![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Aug 3, 2024, 2:30 PM IST
ಸಿದ್ದಾಪುರ: ಅಮಾಸೆಬೈಲು ಪೇಟೆಯ ಸಮೀಪದಲ್ಲೇ ಇರುವ ಮಂಡಾಡಿಯ ಗುಂಡ್ರಿ ಎಂಬಲ್ಲಿ ತೋಡಿಗೆ ಮರದಿಂದ ನಿರ್ಮಿಸಲಾದ ಕಾಲು ಸಂಕದಲ್ಲಿ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರ, ಜನಸಾಮಾನ್ಯರು ನಿತ್ಯದ ಸರ್ಕಸ್ ಮಾಡಬೇಕಾಗಿದೆ. ಅಪಾಯಕಾರಿಸ್ಥಿತಿಯಲ್ಲಿರುವ ಕಾಲು ಸಂಕದಲ್ಲಿ ವಿದ್ಯಾರ್ಥಿಗಳು, ಜನಸಾಮಾನ್ಯರು ತಿರುಗುತ್ತಿದ್ದಾರೆ.
ಅಮಾಸೆಬೈಲು, ಮಂಡಾಡಿ, ರಟ್ಟಾಡಿ ಮತ್ತು ಮಚ್ಚಟ್ಟು ಗ್ರಾಮಕ್ಕೆ ಸಂಪರ್ಕಿಸಲು ಗುಂಡ್ರಿ ಕಾಲು ಸಂಕ ಹತ್ತಿರದ ದಾರಿಯಾಗಿದೆ. ಹಲವಾರು ವರ್ಷಗಳಿಂದ ಈ ಭಾಗದ ಜನರು ಈ ಕಾಲುದಾರಿ ಮತ್ತು ಗುಂಡ್ರಿ ಕಾಲುಸಂಕವನ್ನು ನಂಬಿಕೊಂಡಿದ್ದಾರೆ.
60 ಮನೆಗಳಿಗೆ ಇದೇ ಕಾಲುಸಂಕ
ಗುಂಡ್ರಿ ಕಾಲುಸಂಕವನ್ನು ಸುಮಾರು 60 ಮನೆಯವರು ಆಶ್ರಯಿಸಿದ್ದಾರೆ. ಕಾಲುಸಂಕದ ಮೇಲೆ ಸುಮಾರು 30 ವಿದ್ಯಾರ್ಥಿಗಳು ವಿವಿಧ ಕಡೆಗಳ ಶಾಲೆಗಳಿಗೆ ತೆರಳುತ್ತಾರೆ. ಅನೇಕ ಕೂಲಿ ಕಾರ್ಮಿಕರು, ಮಹಿಳೆಯರು, ಮಕ್ಕಳು ಈ ಕಾಲುಸಂಕದ ಮೂಲಕ ತೆರಳುತ್ತಾರೆ. ಇಷ್ಟೊಂದು ಜನರಿಗೆ ಅನುಕೂಲಕರವಾಗಿರುವ ಜಾಗದಲ್ಲಿ ಸಣ್ಣ ಕಾಲು ಸಂಕ ನಿರ್ಮಿಸಿ ಎಂದು ಹಲವಾರು ವರ್ಷಗಳಿಂದ ಅಮಾಸೆಬೈಲು ಗ್ರಾ.ಪಂ.ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಮಾಸೆಬೈಲು ಪೇಟೆಯೂ ಸೇರಿದಂತೆ ಮಂಡಾಡಿ ಪರಿಸರದ ನೀರು ಈ ಗುಂಡ್ರಿ ತೋಡಿನ ಮೂಲಕ ಹರಿದು ಮುಂದೆ ವಾರಾಹಿ ಹೊಳೆಗೆ ಸೇರುತ್ತದೆ. ಮಳೆ ಜೋರಾದಾಗ ಇದರಲ್ಲಿ ಪ್ರವಾಹವೇ ಬರುತ್ತದೆ. ಆಗೆಲ್ಲ ದಾಟುವುದು ಭಾರೀ ಕಷ್ಟಕರ.
ಸೂಕ್ತ ಕ್ರಮ ಕೈಗೊಳ್ಳಿ
ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ಅನಾರೋಗ್ಯ ಪೀಡಿತರಿಗೆ ಮತ್ತು ವೃದ್ಧರಿಗೆ ಮರದ ಕಾಲುಸಂಕದಲ್ಲಿ ತಿರುಗಾಡಲು ತೊಂದರೆಯಾಗುತ್ತಿದೆ. ಗುಂಡ್ರಿಯಲ್ಲಿ ಒಂದು ಸುಸಜ್ಜಿತವಾದ ಕಾಲುಸಂಕ ನಿರ್ಮಿಸಿಕೊಡುವಂತೆ ಅಮಾಸೆಬೈಲು ಗ್ರಾ.ಪಂ.ಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಈಗ ಮಳೆ ಬಂದು ವ್ರವಾಹ ಬರುತ್ತಿದೆ. ಇದರ ಬಗ್ಗೆ ಸ್ಥಳೀಯಾಡಳಿತ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
-ಶಾರದಾ ಮಂಡಾಡಿ, ಸ್ಥಳೀಯ ಮಹಿಳೆ
ಪೇಟೆಗೆ ಹತ್ತಿರದ ದಾರಿ ಇದು
ಗುಂಡ್ರಿ ಸೇರಿದಂತೆ ಇತರ ಪ್ರದೇಶದ ಜನರಿಗೆ ಅಮಾಸೆಬೈಲು ಪೇಟೆಗೆ, ಆಸ್ಪತ್ರೆಗೆ, ಅಂಗನವಾಡಿ ಕೇಂದ್ರಗಳಿಗೆ, ಶಾಲೆಗೆ, ರೇಷನ್ ತರಲು ಗುಂಡ್ರಿ ಕಾಲು ಸಂಕ ಹತ್ತಿರ ದಾರಿಯಾಗಿದೆ. ಆದರೆ, ಪ್ರವಾಹ ಬಂದಾಗ ಜನರು ಸುತ್ತುಬಳಸಿ ಹೋಗಬೇಕು. ಮಳೆಗಾಲದಲ್ಲಿ ಹೆತ್ತ ವರು ಉಸಿರು ಬಿಗಿಹಿಡಿದು ಮಕ್ಕಳನ್ನು ಹಳ್ಳ ದಾಟಿಸುವ ಸನ್ನಿವೇಶ ಭಯಾನಕ ಹುಟ್ಟಿಸುತ್ತದೆ. ಕಣ್ಮುಂದೆ ಅಪಾಯ ಇದ್ದರೂ, ಅನಿವಾರ್ಯವಾಗಿದೆ. ಸ್ಥಳೀಯಾಡಳಿತ ಸರಕಾರ ಮತ್ತು ಇತರ ಇಲಾಖೆಗಳ ಗಮನ ಸೆಳೆಯಬೇಕು. ಇಲ್ಲಿಯೊಂದು ಕಾಲು ಸಂಕ ಹಲವು ವರ್ಷದ ಬೇಡಿಕೆಯಾಗಿದೆ ಎಂದು ಚಂದ್ರ ಬೊಬ್ಬರ್ಯನಜೆಡ್ಡು ಹೇಳುತ್ತಾರೆ.
– ಸತೀಶ ಆಚಾರ್ ಉಳ್ಳೂರು
You seem to have an Ad Blocker on.
To continue reading, please turn it off or whitelist Udayavani.