ಯಕ್ಷಗಾನ ಮೇಳಗಳ ತಿರುಗಾಟ; ಕ್ಷೇತ್ರಗಳಲ್ಲೇ ಪ್ರದರ್ಶನಕ್ಕೆ ಒತ್ತು
Team Udayavani, Oct 31, 2020, 6:14 AM IST
ಸಾಂದರ್ಭಿಕ ಚಿತ್ರ
ಕುಂದಾಪುರ: ಕೋವಿಡ್ ಕಾರಣದಿಂದ ಧಾರ್ಮಿಕ ಕ್ಷೇತ್ರಗಳಿಂದ ಹೊರಡುವ ಯಕ್ಷಗಾನ ಮೇಳಗಳು ಈ ಬಾರಿ ತಿರುಗಾಟದ ಆರಂಭದ ದಿನಗಳಲ್ಲಿ ಕ್ಷೇತ್ರದಲ್ಲೇ ಸೇವೆ ಸಲ್ಲಿಸಲು ಆದ್ಯತೆ ನೀಡಿವೆ. ಕಟ್ಟುಪಾಡುಗಳು ಸಡಿಲಗೊಂಡ ಬಳಿಕ ಊರಿನೊಳಗೆ ತಿರುಗಾಡಲಿವೆ. ಆದರೆ ಕ್ಷೇತ್ರದ ಮೇಳಗಳಿಗೆ ಕೆಲವು ಧಾರ್ಮಿಕ ನಿಬಂಧನೆಗಳು ಇರುವುದರಿಂದ ಎಚ್ಚರಿಕೆಯ ಹೆಜ್ಜೆಯಿಡುತ್ತಿವೆ.
ಧರ್ಮಸ್ಥಳ: 30 ದಿನ ಕ್ಷೇತ್ರದಲ್ಲಿ ಆಟ
ಧರ್ಮಸ್ಥಳ ಮೇಳ ನ.19ರಿಂದ ತಿರುಗಾಟ ಆರಂಭಿಸಲಿದ್ದು ಯಕ್ಷ ಕಲಾವಿದರ ಅನುಕೂಲಕ್ಕಾಗಿ 30 ದಿನ ಕ್ಷೇತ್ರದಲ್ಲೇ ಸೇವೆಯಾಟ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಡಿಸೆಂಬರ್ ಬಳಿಕ ಸರಕಾರದ ಸೂಚನೆಯಂತೆ ತಿರುಗಾಟದ ವ್ಯವಸ್ಥೆಗೆ ಯೋಜನೆ ರೂಪಿಸಲಾಗುತ್ತಿದೆ.
ಕಟೀಲು: ಕ್ಷೇತ್ರದಿಂದ ಹೊರಗೆ
ಪ್ರದರ್ಶನಕ್ಕೆ ಚಿಂತನೆ ಕಟೀಲು 6 ಮೇಳಗಳ ತಿರುಗಾಟ ಡಿ. 9ರಂದು ಆರಂಭವಾಗಲಿದೆ. ಜಿಲ್ಲಾಡಳಿತದ ಅನುಮತಿ ಯಂತೆ ತಿರುಗಾಟ ನಡೆಯಲಿದೆ. ಕ್ಷೇತ್ರದಲ್ಲಿ ದೇವಿ ಮಹಾತೆ¾ ಪ್ರದರ್ಶನಕ್ಕೆ ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಸಮೀಪದ ಸ್ಥಳಗಳಲ್ಲಿ ನಿಯಮಾನುಸಾರ ಆರಂಭಿಕ ಪ್ರದರ್ಶನಗಳಿಗೆ ಮುತುವರ್ಜಿ ವಹಿಸ ಲಾಗುವುದು ಎಂದು ಕಟೀಲು ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಮಂದಾರ್ತಿ 5 ಮೇಳಗಳು ಈಗಾಗಲೇ ಮಳೆಗಾಲದ ಸೇವೆ ಆಟಗಳನ್ನು ಕ್ಷೇತ್ರದಲ್ಲಿ ನಡೆಸಲಾರಂಭಿಸಿವೆ. ಡಿಸೆಂಬರ್‌ನಲ್ಲಿ ತಿರುಗಾಟಕ್ಕೆ ತಾರಾನುಕೂಲ ನೋಡಿ ದಿನ ನಿಗದಿಯಾಗಲಿದ್ದು ಜಿಲ್ಲಾಡಳಿತದ ಮಾರ್ಗಸೂಚಿ, ಅನುಮತಿ ಪ್ರಕಾರ ತಿರುಗಾಟ ಹೊರಡಲಿದೆ. ಅಲ್ಲಿವರೆಗೆ ಕ್ಷೇತ್ರದಲ್ಲೇ ಸೇವೆಯಾಟ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಶೆಟ್ಟಿ ತಿಳಿಸಿದ್ದಾರೆ. 2048ನೆಯ ಇಸವಿಯವರೆಗೆ ಸೇವೆ ಬುಕಿಂಗ್ ಆಗಿದ್ದು 2008ರಲ್ಲಿ ಬುಕಿಂಗ್ ಮಾಡಿದವರಿಗೆ ಈ ವರ್ಷ ಅವಕಾಶ ದೊರೆಯುತ್ತಿದೆ.
ಮಾರಣಕಟ್ಟೆ
ಮಾರಣಕಟ್ಟೆ 3 ಮೇಳಗಳ ತಿರುಗಾಟ ನವಂಬರ್ ಕೊನೆಗೆ ಆರಂಭವಾಗಲಿದ್ದು ಒಂದು ತಿಂಗಳು ಕ್ಷೇತ್ರದಲ್ಲೇ ಸೇವೆಯಾಟ ನಡೆಯಲಿದೆ. 2035ರವರೆಗೆ ಯಕ್ಷಗಾನ ಸೇವೆ ಬುಕಿಂಗ್ ಆಗಿದ್ದು ಅನೇಕರು ಮನೆಯಲ್ಲೇ ಸೇವೆ ಆಗಬೇಕೆಂದು ಬಯಸುತ್ತಾರೆ.
ಡೇರೆ ಮೇಳ
ಪೆರ್ಡೂರು ಹಾಗೂ ಸಾಲಿಗ್ರಾಮ ಎರಡೇ ಡೇರೆ ಮೇಳಗಳಿದ್ದು ತಿರುಗಾಟದ ತೀರ್ಮಾನವಾಗಿಲ್ಲ. ಡಿಸೆಂಬರ್ ಕೊನೆ ಅಥವಾ ಜನವರಿಯಲ್ಲಿ ತಿರುಗಾಟ ಆರಂಭಿಸುವ ಸಾಧ್ಯತೆಯಿದೆ. ಸೌಕೂರು ಮೇಳದ ತಿರುಗಾಟ ಡಿ.18ಕ್ಕೆ ಆರಂಭವಾಗಲಿದೆ. 20 ಕಟ್ಟುಕಟ್ಟಳೆ ಆಟಗಳು ಮಾರ್ಗಸೂಚಿ ಪ್ರಕಾರ ನಡೆಯಲಿದೆ.
ಮಾರ್ಗಸೂಚಿಯ ನಿರೀಕ್ಷೆ
ಬಹುತೇಕ ಮೇಳಗಳು ತಿರುಗಾಟ ದಿನವನ್ನು ನಿಶ್ಚಯಸಿದ್ದು ಜಿಲ್ಲಾಡಳಿತದ ಮಾರ್ಗಸೂಚಿಯನ್ನು ನಿರೀಕ್ಷಿಸುತ್ತಿವೆ. ಯಕ್ಷಗಾನ ಕಲಾವಿದರಿಗೆ ತಿರುಗಾಟಕ್ಕೆ ಮುನ್ನ ಹಾಗೂ ಆರಂಭದ ಬಳಿಕ ಪ್ರತಿ 3 ದಿನಕ್ಕೊಮ್ಮೆ ಉಚಿತ ಕೊರೊನಾ ಪರೀಕ್ಷೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಘೋಷಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ಪರಿಸ್ಥಿತಿ ಯಾವ ರೀತಿ ಇರಲಿದೆ ಎನ್ನುವುದರ ಮೇಲೆ ಮೇಳಗಳ ಮುಂದಿನ ತಿರುಗಾಟದ ಸ್ಪಷ್ಟಚಿತ್ರಣ ದೊರೆಯಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.