ಝಡ್.ಆರ್. ಬದಲಾವಣೆಯಾಗದೆ ಸಮಸ್ಯೆ ನೂರೆಂಟು
ಕನ್ವರ್ಶನ್‌ಗೆ ಸಮಸ್ಯೆಯಾಗುತ್ತಿದೆ ಎಂಬುದು ಸಾರ್ವಜನಿಕರ ಅಳಲು
Team Udayavani, Sep 6, 2022, 11:28 AM IST
ಉಡುಪಿ: ನಗರಾಭಿವೃದ್ಧಿ ಪ್ರಾಧಿಕಾರದ ಝಡ್. ಆರ್. (ಝೋನಲ್ ರೆಗ್ಯುಲೇಶನ್ಸ್ ರೂಲ್ಸ್) ಬದಲಾವಣೆಯಾಗದೆ ನಗರದ ಮೂಲ ಸೌಕರ್ಯ ಅಭಿವೃದ್ಧಿ, ಸಾರ್ವಜನಿಕರ ವಸತಿ ನಿರ್ಮಾಣ ಸಹಿತ ನೂರೆಂಟು ಸಮಸ್ಯೆಗಳು ಹಲವು ವರ್ಷಗಳಿಂದ ಬಗೆಹರಿಯದೇ ಉಳಿದುಕೊಂಡಿದೆ.
ನಗರಾಭಿವೃದ್ಧಿ ಪ್ರಾಧಿಕಾರ ಪ್ರತೀ 10 ವರ್ಷಕ್ಕೊಮ್ಮೆ ಝಡ್. ಆರ್. ಬದಲಾವಣೆ ಮಾಡಬೇಕು. ಇದರಲ್ಲಿ ವಸತಿ, ಕೃಷಿ, ಕೈಗಾರಿಕೆ, ಉದ್ಯಾನವನ, ಸಾರ್ವಜನಿಕ ಸ್ಥಳ, ಸಾರಿಗೆ, ಸಂಚಾರ ವ್ಯವಸ್ಥೆಗಳನ್ನು ಒಳಗೊಂಡು ಸಂಪೂರ್ಣ ಮಾಸ್ಟರ್ ಪ್ಲಾನಿಂಗ್ ರೂಪಿಸಲಾಗುತ್ತದೆ. ಪ್ರಸ್ತುತ 2008 ಮಾಸ್ಟರ್‌ಪ್ಲಾನ್ ಪ್ರಕಾರವೇ ಇದ್ದು, ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರವು 2018ರಲ್ಲಿ ಮಾಸ್ಟರ್ ಪ್ಲ್ರಾನ್ ಕರಡು ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿತ್ತು. ಅದಾಗಲೇ ಜಾರಿಗೆ ಬರಲಿದ್ದ ಕೇಂದ್ರ ಸರಕಾರ ಅಮೃತ್ ಯೋಜನೆ ಮಾರ್ಗಸೂಚಿಯನ್ನು ಅಳವಡಿಸಿಕೊಂಡು ಕರಡು ರಚಿಸುವಂತೆ ಸರಕಾರದಿಂದ ಸೂಚನೆ ಬಂಡಿತ್ತು. ಅದರಂತೆ ಕರಡು ಸಿದ್ಧಪಡಿಸುವ ಕಾರ್ಯವನ್ನು ಅರೆಸರಕಾರಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ಇದರಿಂದ ಹೆಚ್ಚಿನ ಕೆಲಸ ಆಗಿರಲಿಲ್ಲ. ಅಮೃತ್ ಯೋಜನೆ ಪ್ರಕಾರ ವಿವಿಧ ಇಲಾಖೆಗಳಿಂದ ಬೇಕಾದ ದತ್ತಾಂಶಗಳು ಪೂರಕವಾಗಿ ದೊರೆಯದ ಕಾರಣ ಈ ಕರಡು ಸಿದ್ಧವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
8 ಗ್ರಾ.ಪಂ., ಉಡುಪಿ ನಗರ ವ್ಯಾಪ್ತಿ ಒಳಗೊಂಡ ಪ್ರಾಧಿಕಾರದ ವ್ಯಾಪ್ತಿಗೆ 8,0677 ಹೆಕ್ಟೇರ್ ಭೂಮಿ ಬರಲಿದೆ. ಇದರಲ್ಲಿ ವಸತಿ ವಲಯ 5,040 ಹೆಕ್ಟೇರ್, ಹಸಿರು(ಕೃಷಿ) ವಲಯ 3,070 ಹೆಕ್ಟೇರ್ ಹೊಂದಿದೆ. 2008ರ ಮಾಸ್ಟರ್ ಪ್ಲಾನ್ ಪ್ರಕಾರ ನಗರದ ಹೃದಯ ಭಾಗದಲ್ಲಿ ಹಲವು ಕಡೆಗಳಲ್ಲಿ ಹಸುರು ವಲಯವೇ ಇರುವುದರಿಂದ ವಸತಿ ನಿರ್ಮಾಣಕ್ಕೆ ಸಮಸ್ಯೆಯಾಗುತ್ತಿದೆ. 80ಬಡಗೆಬಟ್ಟು, ಕೊಡವೂರು, ಅಲೆವೂರು ಭಾಗದ ಕೆಲವು ಕಡೆ ಸರ್ವೇ ನಂಬರ್‌ಗಳು ಕೈಗಾರಿಕೆ ವಲಯ ಎಂದು ತೋರಿಸುವುದರಿಂದ ಕನ್ವರ್ಶನ್‌ಗೆ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸಮಸ್ಯೆ ಪರಿಹಾರಕ್ಕೆ ನಿರಂತರ ಪ್ರಯತ್ನ: ಝಡ್. ಆರ್. ಬದಲಾವಣೆಗೆ ಶಾಸಕರ ಸಹಿತವಾಗಿ ಎರಡು ಬಾರಿ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರಲ್ಲಿ ಚರ್ಚೆ ನಡೆಸಿದ್ದೇವೆ. 2018ರ ಮಾಸ್ಟರ್ ಪ್ಲ್ರಾನ್ ಕರಡಿನಲ್ಲಿ ಅಮೃತ್ ಯೋಜನೆ ಮಾರ್ಗಸೂಚಿ ಕೈಬಿಟ್ಟು ಅದೇ ಮಾಸ್ಟರ್ ಪ್ಲಾನ್‌ಗೆ ಅನುಮೋದನೆ ನೀಡುವಂತೆ ತಿಳಿಸಿದ್ದೇವೆ. ಹಸಿರು ವಲಯದಲ್ಲಿ 10 ಸೆಂಟ್ಸ್‌ವರೆಗೇ ಭೂ ಪರಿವರ್ತನೆಗೆ ಅವಕಾಶ ಕಲ್ಪಿಸುವ ಬಗ್ಗೆ ನಿರಂತರ ಪ್ರಯತ್ನ ನಡೆಯುತ್ತಿದ್ದು, ಮುಂದಿನವಾರ ಮತ್ತೂಮ್ಮೆ ಕಾರ್ಯದರ್ಶಿಯವರೊಂದಿಗೆ ಬೆಂಗಳೂರಿನಲ್ಲಿ ಶಾಸಕರ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಇದರ ಜತೆಗೆ ವಸತಿ ಉದ್ದೇಶದ ಮನೆಗಳಿಗೆ ಪಾರ್ಕಿಂಗ್ ನಿಯಮವನ್ನು ಸಡಿಲಗೊಳಿಸಿ ಪ್ರಾಧಿಕಾರವು ನಿರ್ಣಯ ತೆಗೆದುಕೊಂಡಿದೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಯುತ್ತಿದೆ. – ಮನೋಹರ್ ಎಸ್. ಕಲ್ಮಾಡಿ, ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.