ಸುವರ್ಣ ತ್ರಿಭುಜ ಬೋಟ್ ಮುಳುಗಡೆ ಪ್ರಕರಣ: ವಿಷ ಸೇವಿಸಿದ್ದ ಯುವಕ ಸಾವು
Team Udayavani, May 17, 2019, 12:20 PM IST
ಮಲ್ಪೆ: ಸುವರ್ಣ ತ್ರಿಭುಜ ಬೋಟ್ ಅವಘಡದಲ್ಲಿ ನಾಪತ್ತೆಯಾಗಿದ್ದ ಭಟ್ಕಳದ ಮೀನುಗಾರ ರಮೇಶ್ ಮೊಗೇರ ಅವರ ಚಿಂತೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ ಸಹೋದರ ಚಂದ್ರಶೇಖರ ಮೊಗೇರ (30) ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಬೋಟ್ ನಾಪತ್ತೆಯಾದ ದಿನದಿಂದ ಖನ್ನತೆಗೆ ಒಳಗಾಗಿದ್ದ ಅವರು ನಾಲ್ಕು ದಿನಗಳ ಹಿಂದೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಮೂರು ದಿನಗಳ ಬಳಿಕ ನೆರೆಮನೆಯವರಲ್ಲಿ ವಿಷ ಸೇವನೆಯ ಬಗ್ಗೆ ಮಾಹಿತಿ ನೀಡಿದ್ದರು. ಅಷ್ಟರಲ್ಲಿ ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಅವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಷ ರಕ್ತದಲ್ಲಿ ಸೇರಿ ಲಿವರ್, ಕಿಡ್ನಿ ವೈಫಲ್ಯಗೊಂಡಿದ್ದು ತೀವ್ರ ರಕ್ತಸ್ರಾವ ಆಗಿದ್ದರಿಂದ ಗುರುವಾರ ಬೆಳಗ್ಗೆ ಚಂದ್ರಶೇಖರ್ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಎರಡು ಸಾವಿಗೆ ಯಾರು ಹೊಣೆ ?
ಬೋಟ್ ಅವಘಡ ಸುದ್ದಿ ಕೇಳಿ ಒಬ್ಬ ಮಗನ ಚಿಂತೆಯಲ್ಲೇ ಹಾಸಿಗೆ ಹಿಡಿದು ಕಣ್ಣೀರಿನಲ್ಲೆ ಬದುಕುತ್ತಿರುವ ವೃದ್ಧ ತಂದೆ ತಾಯಿಗೆ ಇನ್ನೊಬ್ಬ ಮಗನ ಸಾವಿನ ಸುದ್ದಿ ಕೇಳಿ ಆಕಾಶವೇ ಕಳಚಿ ಬಿದ್ದಂತಾಗಿದ್ದು, ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ. ಮೊದಲೇ ಮನೆಯ ಪರಿಸ್ಥಿತಿ ಹೇಳುವ ಹಾಗೆ ಇಲ್ಲ, ಮನೆಯಲ್ಲಿ ಯಾರೂ ಸರಿಯಾಗಿ ಊಟ, ತಿಂಡಿ ಮಾಡುತ್ತಿಲ್ಲ. ಪರಿಹಾರ ಕೊಟ್ಟ ಹಣವನ್ನು ತಿನ್ನಲು ಆಗುತ್ತದೆಯೇ? ನಮ್ಮವರು ವಾಪಸ್ ಮರಳಿ ಬರುವರೇ? ಒಂದೇ ಮನೆಯಲ್ಲಿ ಎರಡು ಸಾವು ನಡೆಯಿತು. ಈ ಸಾವಿಗೆ ಯಾರು ಹೊಣೆ ಎಂದು ಹೇಳುತ್ತ ಚಂದ್ರಶೇಖರ್ ಅವರ ಭಾವ ಶ್ರೀಧರ್ ಬಾವುಕರಾಗುತ್ತಾರೆ.
ಕಳಚಿದ ಆಧಾರ ಸ್ತಂಭ
ಭಟ್ಕಳದ ಶನಿಯಾರ ಮೊಗೇರ ದಂಪತಿಗಳಿಗೆ ರಮೇಶ್ ಮೊಗೇರ ಮತ್ತು ಚಂದ್ರಶೇಖರ್ ಮೊಗೇರ ಸೇರಿದಂತೆ, ಐವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ, ಹಿರಿಯ ಸಹೋದರನಿಗೆ ವಿವಾಹವಾಗಿದೆ. ನಾಪತ್ತೆಯಾಗಿರುವ ರಮೇಶ್ ಮತ್ತು ಸಾವನ್ನಪ್ಪಿದ ಚಂದ್ರಶೇಖರ್ ಬಡ ಕುಟುಂಬಕ್ಕೆ ಮುಖ್ಯ ಆಧಾರಸ್ತಂಭವಾಗಿದ್ದರು. ಇದೀಗ ಕುಟುಂಬದ ಎರಡು ಆಧಾರ ಸ್ತಂಭವೇ ಕಳಚಿ ಬಿದ್ದಂತಾಗಿದೆ.
ಮೇ 21ರಂದು ಮೀನುಗಾರರ ಸಭೆ
ಕುಮಟಾದಲ್ಲಿ ಮೇ 21ರಂದು ಉ.ಕ. ಜಿಲ್ಲಾ ಮೀನುಗಾರರ ಸಭೆ ಕರೆಯಲಾಗಿದೆ. ಕೇಂದ್ರ ಸರಕಾರ ಮೀನುಗಾರರಿಗೆ ಗರಿಷ್ಠ ಪರಿಹಾರವನ್ನು ನೀಡಬೇಕು. ಅವಘಡಕ್ಕೆ ಕಾರಣನಾದ ನೌಕಾಪಡೆಯ ಅಧಿಕಾರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬಗ್ಗೆ ಒತ್ತಾಯ. ಇದೇ ಮೊದಲಾದ ವಿಷಯಗಳ ಚರ್ಚೆ ನಡೆಯಲಿದೆ. ಬೇಡಿಕೆಗಳಿಗೆ ಕೇಂದ್ರದಿಂದ ಸೂಕ್ತ ಸ್ಪಂದನೆ ದೊರೆಯದಲ್ಲಿ ಮುಂದಿನ ಹೋರಾಟದ ಹಾದಿಯನ್ನು ನಿರ್ಧರಿಸಲಾಗುವುದು ಎಂದು ಜಿಲ್ಲಾ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷ ಗಣಪತಿ ಮಾಂಗ್ರೆ ತಿಳಿಸಿದ್ದಾರೆ.
ಮೇಲೆತ್ತಿದರೆ ಕಳೇಬರ ಸಿಗಬಹುದು
ರಾಜ್ಯ ಸರಕಾರ ಪರಿಹಾರ ಅಂತ ಏನೋ ಮಾಡಿದ್ರು. ಕೇಂದ್ರದವರು ಇನ್ನೂ ಸುಮ್ಮನೆ ಕುಳಿತುಕೊಂಡಿದ್ದಾರಲ್ಲಾ, ನೌಕಾಪಡೆ ಮೂಲಕ ಬೋಟ್ ಎತ್ತುವ ಕೆಲಸವನ್ನಾದರೂ ಅವರು ಮಾಡಬೇಕಲ್ಲ. ಬೋಟ್ ಪತ್ತೆ ಹಚ್ಚಿದ ನೌಕಾಪಡೆಗೆ ಅದನ್ನು ಸಮುದ್ರದಾಳದಿಂದ ಮೇಲಕ್ಕೆ ಎತ್ತುವುದು ದೊಡ್ಡ ಕೆಲಸವೇನಲ್ಲ. ನೌಕಾಪಡೆಯವರು ಮನಸ್ಸು ಮಾಡಿದರೆ 5 ನಿಮಿಷದಲ್ಲಿ ಬೋಟ್ ಮೇಲೆತ್ತಬಹುದು. ಮೀನುಗಾರರ ಕಳೇಬರವಾದರೂ ಸಿಗಬಹುದು.
-ಗಣಪತಿ ಮಾಂಗ್ರೆ, ಕಾರವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.