![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Jul 31, 2022, 7:30 AM IST
ಕುಂದಾಪುರ: ಕಾಮನ್ವೆಲ್ತ್ ಗೇಮ್ಸ್‌ನ 61 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಕುಂದಾಪುರದ ಗುರುರಾಜ್ ಪೂಜಾರಿ, ಈ ಸಂತಸವನ್ನು ಮೊದಲು ಹಂಚಿಕೊಂಡಿದ್ದು ಇಂಗ್ಲೆಂಡ್‌ನಿಂದ 7,350 ಕಿ.ಮೀ. ದೂರದಲ್ಲಿರುವ ಅಮ್ಮನೊಂದಿಗೆ!
ಹೌದು, ಪಂದ್ಯಾವಳಿಯ ಅಂತಿಮ ಸುತ್ತು ಮುಗಿದು, ಪ್ರಶಸ್ತಿ ವಿಜೇತರ ಘೋಷಣೆಯಾಗಿ, ಇನ್ನೇನು ಪದಕಕ್ಕೆ
ಕೊರಳೊಡ್ಡಬೇಕು ಎನ್ನುವ ಮೊದಲು ಕುಂದಾಪುರದ ವಂಡ್ಸೆ ಸಮೀಪದ ಚಿತ್ತೂರಿನ ತಮ್ಮ ಮನೆಯಲ್ಲಿರುವ ಅಮ್ಮ ಪದ್ದು ಪೂಜಾರ್ತಿಯವರಿಗೆ ವಾಟ್ಸ್ ಆ್ಯಪ್ ಕರೆ ಮಾಡಿದ ಗುರುರಾಜ್, ಕಠಿನ ಸವಾಲಿನ ನಡುವೆ ಪದಕ ಗೆದ್ದೆ… ಈಗ ಪದಕ ನೀಡುತ್ತಾರೆ ಟಿವಿಯಲ್ಲಿ ನೋಡಿ ಎನ್ನುವುದಾಗಿ ಹೇಳಿ, ತಂದೆ ಹಾಗೂ ಅಣ್ಣಂದಿರು ಹಾಗೂ ಮನೆಯವರೆಲ್ಲರೊಂದಿಗೆ ಮಾತನಾಡಿ, ಖುಷಿ ಹಂಚಿಕೊಂಡಿದ್ದಾರೆ.
ಕಾಡಿದ ಅನಾರೋಗ್ಯ
ಕಳೆದ ತಿಂಗಳು ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದ ಗುರುರಾಜ್‌ಗೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದೇ ಸವಾಲಾಗಿತ್ತು. 10 ದಿನಗಳ ಹಿಂದೆ ಜ್ವರ, ಕಾಲು, ಕೈ ನೋವು ಹೀಗೆ ಸಾಲು – ಸಾಲು ಅನಾರೋಗ್ಯ ಕಾಡಿತ್ತು. 4 ಕೆಜಿ ಇಳಿಸುವುದು ಸಹ ಸವಾಲಾಗಿತ್ತು. ಈ ದಿನ ಬೆಳಗ್ಗೆ 61 ಕೆಜಿಗೆ ಭಾರ ಇಳಿದದ್ದು, ಸಮಾಧಾನಕರ ಸಂಗತಿ. ಸ್ಪರ್ಧೆಯ ವೇಳೆಯೂ ಕೈ ನೋವು ಕಾಡಿದ್ದು, ಇದು ಸಹ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿ ಪರಿಣಮಿಸಿತ್ತು. ಇಲ್ಲದಿದ್ದರೆ ರಜತ ಪದಕ ಗೆಲ್ಲುವ ಸಾಧ್ಯತೆಯಿತ್ತು.
ಮಧ್ಯಾಹ್ನದಿಂದಲೇ ಟಿವಿ ಮುಂದೆ..
ಅತ್ತ ಗುರುರಾಜ್ ಪದಕ ಗೆಲ್ಲಲು ಅಣಿಯಾಗುತ್ತಿದ್ದರೆ, ಇತ್ತ ಚಿತ್ತೂರಿನ ಮನೆಯಲ್ಲಿ ತಂದೆ- ತಾಯಿ, ಮನೆಯವರೆಲ್ಲರೂ ಟಿವಿ ಮುಂದೆ ಕುಳಿತುಬಿಟ್ಟಿದ್ದರು. ಪದಕದ ನಿರೀಕ್ಷೆಯೊಂದಿಗೆ ಮನೆ ಯವರೆಲ್ಲರೂ ತದೇಕಚಿತ್ತದಿಂದ ವೀಕ್ಷಿಸಿದರು. ಕೊನೆಗೂ ಕಂಚಿನ ಪದಕಕ್ಕೆ ಕೊರಳೊಡ್ಡುತ್ತಿದ್ದಂತೆ ಮನೆಯಲ್ಲಿ ಹಬ್ಬದ ವಾತಾವರಣವೇ ಮನೆ ಮಾಡಿತ್ತು ಎನ್ನುವುದಾಗಿ ಅಣ್ಣ ಮನೋಹರ್ “ಉದಯವಾಣಿ’ ಜತೆ ಸಂಭ್ರಮ ಹಂಚಿಕೊಂಡಿದ್ದಾರೆ.
ಬಡತನದಲ್ಲಿ ಅರಳಿದ ಪ್ರತಿಭೆ
ವಂಡ್ಸೆ ಸಮೀಪದ ಚಿತ್ತೂರಿನಲ್ಲಿ ಹಿಂದೆ ಚಾಲಕರಾಗಿದ್ದ ಮಹಾಬಲ ಪೂಜಾರಿ ಹಾಗೂ ಪದ್ದು ಪೂಜಾರಿ ದಂಪತಿ ಪುತ್ರನಾಗಿರುವ ಗುರು ರಾಜ್ ಪ್ರಸ್ತುತ ವಾಯುಸೇನೆಯ ಉದ್ಯೋಗಿ ಯಾಗಿದ್ದಾರೆ. ಕಡು ಬಡತನ ದಲ್ಲಿ ಬೆಳೆದು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿ ಬೆಳೆಯುವಲ್ಲಿ ಗುರುರಾಜ್ ಸವೆಸಿದ ಹಾದಿ ಕಠಿನವಾಗಿತ್ತು.
ಆ. 5ಕ್ಕೆ ತವರಿಗೆ
ಆ. 5ರಂದು ಭಾರತಕ್ಕೆ ಗುರುರಾಜ್ ತಂಡ ಆಗಮಿಸಲಿದ್ದು, ಅಲ್ಲಿಂದ ವಾಯಸೇನೆ ಶಿಬಿರಕ್ಕೆ ತೆರಳಲಿದ್ದಾರೆ. ಚಿತ್ತೂರಿನ ತಮ್ಮ ಮನೆಗೆ ಬಾರದೇ ಸರಿ ಸುಮಾರು 10 ತಿಂಗಳುಗಳೇ ಕಳೆದಿದ್ದು, ಆಗಸ್ಟ್ ಎರಡನೇ ವಾರದಲ್ಲಿ ಹುಟ್ಟೂರಿಗೆ ಬರುವುದಾಗಿ ಹೇಳಿಕೊಂಡಿದ್ದಾರೆ.
ಪದಕ ಪತ್ನಿಗೆ ಅರ್ಪಣೆ
“ಉದಯವಾಣಿ’ ಜತೆ ಮಾತನಾಡಿದ ಗುರುರಾಜ್, “ನಿಮ್ಮೆಲ್ಲರ ಹಾರೈಕೆ ಫಲಿಸಿತು. 10 ದಿನದ ಹಿಂದೆ ಆರೋಗ್ಯ ಸಮಸ್ಯೆಯಾಗಿದ್ದರೂ ನಿರಂತರ ಪ್ರಯತ್ನದಿಂದ ಪದಕ ಗೆಲ್ಲಲು ಯಶಸ್ವಿಯಾದೆ. 61 ಕೆಜಿ ವಿಭಾಗದಲ್ಲಿ ದೇಶಕ್ಕಿದು ಮೊದಲ ಪದಕ. ಈ ಬಗ್ಗೆ ಹೆಮ್ಮೆ ಹಾಗೂ ಖುಷಿಯಿದೆ. ಮದುವೆಯಾದ ಬಳಿಕ ಗೆದ್ದ ಮೊದಲ ಪದಕ ಇದಾಗಿದ್ದು, ಪತ್ನಿ ಸೌಜನ್ಯಾಗೆ ಅರ್ಪಿಸುತ್ತೇನೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.
ಹುಟ್ಟೂರಲ್ಲಿ ಸಂಭ್ರಮಾಚರಣೆ
ಕುಂದಾಪುರ: ಗುರುರಾಜ್ ಪೂಜಾರಿ ಪದಕ ಗೆಲ್ಲುತ್ತಿದ್ದಂತೆ ಕುಂದಾಪುರದಾದ್ಯಂತ ಸಂಭ್ರಮ ಮನೆ ಮಾಡಿತ್ತು. ಚಿತ್ತೂರಿನ ಮನೆಯಲ್ಲಿ ತಂದೆ ತಾಯಿ, ಮನೆಯವರೆಲ್ಲರೂ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂತಸಪಟ್ಟರು. ವಂಡ್ಸೆ ಪೇಟೆಯಲ್ಲಿಯೂ ವಾಹನ ಚಾಲಕರು, ವರ್ತಕರು, ಊರವರು ಪಟಾಕಿ ಸಿಡಿಸಿ, ಸಿಹಿ ಹಂಚಿ ತಮ್ಮೂರಿನ ಹುಡುಗನ ಸಾಧನೆಯನ್ನು ಸಂಭ್ರಮಿಸಿದರು.
ಊರಿಗೆ ಬಂದಾಗ ಕುಂದಾಪುರದ ಸತೀಶ್ ಖಾರ್ವಿ ಅವರ ನ್ಯೂ ಹಕ್ಯುìಲಸ್ ಜಿಮ್‌ನಲ್ಲಿ ನಿತ್ಯವೂ ವಕೌìಟ್‌ಗೆ ಬರುತ್ತಿದ್ದು, ಇಲ್ಲಿಯೂ ಪದಕ ಗೆಲ್ಲುತ್ತಿದ್ದಂತೆ ಜಿಮ್‌ನಲ್ಲಿದ್ದವರೆಲ್ಲರೂ ಸಂತಸಪಟ್ಟರು.
ಪದಕದ ರೂಪದಲ್ಲಿ ಪ್ರಸಾದ..
“ಉದಯವಾಣಿ’ ಜತೆ ಸಂತಸ ಹಂಚಿಕೊಂಡ ಗುರುರಾಜ್ ತಂದೆ ಮಹಾಬಲ ಪೂಜಾರಿ, ನಿನ್ನೆಯಷ್ಟೇ ಮಾರಣಕಟ್ಟೆ ದೇವರಿಗೆ ನಾನು, ಪತ್ನಿ ಹೋಗಿ ಬಂದು ಪ್ರಾರ್ಥಿಸಿಕೊಂಡಿದ್ದೆವು. ಇಂದು ಮನೆಯವರು ಮತ್ತೆ ಬೆಳಗ್ಗೆ ಹೋಗಿ ಸೇವೆ ಮಾಡಿಸಿದ್ದೆವು. ಇವತ್ತು ದೇವರು ಪದಕ ರೂಪದಲ್ಲಿ ಪ್ರಸಾದವನ್ನೇ ನೀಡಿದ್ದಾರೆ. ಗೆದ್ದ ತತ್‌ಕ್ಷಣ ಕರೆ ಮಾಡಿದ್ದ ಎಂದವರು ಹೇಳಿಕೊಂಡಿದ್ದಾರೆ.
ನಿತ್ಯ ಕರೆ ಮಾಡುತ್ತಿದ್ದ
ಇಂಗ್ಲೆಂಡ್‌ಗೆ ತೆರಳಿದ ಅನಂತರವೂ ನಿತ್ಯವೂ ಕರೆ ಮಾಡಿ ಮಾತಾಡುತ್ತಿದ್ದ. ಪದಕ ಗೆದ್ದ ಕೂಡಲೇ ಕರೆ ಮಾಡಿ, ಟಿವಿ ನೋಡಿ, ಪದಕ ಕೊಡುತ್ತಾರೆ ಈಗ ಎಂದು ಖುಷಿಯಲ್ಲಿ ಹೇಳಿದ್ದ. ಮಧ್ಯಾಹ್ನದಿಂದ ಟಿವಿ ಮುಂದೆ ಕುಳಿತವರು ಎದ್ದೇ ಇಲ್ಲ. ತುಂಬಾ ಖುಷಿಯಾಗುತ್ತಿದೆ.
– ಪದ್ದು ಪೂಜಾರ್ತಿ, ಗುರುರಾಜ್ ತಾಯಿ.
-ಪ್ರಶಾಂತ್ ಪಾದೆ
You seem to have an Ad Blocker on.
To continue reading, please turn it off or whitelist Udayavani.