ಮಂಗಳೂರು ವಿಶ್ವವಿದ್ಯಾನಿಲಯ; ಹೈನುಗಾರಿಕೆ ವಿಜ್ಞಾನ ಸಂಶೋಧನ ಪೀಠಕ್ಕೆ ಸಿದ್ಧತೆ
ಐವರು ಸದಸ್ಯರ ಸಾಧ್ಯತಾ ಸಮಿತಿ ರಚನೆ
Team Udayavani, Oct 17, 2020, 1:08 AM IST
ಸಾಂದರ್ಭಿಕ ಚಿತ್ರ
ಕಾರ್ಕಳ: ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ನೂತನ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಹೈನುಗಾರಿಕೆ ವಿಜ್ಞಾನ ಸಂಶೋಧನ ಪೀಠ ಸ್ಥಾಪನೆಗೆ ಚಾಲನೆ ದೊರಕಿದ್ದು, ಐವರನ್ನೊಳಗೊಂಡ ಸಾಧ್ಯತಾ ಸಮಿತಿಯ ರಚನೆಯಾಗಿದೆ.
ಸಂಶೋಧನಾ ಪೀಠ ಸ್ಥಾಪಿಸುವಂತೆ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಸಾಣೂರು ನರಸಿಂಹ ಕಾಮತ್ ಅವರು ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಮೋಹನ ಪಡಿವಾಳ ಅವರ ಮೂಲಕ ಪ್ರಸ್ತಾವ ಸಲ್ಲಿಸಿದ್ದರು. ಸಿಂಡಿಕೇಟ್ ಸಭೆಯಲ್ಲಿ ಚರ್ಚೆ ನಡೆದು ವಿ.ವಿ.ಯ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ ಪ್ರೊ| ಡಿ. ಶಿವಲಿಂಗಯ್ಯ ಅವರ ನೇತೃತ್ವದಲ್ಲಿ ಸಮಿತಿ ರಚನೆಗೊಂಡಿದೆ. ಸಮಿತಿಯು ಪ್ರಸ್ತಾವನೆಯ ಅಂಶಗಳ ಅಧ್ಯಯನ ಮಾಡುವುದಲ್ಲದೆ ಸಂಶೋಧನ ಕೇಂದ್ರದ ಸಾಧ್ಯತಾ ವರದಿ ಸಿದ್ಧಪಡಿಸಲಿದೆ.
ಎರಡನೇ ಹಂತದಲ್ಲಿ ಪ್ರಸಕ್ತ ಹೈನೋದ್ಯಮದ ಸ್ಥಿತಿಗತಿ, ಸಂಶೋಧನಾ ಘಟಕದ ಆವಶ್ಯಕತೆ, ಸ್ಥಾಪನೆಗೆ ಕಾರಣ, ಘಟಕದ ಕಾರ್ಯಚಟುವಟಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿ, ಸರಕಾರಕ್ಕೆ ಅನುಮತಿ ಮತ್ತು ಆರ್ಥಿಕ ಸಹಕಾರಕ್ಕೆ ಮನವಿ ಮಾಡಲಿದೆ.
ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರರಿದ್ದು, ರಾಜ್ಯದ 14 ಹಾಲು ಒಕ್ಕೂಟಗಳಲ್ಲಿ ದ.ಕ. ಸಹಕಾರಿ ಹಾಲು ಒಕ್ಕೂಟ ಅತ್ಯಂತ ಹೆಚ್ಚು ಗುಣಮಟ್ಟದ ಹಾಲು ಒದಗಿಸುವುದಲ್ಲದೆ ಹಾಲು ಸಂಗ್ರಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಹೈನುಗಾರರಿಗೆ ಗರಿಷ್ಠ ಮೊತ್ತವನ್ನು ಪಾವತಿಸುತ್ತಿದೆ.
ಉಪಯೋಗವೇನು?
ಆಧುನಿಕ ತಂತ್ರಜ್ಞಾನದ ಸದ್ಬಳಕೆ, ದೇಶ- ವಿದೇಶಗಳ ಸಂಪನ್ಮೂಲಗಳ ಬಳಕೆ, ಅಧ್ಯಯನ, ಜಾನುವಾರು ತಳಿ ಅಭಿವೃದ್ಧಿ ಹಾಗೂ ಗುಣಮಟ್ಟ ಅಳವಡಿಕೆ ಕುರಿತು ತರಬೇತಿ ನೀಡಲು ಅನುಕೂಲವಾಗಲಿದೆ. ಹೈನೋದ್ಯಮ ಕ್ಷೇತ್ರವನ್ನು ತಾಂತ್ರಿಕವಾಗಿ ಅಭಿವೃದ್ಧಿಗೊಳಿಸಿ, ಪೂರ್ಣ ಯಾಂತ್ರೀಕರಣಗೊಳಿಸುವುದು, ಸಂಶೋಧನೆಗೆ ಪೂರಕ ಅವಕಾಶ, ತತ್ರಾಂಶ, ಮಾಹಿತಿ, ಆರ್ಥಿಕ ಸೌಲಭ್ಯ ಒದಗಿಸುವುದಲ್ಲದೆ ಯುವ ಸಮೂಹ ಹಾಗೂ ಆಸಕ್ತ ಸ್ಥಳೀಯ ಹೈನುಗಾರರಿಗೆ ತರಗತಿ ಶಿಕ್ಷಣ ದೊರೆತು ಹೈನುಗಾರಿಕೆ ಬಗ್ಗೆ ಆಸಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ. ಉದ್ಯೋಗಾವಕಾಶ ಹೆಚ್ಚುವುದಲ್ಲದೆ ವಿದ್ಯಾರ್ಥಿಗಳಲ್ಲಿ ಕೃಷಿ-ಹೈನುಗಾರಿಕೆಯತ್ತ ಒಲವು ಹೆಚ್ಚಾಗಬಹುದು. ಕೇಂದ್ರ ತೆರೆಯಲು ಸುಮಾರು 5 ಕೋ.ರೂ. ನೆರವಿನ ಆವಶ್ಯಕತೆಯೂ ಇದೆ.
ಅಂಕಿ-ಅಂಶ
ರಾಜ್ಯದಲ್ಲಿರುವ ಸಹಕಾರಿ ಸಂಘಗಳು-14
ಹಾಲು ಉತ್ಪಾದಕ ಸಂಘ-16,000
ಒಕ್ಕೂಟದಲ್ಲಿರುವ ಸಹಕಾರಿ ಹಾಲು ಒಕ್ಕೂಟ-726
ನಿತ್ಯ ಹಾಲು ಸಂಗ್ರಹಣೆ-5 ಲಕ್ಷ ಲೀ.
ಅವಿಭಜಿತ ದ.ಕ. ಜಿಲ್ಲೆಯಲ್ಲಿರುವ ಹೈನುಗಾರರು-80 ಸಾವಿರಕ್ಕೂ ಅಧಿಕ
ಸಂಶೋಧನ ಕೇಂದ್ರ ತೆರೆಯುವ ಬಗ್ಗೆ ಸಮಿತಿ ರಚನೆಯಾಗಿದ್ದು, ಸಮಿತಿಯು ಸಂಪೂರ್ಣ ಆಧ್ಯಯನ ನಡೆಸಲಿದೆ. ಆರ್ಥಿಕ ನೆರವು ಇತ್ಯಾದಿಗಳ ಬಗ್ಗೆ ಈಗ ಯೋಚಿಸಿಲ್ಲ.
– ಮೋಹನ ಪಡಿವಾಳ, ವಿ.ವಿ.ಯ ಸಿಂಡಿಕೇಟ್ ಸದಸ್ಯ
ಹೈನುಗಾರಿಕಾ ಸಂಶೋಧನ ಕೇಂದ್ರ ಸ್ಥಾಪನೆಯಾದಲ್ಲಿ ನವತಂತ್ರಜ್ಞಾನಗಳ ಮೂಲಕ ಹೈನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ.
– ನರಸಿಂಹ ಕಾಮತ್ ಸಾಣೂರು, ನಿರ್ದೇಶಕರು, ದ.ಕ. ಸಹಕಾರಿ ಹಾಲು ಒಕ್ಕೂಟ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.