Udupi: ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆಂದು ಮುಕ್ತಿ?
ಸವಾರರ ನಿತ್ಯ ಸಂಕಟ, ವ್ಯಾಪಾರಿಗಳಿಗೆ ಆರ್ಥಿಕ ಸಂಕಷ್ಟ; ಒಂದೊಂದು ಡ್ರಾಯಿಂಗ್‌ಗೂ ಬೇಕಿದೆ ಏಳೆಂಟು ಸಹಿ; ಎಲ್ಲದಕ್ಕೂ ರೈಲ್ವೇ ಇಲಾಖೆ ಅನುಮತಿಗೆೆ ಕಾಯಬೇಕು; ಗರ್ಡರ್ ಬಂದು ವರ್ಷ ಕಳೆದರೂ ಚುರುಕು ಪಡೆಯದ ಕಾಮಗಾರಿ
Team Udayavani, Oct 15, 2024, 3:52 PM IST
ಉಡುಪಿ: ಹಲವಾರು ವರ್ಷಗಳಿಂದ ಗ್ರಹಣ ಬಡಿದಂತಿರುವ ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಗರ್ಡರ್ ಬಂದ ತಿಂಗಳೊಳಗೆ ಕಾಮಗಾರಿ ಶುರುವಾಗಿ ಎರಡು ಮೂರು ತಿಂಗಳಲ್ಲಿ ಸೇತುವೆ ಸಂಚಾರ ಮುಕ್ತವಾಗಲಿದೆ ಎಂದು ಜನ ಪ್ರತಿನಿಧಿಗಳು, ಅಧಿಕಾರಿಗಳು ವರ್ಷದ ಹಿಂದೇ ಹೇಳಿದ್ದರು. ಆದರೆ, ಇಲ್ಲಿನ ಸ್ಥಿತಿಯೇ ಬೇರೆಯಿದೆ. ಗರ್ಡರ್ ಬಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಸಾಗುವುದೇ ಇಲ್ಲ. ಕಾರಣ ಒಂದು ನಟ್, ಬೋಲ್ಡ್ ಫಿಟ್ ಮಾಡಲೂ ರೈಲ್ವೇ ಇಲಾಖೆಯವರು ಅನುಮತಿಸಬೇಕು. ಇಲಾಖೆ ಅಧಿಕಾರಿಗಳನ್ನು ಹಿಡಿಯುವುದೇ ಗುತ್ತಿಗೆದಾರರಿಗೆ ಸವಾಲಾಗಿದೆ.
ಇಲ್ಲಿನ ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಂಡು ಹಲವು ವರ್ಷ ಕಳೆದರೂ ರೈಲ್ವೇ ಸೇತುವೆ ಮಾತ್ರ ಐದು ವರ್ಷದಿಂದ ಕಾಮಗಾರಿಯೇ ಕಂಡಿಲ್ಲ. ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿತ್ಯವೂ ಪ್ರಯಾಣಿಕರನ್ನು ಹೈರಾಣಾಗಿಸುತ್ತಿದೆ.
ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಿಪರೀತ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಸಂಭವಿಸಿ ಜನರು ತೊಂದರೆ ಅನುಭವಿಸುವಂತಾಗುತ್ತದೆ. ಜನರ ಓಡಾಟಕ್ಕಂತೂ ಇಲ್ಲಿ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರೈಲ್ವೇ ಸೇತುವೆ ನಿರ್ಮಾಣಕ್ಕೆ ಗರ್ಡರ್ ಬಂದೂ ವರ್ಷ ಕಳೆಯುತ್ತ ಬಂದರೂ ಇನ್ನೂ ಸೇತುವೆ ಕೆಲಸ ಚುರುಕು ಪಡೆದಿಲ್ಲ ಎಂದು ಸ್ಥಳೀಯರ ಅಸಮಾಧಾನ ಹೊರಹಾಕಿದ್ದಾರೆ.
ಜನರ ಗೋಳು ಕೇಳುವರಾರು?
ಹೆದ್ದಾರಿ ಅಗಲಗೊಂಡ ಅನಂತರ ರೈಲ್ವೇ ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಪರಿಸರದಲ್ಲಿ ಆರ್ಥಿಕತೆ ಹೊಡೆತ ಬಿದ್ದಿದೆ. ಸಮೀಪದಲ್ಲಿರುವ ಅಂಗಡಿ, ಹೊಟೇಲ್, ಪೆಟ್ರೋಲ್ ಬಂಕ್‌ಗೆ ಸಮರ್ಪಕವಾಗಿ ವ್ಯಾಪಾರವಿಲ್ಲದೆ ಪರಿತಪಿಸುವಂತಾಗಿದೆ. ಸಮೀಪದಲ್ಲಿಯೇ ಶಾಲೆ, ಮಸೀದಿ, ರೈಲ್ವೇ ನಿಲ್ದಾಣ ರಸ್ತೆ, ಬ್ಯಾಂಕ್‌ಗಳಿದ್ದು, ಇಲ್ಲಿನ ಓಡಾಟಕ್ಕೆ ಜನ ಸಾಮಾನ್ಯರು, ಮಕ್ಕಳು ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಾರೆ. ಈ ಕಾಮಗಾರಿಯ ಗುತ್ತಿಗೆದಾರರು ವೇತನ ಪಾವತಿಸದ ಕಾರಣ ಕಾರ್ಮಿಕರು ಕೂಡ ಮುಷ್ಕರ ಹೂಡಿದ್ದಾರೆ.
ಪ್ರತಿಯೊಂದನ್ನು ಪರಿಶೀಲಿಸುವ ರೈಲ್ವೇ
ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣ ವಿಳಂಬಕ್ಕೆ ಸುರಕ್ಷತಾ ದೃಷ್ಟಿಯಿಂದ ರೈಲ್ವೇ ಇಲಾಖೆ ಮಾರ್ಗದರ್ಶಿಯೇ ಕಾರಣ ಎನ್ನಲಾಗುತ್ತಿದೆ. ಗರ್ಡರ್ ಜೋಡಣೆ ವೆಲ್ಡಿಂಗ್ ಗುಣಮಟ್ಟವನ್ನು ರೈಲ್ವೇ ಸುರಕ್ಷತಾ ಆಯುಕ್ತಾಲಯ ಮತ್ತು ರೈಲ್ವೇ ಆರ್‌ಡಿಎಸ್‌ಒ(ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ ಆರ್ಗನೈಸೇಶನ್) ಸಂಬಂಧಪಟ್ಟ ತಾಂತ್ರಿಕ ಎಂಜಿನಿಯರ್ ಪರಿಶೀಲಿಸುವುದು ಕಡ್ಡಾಯವಾಗಿದೆ. ಪ್ರತಿಯೊಂದು ಕೆಲಸವೂ ಅವರು ಅನುಮೋದನೆಗೊಂಡ ಅನಂತರವೇ ಮುನ್ನಡೆಯಾಗಬೇಕು. ಗರ್ಡರ್ ರೂಪುಗೊಳ್ಳುತ್ತಿರುವ ಪ್ರತೀ ನಕ್ಷೆಗೂ ಆರ್‌ಡಿಎಸ್‌ಒ, ರೈಲ್ವೇ ಸೇಫ್ಟಿ ಸಂಬಂಧಿಸಿದ ಅಧಿಕಾರಿಗಳ ಏಳೆಂಟು ಸಹಿಗೆ ಹೆದ್ದಾರಿ ಎಂಜಿನಿಯರ್ ಅವರ ಹಿಂದೆ ಓಡಬೇಕು. ಒಂದೊಂದು ಸಹಿ, ಒಂದೊಂದು ಅನುಮೋದನೆಯಾಗಲು 8ರಿಂದ 9 ದಿನವಾದರೂ ಸಮಯ ತಗಲುತ್ತಿದೆ ಎಂದು ಹೆದ್ದಾರಿ ಸಚಿವಾಲಯ ಮೂಲಗಳು ತಿಳಿಸಿವೆ. ಸದ್ಯದ ಮಟ್ಟಿಗೆ ಗರ್ಡರ್‌ನ ಜೋಡಣೆ ಕೆಲಸ ವೇಗದಿಂದ ಸಾಗುತ್ತಿದೆ. ಸೇತುವೆ ಶೀಘ್ರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾಮಗಾರಿ ಚುರುಕು ಪಡೆದುಕೊಂಡಿದೆ ಎಂದು ಎಂಜಿನಿಯರ್ ಸೂಚಿಸಿದ್ದಾರೆ.
ಕ್ರಮ ಕೈಗೊಳ್ಳುವ ಎಚ್ಚರಿಕೆ
ಇಂದ್ರಾಳಿ ರೈಲ್ವೇ ಕಾಮಗಾರಿ ಸಂಬಂಧಿಸಿ ಶೀಘ್ರ ಪೂರ್ಣಗೊಳಿಸಲು ಹೆದ್ದಾರಿ, ರೈಲ್ವೇ ಸಚಿವಾಲಯದ ಅಧಿಕಾರಿಗಳ ಜತೆಗೆ ಚರ್ಚಿಸಿ ಸೂಚನೆ ನೀಡಲಾಗಿದೆ. ವಿಳಂಬಕ್ಕೆ ಕಾರಣವಾದ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ.
-ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ.
ಅಪಘಾತಗಳ ಸರಮಾಲೆ
ಸೇತುವೆ ಕಾಮಗಾರಿ ಅರ್ಧಕ್ಕೆ ನಿಂತ ಬಳಿಕ ಈ ಪರಿಸರದಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿ, ಹಗಲು ವಾಹನಗಳು ನಿಯಂತ್ರಣ ತಪ್ಪಿ ಅಪಘಾತ ವಾಗುತ್ತಿದ್ದು, ಹಲವು ಮಂದಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೆ ಮತ್ತು ಬೆಳಗ್ಗೆ ಸಮಯದಲ್ಲಿ ಇಲ್ಲಿನ ಶಾಲೆ ಬಿಡುವ ಸಮಯದಲ್ಲಿ ಮಕ್ಕಳು ರಸ್ತೆ ದಾಟಲು ಆತಂಕ ಪಡುತ್ತಿದ್ದಾರೆ. ಸ್ವಲ್ವ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
-ಅವಿನ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಕೃಷಿ ಸದೃಢವಾದರೆ ಮಾತ್ರ ಭಾರತ ಶಕ್ತಿಶಾಲಿಯಾಗಲು ಸಾಧ್ಯ: ಉಪರಾಷ್ಟ್ರಪತಿ ಧನಕರ್
New Scam…ಇದು ನಿಮ್ಮ ಬ್ಯಾಂಕ್ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್ ಎಚ್ಚರಿಕೆ
ಥಿಯೇಟರ್‌ನಲ್ಲಿ ಇರುವಾಗಲೇ ಟಿವಿಯಲ್ಲಿ ಪ್ರಸಾರ ಕಂಡ ʼಗೇಮ್ ಚೇಜರ್ʼ: ಚಿತ್ರತಂಡ ಶಾಕ್
Video: ಆತ್ಮಹತ್ಯೆ ಮಾಡಿಕೊಳ್ಳಲು 13ನೇ ಮಹಡಿಯಿಂದ ಜಿಗಿದರೂ ಬದುಕುಳಿದ ಕಾರ್ಮಿಕ….
ISRO ಡಾಕಿಂಗ್ ಪ್ರಯೋಗ ಯಶಸ್ವಿ: ಭಾರತೀಯ ಬಾಹ್ಯಾಕಾಶ ಅನ್ವೇಷಣೆಯಲ್ಲೊಂದು ಬೃಹತ್ ಹೆಜ್ಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.