Udupi: ಕುಸಿಯುತ್ತಲೇ ಇದೆ ಇಂದ್ರಾಣಿ ತಡೆಗೋಡೆ; ಕಲ್ಲುಗಳು ಹೊಳೆಪಾಲು
ದುರಸ್ತಿಗೆ ಪ್ರಸ್ತಾವನೆ ಕಳುಹಿಸಿ ಮೂರು ವರ್ಷಗಳಾದರೂ ಅನುದಾನ ಬಂದಿಲ್ಲ ನೀರು ಸರಿಯಾಗಿ ಹರಿಯದೇ ಸುತ್ತಮುತ್ತ ಕೃತಕ ನೆರೆ ಸೃಷ್ಟಿ
Team Udayavani, Aug 20, 2024, 4:59 PM IST
ಉಡುಪಿ: ನಗರದ ಮಧ್ಯ ಭಾಗದಲ್ಲಿ ಹರಿಯುವ ಇಂದ್ರಾಣಿ ಹೊಳೆಯ ತಡೆಗೋಡೆ ಹಲವೆಡೆ ಕುಸಿದು ಬಿದ್ದಿದ್ದು, ಇದರ ದುರಸ್ತಿಗೆ ಪ್ರಸ್ತಾವನೆ ಕಳುಹಿಸಿ ಮೂರು ಮಳೆಗಾಲ ಮುಗಿದರೂ ಸರಕಾರದ ಅನುದಾನ ಮಾತ್ರ ಇನ್ನೂ ಸಿಕ್ಕಿಲ್ಲ. ಎರಡು ವರ್ಷಗಳಿಂದ ತಡೆಗೋಡೆ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಎಲ್ಲ ಕಡೆ ತಡೆಗೋಡೆ ಕುಸಿಯುತ್ತಿದೆ.
ಈಗಾಗಲೇ ಬಹುತೇಕ ಇಂದ್ರಾಣಿ ಕಲುಷಿತಗೊಂಡು ಹರಿಯುತ್ತಿದ್ದು, ನಗರದ ಹಲವು ಕಟ್ಟಡಗಳಿಂದ ತ್ಯಾಜ್ಯ ನೀರು ಇದರ ಒಡಲಿಗೆ ಸೇರುತ್ತಿದೆ. ಮಳೆಗಾಲದಲ್ಲಿ ಹೆಚ್ಚುವರಿ ನೀರು ತೋಡಿಗೆ ಸೇರಿ ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಅಲ್ಲಲ್ಲಿ ತಡೆಗೋಡೆ ಕುಸಿಯುತ್ತಿದೆ. ಈ ಹಿಂದೆ ಕಲ್ಲಿನಲ್ಲಿ ಕಟ್ಟಿದ ತಡೆಗೋಡೆ ಕಲ್ಲುಗಳು ಒಂದೊಂದಾಗಿ ಕೆಳಗೆ ಬೀಳುತ್ತಿವೆ. ಕೆಲವು ಕಡೆಗಳಲ್ಲಿ ಸಾಕಷ್ಟು ಉದ್ದದ ತಡೆಗೋಡೆಗಳು ಕುಸಿದು ಬಿದ್ದಿವೆ. ಕಲ್ಸಂಕ ವೃತ್ತದ ಬಳಿ ಕೃಷ್ಣಮಠಕ್ಕೆ ಸಾಗುವ ರಸ್ತೆ, ಗುಂಡಿಬೈಲು ಸೇರಿದಂತೆ ಹಲವು ಕಡೆಗಳಲ್ಲಿ ಹಲವು ವರ್ಷಗಳ ಹಿಂದೆ ಕಲ್ಲಿನಿಂದ ಕಟ್ಟಲಾಗಿದ್ದ ಬೃಹತ್ ತಡೆಗೋಡೆಗಳು ಕುಸಿದಿದ್ದು, ನೀರು ಸರಿಯಾಗಿ ಹರಿಯದೇ ಸುತ್ತಮುತ್ತಲೂ ಕೃತಕ ನೆರೆ ಸಂಭವಿಸಲು ಇದು ಒಂದು ಕಾರಣ ಎನ್ನುತ್ತಾರೆ ಸ್ಥಳೀಯರು.
ಇಂದ್ರಾಣಿಯಲ್ಲಿ ಕುಸಿದ ಅವಶೇಷಗಳು ಅಲ್ಲಲ್ಲಿಯೇ ಸಿಲುಕಿಕೊಂಡಿದ್ದು, ನದಿ ನೀರಿನ ಸರಾಗ ಹರಿಯುವಿಕೆಗೆ ಅಡಚಣೆ ಉಂಟಾಗಿರುವ ಬಗ್ಗೆ ಈಗ ಸ್ಪಷ್ಟವಾಗಿ ಕಾಣುತ್ತದೆ. ಜನರಲ್ಲಿ ನಿರಂತರ ಜಾಗೃತಿ, ಹೋರಾಟದ ಅನಂತರವೂ ಜನತೆ ಇಂದ್ರಾಣಿ ನದಿಗೆ ತ್ಯಾಜ್ಯ ಎಸೆಯುವುದನ್ನು ಮಾತ್ರ ಇನ್ನೂ ನಿಲ್ಲಿಸಿಲ್ಲ. ಮದ್ಯದ ಬಾಟಲಿಗಳು, ಹಳೆ ಬಟ್ಟೆಗಳ ಗಂಟು, ಉಪಯೋಗಿಸಿದ ಹಳೆಯ ಹಾಸಿಗೆ, ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಕಾಣ ಸಿಗುತ್ತಿದ್ದು, ಪ್ರತೀವರ್ಷ ಟನ್‌ಗಟ್ಟಲೇ ತ್ಯಾಜ್ಯವನ್ನು ಟ್ರ್ಯಾಶ್ ಬ್ಯಾರಿಯರ್‌ನಿಂದ ಸಂಗ್ರಹಿಸಲಾಗುತ್ತಿದೆ.
ಜಿಲ್ಲಾಡಳಿತಕ್ಕೂ ಮಾಹಿತಿ
ಇಂದ್ರಾಣಿ ತಡೆಗೋಡೆ ಅಲ್ಲಲ್ಲಿ ಕುಸಿಯುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಜತೆಗೂ ಈ ಬಗ್ಗೆ ಚರ್ಚಿಸಲಾಗಿದ್ದು, ಇಲಾಖೆಯವರು ಈ ಹಿಂದೆ ಕಳುಹಿಸಿದ ಪ್ರಸ್ತಾವನೆಗೆ ಒಪ್ಪಿಗೆ ಸಿಗದೇ ಅನುದಾನ ಮಂಜೂರಾತಿಯಾಗಿಲ್ಲ.
– ರಾಯಪ್ಪ, ಪೌರಾಯುಕ್ತರು, ಉಡುಪಿ
ಪ್ರಸ್ತಾವನೆಗೆ ಧೂಳು ಹಿಡಿದಿದೆ
ಸಣ್ಣ ನೀರಾವರಿ ಇಲಾಖೆ ವತಿಯಿಂದ ನಗರ ಭಾಗದಲ್ಲಿ ಇಂದ್ರಾಣಿ ಸಾಗುವ ಪ್ರದೇಶದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ತಡೆಗೋಡೆಗಳನ್ನು ಗುರುತಿಸಿ ಎಲ್ಲೆಲ್ಲಿ ತಡೆಗೋಡೆ ನಿರ್ಮಾಣವಾಗಬೇಕು ಎಂಬ ಪ್ರಸ್ತಾವನೆಯನ್ನು ಸರಕಾರಕ್ಕೆ ಮೂರ್ನಾಲ್ಕು ವರ್ಷಗಳ ಹಿಂದೆಯೇ ಕಳುಹಿಸಲಾಗಿತ್ತು. ಆದರೆ ಸರಕಾರ ಇದಕ್ಕೆ ಅನುಮೋದನೆ ನೀಡಿಲ್ಲ. ಪ್ರಸ್ತಾವನೆ ಕಡತವು ಬೆಂಗಳೂರಿನಲ್ಲಿ ಧೂಳು ಹಿಡಿದುಕೊಂಡು ಬಿದ್ದಿದೆ. 4 ವರ್ಷಗಳ ಹಿಂದೆ 15 ಕೋ.ರೂ. ವೆಚ್ಚದಲ್ಲಿ ರಥಬೀದಿ ಪಾರ್ಕಿಂಗ್, ಕಟ್ಟೆ ಆಚಾರ್ಯ ಮಾರ್ಗ ಸಮೀಪ, ಸಿಟಿ ಬಸ್‌ನಿಲ್ದಾಣ ಹಿಂಬದಿ ಮಠದಬೆಟ್ಟು ಸಮೀಪ ಹರಿಯುವ ಇಂದ್ರಾಣಿಗೆ 1,800 ಮೀ. ಉದ್ದದ ತಡೆಗೋಡೆ ನಿರ್ಮಿಸಿದ್ದು, ಬಿಟ್ಟರೆ ಅನಂತರ ಅನುದಾನವೇ ಬಿಡುಗಡೆಯಾಗಿಲ್ಲ.
ತಡೆಗೋಡೆಯಾಗದಿದ್ದರೆ ಸಮಸ್ಯೆಗಳೇನು?
1 ಕೆಲವು ಮನೆಗಳ ಸಮೀಪದಲ್ಲಿಯೇ ಇಂದ್ರಾಣಿ ಹರಿಯುತ್ತದೆ
2 ಮಳೆಗಾಲದಲ್ಲಿ ಕೃತಕ ನೆರೆಯಿಂದ ಕಲ್ಸಂಕ, ತೆಂಕಪೇಟೆ, ಗುಂಡಿಬೈಲು ನೆರೆಭೀತಿ
3 ಅಲ್ಲಲ್ಲಿ ತ್ಯಾಜ್ಯ ಸಿಲುಕಿ ನೀರು ಸರಾಗವಾಗಿ ಹರಿಯಲು ತೊಂದರೆ
4 ಬೇಸಗೆಯಲ್ಲಿ ತ್ಯಾಜ್ಯ ನೀರು ಸರಿಯಾಗಿ ಹರಿಯದೇ ದುರ್ವಾಸನೆ ಆತಂಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.