ವಾರಾಹಿ ಯೋಜನೆ :”2 ಹಂತಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣ’
Team Udayavani, Dec 19, 2018, 9:36 AM IST
ಉಡುಪಿ: ವಾರಾಹಿ ನದಿಯಿಂದ (ಹಾಲಾಡಿ ಸಮೀಪದ ಕುಳಂಜೆ ಗ್ರಾಮದ ಭರತ್ಕಲ್) 38 ಕಿ.ಮೀ. ಉದ್ದಕ್ಕೆ ಪೈಪ್‌ಲೈನ್ ಅಳವಡಿಸಿ ಉಡುಪಿ ನಗರ ಮತ್ತು ಪಕ್ಕದ ಕೆಲವು ಗ್ರಾ.ಪಂ.ಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ 2 ಹಂತದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮೂರನೇ ಹಂತದ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಯೋಜನೆಯನ್ನು ಕಾರ್ಯಗತಗೊಳಿಸಲಿರುವ ಕೆಯುಐಡಿಎಫ್ಸಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಮಕೃಷ್ಣಯ್ಯ ತಿಳಿಸಿದ್ದಾರೆ.
ಯೋಜನೆಯ ಸಾಮಾಜಿಕ ಪರಿಣಾಮಗಳ ಕುರಿತು ಮಂಗಳವಾರ ಉಡುಪಿಯ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಸ್ಥಳೀಯ ನಗರಸಭಾ ವಾರ್ಡ್‌ಗಳ ಸಾರ್ವಜನಿಕರಿಗಾಗಿ ಆಯೋಜಿಸಲಾದ ಸಮಾಲೋಚನ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
ಒಟ್ಟು 300 ಕೋ.ರೂ. ವೆಚ್ಚದ ಈ ಯೋಜನೆಯ ಮೊದಲ ಹಂತದ ಕಾಮಗಾರಿ 119.5 ಕೋ.ರೂ. ವೆಚ್ಚದಲ್ಲಿ ನಡೆಯಲಿದೆ. 2ನೇ ಹಂತದ ಕಾಮಗಾರಿ ಎಡಿಬಿ ನೆರವಿನಲ್ಲಿ 112 ಕೋ.ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ. 65.5 ಕೋ.ರೂ. ವೆಚ್ಚದಲ್ಲಿ ಶುದ್ಧೀಕರಣ ಘಟಕ ಮತ್ತಿತರ ಕಾಮಗಾರಿಗಳು ರಾಜ್ಯ ಸರಕಾರದಿಂದ ನಡೆಯಲಿವೆ ಎಂದರು.
ಸದ್ಯದ ಸಮಸ್ಯೆ ಪರಿಹರಿಸಿ ವಾರಾಹಿಯಿಂದ ನೀರು ತರಲು ಕನಿಷ್ಠ 36 ತಿಂಗಳುಗಳಿವೆ.
ಆದರೆ ಪ್ರತಿ ವರ್ಷ ಫೆಬ್ರವರಿಯ ಲ್ಲಿಯೇ ಉಡುಪಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. 3 ವರ್ಷಗಳ ಕಾಲ ನೀರು ಒದಗಿಸಲು ಬಜೆ ಅಣೆಕಟ್ಟಿನಲ್ಲಿ ಹೂಳೆತ್ತುವ ಹಾಗೂ ನಗರದಲ್ಲಿರುವ ಬಾವಿಗಳನ್ನು ದುರಸ್ತಿಗೊಳಿಸುವ ಕೆಲಸ ಮಾಡಬೇಕು ಎಂದು ನಗರಸಭಾ ಸದಸ್ಯ ಶ್ರೀಕೃಷ್ಣ ರಾವ್ ಕೊಡಂಚ ಒತ್ತಾಯಿಸಿದರು. ನಗರಸಭಾ ಸದಸ್ಯರಾದ ಬಡಗಬೆಟ್ಟಿನ ವಿಜಯ ಪೂಜಾರಿ, ಕಸ್ತೂರ್ಬಾನಗರದ ರಾಜು, ಚಂದ್ರಶೇಖರ ಸೇರಿಗಾರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.