ಐದು ದಶಕಗಳೇ ಕಳೆದರೂ ಇನ್ನೂ ಸಿಗದ ಹಕ್ಕುಪತ್ರ
ಸೌಕರ್ಯ ವಂಚಿತ ಅಂಪಾರಿನ ಕುಡ್ಬೇರು ಕಾಲನಿಯ 8 ಕುಟುಂಬಗಳು
Team Udayavani, Nov 16, 2020, 4:49 AM IST
8 ಕುಟುಂಬಗಳು ನೆಲೆಸಿರುವ ಕುಡ್ಬೇರು ಕಟ್ಟೆಜೆಡ್ಡು ಕಾಲನಿ.
ಕುಂದಾಪುರ: ಅಂಪಾರು ಗ್ರಾಮದ ಕುಡ್ಬೇರು ಕಟ್ಟೆಜೆಡ್ಡು ಕಾಲನಿಯ ಎಂಟು ಕುಟುಂಬಗಳು ಕಳೆದ 50 ವರ್ಷಗಳಿಂದ ಅಲ್ಲೇ ಜೀವನ ಸಾಗಿಸುತ್ತಿವೆ. ಆದರೆ ಇನ್ನೂ ಈ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ಸಿಕ್ಕಿಲ್ಲ. ಆದ್ದರಿಂದ ಇವು ಸರಕಾರದ ಸವಲತ್ತುಗಳಿಂದ ವಂಚಿತವಾಗಿವೆ.
ಕುಡ್ಬೇರು ಕಟ್ಟೆಜೆಡ್ಡು ಕಾಲನಿಯಲ್ಲಿ ನೆಲೆಸಿರುವ ಪ. ಜಾತಿ, ಪಂಗಡಕ್ಕೆ ಸೇರಿದ ಈ 8 ಕುಟುಂಬಗಳು ನಿವೇಶನದ ಹಕ್ಕುಪತ್ರಕ್ಕಾಗಿ ಕಳೆದ 4-5 ದಶಕಗಳಿಂದ ವಿವಿಧ ಕಚೇರಿಗಳಿಗೆ ಅಲೆದಾಟ ನಡೆಸಿವೆ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆಲ್ಲ ಮನವಿ ಮಾಡಿದರೂ ಯಾವುದೇ
ಪ್ರಯೋಜನ ಆಗಿಲ್ಲ.
ಸಮಸ್ಯೆಯೇನು?
ಈ ಬಗ್ಗೆ ಅಂಪಾರು ಗ್ರಾಮಕರಣಿಕರ ಗಮನಕ್ಕೆ ತಂದರೆ ನೀವು ನೆಲೆಸಿರುವ ಪ್ರದೇಶವು ಮೀಸಲು ಅರಣ್ಯ ಪ್ರದೇಶ
ದಲ್ಲಿ ಬರುತ್ತದೆ. ಹಾಗಾಗಿ ನಿವೇಶನದ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಹಿಂದೊಮ್ಮೆ ಸರ್ವೇ ಮಾಡಿದಾಗ ಈ ಪ್ರದೇಶವು ಮೀಸಲು ಅರಣ್ಯ ಪ್ರದೇಶದಡಿ ಬರುವುದಿಲ್ಲ ಎಂದು ಗೊತ್ತಾಗಿದೆ. ಆದರೂ ಹಕ್ಕುಪತ್ರ ನೀಡಲು ಸತಾಯಿಸುತ್ತಿದ್ದಾರೆ ಎನ್ನುತ್ತಾರೆ ಅಲ್ಲಿನ ನಿವಾಸಿ ಪ್ರಕಾಶ್.
ಸೌಕರ್ಯ ಪಡೆಯಲು ಅಡ್ಡಿ
ಈ 8 ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿದ್ದು, ನಿವೇಶನವಿಲ್ಲದ ಕಾರಣ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಆಶ್ರಯ ಯೋಜನೆ, ವಿದ್ಯುತ್, ನೀರಾವರಿ ಸೌಲಭ್ಯ ಸೇರಿದಂತೆ ಬಹುತೇಕ ಎಲ್ಲ ಸೌಕರ್ಯಗಳಿಂದ ಈ ಬಡ ಕುಟುಂಬಗಳು ವಂಚಿತ ವಾಗುವಂತಾಗಿವೆ. ಈ ಕುಟುಂಬಗಳಿಗೆ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವೂ ಸಿಗುತ್ತಿಲ್ಲ.
161 ಅರ್ಜಿ
ಅಂಪಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಈ 8 ಕುಟುಂಬಗಳು ಮಾತ್ರವಲ್ಲದೆ ಸ್ವಂತ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಪೈಕಿ ಈ ವರೆಗೆ 161 ಮಂದಿಗೆ ಇನ್ನೂ ಹಕ್ಕುಪತ್ರ ಸಿಗಲು ಬಾಕಿಯಿದೆ.
ಜಂಟಿ ಸರ್ವೇಗೆ ಸೂಚನೆ
ಆ 8 ಕುಟುಂಬಗಳು ನೆಲೆಸಿರುವ ಪ್ರದೇಶ ಮೀಸಲು ಅರಣ್ಯ ಪ್ರದೇಶದಡಿ ಬರುತ್ತದೆ ಎನ್ನುವುದು ಹಿಂದೆ ಮಾಡಿದ ಸರ್ವೇಯಿಂದ ತಿಳಿದಿದ್ದು, ಈ ಬಗ್ಗೆ ಕೆಲವು ಗೊಂದಲಗಳು ಇರುವುದರಿಂದ ಈಗ ಅಲ್ಲಿನ ನಿವಾಸಿಗಳ ಮನವಿ ಮೇರೆಗೆ ತಹಶೀಲ್ದಾರ್ ಹಾಗೂ ಸರ್ವೇಯರ್ ಜತೆ ಮಾತನಾಡಿದ್ದು, ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಲು ಸೂಚನೆ ನೀಡಿದ್ದೇನೆ. ಆ ಕುಟುಂಬಗಳಿಗೆ ಹಕ್ಕುಪತ್ರ ಒದಗಿಸುವ ಪ್ರಯತ್ನ ಮಾಡುತ್ತೇನೆ.
-ಬಿ.ಎಂ. ಸುಕುಮಾರ್ ಶೆಟ್ಟಿ, ಬೈಂದೂರು, ಶಾಸಕರು
ಮೀಸಲು ಅರಣ್ಯ ಪ್ರದೇಶ
ಈ ಕುಡ್ಬೇರು ಕಟ್ಟೆಜೆಡ್ಡು ಕಾಲನಿಯಲ್ಲಿ ಕೇವಲ 2 ಸೆಂಟ್ಸ್ ಮಾತ್ರ ಸರಕಾರಿ ಜಾಗವಿದ್ದು, ಬಾಕಿ ಎಲ್ಲ ಮೀಸಲು ಅರಣ್ಯ ಪ್ರದೇಶಕ್ಕೆ ಸೇರಿದ್ದಾಗಿದೆ. ಈ ಬಗ್ಗೆ ಶಾಸಕರು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೇಗೆ ಸೂಚನೆ ನೀಡಿದ್ದಾರೆ. ಈ ಕಾರ್ಯ ಶೀಘ್ರ ಆಗಬಹುದು.
-ಮಧುಸೂದನ್, ಪಿಡಿಒ, ಅಂಪಾರು ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.