ಕಾಪು: ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಚಾಲನೆ
Team Udayavani, Mar 23, 2022, 6:10 AM IST
ಕಾಪು: ಇಲ್ಲಿನ ಶ್ರೀ ಹಳೇ ಮಾರಿಗುಡಿ, ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿಗಳಲ್ಲಿ ತುಳುನಾಡಿನ ಏಳು ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು, ಬುಧವಾರ ಸಂಜೆಯವರೆಗೆ ನಡೆಯಲಿದೆ.
ಸುಗ್ಗಿ ಮಾರಿಪೂಜೆಗೆ ಪೂರ್ವಭಾವಿಯಾಗಿ ಮಂಗಳವಾರ ರಾತ್ರಿ ಕಾಪು ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಕಾಪು ಹೊಸ ಮಾರಿಗುಡಿ ಮತ್ತು ಕಾಪು ಮೂರನೇ (ಕಲ್ಯ) ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಸ್ವರ್ಣಾಭರಣಗಳನ್ನು ಮೆರವಣಿಗೆಯ ಮೂಲಕ ತರಲಾಯಿತು. ದೇವಿಯ ಸಾಂಕೇತಿಕ ಮೂರ್ತಿ ಮತ್ತು ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಗಳನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ಮಾರಿಪೂಜೆಯ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಬುಧವಾರ ಸಂಜೆ ತೆರೆ
ಮಂಗಳವಾರ ಮಧ್ಯರಾತ್ರಿಯ ಬಳಿಕ ದರ್ಶನ ಸೇವೆ ನಡೆದು, ಬುಧವಾರ ಮಧ್ಯಾಹ್ನದ ವರೆಗೂ ಭಕ್ತರಿಗೆ ಮಾರಿಯಮ್ಮ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬುಧವಾರದ ಮಧ್ಯಾಹ್ನ ಪೂಜೆ ನಡೆದು, ಸಂಜೆ ದರ್ಶನ ಸೇವೆ ನಡೆಯುತ್ತದೆ. ದರ್ಶನ ಸೇವೆಯಲ್ಲಿ ಅಭಯ ಪ್ರಸಾದ ವಿತರಣೆ ಬಳಿಕ ಮಾರಿಯಮ್ಮ ದೇವಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ದು, ವಿಸರ್ಜಿಸುವುದರೊಂದಿಗೆ ಮಾರಿ ಪೂಜಾ ಪೂಜಾ ವಿಧಿಗಳಿಗೆ ತೆರೆ ಎಳೆಯಲಾಗುತ್ತದೆ.
ಗದ್ದುಗೆ ಪೂಜೆ ವಿಶೇಷ
ಗದ್ದುಗೆಯೇ ಪ್ರಧಾನವಾಗಿರುವ ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದುಗೆ ಪೂಜೆ ವಿಶೇಷ ಸೇವೆಯಾಗಿದೆ. ಹೂವಿನ ಪೂಜೆ ಸೇವೆ ಸಹಿತ ವಿವಿಧ ಸೇವೆಗಳು, ಹರಕೆಗಳು ಸಮರ್ಪಿಸಲ್ಪಡುತ್ತವೆ. ಕೊರೊನಾ ನಿರ್ಬಂಧಗಳು ತೆರವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಸೇವೆಗಳಿಗೂ ಅವಕಾಶ ನೀಡಿರುವ ಕಾರಣ ಹೆಚ್ಚಿನ ಭಕ್ತರ ಪಾಲ್ಗೊಳ್ಳುವಿಕೆ ನಿರೀಕ್ಷಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.