ಜಿಲ್ಲಾಸ್ಪತ್ರೆ ಸ್ಥಳಾಂತರ ಇಲ್ಲ; ಸೇವೆ ಯಥಾಸ್ಥಿತಿ
ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಣಯ
Team Udayavani, Nov 20, 2020, 5:50 AM IST
ಜಿಲ್ಲಾಧಿಕಾರಿಯವರು ಸ್ಥಳ ಪರಿಶೀಲನೆ ನಡೆಸಿದರು.
ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಪೂರ್ಣಗೊಳ್ಳುವವರೆಗೆ ಆಸ್ಪತ್ರೆಯನ್ನು ಬ್ರಹ್ಮಾವರಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ನಿರ್ಣಯವನ್ನು ಕೈಬಿಟ್ಟಿದ್ದು ಅಲ್ಲೇ ಖಾಲಿ ಇರುವ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ನಿರ್ಣಯ ತಳೆದಿದೆ.
ಆಸ್ಪತ್ರೆಯ ಬಳಿಯಿರುವ ಎಎನ್‌ಎಂ ತರಬೇತಿ ಕೇಂದ್ರವನ್ನು ಮಾತ್ರ ಕೆಡಹುವುದು ಎಂದು ತೀರ್ಮಾನಿಸಲಾಯಿತು. ಹಾಲಿ ಇರುವ ಕಟ್ಟಡವನ್ನು ಉಳಿಸಿಕೊಂಡು ಹಿಂಭಾಗದ ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸುವುದರಿಂದ ರೋಗಿಗಳಿಗೆ ತೊಂದರೆಯಾಗದು. ಈ ಕಟ್ಟಡವು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರಲಿದೆ. ಹೊಸ ಕಟ್ಟಡಕ್ಕೆ ಅಗತ್ಯವಿರುವ ರಸ್ತೆ ಕಾಮಗಾರಿ ಮಾತ್ರ ಹೆಚ್ಚುವರಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ರೋಗಿಗಳಿಗೆ ಅನುಕೂಲ ಕಲ್ಪಿಸಿ
ಜಿಲ್ಲೆಯ ಜನಸಾಮಾನ್ಯರು ಸರಳವಾಗಿ ಆರೋಗ್ಯ ಸೇವೆಯನ್ನು ಪಡೆಯುವ ರೀತಿಯಲ್ಲಿ ಕಟ್ಟಡದ ನೀಲನಕ್ಷೆಯನ್ನು ತಯಾರಿಸಬೇಕು. ತುರ್ತು ಚಿಕಿತ್ಸಾ ಘಟಕ, ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಶಾಲೆ, ಡಯಾಲಿಸಿಸ್ ಕೇಂದ್ರ, ಐಸಿಯು ಕೇಂದ್ರಗಳು ನೆಲ ಮಹಡಿಯಲ್ಲೇ ನಿರ್ಮಿಸುವುದರಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು ಇದಕ್ಕೆ ಆದ್ಯತೆ ನೀಡುವಂತೆ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ನೀಲ ನಕ್ಷೆ ಸಿದ್ಧಪಡಿಸಿ
250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ಕಟ್ಟಡ ಹಾಗೂ ಸಿಬಂದಿ ವಸತಿಗೃಹವನ್ನು 115 ಕೋ.ರೂ. ವೆಚ್ಚದಲ್ಲಿ 27,375 ಚದರ ಮೀ. ವಿಸ್ತೀರ್ಣದಲ್ಲಿ ಕರಾವಳಿಯ ಹವಾಮಾನಕ್ಕನುಗುಣವಾಗಿ ನಿಗದಿತ ಅವಧಿಯಲ್ಲಿ ನಿರ್ಮಿಸಬೇಕು. ಚಿಕಿತ್ಸೆಗೆ ಬರುವ ಜನರ ಹಾಗೂ ವೈದ್ಯಕೀಯ ಸಿಬಂದಿ ವರ್ಗದವರ ವಾಹನಗಳ ನಿಲುಗಡೆಗೆ ನೆಲ ಮಾಳಿಗೆಯಲ್ಲಿ ಅವಕಾಶ ಮಾಡಿಕೊಡುವ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂದರು.
ಜಿ.ಪಂ. ಸಿಇಒ ಡಾ| ನವೀನ್ ಭಟ್, ಎಡಿಸಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ| ಮಧುಸೂದನ ನಾಯಕ್, ಡಿಎಚ್‌ಒ ಡಾ| ಸುಧೀರ್ ಚಂದ್ರ ಸೂಡ ಮೊದಲಾದ ಅಧಿಕಾರಿಗಳು ಸಭೆಯಲ್ಲಿದ್ದರು.
ಯುವಕರೊಂದಿಗೆ ಜಿಲ್ಲಾಧಿಕಾರಿ ಕ್ರಿಕೆಟ್!
ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಿಸುವ ಕುರಿತು ಸ್ಥಳ ಪರಿಶೀಲನೆಗೆ ಹೋದ ಸಂದರ್ಭ ಯುವಕರು ಕ್ರಿಕೆಟ್ ಆಡುತ್ತಿದ್ದರು. ಜಿಲ್ಲಾಧಿಕಾರಿಯವರು ಸ್ಫೂರ್ತಿಗೊಂಡು ಸ್ವಲ್ಪಹೊತ್ತು ಯುವಕರೊಂದಿಗೆ ಕ್ರಿಕೆಟ್ ಆಟವಾಡಿದರು.
ರೋಗಿಗಳಿಗೆ ಅನನುಕೂಲವಾಗ ಬಾರದು ಎಂಬ ಉದ್ದೇಶದಿಂದ ಆಸ್ಪತ್ರೆಯನ್ನು ಯಥಾಸ್ಥಿತಿಯಲ್ಲಿಯೇ ಮುಂದುವರಿಸಲು ತೀರ್ಮಾನಿಸಲಾಗಿದೆ. ಖಾಲಿ ಜಾಗದಲ್ಲಿ ನೂತನ ಆಸ್ಪತ್ರೆ ನಿರ್ಮಾಣವಾದ ಅನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು.
-ಡಾ| ಮಧುಸೂದನ್ ನಾಯಕ್, ಜಿಲ್ಲಾ ಸರ್ಜನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.