ಈಡೇರುವುದೇ ಕೋಡಿ ಹೊಸಬೆಂಗ್ರೆ ನಿವಾಸಿಗಳ ಕನಸು?
ಹಕ್ಕುಪತ್ರದ ನಿರೀಕ್ಷೆಯಲ್ಲಿ...
Team Udayavani, Jan 4, 2020, 5:59 AM IST
ಕೋಟ: ಕೋಡಿ-ಕನ್ಯಾಣ ಗ್ರಾ.ಪಂ. ವ್ಯಾಪ್ತಿಯ ಹೊಸಬೆಂಗ್ರೆಯ ಸುಮಾರು 491 ಕುಟುಂಬಗಳು ಹಲವು ದಶಕದಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ ಸಿ.ಆರ್.ಝಡ್. ಕಠಿಣ ನಿಯಮಗಳಿಂದಾಗಿ ಇವರಿಗೆ ಇದುವರೆಗೆ ಹಕ್ಕುಪತ್ರ ಲಭಿಸಿರಲಿಲ್ಲ ಹಾಗೂ ಸರಕಾರದ ವಸತಿ ಯೋಜನೆ, ವಿದ್ಯುತ್, ಶೌಚಾಲಯ, ಸಾಲ ಸೌಲಭ್ಯಗಳು ಕಾನೂನಾತ್ಮಕವಾಗಿ ಸಿಗುತ್ತಿಲ್ಲ.
79 ಕುಟುಂಬಕ್ಕೆ ಮಂಜೂರಾಗಿತ್ತು
ಈ ಹಿಂದೆ ಸಾಕಷ್ಟು ಹೋರಾಟದ ತರುವಾಯ 491ಕುಟುಂಬಗಳಲ್ಲಿ 79ಕುಟುಂಬಗಳಿಗೆ ಹಕ್ಕುಪತ್ರ ಮಂಜೂರಾಗಿತ್ತು. ಆದರೆ ಸರಕಾರ ಹೆಚ್ಚಿನ ಕಂದಾಯ ಹಣವನ್ನು ಗೊತ್ತುಪಡಿಸಿದ್ದರಿಂದ ಹಕ್ಕುಪತ್ರ ಪಡೆಯಲು ನಿರಾಕರಿಸಿದ್ದರು.
ಅನಂತರ ಮಿಕ್ಕುಳಿದ 412ಕುಟುಂಬಗಳು ಕಂದಾಯ ಅಧಿಕಾರಿಗಳು, ತಹಶೀಲ್ದಾರ್ ಮೂಲಕ 1991ಕ್ಕಿಂತ ಮೊದಲು ವಾಸವಿದ್ದೆವು ಎನ್ನುವುದಕ್ಕೆ ದಾಖಲೆಯಾಗಿ ಹಿಂದಿನ ಕಂದಾಯ ಪಾವತಿ ರಶೀದಿ, ವಿದ್ಯುತ್ ಬಿಲ್ ಮುಂತಾದ ದಾಖಲೆಗಳು, ಮರ-ಮಟ್ಟುಗಳ ವರ್ಷ ತಾಳೆಹಾಕಿ ದಾಖಲೆ ಸಿದ್ಧಪಡಿಸಿ ಸಿ.ಆರ್.ಝಡ್. ಇಲಾಖೆಗೆ ಸಲ್ಲಿಸಿತ್ತು. ಅದರಂತೆ ಇದೀಗ ಇಲಾಖೆ ಸಭೆ ನಡೆಸಿ ಹಕ್ಕುಪತ್ರ ನೀಡಲು ಇರುವ ಅವಕಾಶಗಳ ಕುರಿತು ಪರಿಶೀಲನೆ ನಡೆಸಿದೆ.
ಸಕಾರಾತ್ಮಕ ತೀರ್ಮಾನ
ದಾಖಲಾತಿಗಳನ್ನು ಸಿ.ಆರ್.ಝಡ್. ಸಮಿತಿಯ ಸಭೆಯಲ್ಲಿ ಮಂಡನೆಯಾಗಿದ್ದು 1991ಕ್ಕಿಂತ ಮೊದಲು ವಾಸವಾಗಿರುವುದಕ್ಕೆ ಅಧಿಕೃತ ದಾಖಲೆ ಹೊಂದಿರುವವರರಿಗೆ ಹಕ್ಕುಪತ್ರ ನೀಡುವ ಕುರಿತು ಸಕಾರಾತ್ಮಕವಾಗಿ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ ಹಾಗೂ ದಾಖಲೆ ಸರಿ ಇಲ್ಲದಿರುವ ಪ್ರಕರಣಗಳ ಕುರಿತು ಮತ್ತೂಮ್ಮೆ ಪರಿಶೀಲನೆ ನಡೆಸಲು ಉಪಸಮಿತಿ ರಚಿಸಲು ನಿರ್ಧರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಲವು ಸಮಸ್ಯೆಗಳು ದೂರ
ಸಿ.ಆರ್.ಝಡ್. ಅನುಮತಿ ನೀಡಿ ಹಕ್ಕುಪತ್ರ ಲಭಿಸಿದಲ್ಲಿ ಸರಕಾರದ ವಸತಿ ಮುಂತಾದ ಯೋಜನೆ, ವಿದ್ಯುತ್, ಶೌಚಾಲಯ ಹಾಗೂ ಸಾಲ ಸೌಲಭ್ಯಗಳನ್ನು ಪಡೆಯಲು ಈ ಕುಟುಂಬಗಳು ಅರ್ಹವಾಗಲಿವೆ ಹಾಗೂ ಹಲವು ದಶಕಗಳ ಇವರ ಕನಸು ನನಸಾದಂತಾಗುತ್ತದೆ.
ಹಕ್ಕುಪತ್ರಕ್ಕೆ ಕ್ರಮ
ಕೋಡಿ ಕನ್ಯಾಣ ನಿವಾಸಿಗಳಿಗೆ 79 ಕುಟುಂಬಗಳಿಗೆ ಈ ಹಿಂದೆಯೇ ಹಕ್ಕುಪತ್ರ ಮಂಜೂರುಗೊಳಿಸಲಾಗಿತ್ತು. ಆದರೆ ಮಿಕ್ಕುಳಿದ 412ಮಂದಿ ಮತ್ತೆ ಮನವಿ ಮಾಡಿದ್ದರಿಂದ ಕಂದಾಯ ಇಲಾಖೆಯ ಮೂಲಕ ಅಗತ್ಯ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಿ ಸಿ.ಆರ್.ಝಡ್. ಕಮಿಟಿಯ ಸಭೆಯಲ್ಲಿ ಮಂಡಿಸಲಾಗಿದೆ. ದಾಖಲೆಗಳು ಸಮರ್ಪಕವಾಗಿರುವವರಿಗೆ ಹಕ್ಕುಪತ್ರ ನೀಡುವ ಕುರಿತು ಸಕಾರಾತ್ಮಕ ತೀರ್ಮಾನ ಕೈಗೊಳ್ಳಲಾಗಿದೆ ಹಾಗೂ ಮಿಕ್ಕುಳಿದ ಪ್ರಕರಣಗಳ ಕುರಿತು ಮತ್ತೆ ಪರಿಶೀಲಿಸಲು ಉಪಸಮಿತಿ ರಚಿಸುವ ಸಾಧ್ಯತೆ ಇದೆ. ಈ ಕುರಿತು ಇನ್ನೂ ಅಧಿಕೃತ ಆದೇಶವಾಗಿಲ್ಲ. ಶೀಘ್ರದಲ್ಲೇ ಪ್ರಕಟವಾಗಲಿದೆ ಎಂದು ಸಿ.ಆರ್.ಝಡ್. ಹಿರಿಯ ಅಧಿಕಾರಿಯವವರು ತಿಳಿಸಿದರು.
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.