ಮನೆಮನೆಗೆ ಪೈಪ್‌ಲೈನ್‌ನಲ್ಲಿ ಬರಲಿದೆ ಅಡುಗೆ ಅನಿಲ
ಕರಾವಳಿಯಲ್ಲಿ ಬಿರುಸಿನಿಂದ ನಡೆಯುತ್ತಿದೆ ಪೈಪ್‌ಲೈನ್ ಜೋಡಣೆ, ಅಳವಡಿಕೆ ಕೆಲಸ
Team Udayavani, Feb 9, 2022, 5:25 PM IST
ಕಾಪು: ದೇಶದ ವಿವಿಧ ಮಹಾ ನಗರಗಳು ಮತ್ತು ಸ್ಮಾರ್ಟ್ ಸಿಟಿಗಳಂತೆಯೇ ಗ್ರಾಮೀಣ ಭಾಗದ ಪ್ರತೀ ಮನೆಗೂ ಪೈಪ್‌ಲೈನ್ ಮೂಲಕ ನೇರವಾಗಿ ಗ್ಯಾಸ್ ಪೂರೈಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ದೂರಗಾಮೀ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಕರಾವಳಿಯಲ್ಲಿ ಚಾಲನೆ ದೊರಕಿದೆ.
ಉಡುಪಿ – ಮಂಗಳೂರು ನಡುವೆ ಹಾದು ಹೋಗುವ ರಾ. ಹೆ. 66ರಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯು ಭರದಿಂದ ಸಾಗುತ್ತಿದೆ. ಕಾಮಗಾರಿಯ ಗುತ್ತಿಗೆಯನ್ನು ಅದಾನಿ ಸಮೂಹವು ವಹಿಸಿಕೊಂಡಿದೆ. ಈ ಯೋಜನೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು ನಿರೀಕ್ಷೆಯಂತೆ ಕಾಮಗಾರಿ ಸಾಗಿ ಬಂದರೆ ವರ್ಷಾಂತ್ಯದೊಳಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023ರೊಳಗೆ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಳ್ಳಲಿದೆ.
ನೆಲದಡಿ ಪೈಪ್ ಅಳವಡಿಕೆ
ರಾ.ಹೆ. ಸರ್ವೀಸ್ ರಸ್ತೆಯ ಪಕ್ಕದಲ್ಲಿ ನಿಗದಿ ಪಡಿಸಿದ ಜಾಗದಲ್ಲಿ ಅಂದರೆ ಹೆದ್ದಾರಿ ಮಧ್ಯದಿಂದ ಸುಮಾರು 30 ಮೀ. ದೂರದಲ್ಲಿ ಪೈಪ್ ಲೈನ್ ಅಳವಡಿಕೆಯಾಗಲಿದೆ. 1.7 ಮೀ.ನಷ್ಟು ಭೂಮಿ ಅಗೆದು ಉಕ್ಕಿನ ಹಾಗೂ ಎಂಡಿಪಿ ಪೈಪ್ ಅಳವಡಿಸಲಾಗುತ್ತಿದೆ. ಹೆಜಮಾಡಿಯಿಂದ ಕಾಪು ವಿನವರೆಗೆ 60 ಮಂದಿಯ ತಂಡವು ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕಾಪು ಹೀಗೆ ಪ್ರತ್ಯೇಕ ಪಾಯಿಂಟ್‌ಗಳನ್ನು ಮಾಡಿಕೊಂಡು ಪೈಪ್‌ಲೈನ್ ಜೋಡಣೆ ಮತ್ತು ಅಳವಡಿಕೆಯಲ್ಲಿ ತೊಡಗಿದೆ.
ಕೆಲವೆಡೆ ಎಚ್‌ಡಿಡಿ (ಹೊರಿಝಾಂಟಲ್ ಡೈರೆಕ್ಷನ್ ಡ್ರಿಲ್ಲಿಂಗ್) ಯಂತ್ರದ ಮೂಲಕವಾಗಿ ನೆಲದ ಅಡಿಯಿಂದಲೇ ನಿರ್ದಿಷ್ಟ ದೂರದವರೆಗೆ ಡ್ರಿಲ್ ಮಾಡಿ ಪೈಪ್ ಅನ್ನು ದೂಡುವ ಯೋಚನೆಯಿದ್ದು, ಕೆಲವೆಡೆ ಮೇಲಿನಿಂದಲೇ ಪೈಪ್‌ಗ್ಳನ್ನು ಜೋಡಿಸಿ ಆಳಕ್ಕೆ ಇಳಿಸುವ ಯೋಜನೆ ರೂಪಿಸಲಾಗಿದೆ.
ಪ್ರಯೋಜನವೇನು?
ನೆಲದಡಿಯಲ್ಲಿ ಪೈಪ್‌ಲೈನ್ ಅಳವಡಿಸಿ ಗ್ಯಾಸ್ ಪೂರೈಸುವುದರಿಂದ ಯಾವುದೇ ಸಂದರ್ಭದಲ್ಲೂ ಅನಿಲ ಸೋರಿಕೆಯಾಗದಂತೆ ಮತ್ತು ಪ್ರತೀ ದಿನ ಅನಿಲ ಪೂರೈಕೆಯಾಗುವ ಪೈಪ್‌ಲೈನ್‌ನ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ. ಒಂದು ವೇಳೆ ಅನಾಹುತ ಸಂಭವಿಸಿದಲ್ಲಿ ವಾಲ್ ಗಳ ಮೂಲಕ ಅನಿಲ ಪೂರೈಕೆಯಾಗುವುದನ್ನು ನಿಲ್ಲಿಸಬಹುದಾಗಿದೆ.
ದೇಶದ ವಿವಿಧೆಡೆ ಹೀಗಿದೆ
ದೇಶದ ವಿವಿಧ ಕಡೆಗಳಲ್ಲಿ ಈಗಾಗಲೇ ಗ್ಯಾಸ್ ಪೈಪ್‌ಲೈನ್ ಮೂಲಕ ಮನೆ ಮನೆಗೆ ಅನಿಲ ವಿತರಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪೈಪ್‌ಲೈನ್ ಮೂಲಕ ಗ್ಯಾಸ್ ಸಂಪರ್ಕ ಪಡೆಯುವವರು 300 ರೂ. ಪಾವತಿಸಿ ಅರ್ಜಿ ಪಡೆಯಬೇಕಿದ್ದು ಪ್ರತೀ ಕನೆಕ್ಷನ್‌ಗೆ 5,500 ರೂ. ಮುಂಗಡ ಠೇವಣಿ ಇಡಬೇಕಾಗುತ್ತದೆ. ಈ ಮೊತ್ತವು ಮರುಪಾವತಿಯಾಗಿರುತ್ತದೆ. ಮನೆಯಲ್ಲಿ ಬಳಕೆ ಮಾಡುವ ಅನಿಲದ ಆಧಾರದ ಮೇಲೆ ಪ್ರತೀ 2 ತಿಂಗಳಿಗೊಮ್ಮೆ ಬಿಲ್ ಪಾವತಿಸಬೇಕಾಗುತ್ತದೆ. ಈ ಮಾದರಿಯ ಯೋಜನೆಯನ್ನು ಮೊದಲು ಗುಜರಾತ್‌ನಲ್ಲಿ ಆರಂಭಿಸಲಾಗಿತ್ತು.
ಖರ್ಚು ವೆಚ್ಚದೊಂದಿಗೆ ಹಾನಿ ಕಡಿಮೆ
ಆಗಾಗ ಸಂಭವಿಸುತ್ತಿರುವ ಸಿಲಿಂಡರ್ ಸ್ಫೋಟದಂತಹ ಪ್ರಕರಣಗಳನ್ನು ತಪ್ಪಿಸಲು ಕೂಡ ಪೈಪ್ ಮೂಲಕ ಗ್ಯಾಸ್ ಸಂಪರ್ಕ ಪೂರಕವಾಗಿರಲಿದೆ. ನ್ಯಾಚುರಲ್ ಗ್ಯಾಸ್ ಎಲ್‌ಪಿಜಿ ಸಿಲಿಂಡರ್‌ಗಿಂತ ಕಡಿಮೆ ಅಪಾಯಕಾರಿಯಾಗಿದ್ದು, ಹಾಗೆಯೇ ನೇರ ಗ್ಯಾಸ್ ಸಂಪರ್ಕದಿಂದ ಕಡಿಮೆ ಬೆಲೆಗೂ ದೊರೆಯುತ್ತದೆ. ಪ್ರಸ್ತುತ ಅಡುಗೆ ಸಿಲಿಂಡರ್ ಬೆಲೆ ಈಗ 904 ರೂಪಾಯಿ ಇದ್ದು, ಸಿಲಿಂಡರ್ ಮನೆಗೆ ಸಾಗಿಸಲು ಪ್ರತ್ಯೇಕ ಬೆಲೆ ಇರುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ಸಿಲಿಂಡರ್ ಪ್ರಮಾಣವನ್ನು ತೆಗೆದುಕೊಂಡರೆ ಇದು 550 ರಿಂದ 600 ರೂ. ಒಳಗೆ ದೊರೆಯಲಿದೆ. ಇದರಿಂದ ಈಗಿನ ಬೆಲೆಯಂತೆ ಕನಿಷ್ಠ 300 ರೂ.ಗಳಷ್ಟು ಉಳಿತಾಯವಾಗಲಿದೆ.
ಎಲ್ಲಿಂದ ಎಲ್ಲಿಯವರೆಗೆ?
ಈ ಕಾಮಗಾರಿಯ ಗುತ್ತಿಗೆಯನ್ನು ಅದಾನಿ ಕಂಪೆನಿಯು ಪ್ರತ್ಯೇಕ, ಪ್ರತ್ಯೇಕ ಗುಂಪುಗಳಿಗೆ ವಿಂಗಡಿಸಿ ನೀಡಿದೆ. ರಾ.ಹೆ. 66ರ ಹೆಜಮಾಡಿ ಟೋಲ್ ಗೇಟ್‌ನಿಂದ ಕಾಪುವಿನವರೆಗೆ ಪ್ರಥಮ ಹಂತದಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಮುಂದೆ ಹೆಜಮಾಡಿಯಿಂದ ಸುರತ್ಕಲ್ ಟೋಲ್‌ವರೆಗೆ, ಸುರತ್ಕಲ್‌ನಿಂದ ಮಂಗಳೂರು, ಉಡುಪಿಯಿಂದ ಸಾಸ್ತಾನ ಟೋಲ್‌ವರೆಗೆ, ಸಾಸ್ತಾನದಿಂದ ಕುಂದಾಪುರ ಹೀಗೆ ಹೆದ್ದಾರಿ ಬದಿಯಲ್ಲಿ ಒಂದು ಪಾಯಿಂಟ್‌ನಿಂದ ಮತ್ತೂಂದು ಪಾಯಿಂಟ್‌ವರೆಗೆ ಕನಿಷ್ಠ 10ರಿಂದ 15 ಕಿ.ಮೀ. ದೂರದವರೆಗೆ ಪೈಪ್‌ಲೈನ್ ಜೋಡಣೆಯಾಗುತ್ತಿದೆ.
2030ರ ಒಳಗೆ ಮನೆ ಮನೆಗೆ ಗ್ಯಾಸ್ ಪೂರೈಕೆ
2030ರೊಳಗೆ ಪ್ರತೀ ಮನೆಗೂ ಗ್ಯಾಸ್ ಕನೆಕ್ಷನ್ ಪೂರ್ಣಗೊಳಿಸುವ ಉದ್ದೇಶ ಹೊಂದಲಾಗಿದ್ದು, ಸಮರ್ಪಕವಾಗಿ ಅನುಷ್ಠಾನಗೊಂಡರೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡುವ, ಸಿಲಿಂಡರ್‌ಗಳನ್ನು ಮನೆಯಲ್ಲಿಟ್ಟುಕೊಳ್ಳುವ ಮತ್ತು ಸಿಲಿಂಡರ್‌ಗಳನ್ನು ಅಲ್ಲಿಂದಿಲ್ಲಿಗೆ ಹೊತ್ತೂಯ್ಯವ ಕಿರಿಕಿರಿಯಿಂದ ಜನತೆಗೆ ಮುಕ್ತಿ ಸಿಗಲಿದೆ. ಇದು ಪರಿಸರ ಸ್ನೇಹಿಯಾದ ಸುರಕ್ಷಿತ ಯೋಜನೆಯಾಗಿದ್ದು, ಭೂಮಿಯ ಒಳಗಿನಿಂದ ಪೈಪ್‌ಲೈನ್ ಅಳವಡಿಕೆಯಾಗುವುದರಿಂದ ಗ್ಯಾಸ್ ಸೋರಿಕೆ ಭೀತಿಯೂ ಕಡಿಮೆಯಾಗಲಿದೆ.
ಸದ್ಯ ಪ್ರಾಯೋಗಿಕ ಕಾಮಗಾರಿ
ಮನೆ ಮನೆಗೆ ಗ್ಯಾಸ್ ಪೂರೈಸುವ ನಿಟ್ಟಿನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬೇರೆ ಬೇರೆ ಕಂಪೆನಿಗಳ ಮೂಲಕವಾಗಿ ರಾ.ಹೆದ್ದಾರಿ ಬದಿಯಲ್ಲಿ ಗ್ಯಾಸ್ ಪೈಪ್‌ಲೈನ್ ಜೋಡಣೆ ಕಾಮಗಾರಿ ನಡೆಯುತ್ತಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಅದಾನಿ ಕಂಪೆನಿಯು ಈ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿದೆ. ಹೆಜಮಾಡಿ ಟೋಲ್‌ಗೇಟ್‌ನಿಂದ ಕಾಪುವಿನವರೆಗಿನ 10-15 ಕಿ. ಮೀ. ಉದ್ದದ ಕಾಮಗಾರಿಯನ್ನು ಪ್ರಾಯೋಗಿಕ ನೆಲೆಯಲ್ಲಿ ನಡೆಸಲಾಗುತ್ತಿದ್ದು ಮುಂದೆ ಇಡೀ ಜಿಲ್ಲೆಯಲ್ಲಿ ಈ ಮಾದರಿಯ ಪೈಪ್‌ಲೈನ್ ಜೋಡಣೆಯಾಗಲಿದೆ.
-ಶ್ರೀರಾಮ್ ಮುಂಡೆ
ಎಂಜಿನಿಯರ್, ಅದಾನಿ ಗ್ರೂಪ್
– ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ
Thekkatte: ಮನೆಯೊಂದರ ಅಂಗಳದಲ್ಲಿ ಚಿರತೆ ಸಂಚಾರ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Malpe: ಮೀಟಿಂಗ್ ರೂಮ್‌ಗೆ ಬೆಂಕಿ, ಭಸ್ಮವಾದ ಕಚೇರಿ ಕಡತಗಳು
Udupi: ಗೀತಾರ್ಥ ಚಿಂತನೆ-128: ರಾಮನ ವನವಾಸ, ಪಾಂಡವರ ಅಜ್ಞಾತವಾಸದ ಹಿಂದಿನ ತರ್ಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.