚಿಕೆಗಳನ್ನು‌(ನಡೆಯ‌ ಮೇಲೆ ಹಾಗೂ ಇಕ್ಕೆಲಗಳಲ್ಲಿ‌ ಒಂದೊಂದು.) ಪ್ರತ್ಯೇಕವಾಗಿ ಗುರುತಿಸಲಾಗಿದೆ. ಇಂತಹ ಭಿನ್ನಗೊಳ್ಳದ ಎಲ್ಲಾ ಭಾಗಗಳಲ್ಲಿ ಮೂಲದ ಶಿಲೆಗಳನ್ನೇ ಬಳಸಲಾಗುತ್ತಿದೆ.

ಮುಖಮಂಟಪ ಎಂಬ ವಿಸ್ತಾರವಾದ ನಿರ್ಮಿತಿಗಳಿಲ್ಲ.ಪ್ರವೇಶದ್ವಾರ ಶಿಲೆಯದ್ದನ್ನೇ ಉಳಿಸಿಕೊಳ್ಳಲಾಗುವುದು. ಮುಂಭಾಗ‌‌ ಪ್ರಧಾನ‌ಬಲಿ ಪೀಠ, ಧ್ವಜಸ್ತಂಭ. ಧ್ವಜಸ್ತಂಭದ ಮುಂದೆ ಶಿಲೆಯ ಇಷ್ಷತ್ತೈದು – ಮೂವತ್ತು ಅಡಿ ಎತ್ತರದ ದೀಪಸ್ತಂಭವಿದೆ. ದ್ವಜಸ್ತಂಭದ ತುದಿಯಲ್ಲಿ ನವಿಲಿನ ಆಕೃತಿಯ ಧ್ವಜದೇವರ ಮೂರ್ತಿ ಇದೆ.

ಹೊರಾಂಗಣವನ್ನು ದಾಟಿದರೆ ಗೋಪುರ ಅಥವಾ ಮರ್ಯಾದಾ ಇದೆ. ಎರಡು ಬದಿಗೂ ತೆರೆದುಕೊಂಡಂತಹ ವಿಶಾಲವಾದ ಚಾವಡಿ, ಮರದ ದೊಡ್ಡ ಕಂಬಗಳನ್ನು ಅಳವಡಿಸಲಾಗಿದೆ.

ಸಾಕ್ಷೀಶ್ವರ

ಹೊರ ಅಂಗಣದ ಉತ್ತರ ಬದಿಯಲ್ಲಿ‌ ಜೀರ್ಣಗೊಂಡ ಗುಡಿಯೊಂದಿದೆ. ದೀರ್ಘ ಚತುರಸ್ರ ಆಕಾರದ ಗುಡಿಯು ಪ್ರಾಸಾದ ಮಂಟಪ ಸಹಿತದ  ನಿರ್ಮಾಣವಾಗಿದೆ. ಶಿಲೆಯ ಹಾಸುಕಲ್ಲಿನ ಭಿತ್ತಿ ಇದೆ. ಇದು ದೊಡ್ಡ ಪಾಣಿಪೀಠದಲ್ಲಿರುವ ಸಣ್ಣಲಿಂಗವುಳ್ಳ ಸಾಕ್ಷೀಶ್ವರ ದೇವರ ಸನ್ನಿಧಿ.

ವಡಭಾಂಡೇಶ್ವರಕ್ಕೆ ಬಂದು ಸಮುದ್ರ ಸ್ನಾನ ಮಾಡಿ ಬಲರಾಮ ದೇವರ ದರ್ಶನ ಮಾಡಿದ ಸಾಕ್ಷಿಗಾಗಿ‌ ಸಾಕ್ಷೀಶ್ವರ ದೇವರ ಲಿಂಗವಿರುವ ದೊಡ್ಡ ಪಾಣಿಪೀಠದಲ್ಲಿರುವ ಸಣ್ಣದೊಂದು ಪಾಣಿಪೀಠವನ್ನು ಲಿಂಗಕ್ಕೆ ಪ್ರದಕ್ಷಿಣೆಯಾಗಿ ತಿರುಗಿಸುವ ವಿಶಿಷ್ಟ ಪದ್ಧತಿಯೊಂದು‌ ಇಲ್ಲಿ ರೂಢಿಯಲ್ಲಿದೆ.ಎರಡನೇ ಹಂತದಲ್ಲಿ ಈ ಗುಡಿಯ ಜೀರ್ಣೋದ್ಧಾರ ನಡೆಯುತ್ತದೆ.

‌ಸಾಕ್ಷೀಶ್ವರ ಗುಡಿಯ ಉತ್ತರಕ್ಕೆ ನವಗ್ರಹಗಳ‌ ಮೂರ್ತಿಗಳಿರುವ ವೇದಿಕೆಯೊಂದನ್ನು‌ ನಿರ್ಮಿಸಲಾಗುವುದು. ನವಗ್ರಹ ವೇದಿಕೆಯು‌‌ ದೇವಳದ ಒಳಸುತ್ತಿನಲ್ಲಿತ್ತು.

ಕ್ಷೇತ್ರಕ್ಕೆ ಸಂಬಂಧಿಸಿದ ನಾಗ ಸನ್ನಿಧಾನವು‌ಇದೆ. ಬಲರಾಮ ದೇವರ ಪ್ರಧಾನ ಪರಿವಾರ ಬಬ್ಬರ್ಯ ದೈವದ ಸಂಕಲ್ಪವು ದೇವಳದ ದಕ್ಷಿಣ ದಿಕ್ಕಿನಲ್ಲಿದೆ.ಆಗ್ನೇಯ ದಿಕ್ಕಿನಲ್ಲಿ ಭೂಗತ ಬ್ರಹ್ಮ ಸನ್ನಿಧಾನದ ಅಸ್ಪಷ್ಟ ಕುರುಹು ಇದ್ದಂತಿದೆ.ಈಶಾನ್ಯ ದಿಕ್ಕಿನಲ್ಲಿ ವಿಶಾಲವಾದ ದೇವಳದ ಸರೋವರವಿದೆ.

ವಿಶೇಷಗಳು

  • ಬಲರಾಮ ದೇವರು ಸಂತಾನ, ಸಮೃದ್ಧಿ, ಸುಖ ದಾಂಪತ್ಯ ಭಾಗ್ಯ‌ ಕರುಣಿಸುತ್ತಾರೆ ಎಂಬುದು ನಂಬಿಕೆ.
  • ಧೈರ್ಯಗುಂದಿದಾಗ, ಸಾಹಸದ ಕರ್ತವ್ಯಗಳಿಗೆ ಬಲರಾಮ ದೇವರ ಸ್ಮರಣೆ ಜನಜನಿತ.
  • ಕ್ಷೇತ್ರದಲ್ಲಿ ಷಷ್ಠಿ ಮಹೋತ್ಸವವು ವಿಜೃಂಭಣೆಯಿಂದ ನೆರವೇರುತ್ತದೆ. ಉರುಳು ಸೇವೆ ನಡೆದು ಬಂದಿದೆ.
  • ಮೊಗವೀರರು ವಿಶೇಷವಾಗಿ ನಂಬುವ ದೇವ ಬಲರಾಮ.
  • ಶ್ರಾವಣ ಹುಣ್ಣಿಮೆಯಂದು ಮೀನುಗಾರಿಕೆಗೆ ಕಡಲಿಗೆ ಇಳಿಯುವ ಮೊದಲು ಸಮುದ್ರಪೂಜೆ ಹಾಗೂ ಬಲರಾಮದೇವರಿಗೆ ಪೂಜೆ, ಬಬ್ಬರ್ಯ ದೈವಕ್ಕೆ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದೆ.
  • ಘಟ್ಟದ ಮೇಲಿನಿಂದ ಶ್ರೀಕೃಷ್ಣ ದರ್ಶನಕ್ಕೆ ಉಡುಪಿಗೆ ಬರುವ ಭಕ್ತರು ಕೃಷ್ಣನ ಅಣ್ಣ ಎಂಬ ನಂಬಿಕೆಯಿಂದ ವಡಭಾಂಡೇಶ್ವರದ ಬಲರಾಮನ ದರ್ಶನಕ್ಕೆ ಬರುತ್ತಾರೆ.
  • ವಡಭಾಂಡೇಶ್ವರವು ಪಿತೃಕಾರ್ಯಗಳಿಗೆ ಪ್ರಶಸ್ತ ಕ್ಷೇತ್ರ ಎಂದೂ ನಂಬಲಾಗಿದೆ.

ಸರ್ವ ಇಷ್ಟಾರ್ಥ ಸಿದ್ಧಿಯ ಕ್ಷೇತ್ರ, ಪುರಾಣ, ಚರಿತ್ರೆ ಹಾಗೂ ದಟ್ಟವಾದ ಜಾನಪದ ಹಿನ್ನೆಲೆಯಿರುವ ವಡಭಾಂಡೇಶ್ವರದ ಶ್ರೀ ಬಲರಾಮ ದೇವರ ದೇವಾಯತನದ ಜೀರ್ಣೋದ್ಧಾರ ಎಂಬ ಪುನಾರಚನೆಯ ಕೆಲಸ ನಡೆಯುತ್ತಿದೆ. ಸಂಕಲ್ಪದಂತೆ ಕಾಮಗಾರಿ ನಡೆದಿದೆ. ಮರುನಿರ್ಮಾಣ ಕಾರ್ಯವು ಪೂರ್ತಿಯಾದಾಗ ಈ ಸಾಹಸ ಹಾಗೂ ಇಚ್ಛಾಶಕ್ತಿಯ ಜೀರ್ಣೋದ್ಧಾರವು ಇತಿಹಾಸವಾಗಿ ದಾಖಲಾಗಲಿದೆ.

  • ಕೆ.ಎಲ್.ಕುಂಡಂತಾಯ

ಟಾಪ್ ನ್ಯೂಸ್

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು

1

Udupi: ಕುದ್ರು ನೆಸ್ಟ್‌ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ

accident

Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ

Belapu

ಬೆಳಪು ಸಹಕಾರಿ ಸಂಘ: ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಂಡಕ್ಕೆ 8ನೇ ಬಾರಿ ಚುಕ್ಕಾಣಿ

Have you updated your Aadhar Card?: Then you must read this news!

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್‌ ಸೂರ್ಯವಂಶಿ

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

Shabarimala

Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್‌ ಬುಕ್ಕಿಂಗ್‌ ತಾತ್ಕಾಲಿಕ ರದ್ದು

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.