ಶಿರ್ವ: ಕಲ್ಲು ಸಾಗಾಟದ ಟೆಂಪೋ ಪಲ್ಟಿ; ಪವಾಡಸದೃಶ ರೀತಿಯಲ್ಲಿ ಪಾರಾದ ಚಾಲಕ
Team Udayavani, Oct 31, 2020, 3:20 PM IST
ಶಿರ್ವ: ಇಲ್ಲಿನ ಮುಖ್ಯ ರಸ್ತೆಯ ನ್ಯಾರ್ಮ ಸೇತುವೆಯ ಬಳಿ ಕಲ್ಲು ಸಾಗಾಟ ಮಾಡುತ್ತಿದ್ದ ಟೆಂಪೋ ಪಲ್ಟಿಯಾಗಿ ಓರ್ವ ಗಾಯಗೊಂಡು ಚಾಲಕ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಅ. 31ರ ಬೆಳಿಗ್ಗೆ ನಡೆದಿದೆ.
ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದ ಕಲ್ಲು ಸಾಗಾಟದ ಟೆಂಪೊ ನ್ಯಾರ್ಮ ಇಳಿಜಾರಿನಲ್ಲಿ ಹೋಗುವಾಗ ಎದುರಿನ ವಾಹನ ಒಮ್ಮೆಲೇ ಬ್ರೇಕ್ ಹಾಕಿದ್ದು, ಎದುರಿನಿಂದ ಬಂದ ಇನ್ನೊಂದು ವಾಹನವನ್ನು ತಪ್ಪಿಸುವ ಸಲುವಾಗಿ ಟೆಂಪೋ ಚಾಲಕ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿದ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿದ್ದ ಓರ್ವನಿಗೆ ಗಾಯವಾಗಿದ್ದು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಮುಖ್ಯ ರಸ್ತೆಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಶಿರ್ವ ಪಿಎಸ್ಐ ಶ್ರೀಶೈಲ ನೇತೃತ್ವದಲ್ಲಿ ಪೊಲೀಸರು ಹಾಗೂ ಶಿರ್ವ ಪರಿಸರದ ನಾಗರಿಕರು ರಸ್ತೆಯಲ್ಲಿ ಬಿದ್ದಿದ್ದ ಕಲ್ಲು ಹಾಗೂ ಟೆಂಪೋವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ:ಚಿಕ್ಕಮಗಳೂರು: ಕಾಫೀ ತೋಟದಲ್ಲಿ 14 ಅಡಿ ಉದ್ದದ ಹೆಬ್ಬಾವು ಸೆರೆ
ಅಫಘಾತ ವಲಯ
ಆತ್ರಾಡಿ-ಶಿರ್ವ-ಬಜ್ಪೆ ರಸ್ತೆ ವಿಸ್ತರಣೆ ವೇಳೆ ಶಿರ್ವ ನ್ಯಾರ್ಮ ಸೇತುವೆ ಪುನರ್ನಿರ್ಮಾಣಗೊಂಡಿದ್ದು, ತಿರುವಿನಿಂದ ಕೂಡಿದ ರಸ್ತೆ ಕಾಮಗಾರಿಯಿಂದಾಗಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಸರಿಯಾಗಿ ಕಾಣದೆ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಶಿರ್ವದ ನಾಗರಿಕರು ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಪ್ರತಿಭಟನೆ ಕೂಡಾ ನಡೆಸಿದ್ದು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿರುವಿನಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.