ಉಡುಪಿ: ನಿಟ್ಟೂರು ಎಸ್‌ಟಿಪಿ; ರೋಗಗಳ ಹುಟ್ಟೂರು!
ತ್ಯಾಜ್ಯ ನೀರು ಸಂಸ್ಕರಣೆ ಘಟಕದಲ್ಲಿ ನಿರ್ವಹಣೆಯೇ ಇಲ್ಲ: ಹಲವು ವಾರ್ಡ್‌ಗಳಿಗೆ ಸಂಕಟ
Team Udayavani, Dec 31, 2024, 3:26 PM IST
ಉಡುಪಿ: ನಿಟ್ಟೂರಿನಲ್ಲಿರುವ 12 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣೆ ಘಟಕವನ್ನು (ಎಸ್‌ಟಿಪಿ) ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಘಟಕದ ತುಂಬ ತ್ಯಾಜ್ಯ ತುಂಬಿಕೊಂಡು ರೋಗ ಉತ್ಪಾದನಾ ತಾಣವಾಗಿ ಪರಿವರ್ತನೆಯಾಗಿದೆ. ಇದರಿಂದ ಪರಿಸರದ ನಾಲ್ಕಕ್ಕೂ ಅಧಿಕ ವಾರ್ಡ್‌ಗಳ 5000ಕ್ಕೂ ಅಧಿಕ ನಾಗರಿಕರು ನಿತ್ಯ ಸಂಕಟ ಎದುರಿಸುತ್ತಿದ್ದಾರೆ.
ನಗರಸಭೆ ರಚನೆಯಾದ ಸಂದರ್ಭದಲ್ಲಿ ಈ ಘಟಕ ನಿರ್ಮಾಣಗೊಂಡಿತ್ತು. ನಗರದ ಹಲವು ಪಟ್ಟು ಹೆಚ್ಚಳವಾಗಿದ್ದರೂ ಎಸ್‌ಟಿಪಿ ಸಾಮರ್ಥ್ಯ ಮಾತ್ರ ಅಷ್ಟೇ ಇದೆ. ಘಟಕದೊಳಗೆ ಸುಮಾರು 16 ಅಡಿ ಆಳದ ಮೂರು ಹೊಂಡವಿದ್ದು, ಅದರೊಳಗೆ ತ್ಯಾಜ್ಯ ನೀರು ಸಂಗ್ರಹವಾಗಿ ಶುದ್ಧೀಕರಣ ಯಂತ್ರದ ಮೂಲಕ ಫಿಲ್ಟರ್ ಮಾಡಿ, ಆ ನೀರನ್ನು ಪೈಪ್ ಮೂಲಕ ನದಿಗೆ ಬಿಡುವುದು ಕ್ರಮ. ಆದರೆ ಸರಿಯಾದ ನಿರ್ವಹಣೆ ಇಲ್ಲದೇ 12 ವರ್ಷಗಳಿಂದಲೂ ತ್ಯಾಜ್ಯವೇ ಶೇಖರಣೆಯಾಗಿದೆ. ಹೀಗಾಗಿ ಪರಿಸರದಲ್ಲಿ ವಿಪರೀತ ದುರ್ವಾಸಣೆ ಹರಡಿದೆ.
ತ್ಯಾಜ್ಯ ತೊಟ್ಟಿಯಾದ ಘಟಕ
ಈ ಘಟಕಕ್ಕೆ ಒಳಚರಂಡಿ ಮೂಲಕ ಮಾತ್ರವಲ್ಲ, ಖಾಸಗಿ ವ್ಯಕ್ತಿಗಳು, ಹೊಟೇಲ್‌ಗಳ ತ್ಯಾಜ್ಯ ನೀರನ್ನು ಕೂಡ ತಂದು ಸುರಿಯಲಾಗುತ್ತಿದೆ. ಅಲ್ಲದೆ ವಿವಿಧ ಪಂ.ಗಳಿಂದಲೂ ಇಲ್ಲಿಗೆ ತ್ಯಾಜ್ಯ ನೀರು ಬರುತ್ತಿದೆ. ಇಲ್ಲಿ ಸೂಕ್ತ ನಿರ್ವಹಣೆ ಮಾಡದ ಕಾರಣ ಬನ್ನಂಜೆ, ನಿಟ್ಟೂರು, ಕೊಡವೂರು, ಮೂಡುಬೆಟ್ಟು, ಕಲ್ಮಾಡಿ, ಮಲ್ಪೆ ಸೆಂಟ್ರಲ್ ಭಾಗಗಳಿಗೆ ಇಲ್ಲಿಂದ ಕೊಳಚೆ ನೀರು ಹರಿದು ವಾಸನೆಯ ಪರಿಸರ ಸೃಷ್ಟಿಗೊಂಡಿದೆ. ಮಳೆಗಾಲದಲ್ಲಿ ಈ ಕೊಳಕೆಲ್ಲ ನೇರ ಸಮುದ್ರ ಸೇರುತ್ತಿದೆ.
ಅನಾರೋಗ್ಯ ಸಮಸ್ಯೆ
ನಿಟ್ಟೂರು ಸುತ್ತಮುತ್ತ ಮಲೇರಿಯಾ, ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದೆ. ಮಕ್ಕಳು, ಹಿರಿಯ ನಾಯಕರಿಗೆ ಅನಾರೋಗ್ಯ ಕಾಡುತ್ತಿದೆ. ಇಲ್ಲಿಗೆ ನೆಂಟರಿಷ್ಟರನ್ನು ಕರೆಯಲು ಮನೆಯವರು ಹಿಂದೇಟು ಹಾಕುತ್ತಿದ್ದಾರೆ. ಹಲವಾರು ಬಾರಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುತ್ತಾರೆ ಕಲ್ಮಾಡಿ ವಾರ್ಡ್ ಸದಸ್ಯರಾದ ಸ್ಥಾಯಿಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ.
30 ಕೋಟಿಯ ಕಥೆಯೇನು?
ನಗರದ ಒಳಚರಂಡಿ ಹಾಗೂ ನಿಟ್ಟೂರು ತ್ಯಾಜ್ಯ ಸಂಸ್ಕರಣ ಘಟಕದ ನವೀಕರಣ ಹಾಗೂ ಅತ್ಯುನ್ನತ ದರ್ಜೆಯ ಘಟಕಕ್ಕಾಗಿ ಕೇಂದ್ರ ಸರಕಾರವು ಈಗಾಗಲೇ 30 ಕೋ.ರೂ.ಬಿಡುಗಡೆ ಮಾಡಿದೆ. ಹೆಚ್ಚುವರಿಯಾಗಿ 8 ಎಂಎಲ್‌ಡಿ ಸಾಮರ್ಥ್ಯದ ಯಂತ್ರವನ್ನು ನಿರ್ಮಿಸುವ ಉದ್ದೇಶವನ್ನೂ ನಗರಸಭೆ ಹೊಂದಿದೆ. ಆದರೆ ಹಣ ಬಿಡುಗಡೆಯಾಗಿ ವರ್ಷ ಕಳೆಯುತ್ತಿದ್ದರೂ ಇನ್ನು ಕೂಡ ಇದರ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಕನಿಷ್ಠ 6 ತಿಂಗಳು ಕಳೆಯಬಹುದು ಎಂಬುವುದು ನಗರಸಭೆ ಅಧಿಕಾರಿಗಳ ಅನಿಸಿಕೆ. 6 ತಿಂಗಳ ಅನಂತರ ಮಳೆಗಾಲ ಬರುತ್ತದೆ! ಸಮಸ್ಯೆ ಮುಂದುವರಿಯುತ್ತದೆ!
ಟೆಂಡರ್ ಬಳಿಕ ಕಾಮಗಾರಿ
ನಗರದ ಒಳಚರಂಡಿ ಹಾಗೂ ಎಸ್‌ಟಿಪಿಯಲ್ಲಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಕೆಲವರು ದೂರು ನೀಡಿದ್ದಾರೆ. ಎಸ್‌ಟಿಪಿ ನವೀಕರಣಕ್ಕೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ.
-ಪ್ರಭಾಕರ ಪೂಜಾರಿ ಗುಂಡಿಬೈಲು, ಅಧ್ಯಕ್ಷರು, ನಗರಸಭೆ,
ಸೂಕ್ತ ಕ್ರಮ
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮೂಲಕ ನಗರದ ಒಳಚರಂಡಿ ವ್ಯವಸ್ಥೆ ಹಾಗೂ ನಿಟ್ಟೂರು ಎಸ್‌ಟಿಪಿ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಸ್ಥಳೀಯವಾಗಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು.
-ಡಾ| ಉದಯ ಶೆಟ್ಟಿ, ಪೌರಾಯುಕ್ತರು, ನಗರಸಭೆ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.