ಜಿಲ್ಲೆಯಲ್ಲೇ ಮೊದಲ ಅನಿಲ ಆಧಾರಿತ ಚಿತಾಗಾರ; 1 ಕೋ.ರೂ. ವೆಚ್ಚದಲ್ಲಿ ನಿರ್ಮಾಣ
Team Udayavani, Aug 26, 2020, 4:45 AM IST
ಉಡುಪಿ: ಮನುಷ್ಯ ಬದುಕಿನ ಕೊನೆಯ ಭೌತಿಕ ಕ್ರಿಯೆಯಾದ ಅಂತ್ಯ ಸಂಸ್ಕಾರಕ್ಕೆ ಆಧುನಿಕ ಸ್ಪರ್ಶ ನೀಡಲು ನಗರಸಭೆ ಮುಂದಾಗಿದ್ದು, ನಗರದಲ್ಲಿ 1 ಕೋ.ರೂ. ವೆಚ್ಚದ ಅನಿಲ ಚಿತಾಗಾರ ನಿರ್ಮಾಣಕ್ಕೆ ಕಾರ್ಯಾದೇಶವನ್ನು ನೀಡಿದೆ.
ಮೊದಲ ಅನಿಲ ಆಧಾರಿತ ಚಿತಾಗಾರ
ಜಿಲ್ಲೆಯಲ್ಲಿ ಮೊದಲ ಬಾರಿಗೆ ಬೀಡಿನಗುಡ್ಡೆಯಲ್ಲಿ ಅನಿಲ ಆಧಾರಿತ ಚಿತಾಗಾರ ನಿರ್ಮಾಣವಾಗಲಿದೆ. ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಆದೇಶದ ಮೇರೆಗೆ ತ್ವರಿತವಾಗಿ ನಿರ್ಮಾಣ ಮಾಡಲು ಈಗಾಗಲೇ ಕಾರ್ಯಾದೇಶವನ್ನು ನೀಡಲಾಗಿದೆ. ಇದೇ ನವೆಂಬರ್ ಅಂತ್ಯ ದೊಳಗೆ ಅನಿಲ ಆಧಾರಿತ ಚಿತಾಗಾರ ನಗರದಲ್ಲಿ ಕಾರ್ಯಾಚರಿಸಲಿದೆ.
ಬೀಡಿನ ಗುಡ್ಡೆಯಲ್ಲಿ ಪ್ರಸ್ತುತ ಕಟ್ಟಿಗೆ ಯನ್ನು ಜೋಡಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಶವಗಳ ಸಂಸ್ಕಾರ ಮಾಡ ಲಾಗುತ್ತಿದೆ. ಇದರಲ್ಲಿ ಒಂದು ಶವ ಸಂಪೂರ್ಣವಾಗಿ ಸುಡಲು ಸುಮಾರು 3ರಿಂದ 4 ಗಂಟೆಗಳು ಬೇಕು. ಆದರೆ ಈ ಅನಿಲ ಆಧಾರಿತ ಚಿತಾಗಾರ ಬೇಗನೆ ಶವವನ್ನು ಸಂಪೂರ್ಣವಾಗಿ ಭಸ್ಮಗೊಳಿಸುತ್ತದೆ. ಜತೆಗೆ ಯಾವುದೇ ವಾಸನೆ ಬರುವುದಿಲ್ಲ.
ದಹನವಾಗಲು 45 ನಿಮಿಷ!
ಶವ ದಹನದ ವೇಳೆ ಹೊರಹೊಮ್ಮುವ ವಿಷಾನಿಲ, ಬೂದಿ ಮತ್ತಿತರ ವಸ್ತುಗಳು ನೇರವಾಗಿ ವಾತಾವರಣ ಸೇರುವುದನ್ನು ತಪ್ಪಿಸಲು ನೀರಿನ ಬಳಕೆ ಮಾಡಲಾಗುತ್ತದೆ. ನೀರಿನಲ್ಲಿ ಕಲ್ಮಶಗಳು ಸಂಗ್ರಹಿಸ ಲ್ಪಟ್ಟು ಸಂಸ್ಕರಿತಗೊಂಡ ಶುದ್ಧಗಾಳಿ ಉದ್ದದ ಚಿಮಣಿ ಮೂಲಕ ಹೊರ ಹೋಗಲಿದೆ. ಶವ ದಹನದ ವೇಳೆ ಶಾಖ ಕಾಯ್ದುಕೊಳ್ಳಲು ಪುಣೆಯಿಂದ ತರುವ ಯಂತ್ರವನ್ನು ವಿಶೇಷ ಇಟ್ಟಿಗೆ ಬಳಸಿ ಚೇಂಬರ್ ನಿರ್ಮಿಸಲಾಗುತ್ತದೆ. ಇದರಲ್ಲಿ ವ್ಯಕ್ತಿಯ ಮೃತದೇಹ 600 ಡಿಗ್ರಿ ಶಾಖದಲ್ಲಿ 45 ನಿಮಿಷದಲ್ಲಿ ಸುಟ್ಟು ಹೋಗಲಿದೆ.
24 ಸಿಲಿಂಡರ್ ಜೋಡಣೆ
ಚಿತಾಗಾರದ ಕಟ್ಟಡದಲ್ಲಿರುವ ಗ್ಯಾಸ್ ಚೇಂಬರ್‌ನಲ್ಲಿ ಏಕ ಕಾಲಕ್ಕೆ 24 ಸಿಲಿಂಡರ್ ಜೋಡಿಸಿ ಇಡಬಹುದು. ಕೋವಿಡ್-19 ಈ ತುರ್ತು ಪರಿಸ್ಥಿತಿಯಲ್ಲಿ ಇಂತಹ ಶವ ಸಂಸ್ಕಾರ ಘಟ್ಟಗಳು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಶುಲ್ಕ ನಿಗದಿಯಾಗಿಲ್ಲ
ನಗರದಲ್ಲಿ ಪ್ರಸ್ತುತ ಕಟ್ಟಿಗೆ ಆಧಾರಿತ ಶವ ಸಂಸ್ಕಾರಕ್ಕೆ ಸುಮಾರು 2,000 ರೂ. ಶುಲ್ಕ ವಿಧಿಸಲಾಗುತ್ತದೆ. ಅನಿಲ ಆಧಾರಿತ ಶವಸಂಸ್ಕಾರಕ್ಕೆ ವಾಣಿಜ್ಯ ಉದ್ದೇಶದ ಒಂದರಿಂದ ಒಂದೂಕಾಲು ಸಿಲಿಂಡರ್ ಬೇಕಾಗುತ್ತದೆ. ಆದ್ದರಿಂದ ಎಷ್ಟು ಶುಲ್ಕ ವಿಧಿ ಸಬೇಕು ಹಾಗೂ ಚಿತಾಗಾರವನ್ನು ಯಾರು ನಿರ್ವಹಿಸಬೇಕು ಎಂಬುದನ್ನು ನಗರಸಭೆ ಇನ್ನಷ್ಟೇ ನಿರ್ಧರಿಸಬೇಕಿದೆ.
ಚಿತಾಗಾರಕ್ಕೆ ಹೊಸ ಸ್ಪರ್ಶ
ಸಾಂಪ್ರದಾಯಿಕ ಅಗ್ನಿ ಸ್ಪರ್ಶದ ಶವ ಸಂಸ್ಕಾರವನ್ನು ಆಧಾರವಾಗಿಟ್ಟುಕೊಂಡು ಅನಿಲ ಆಧಾರಿತ ಚಿತಾಗಾರ ನಿರ್ಮಾಣ ಮಾಡಲಾಗುತ್ತದೆ. 18.69 ಲ.ರೂ. ವೆಚ್ಚದಲ್ಲಿ ಶವ ಸಂಸ್ಕಾರ ಕೇಂದ್ರ ಕಟ್ಟಡ ನಿರ್ಮಾಣವಾಗಲಿದ್ದು, ಇಲ್ಲಿ ಮೃತ ವ್ಯಕ್ತಿಯ ಸಂಬಂ ಧಿಕರು ಕೂರಲು ವಿಶಾಲವಾದ ಜಾಗ, ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಶವಸಂಸ್ಕಾರಕ್ಕೆ ಪ್ರತ್ಯೇಕ ವೇದಿಕೆ ನಿರ್ಮಿಸಲಾಗುತ್ತದೆ. ಪುಣೆಯಿಂದ 81.31 ಲ.ರೂ. ವೆಚ್ಚದ ಚಿತಾಗಾರ ಯಂತ್ರ ಅಳವಡಿಸಲಾಗುತ್ತದೆ.
ಜಿಲ್ಲಾಧಿಕಾರಿ ಜಿ.ಜಗದೀಶ ಅವರ ನಿರ್ದೇಶನದ ಮೇರೆಗೆ ಜಿಲ್ಲೆಯಲ್ಲಿ ಅನಿಲ ಆಧಾರಿತ ಚಿತಾಗಾರವನ್ನು ನಗರಸಭೆ ವ್ಯಾಪ್ತಿಯ ಬೀಡಿನ
ಗುಡ್ಡೆಯಲ್ಲಿ ನಿರ್ಮಿಸಲಾಗುತ್ತದೆ. ಇದಕ್ಕೆ ನಗರಸಭೆಯ 15ನೇ ಹಣಕಾಸಿನಲ್ಲಿ ಅನುದಾನ ತೆಗೆದಿರಿಸಲಾಗುತ್ತದೆ.
ಮೋಹನ್ ಎಇಇ, ನಗರಸಭೆ ಉಡುಪಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.