ಉಡುಪಿ ಜಿಲ್ಲಾ ಸರ್ವೇಕ್ಷಣ ಘಟಕ: ಟೊಬ್ಯಾಕೋ ಚಾಂಪಿಯನ್ಸ್ ಕಾರ್ಯಕ್ರಮ
Team Udayavani, May 18, 2023, 8:10 AM IST
ಉಡುಪಿ: ಜಿಲ್ಲಾ ಸರ್ವೇಕ್ಷಣ ಘಟಕದ ವತಿಯಿಂದ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಾದ್ಯಂತ tobacco champions ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಮೇ 22ರಂದು ನಗರಸಭೆಯ ಪೌರಕಾರ್ಮಿಕರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶ್ವ ತಂಬಾಕು ಮುಕ್ತ ದಿನಾಚರಣೆ ಅಂಗವಾಗಿ ಈ ಬಾರಿ “ವೀ ನೀಡ್ ಫುಡ್ ನಾಟ್ ಟೊಬ್ಯಾಕೋ’ ಧ್ಯೇಯ ವಾಕ್ಯದೊಂದಿಗೆ ಹಲವಾರು ಕಾರ್ಯಕ್ರಗಳು ನಡೆಯಲಿವೆ.
ಒಂದು ವರ್ಷದ ಅವಧಿಯಲ್ಲಿ 900 ಮಂದಿ ಉಡುಪಿಯಲ್ಲಿರುವ ತಂಬಾಕು ವ್ಯಸನ ಮುಕ್ತಿ ಕೇಂದ್ರಕ್ಕೆ ಆಗಮಿಸಿದ್ದಾರೆ. ಅವರಲ್ಲಿ 27 ಮಂದಿ ಸಂಪೂರ್ಣ ತಂಬಾಕು ತ್ಯಜಿಸಿದ್ದಾರೆ. 160ಕ್ಕೂ ಅಧಿಕ ಮಂದಿ ತಂಬಾಕು ಸೇವನೆಯನ್ನು ಬಹುತೇಕ ಕಡಿಮೆ ಮಾಡಿದ್ದಾರೆ.
ತಂಬಾಕು ಮುಕ್ತಿ ಹೇಗೆ?
ವಿವಿಧ ಕಾಯಿಲೆಗಳಿಗೆ ತುತ್ತಾಗಿ ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ತಂಬಾಕು ಸೇವನೆಯ ವ್ಯಸನ ಇದ್ದರೆ ಅಂಥವರನ್ನು ಗುರುತಿಸಲಾಗುತ್ತದೆ. ಬಳಿಕ 15 ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ತಂಬಾಕು ವ್ಯಸನ ಮುಕ್ತಿ ಕೇಂದ್ರಕ್ಕೆ ಆಗಮಿಸುವಂತೆ ಸೂಚಿಸಲಾಗುತ್ತದೆ. ಅವರನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ, ಅವರು ದಿನಕ್ಕೆ ಎಷ್ಟು ಬಾರಿ ಎಷ್ಟು ಪ್ರಮಾಣದಲ್ಲಿ ತಂಬಾಕು ಸೇವನೆ ಮಾಡುತ್ತಾರೆ, ಎಷ್ಟು ಸಮಯಗಳಿಂದ ಸೇವಿಸುತ್ತಿದ್ದಾರೆ ಎಂಬ ವಿವರಗಳನ್ನು ಸಂಗ್ರಹಿಸ ಲಾಗುತ್ತದೆ. ಬಳಿಕ ಅವರಿಗೆ ಸೂಕ್ತ ಚಿಕಿತ್ಸೆ ಮೂಲಕ ಹಂತ-ಹಂತವಾಗಿ ಕಡಿಮೆ ಮಾಡುವಂತೆ ನೋಡಿಕೊಳ್ಳಲಾಗುತ್ತದೆ.
ವಿವಿಧೆಡೆ ಶಿಬಿರ
ಸರಕಾರಿ ಆಸ್ಪತ್ರೆಗಳಷ್ಟೇ ಅಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿಯೂ ತಂಬಾಕು ವ್ಯಸನಿಗಳಿದ್ದರೆ ಗುಣಪಡಿಸಲು ಅವರು ಜಿಲ್ಲಾಸ್ಪತ್ರೆಗೆ ತೆರಳುವಂತೆ ಸೂಚಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಆನ್‌ಲೈನ್ ಸೆಷನ್‌ಗಳು ಹಾಗೂ ವಿವಿಧೆಡೆ ಶಿಬಿರಗಳನ್ನು ಏರ್ಪಡಿಸುವ ಮೂಲಕ ವ್ಯಸನಿಗಳನ್ನು ತಂಬಾಕು ಮುಕ್ತಗೊಳಿಸಲು ಇಲಾಖೆ ಮುಂದಾಗಿದೆ.
ಜಿಲ್ಲೆಯನ್ನು ತಂಬಾಕು ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಈಗಾಗಲೇ ವಿವಿಧ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಾರ್ಮಿಕರು ಸಹಿತ ಹಲವಾರು ಮಂದಿ ಈಗಾಗಲೇ ಇದರಿಂದ ಜಾಗೃತರಾಗಿ ತಂಬಾಕು ತ್ಯಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿಯೂ ಹಲವು ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ.
– ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ
ವಿವಿಧ ಕಾರ್ಯಕ್ರಮ
ಜಿಲ್ಲಾ ಸರ್ವೇಕ್ಷಣ ಇಲಾಖೆ ಮೂಲಕ ಈಗಾಗಲೇ ತಂಬಾಕು ಮುಕ್ತ ಅಪಾರ್ಟ್ ಮೆಂಟ್ ಕಾರ್ಯಕ್ರಮದಡಿ ಕೆಲವೊಂದು ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಿ ಅಲ್ಲಿಸಿ ತಂಬಾಕು ಸೇವನೆ ಮುಕ್ತಗೊಳಿಸಲು ಉದ್ದೇಶಿಸಲಾಗಿದೆ. ಅದೇ ರೀತಿ ತಂಬಾಕು ಮುಕ್ತ ಗ್ರಾಮ ಕಾರ್ಯಕ್ರಮದಡಿ ಜಿಲ್ಲೆಯ ಉಡುಪಿ ತಾಲೂಕಿನ ಕೋಡಿಬೇಂಗ್ರೆಯನ್ನು ಈಗಾಗಲೇ ತಂಬಾಕು ಮುಕ್ತ ಗ್ರಾಮವೆಂದು ಘೋಷಿಸಿದ್ದು, ಕುಂದಾಪುರದ ಕೊರ್ಗಿ ಹಾಗೂ ಕಾರ್ಕಳದ ರೆಂಜಾಳವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ.
– ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.