Kundapura: ಪ್ರಾಣಿ-ಪಕ್ಷಿಗಳಿಗಾಗಿ ಕಾಡಿನ ಕೆರೆ ಹೂಳೆತ್ತಿದ ರೈತ
ಸ್ವಂತ ಖರ್ಚಿನಲ್ಲಿ ಹೂಳೆತ್ತಿದ ಸರಕಾರಿ ಕೆರೆಯಲ್ಲೀಗ ಸಮೃದ್ಧ ನೀರು
Team Udayavani, Mar 27, 2024, 11:00 AM IST
ಕುಂದಾಪುರ: ಈ ಬಾರಿ ಕಡಿಮೆ ಮಳೆಯಿಂದಾಗಿ ಎಲ್ಲೆಡೆ ಪ್ರಾಣಿ, ಪಕ್ಷಿ, ಸಸ್ಯಗಳು, ಜೀವಸಂಕುಲಗಳು ಕುಡಿಯುವ ನೀರಿಗೆ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಬಿಸಿಲಿನ ಝಳದಿಂದ ಅಂತರ್ಜಲ ಮಟ್ಟವೂ ಪಾತಾಳಕ್ಕಿಳಿದಿದೆ. ಆದರೆ ಇಲ್ಲೊಬ್ಬರು ರೈತರು ಸರಕಾರಿ ಕೆರೆಯ ಹೂಳೆತ್ತಿ, ಕಾಡು ಪ್ರಾಣಿ – ಪಕ್ಷಿಗಳಿಗೆ ಬೇಸಗೆಯಲ್ಲಿ ದಾಹ ತಣಿಸುವ ಪುಣ್ಯದ ಕಾರ್ಯ ಮಾಡಿ ಪರಿಸರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಮೊಳಹಳ್ಳಿ ಗ್ರಾಮದ ಹೆಬ್ಗೋಳಿಯ ಪ್ರಗತಿಪರ ಕೃಷಿಕ ಪ್ರವೀಣ್ ಕುಲಾಲ್ ಅವರೇ ಜೆಸಿಬಿ ಮೂಲಕ ಸ್ವಂತ ಖರ್ಚಿನಲ್ಲಿ ಸರಕಾರಿ ಕೆರೆಯ ಹೂಳೆತ್ತಿ ಪ್ರಾಣಿ – ಪಕ್ಷಿಗಳಿಗೆ ನೀರುಣಿಸುವ ಪ್ರಯತ್ನ ಮಾಡಿದವರು. ಕೆರೆಯಲ್ಲೀಗ ಸಮೃದ್ಧವಾದ ನೀರು ತುಂಬಿಕೊಂಡಿದ್ದು, ಬಿಸಿಲಿನ ತಾಪಕ್ಕೆ ಬಳಲಿ ಬರುವ ಪ್ರಾಣಿ- ಪಕ್ಷಿಗಳಿಗೆ ವರದಾನವಾಗಿದೆ.
ಕಂಪೆನಿ ಕೆಲಸ ಬಿಟ್ಟು ಕೃಷಿ ಕಾಯಕ
ಬೆಂಗಳೂರಿನ ಖಾಸಗಿ ಕಂಪೆನಿ ಯಲ್ಲಿ 10 ವರ್ಷಗಳ ಕಾಲ ಕೆಲಸ ಮಾಡಿ ಕೊರೊನಾ ಸಮಯದಲ್ಲಿ ಅದನ್ನು ಬಿಟ್ಟು ಊರಿಗೆ ಬಂದ ಪ್ರವೀಣ್ ಕುಲಾಲ್ 4 ವರ್ಷಗಳಿಂದ ಊರಲ್ಲಿಯೇ ಇದ್ದು, ಹತ್ತಾರು ಬಗೆಯ ಕೃಷಿ ಮಾಡಿಕೊಂಡಿದ್ದಾರೆ. ತಕ್ಕಮಟ್ಟಿಗೆ ಉತ್ತಮ ಆದಾಯ ಗಳಿಸುತ್ತಿದ್ದೇನೆ. ಕೃಷಿಯಲ್ಲಿ ಇನ್ನಷ್ಟು ಪ್ರಯೋಗ ಮಾಡುವ ಕನಸಿದೆ ಎಂದವರು ಹೇಳಿಕೊಳ್ಳುತ್ತಾರೆ.
ಪ್ರವೀಣ್ ಕುಲಾಲ್ ಕೃಷಿ ತೋಟದ ಸ್ವಲ್ಪ ದೂರದಲ್ಲಿಯೇ ಇರುವ ಹತ್ತಾರು ಎಕರೆ ವಿಸ್ತೀರ್ಣದ ಈ ಕೆರೆ ಬಹಳ ವರ್ಷಗಳಿಂದಲೂ ಕಾಡಿನ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಿದೆ. ಕೆಲವು ವರ್ಷಗಳಿಂದ ಹೂಳು, ಗಿಡ ಗಂಟಿ ತುಂಬಿ ಮರೆಯಾಗುವ ಸ್ಥಿತಿಗೆ ತಲುಪಿತ್ತು.
7-8 ಅಡಿ ನೀರು ಸಂಗ್ರಹ
ಇದನ್ನು ಮನಗಂಡ ಪ್ರವೀಣ್ ಕಳೆದ ಮಾರ್ಚ್-ಎಪ್ರಿಲ್‌ನಲ್ಲಿ ಸುಮಾರು 15 ದಿನಗಳ ಕಾಲ ಜೆಸಿಬಿ ತಂದು ಹೂಳೆತ್ತಿದರು. ಆಗ ಅಧಿಕಾರಿಗಳು, ಕೆಲವರಿಂದ ವಿರೋಧ ಬಂದರೂ ಲೆಕ್ಕಿಸಲಿಲ್ಲ. ಈ ಬಾರಿ ಮಳೆ ಕಡಿಮೆ ಯಾದರೂ ಕೆರೆಯಲ್ಲಿ ಸುಮಾರು 2 ಎಕರೆ ಜಾಗದಲ್ಲಿ ನೀರು ತುಂಬಿಕೊಂಡಿದೆ. ಕೆಲವೆಡೆ 7-8 ಅಡಿಯಷ್ಟು ನೀರಿದೆ. ಇದು ಎರಡು ಕಾಡುಗಳ ಮಧ್ಯೆ ಇರುವ ಕೆರೆಯಾಗಿದ್ದು, ಆಚೆಯಿಂದ ಈಚೆಗೆ, ಈಚೆಗೆ ಆಚೆಗೆ ಹೋಗುವ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಅನುಕೂಲವಾಗಲಿದೆ.
ಮುಖ್ಯವಾಗಿ ಜಿಂಕೆ, ಕಡವೆ, ಹಂದಿ, ನವಿಲು, ಕಾಡುಕೋಣ, ಮೊಲ, ಚಿರತೆಗಳು ಬಂದು ನೀರು ಕುಡಿಯುತ್ತವೆ ಎನ್ನುತ್ತಾರೆ ಪ್ರವೀಣ್.
ಇಲ್ಲಿ ಬಂದು ಸಂಜೆ ಕುಳಿತುಕೊಂಡಾಗ ಪ್ರಾಣಿ, ಪಕ್ಷಿಗಳು ಬಂದು ನೀರು ಕುಡಿಯುವುದನ್ನು ನೋಡಿದಾಗ ನಾನು ಮಾಡಿದ ಕೆಲಸದ ಬಗ್ಗೆ ತೃಪ್ತಿಯಾಗುತ್ತದೆ. ಮುಂದಿನ ದಿನಗಳಲ್ಲಿ ಅವುಗಳಿಗಾಗಿ ಕೆರೆಯ ಸುತ್ತ ಹಣ್ಣಿನ ಗಿಡಗಳು, ಗೆಡ್ಡೆ, ಗೆಣಸು ನೆಡುವ ಬಗ್ಗೆ ಯೋಚನೆ ಹಾಕಿಕೊಂಡಿದ್ದೇನೆ. ಇದರಿಂದ ಕಾಡು ಪ್ರಾಣಿಗಳು ತೋಟಕ್ಕೆ ಬರದಂತೆಯೂ ತಡೆಯಬಹುದು. – ಪ್ರವೀಣ್ ಕುಲಾಲ್ ಹೆಬ್ಗೋಳಿ, ಪ್ರಗತಿಪರ ಕೃಷಿಕ
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.