Ajekar: ಎಷ್ಟು ದಿನ ಟವರ್ ನೋಡ್ಕೊಂಡಿರ್ಲಿ, ನಮ್ಗೆ ಬೇಗನೆ ಕನೆಕ್ಷನ್ ಕೊಡಿ ಸ್ವಾಮಿ!
ನೆಟ್‌ವರ್ಕ್ ಇಲ್ಲದೆ ಹೈರಾಣಾದ ಗ್ರಾಮಸ್ಥರ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ
Team Udayavani, Jan 12, 2025, 2:44 PM IST
ಅಜೆಕಾರು: ಆ ಊರಿನ ಜನರು ಕೊರೊನಾ ಸಂದರ್ಭದಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಭಾರಿ ಪರದಾಟ ನಡೆಸಿದ್ದರು. ಆನ್‌ಲೈನ್ ಶಿಕ್ಷಣ ಘೋಷಣೆಯಾದಾಗ ಮಕ್ಕಳಿಗೆ ಮನೆಯಲ್ಲಿ ಮೊಬೈಲ್ ಕನೆಕ್ಟ್ ಆಗುತ್ತಿರಲಿಲ್ಲ. ಅವರು ಐದು ಕಿ.ಮೀ. ನಡೆದು ಬೆಟ್ಟ ಹತ್ತಿ ಅಲ್ಲಿ ಮರ ಹತ್ತಿದಾಗ ಒಂದೊಂದು ಕುಟ್ಟಿಗಾಗಿ ಪ್ರಯತ್ನಿಸಬೇಕಾಗಿತ್ತು. ಇದರಿಂದ ನೊಂದ ಜನರು ನಮ್ಮೂರಿಗೆ ಟವರ್ ಬೇಕೇ ಬೇಕು, ನೆಟ್ವರ್ಕ್ ಸಿಗುವಂತಾಗಬೇಕು ಎಂದು ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆಯನ್ನೇ ನಡೆಸಿದ್ದರು.
ಇದೆಲ್ಲ ನಡೆದು ನಾಲ್ಕು ವರ್ಷ ಆಗಿದೆ. ನಿಜವೆಂದರೆ, ಅವರ ಬೇಡಿಕೆಯಂತೆ ಮೊಬೈಲ್ ಟವರ್ ನಿರ್ಮಾಣವಾಗಿಯೇ ಬಿಟ್ಟಿದೆ. ಆದರೆ, ಅವರು ಗುಡ್ಡ ಹತ್ತುವುದು ಮಾತ್ರ ನಿಂತಿಲ್ಲ. ಯಾಕೆಂದರೆ, ಬಿಎಸ್‌ಎನ್‌ಎಲ್ ನಿರ್ಮಿಸಿದ ಟವರ್‌ಗೆ ಇನ್ನೂ ಕನೆಕ್ಷನೇ ಆಗಿಲ್ಲ!
ಇದು ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಟ್ಲುಪಾಡಿ ಗ್ರಾಮದ ಕಥೆ. ಹಲವು ವರ್ಷಗಳ ಹೋರಾಟದ ಬಳಿಕ ಕೊನೆಗೂ ಸರಕಾರಿ ಸಾಮ್ಯದ ಬಿಎಸ್ ಎನ್ ಎಲ್ ಮೊಬೈಲ್ ಟವರ್ ತರಿಸಿಕೊಳ್ಳುವಲ್ಲಿ ಅವರೇನೋ ಸಮರ್ಥರಾದರು. ಆದರೆ, ಬರೀ ಟವರನ್ನು ಎಷ್ಟು ದಿನಾಂತ ನೋಡಿಕೊಂಡಿರಬೇಕು, ಬೇಗನೆ ಕನೆಕ್ಷನ್ ಕೊಡಿಸಿ ಎಂದು ಅಂಗಲಾಚುವ ಸ್ಥಿತಿಯಲ್ಲಿ ಅವರಿದ್ದಾರೆ.
ಮುಟ್ಲುಪಾಡಿ ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡುವಂತೆ ಕಳೆದ 10 ವರ್ಷಗಳಿಂದ ಗ್ರಾಮಸ್ಥರು ನಿರಂತರ ಮನವಿ ಮಾಡಿದ್ದರೂ ಆಡಳಿತ ವ್ಯವಸ್ಥೆ ಸ್ಪಂದಿಸಿರಲಿಲ್ಲ. ಕೊರೊನಾ ಸಂದರ್ಭ ಈ ಭಾಗದ ವಿದ್ಯಾರ್ಥಿಗಳು ಗ್ರಾಮದಿಂದ ಸುಮಾರು 5ಕಿ.ಮೀ ದೂರದ ಬೋರ್ಗಲ್ ಕುಂಜ ಎಂಬ ಬೆಟ್ಟ ಏರಿ ನೆಟ್ವರ್ಕ್ ಆಧಾರಿತ ಆನ್‌ಲೈನ್ ಶಿಕ್ಷಣ ಪಡೆಯುವಂತಾಗಿತ್ತು. ದಟ್ಟಾರಣ್ಯದ ಬೆಟ್ಟದ ಮೇಲೆಯೇ ಒಂದು ಟೆಂಟ್ ನಿರ್ಮಾಣ ಮಾಡಿ ಗ್ರಾಮದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವ ಸ್ಥಿತಿ ನಿರ್ಮಾಣವಾಗಿತ್ತು ಇದರಿಂದ ಮನನೊಂದ ಗ್ರಾಮಸ್ಥರು ಟವರ್ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆಯ ದಾರಿ ಹಿಡಿದಿದ್ದರು. ಕೊನೆಗೂ ಗ್ರಾಮಸ್ಥರ ಆಗ್ರಹಕ್ಕೆ ಮಣಿದು ಬಿಎಸ್‌ಎನ್ ಎಲ್ ಮೊಬೈಲ್ ಟವರ್ ನಿರ್ಮಾಣ ಆಗಿದೆ. ಆದರೆ ಕನೆಕ್ಷನ್ ಆಗದೆ ನೆಟ್ ವರ್ಕ್ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಯಾವುದೇ ಕೆಲಸ ಆಗುತ್ತಿಲ್ಲ
ಈಗ ಸರಕಾರದ ಯೋಜನೆಗಳು, ವೈಯಕ್ತಿಕ ಸಂಪರ್ಕಗಳೆಲ್ಲವೂ ನಡೆಯುವುದು ಮೊಬೈಲ್ ಮೂಲಕವೇ. ಆದರೆ, ನೆಟ್ವರ್ಕ್ ಇಲ್ಲದೆ ಎಲ್ಲವೂ ಸಮಸ್ಯೆಗೆ ಸಿಲುಕಿದೆ. ಆನ್‌ಲೈನ್ ಬ್ಯಾಕಿಂಗ್, ಆನ್‌ಲೈನ್ ಶಿಕ್ಷಣ, ವರ್ಕ್ ಫ್ರಂ ಹೋಮ್ ಹೀಗೆ ಹಲವು ಸೌಲಭ್ಯಗಳಿಂದ ಮುಟ್ಲುಪಾಡಿ ಜನತೆ ವಂಚಿತರಾಗಿದ್ದಾರೆ.
5 ಕಿ.ಮೀ. ದೂರ ಹೋಗಬೇಕು
ಗ್ರಾಮದಲ್ಲಿ ಸುಮಾರು 200 ಮನೆಗಳಿದ್ದು ಸುಮಾರು 1100 ಜನಸಂಖ್ಯೆ ಇದೆ. ಮುಟ್ಲುಪಾಡಿ ನಾಗರಿಕರು ನೆಟ್‌ವರ್ಕ್ ಅವಶ್ಯಕತೆಯಿದ್ದಲ್ಲಿ ಸದ್ಯ ಸುಮಾರು 5 ಕಿ,ಮೀ ದೂರದ ಮುನಿಯಾಲಿಗೆ ಬರಬೇಕಾಗಿದೆ. 10 ವರ್ಷಗಳಿಂದ ಅವರು ಮೊಬೈಲನ್ನು ಕೈಯಲ್ಲಿ ಎತ್ತಿ ಹಿಡಿದೇ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.
ನಿಮ್ಮೂರಲ್ಲೂ ನೆಟ್ವರ್ಕ್ ಸಮಸ್ಯೆಯೇ?
ನೀವೂ ನೆಟ್‌ವರ್ಕ್ ಇಲ್ಲದೆ ಸಮಸ್ಯೆ ಎದು ರಿಸುತ್ತಿದ್ದೀರಾ? ಕರೆ ಮಾಡಲೆಂದು ಎಲ್ಲೆಂದರಲ್ಲಿ ಅಲೆಯಬೇಕಾದ ಪರಿಸ್ಥಿತಿ ಇದೆಯೇ? ಅಂಥವುಗಳನ್ನು ಕನ್ನಡದಲ್ಲಿ ಟೈಪ್ ಮಾಡಿ ವಾಟ್ಸ್ಯಾಪ್ ನಂಬರ್ 6362906071ಗೆ ಹೆಸರು, ಊರು ನಮೂದಿಸಿ ಕಳುಹಿಸಿ.
-ಜಗದೀಶ್ ಅಂಡಾರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.