ಕೃಷ್ಣಜನ್ಮಾಷ್ಟಮಿ ಮಹಾದಿನವು ಲೋಕಕ್ಕೆ ಗೀತೆಯ ಬೆಳಕನ್ನು ನೀಡಿದ ಕೃಷ್ಣನ ಭಜಿಸುವ ದಿನ…
Team Udayavani, Aug 23, 2019, 5:34 AM IST
ಉತ್ತರದಿಂದ ದಕ್ಷಿಣದವರೆಗೆ ಕೃಷ್ಣ ಜನನ ಸಂಭ್ರಮ
ಡಾ|ಬನ್ನಂಜೆ ಗೋವಿಂದಾಚಾರ್ಯ, ಹಿರಿಯ ವಿದ್ವಾಂಸರು, ಉಡುಪಿ.
ಶ್ರೀಕೃಷ್ಣನ ಜನನ ಕಾಲದ ಸಂಭ್ರಮ ವಿವಿಧ ಪುರಾಣಗಳಲ್ಲಿ ಉಲ್ಲೇಖವಿದೆ. ಸುಮಾರು 5,000 ವರ್ಷಗಳ ಹಿಂದೆ ಶ್ರೀಕೃಷ್ಣ ಜನ್ಮ ತಾಳಿದಂದಿನಿಂದ ದೇಶಾದ್ಯಂತ ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಆಚರಣೆಯಾಗುತ್ತಿದೆ. ಭವಿಷ್ಯತ್ ಪುರಾಣದಲ್ಲಿ ಧರ್ಮರಾಜನಿಗೆ ಕೃಷ್ಣನೇ ಹೇಳುವ ಮಾತು ಇದೆ.
ಮಧ್ಯರಾತ್ರಿ ಕೃಷ್ಣ ಹುಟ್ಟುವ ಹೊತ್ತಿನಲ್ಲಿ ಕೃಷ್ಣ, ಬಲಭದ್ರ (ಬಲರಾಮ), ಸುಭದ್ರೆ (ಅಕ್ಕ), ವಸುದೇವ- ದೇವಕಿ, ನಂದಗೋಪ-ಯಶೋದೆಯರಿಗೆ ಅಘ್ಯರ್ಪ್ರದಾನ ಮಾಡಲಾಗುತ್ತದೆ. ಹಿಂದೆ ಇವರೆಲ್ಲರ ವಿಗ್ರಹಗಳನ್ನು ಮಾಡಿ ಅಘ್ಯರ್ಕೊಡುವುದಿತ್ತು. ರಾಜಸ್ಥಾನೀಯರ ಮನೆಗಳಲ್ಲಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಪೂಜೆ ಸಲ್ಲಿಸುವುದಿದೆ. ಹರಿವಂಶ ಪುರಾಣದಲ್ಲಿ ವೇಷಗಳನ್ನು ಹಾಕಿ ಕೃಷ್ಣನ ಹುಟ್ಟುಹಬ್ಬ ಆಚರಿಸುವ ಕಥೆ ಇದೆ. ಹಬ್ಬಹರಿದಿನಗಳಲ್ಲಿ ಹೆಣ್ಣು ಮಕ್ಕಳ ನಾಟಕವಾಡುವ (ವಧುನಾಟಕ) ವಿವರಣೆ ರಾಮಾಯಣದಲ್ಲಿ ಇದೆ ಎನ್ನುವುದು ಹಬ್ಬ ಹೇಗೆ ಆಚರಣೆಯಾಗುತ್ತಿತ್ತು ಎನ್ನುವುದನ್ನು ಸಾರುತ್ತದೆ.
ಕೆಲವು ಪುರಾಣಗಳಲ್ಲಿ ಭಾದ್ರಪದ ಮಾಸ ಕೃಷ್ಣಪಕ್ಷದ ಅಷ್ಟಮಿ ಎಂದು, ಕೆಲವು ಪುರಾಣಗಳಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಎಂದು, ಕೆಲವು ಪುರಾಣಗಳಲ್ಲಿ ಎರಡರ ಉಲ್ಲೇಖವೂ ಇದೆ. ಹುಣ್ಣಿಮೆಯಾಗಿ ಮಾಸ ಮುಗಿಯುವ ಚಾಂದ್ರಮಾನ, ಅಮಾವಾಸ್ಯೆಯಾಗಿ ಮಾಸ ಮುಗಿಯುವ ಸೌರ ಮಾಸದ ಎರಡು ಕ್ರಮಗಳಿವೆ. ಭಾದ್ರಪದ ಮಾಸವೆಂದರೆ ಚಾಂದ್ರಮಾನ ಕ್ರಮವಾದರೆ ಶ್ರಾವಣದಲ್ಲಿ ಸಿಂಹ ಮಾಸ ಬರುತ್ತದೆ. ನಾವು ಇದನ್ನು ಸೋಣ ಎಂದು ಕರೆಯುತ್ತೇವೆ. ಇದನ್ನು ವೇದ ಪುರಾಣಗಳಲ್ಲಿ ಸ್ರೋಣ ಎಂದು ಕರೆಯಲಾಗಿದೆ. ಸಿಂಹ ಮಾಸ/ ಭಾದ್ರಪದ ಮಾಸದಲ್ಲಿ ಶ್ರೀಕೃಷ್ಣ ಹುಟ್ಟಿದ. ಶ್ರಾವಣ/ ಭಾದ್ರಪದ ಮಾಸದಲ್ಲಿ ರೋಹಿಣಿ ನಕ್ಷತ್ರ ಬಂದೇ ಬರುತ್ತದೆ. ಸಿಂಹ ಮಾಸದ ರೋಹಿಣಿ ನಕ್ಷತ್ರಕ್ಕೆ ಮಹತ್ವವಿದೆ. ಜಯಂತಿ ಕಲ್ಪದಲ್ಲಿ ಮಧ್ವಾಚಾರ್ಯರು ಅಷ್ಟಮಿ ತಿಥಿಗಿಂತ ರೋಹಿಣಿ ನಕ್ಷತ್ರ ಮಹತ್ವದ್ದು ಎಂದು ಹೇಳಿರುವುದರಿಂದ ನಾನು ಶನಿವಾರ ಕೃಷ್ಣಾಷ್ಟಮಿ ಆಚರಿಸಲು ಕರೆ ಕೊಟ್ಟಿದ್ದೇನೆ. ಇದನ್ನು ಕೆಲವರು ಒಪ್ಪಿದರೂ ಆಚರಿಸಲು ಸಿದ್ಧರಿಲ್ಲ. ನಾನು ರೋಹಿಣಿ ನಕ್ಷತ್ರ ದಿನವೇ ಮುಖ್ಯ ಎಂದು 1960ರಲ್ಲೇ ‘ನವಭಾರತ’ ಪತ್ರಿಕೆಯಲ್ಲಿ ಬರೆದಿದ್ದೆ.
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸುವಾಗ ಇದ್ದ ಚಾಲ್ತಿಯು ಶಂಕರಾಚಾರ್ಯರ ಕಾಲದಲ್ಲಿ ಅನುಷ್ಠಾನಕ್ಕೆ ಬಂತು.ರಾಮಾನುಜಾಚಾರ್ಯರು ಸಿಂಹ ಮಾಸದ ರೋಹಿಣಿ ನಕ್ಷತ್ರದ ದಿನದಂದು ಕೃಷ್ಣಾಷ್ಟಮಿ ಆಚರಣೆಗೆ ತಂದರು. ಮಧ್ವಾಚಾರ್ಯರು ಇನ್ನಷ್ಟು ಪರಿಷ್ಕರಿಸಿ ಅಷ್ಟಮಿ-ರೋಹಿಣಿ ನಕ್ಷತ್ರ ಕೂಡಿಬರುವ ದಿನವನ್ನು ಕೃಷ್ಣಜಯಂತಿಯಾಗಿ ಆಚರಿಸಲು ತಿಳಿಸಿದರು. ಚೈತನ್ಯ ಮಹಾಪ್ರಭುಗಳು ವಿಶೇಷವಾಗಿ ಉತ್ತರ ಭಾರತದಲ್ಲಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಿದರು.
ಕೃಷ್ಣನ ‘ಮ್ಯಾನ್ ಓವರ್’ ವ್ಯಕ್ತಿತ್ವ
ಪ್ರೊ| ಪಾದೂರು ಶ್ರೀಪತಿ ತಂತ್ರಿ,ಹಿರಿಯ ಸಮಾಜಶಾಸ್ತ್ರಜ್ಞರು, ಉಡುಪಿ
ರಾಜ್ಯಭಾರ ಮಾಡುವವ ಕೃಷ್ಣನಂತಿರಬೇಕು ಎಂದು ಹೈದರಾಲಿ ಹೇಳಿದ್ದು ಸುಮ್ಮನೆ ಅಲ್ಲ. ಆತ ಇಡೀ ಮಹಾಭಾರತವನ್ನು ಕೇಳಿಸಿಕೊಂಡು ಕೊನೆಗೆ ‘ಏಕ್ ಚೋಕ್ರಾ ಅಚ್ಚಾ ಹೈ; ಏಕ್ ಬುಡ್ಡಾ ಅಚ್ಚಾ ಹೈ; ಲೇಕಿನ್ ಏ ಜೋ ಕಿಶನ್ ಹೈನಾ ದೌಲತ್ ಕರ್‌ನೇ ವಾಲಾ ಐಸಾ ರಹನಾರೇ’ ಎಂದು ಉದ್ಗರಿಸಿದ. ಇಲ್ಲಿ ಕಿಶನ್ ಎಂದರೆ ಕೃಷ್ಣ. ಮಕ್ಕಳು, ಉತ್ತರಾಧಿಕಾರಿಗಳು ಇದ್ದರೆ ಅಭಿಮನ್ಯುವಿನಂತಿರಬೇಕು, ಸಲಹೆ ನೀಡಲು ಭೀಷ್ಮರಂತಹವರಿರಬೇಕು, ಆಡಳಿತ, ರಾಜ್ಯಭಾರ ಮಾಡುವವರು ಕೃಷ್ಣನಂತೆ ಇರಬೇಕು ಎಂದು ಇದರರ್ಥ.
ಕೃಷ್ಣ ‘ಮ್ಯಾನ್ ಓವರ್’ ಆಗಿದ್ದರಿಂದಲೇ ಈತ ದೇವನಾಗಿ ಪೂಜೆಗೊಳ್ಳುತ್ತಿದ್ದಾನೆ. ರಾಜಕಾರಣದಲ್ಲಿ ಅಗತ್ಯಕ್ಕೆ ತಕ್ಕಂತೆ, ಸಂದರ್ಭೋಚಿತವಾಗಿ ತಂತ್ರಗಾರಿಕೆ ಹೆಣೆದು ಗುರಿ ಮುಟ್ಟುವುದು ಆತನ ವಿಶಿಷ್ಟತೆ. ಆ ಕಾಲದಲ್ಲಿ ಜನಪದ ಆಡಳಿತ ಕ್ರಮ ಹೇಗಿತ್ತೆಂದರೆ ಜನವಸತಿ ಪ್ರದೇಶದ ಸುತ್ತ ಗೋವುಗಳು ಮೇಯಲು ವಿಶಾಲ ಭೂಮಿ ಇರುತ್ತಿತ್ತು. ಇದರ ವ್ಯವಸ್ಥೆಯನ್ನು ನೋಡಿಕೊಳ್ಳಲು ಒಬ್ಬ ರಾಜ. ವಿಶಾಲ ಭೂಮಿಯಾಚೆ ಇನ್ನೊಂದು ರಾಜ್ಯದ ಗಡಿ. ಇದು ಆಗಿನ ಪ್ರಜಾಪ್ರಭುತ್ವ. ಕೃಷ್ಣ ದುಷ್ಟರನ್ನು ಸಂಹರಿಸಿದರೂ ಆ ಭೌಗೋಳಿಕ ಪ್ರದೇಶಕ್ಕೆ ರಾಜನನ್ನಾಗಿ ಅವರ ಪ್ರತಿನಿಧಿಗಳನ್ನೇ ನಿಯೋಜಿಸುತ್ತಿದ್ದ. ಇದು ಆರ್ಯ ಧರ್ಮವಾಗಿತ್ತು. ಇಂತಹ ವ್ಯವಸ್ಥೆಯನ್ನು ಬುಡಮೇಲು ಮಾಡುವ ಜರಾಸಂಧ, ಶಿಶುಪಾಲರಂತಹವರನ್ನು ರಾಕ್ಷಸರು ಎಂದು ಕರೆಯುತ್ತಿದ್ದರು. ಈಗ ವಸಾಹತುಶಾಹಿ ವ್ಯವಸ್ಥೆ ಆರ್ಯ ಧರ್ಮಕ್ಕೆ ವಿರುದ್ಧವಾದುದು. ಆತನದು ಆಕ್ರಮಣಕಾರೀ ಸ್ವಭಾವವಲ್ಲ, ಅನ್ಯಾಯವಾದಾಗ ಸಂಹರಿಸುತ್ತಿದ್ದ.
ಗ್ರೀಕರಲ್ಲಿಯೂ ಇಂತಹುದೇ ಆರ್ಯ ಧರ್ಮವಿತ್ತು. ಧರ್ಮ ಸಂಸ್ಥಾಪನಾರ್ಥಾಯ ಎಂದರೆ ಜನತೆಗೆ ಸ್ವಾತಂತ್ರ್ಯ ಇರುವ ಜತೆ ಅನ್ಯಾಯವಾಗುವಾಗ ತಡೆಯುವುದಾಗಿತ್ತು. ದುಷ್ಟರನ್ನು ಹೆಡೆಮುಡಿ ಕಟ್ಟುವಾಗ ಆತ ದಾರಿ ಸರಿಯೋ ತಪ್ಪೋ ಎಂದು ನೋಡಲಿಲ್ಲ. ಆತನಿಗೆ ಗುರಿ ಮುಖ್ಯವಾಗಿತ್ತು. ಹೀಗಾಗಿಯೇ ಆತನಿಗೆ ಚೋರ, ಕುತಂತ್ರಿ ಎಂಬೆಲ್ಲ ಕೆಟ್ಟ ಬಿರುದುಗಳು ಬಂದವು.
ಭಾಗವತ ಪುರಾಣದಲ್ಲಿ ಕೃಷ್ಣನ ಬಾಲಲೀಲೆಗಳು, ಜಯಂತಿ ಉತ್ಸವಗಳು ಕಂಡುಬರುತ್ತವೆ. ಪುರಾಣಗಳು ಲಿಖೀತ ರೂಪದಲ್ಲಿ ಕಂಡುಬರುವುದು ಕ್ರಿ.ಶ. 5ನೆಯ ಶತಮಾನದಲ್ಲಿ. ಇದು ಗುಪ್ತರ ಕಾಲ. ಅಲ್ಲಿಯವರೆಗೆ ಮೌಖೀಕವಾಗಿತ್ತು.
ವಿಠೂ – ಪಿಂಡಿ ಎಂಬ ಉತ್ಸವ ಮಹಾರಾಷ್ಟ್ರದಲ್ಲಿ ಆರಂಭವಾಗುತ್ತದೆ. ಪೆಂಡೆ ಎಂದರೆ ಉತ್ಸವ, ಆಟ, ಕೋಲದಂತೆ… ಸಮಾಜಶಾಸ್ತ್ರಜ್ಞರಾದ ಇರಾವತಿ ಕರ್ವೆಯವರು ಗುಜರಾತಿನಲ್ಲಿ ಅಭೀರರು ಎಂಬ ಜನಾಂಗವನ್ನು ಗುರುತಿಸಿ ಉಲ್ಲೇಖೀಸುತ್ತಾರೆ. ಇವರು ಕೃಷ್ಣನ ವಂಶದವರೆಂದು ಹೇಳಿಕೊಳ್ಳುತ್ತಾರೆ. ಪರ್ಶಿಯಾದಲ್ಲಿದ್ದ ಹಿಬ್ರೂ ಮೂಲದ ಜನಾಂಗದವರು ಮತಾಂತರಕ್ಕೆ ಹೆದರಿ ಭಾರತಕ್ಕೆ (ಕಛ್) ಓಡಿ ಬಂದಾಗ ‘ನೀವೂ ಗೋಪೂಜೆ ಮಾಡುವವರು, ನಾವೂ ಮಾಡುವವರು, ನಿಮ್ಮ ದೇವತೆ ನಮಗೂ ದೇವತೆ. ನಾವು ನೀವು ಹಾಲು ಸಕ್ಕರೆಯಂತೆ ಬದುಕೋಣ’ ಎಂದು ರಾಜನೊಂದಿಗೆ ಮಾಡಿಕೊಂಡ ಒಪ್ಪಂದವಿದೆ. ಗ್ರೀಕರಲ್ಲಿದ್ದ ಹುರ್ಕುಲೆಸ್ ದೇವತೆ ಕತೆಯೂ ಕೃಷ್ಣನ ಕತೆಯಂತಿದೆ. ಪರ್ಶಿಯಾದಲ್ಲಿಯೂ ಉಪನಯನಕ್ಕೆ ಸಾಮ್ಯವಾಗಬಹುದಾದ ಸಂಸ್ಕೃತಿ ಇತ್ತು. ಇವರೇ ಅಭೀರರು ಆಗಿರಬಹುದೆಂಬ ವಿಶ್ಲೇಷಣೆ ಇದೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ ಮೊದಲಾದೆಡೆ, ಅಂದರೆ ಭಾರತದ ಪಶ್ಚಿಮಾರ್ಧದಲ್ಲಿ ಕೃಷ್ಣಭಕ್ತಿಯ ವಿಸ್ತರಣೆ ಕಂಡುಬರುತ್ತದೆ. ಅಲ್ಲಿಂದ ಕರ್ನಾಟಕ, ಕೇರಳಕ್ಕೆ ವಿಸ್ತರಿಸಿಕೊಂಡಿತು. ತಮಿಳುನಾಡಿನ ಸಂಗಂ ಸಾಹಿತ್ಯದಲ್ಲಿ ಮಾಯೋನ್- ವಲಿಯೋನ್ (ಕೃಷ್ಣ-ಬಲರಾಮ) ಆಟವಾಡುವ ಕ್ರಮ ಕ್ರಿ.ಶ. 3ನೆಯ ಶತಮಾನದಲ್ಲಿತ್ತು. ಛಾಂದೋಗ್ಯ ಉಪನಿಷತ್ತಿನಲ್ಲಿ ಸಾಂದೀಪನೀ ಆಶ್ರಮದಲ್ಲಿ ಕೃಷ್ಣ ಕಲಿತ ಉಲ್ಲೇಖವಿದೆ.
ಹಾಲು, ಮೊಸರು ಮೈಮೇಲೆ ಎರಚಿದ ಸಂಭ್ರಮ
ಪ್ರೊ| ಆದ್ಯಪಾಡಿ ಹರಿದಾಸ ಭಟ್
ನಿವೃತ್ತ ಪ್ರಾಂಶುಪಾಲರು, ಪೂರ್ಣಪ್ರಜ್ಞ ವಿದ್ಯಾಪೀಠ
ಶ್ರೀಕೃಷ್ಣ ಹುಟ್ಟಿದಾಗ ಗೋಕುಲದಲ್ಲಿ ಮೊಸರು, ಹಾಲುಗಳನ್ನು ಮೈಮೇಲೆ ಎರಚಿಕೊಂಡು ಹಬ್ಬ ಆಚರಿಸಿರುವುದು ಶ್ರೀಮದ್ಭಾಗವತ ಪುರಾಣದ ದಶಮ ಸ್ಕಂದದಲ್ಲಿದೆ. ನಂದ ಗೋಪನಿಗೆ 50 ವರ್ಷ ಕಳೆದ ಬಳಿಕ ಕೃಷ್ಣ ಜನಿಸಿದ್ದು. ಹೀಗಾಗಿ ಊರಿನಲ್ಲಿ ಸಂಭ್ರಮವೋ ಸಂಭ್ರಮ. ಬೀದಿ ಬೀದಿಗಳಲ್ಲಿ ಗೋವಳರು ಕೃಷ್ಣನ ಹುಟ್ಟುಹಬ್ಬವನ್ನು ಸಂಭ್ರಮಿಸಿದರು. ಇದನ್ನೇ ನಾವು ಈಗ ವಿಟ್ಲಪಿಂಡಿ ಹಬ್ಬ ಎಂದು ಆಚರಿಸುತ್ತಿದ್ದೇವೆ.
ಶ್ರೀಕೃಷ್ಣನ ಹುಟ್ಟುಹಬ್ಬವನ್ನು ವಿವರಿಸುವ ಅನೇಕ ಗ್ರಂಥಗಳಿವೆ. ಮಧ್ಯರಾತ್ರಿ ರೋಹಿಣಿ ನಕ್ಷತ್ರ, ಅಷ್ಟಮಿ ತಿಥಿ, ಬುಧವಾರ ಕೃಷ್ಣನ ಜನನವಾಯಿತು ಎಂಬ ಉಲ್ಲೇಖವಿದೆ. ಇಲ್ಲಿ ಬುಧವಾರ ಬಂದರೆ ಉತ್ತಮ. ರೋಹಿಣಿ ನಕ್ಷತ್ರವೂ ಬಂದರೆ ಉತ್ತಮ, ಅಷ್ಟಮಿ ತಿಥಿಗೆ ಪ್ರಾಶಸ್ತ್ಯ ಎಂಬ ಒಂದು ವಾದ, ರೋಹಿಣಿ ನಕ್ಷತ್ರಕ್ಕೇ ಮಹತ್ವ ಎಂಬ ಇನ್ನೊಂದು ವಾದ ಇದೆ. ನಮ್ಮಲ್ಲಿ ಇಂತಹ ಆಚರಣೆಗಳಲ್ಲಿ ತಿಥಿಗೆ ಪ್ರಾಶಸ್ತ್ಯ ಇರುವುದು ಕಂಡುಬರುತ್ತದೆ. ಉದಾಹರಣೆಗೆ ಕೃಷ್ಣಾಷ್ಟಮಿ, ರಾಮ ನವಮಿ, ಅನಂತಚತುರ್ದಶಿ ಇತ್ಯಾದಿ ಹೆಸರುಗಳೇ ತಿಥಿ ಪ್ರಾಶಸ್ತ್ಯವನ್ನು ಸಾರುತ್ತವೆ.
ಮಧ್ವಾಚಾರ್ಯರು ರೋಹಿಣಿ ಮತ್ತು ಅಷ್ಟಮಿ ತಿಥಿ ಮಧ್ಯರಾತ್ರಿಯಲ್ಲಿ ಕೂಡಿದಾಗ ಜಯಂತಿ ಎಂದು ಕರೆದಿದ್ದಾರೆ. ಉಡುಪಿ ಅಷ್ಟಮಠಗಳ ಇತಿಹಾಸವನ್ನು ಅವಲೋಕಿಸಿದಾಗ ಮರುದಿನ ರೋಹಿಣಿ ನಕ್ಷತ್ರ ಇದ್ದು, ಹಿಂದಿನ ದಿನ ಮಧ್ಯರಾತ್ರಿ ಅಷ್ಟಮಿ ತಿಥಿ ಸಿಕ್ಕಿದಲ್ಲಿ ಹಿಂದಿನ ದಿನ ಕೃಷ್ಣಾಷ್ಟಮಿ ಆಚರಿಸಿದ್ದು ತಿಳಿದುಬರುತ್ತದೆ. ಇದು ಉಡುಪಿಯ ಸಂಪ್ರದಾಯ.
ರಾಮಾನುಜಾಚಾರ್ಯರನ್ನು. ಅನುಸರಿಸುವ ಶ್ರೀವೈಷ್ಣವರು ನಕ್ಷತ್ರಗಳಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ಹೀಗಾಗಿ ರೋಹಿಣಿ ನಕ್ಷತ್ರ ಇರುವ ದಿನ ಅವರು ಕೃಷ್ಣಾಷ್ಟಮಿ ಹಬ್ಬ ಆಚರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.