ಒಂದೇ ಕೊಠಡಿಯಲ್ಲಿ ಅಂಗನವಾಡಿ, ಎಲ್‌ಕೆಜಿ!
Team Udayavani, Nov 24, 2022, 11:53 AM IST
ಗಂಗೊಳ್ಳಿ: ಪುಟ್ಟಪುಟ್ಟ ಮಕ್ಕಳ ಕಲರವದ ಜತೆಗೆ ಸ್ವಲ್ಪ ದೊಡ್ಡ ಮಕ್ಕಳ ಶಿಸ್ತಿನ ಓದು. ಪುಟ್ಟ ಮಕ್ಕಳು ಆಟ, ತಮಾಷೆಯಲ್ಲಿ ಲೀನರಾದರೆ ಸ್ವಲ್ಪ ದೊಡ್ಡ ಮಕ್ಕಳು ಓದಿನಲ್ಲಿ ತಲ್ಲೀನ. ಪುಟ್ಟ ಮಕ್ಕಳು ಕನ್ನಡದ ಕಂದಮ್ಮಗಳಂತೆ ತೊದಲು ನುಡಿಯಾಡುತ್ತಿದ್ದರೆ ಅದಕ್ಕಿಂತ ಒಂದು ವರ್ಷ ಹೆಚ್ಚಿನವು ಇಂಗ್ಲಿಷ್ ಎಬಿಸಿಡಿಯಲ್ಲಿ ಉರು ಹೊಡೆಯುತ್ತಿರುವುದು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗುಡ್ಡೆಕೇರಿ ಎಂಬಲ್ಲಿ ಅಂಜುಮಾನ್ ಉರ್ದು ಘೋಷಾ ಶಾಲೆಯಲ್ಲಿ. ಒಂದು ಕೊಠಡಿಯಲ್ಲಿ 44 ಮಕ್ಕಳಿದ್ದು ಅತ್ತ ಎಲ್‌ಕೆಜಿಯವರಿಗೆ ಹೇಳಿದ್ದನ್ನು ಕೇಳಬೇಕಾ ಎಂದು ಅಂಗನವಾಡಿಯವರೂ, ಇತ್ತ ಅಂಗನವಾಡಿಯವರಿಗೆ ಹೇಳಿದ್ದನ್ನು ಕೇಳಿಸಿಕೊಳ್ಳಬೇಕಾ ಎಂದು ಎಲ್‌ಕೆಜಿಯವರೂ ತಲೆ ಕೆಡಿಸಿಕೊಳ್ಳುವಂತಾಗಿದೆ.
ಮಂಜೂರು
ಇಲ್ಲಿ ಅಂಗನವಾಡಿ ಮತ್ತು ಎಲ್‌ಕೆಜಿ ತರಗತಿಗಳನ್ನು ಒಂದೇ ತರಗತಿ ಕೋಣೆಯಲ್ಲಿ ನಡೆಸಲಾಗುತ್ತಿದೆ. ಗಂಗೊಳ್ಳಿಯಲ್ಲಿ ಹೆಚ್ಚುವರಿ ಅಂಗನವಾಡಿ ಕೇಂದ್ರಗಳಿಗೆ ಬೇಡಿಕೆ ಇದ್ದ ಹಿನ್ನೆಲೆಯಲ್ಲಿ ಸರಕಾರ ಗುಡ್ಡೆಕೇರಿ ಎಂಬಲ್ಲಿ ಅಂಜುಮಾನ್ ಉರ್ದು ಘೋಷಾ ಶಾಲೆಯ ಕಟ್ಟಡದಲ್ಲಿ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2016ರ ಅ. 2ರಂದು ಅಂಗನವಾಡಿ ಕೇಂದ್ರವನ್ನು ಆರಂಭಿಸಿತ್ತು. ಆರಂಭಿಸಿದ ಮೂರ್‍ನಾಲ್ಕು ವರ್ಷ ಸಸೂತ್ರವಾಗಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರದಲ್ಲಿ ಇದೀಗ ಎಲ್‌ಕೆಜಿ ತರಗತಿಗಳನ್ನೂ ನಡೆಸಲಾಗುತ್ತಿದೆ. ಹೆಚ್ಚುತ್ತಿರುವ ಮಕ್ಕಳು
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಪ್ರತೀ ವರ್ಷ ಹೆಚ್ಚಾಗುತ್ತಿದ್ದು, ತರಗತಿ ಕೋಣೆಗಳ ಕೊರತೆ ಎದುರಾಗಿದೆ. ಹೀಗಾಗಿ ಶಾಲೆಯಲ್ಲಿ ಅಂಗನವಾಡಿ ಕೇಂದ್ರಕ್ಕೆ ನೀಡಲಾಗಿರುವ ತರಗತಿ ಕೊಠಡಿಯ ಒಂದೇ ಕೋಣೆಯಲ್ಲಿ ಅಂಗನವಾಡಿ ಮತ್ತು ಎಲ್‌ಕೆಜಿ ತರಗತಿಗಳನ್ನು ನಡೆಸುವ ಪ್ರಸಂಗ ಎದುರಾಗಿದೆ.
ಒಂದೇ ಕೋಣೆ
ಒಂದೇ ಕೊಠಡಿಯಲ್ಲಿ ಅಂಗನವಾಡಿ ಮತ್ತು ಎಲ್‌ಕೆಜಿ ತರಗತಿಗಳನ್ನು ನಡೆಸುತ್ತಿರುವುದರಿಂದ ಅಂಗನವಾಡಿ ಮಕ್ಕಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಪ್ರಸ್ತುತ ಅಂಗನವಾಡಿಯಲ್ಲಿ 13 ಮಕ್ಕಳು ಮತ್ತು ಎಲ್ ಕೆಜಿಯಲ್ಲಿ 33 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದೇ ಕೊಠಡಿಯಲ್ಲಿ ಎರಡೆರಡು ತರಗತಿಗಳು ನಡೆಯುತ್ತಿರುವುದರಿಂದ ಅಂಗನವಾಡಿ ಮಕ್ಕಳನ್ನು ಸರಿಯಾದ ರೀತಿಯಲ್ಲಿ ನೋಡಿಕೊಳ್ಳಲು ಮತ್ತು ಮಕ್ಕಳಿಗೆ ಸರಿಯಾಗಿ ಕಲಿಸಲು ಕಷ್ಟವಾಗುತ್ತಿದೆ ಎಂಬ ಅಳಲು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರದ್ದು.
ಸ್ಪಂದನೆ ಇಲ್ಲ
ಶಾಲೆಯಲ್ಲಿ ತರಗತಿ ಕೋಣೆಗಳ ಕೊರತೆ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸುವಂತೆ ಶಾಲಾ ಆಡಳಿತ ಮಂಡಳಿ ಬೇಡಿಕೆ ಇಟ್ಟಿದ್ದು, ಶಾಲಾ ವಠಾರದಲ್ಲಿ ಇಲಾಖೆ ವತಿಯಿಂದ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ನೀಡುವಂತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಡಿದ ಮನವಿಗೆ ಶಾಲಾ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಒಂದೇ ಕೋಣೆಯಲ್ಲಿ ಅಂಗನವಾಡಿ ಮತ್ತು ಎಲ್‌ಕೆಜಿ ತರಗತಿಗಳನ್ನು ನಡೆಸುತ್ತಿರುವುದು ಸಮಸ್ಯೆಗೆ ಕಾರಣವಾಗಿದ್ದು, ಪುಟ್ಟ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಡಕುಂಟಾಗುವ ಸಾಧ್ಯತೆ ಇದೆ. ಹೀಗಾಗಿ ಈ ಸಮಸ್ಯೆಯನ್ನು ಬಗೆಹರಿಸಲು ಸಂಬಂಧಪಟ್ಟ ಇಲಾಖೆ ಅ ಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸ್ಥಗಿತ
ಕಳೆದ ಸುಮಾರು 2 ವರ್ಷಗಳ ಹಿಂದೆ ಅಂಗನವಾಡಿಗೆ ದಾಖಲಾದ ಮಕ್ಕಳನ್ನು ಎಲ್‌ಕೆಜಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದ್ದು, ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಪೌಷ್ಟಿಕ ಆಹಾರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಎಲ್‌ಕೆಜಿ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ವಿಚಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ಈ ವ್ಯವಸ್ಥೆ ಸ್ಥಗಿತಗೊಂಡಿತ್ತು.
ಆಡಳಿತ ಮಂಡಳಿ ಒಪ್ಪಿಲ್ಲ: ಗಂಗೊಳ್ಳಿಯ ಗುಡ್ಡೆಕೇರಿ ಪ್ರದೇಶದಲ್ಲಿ ಕಳೆದ ಆರು ವರ್ಷಗಳ ಹಿಂದೆ ಸ್ಥಳೀಯರ ಬೇಡಿಕೆ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಅಂಗನವಾಡಿ ಕೇಂದ್ರಕ್ಕೆ ನೀಡಲಾಗಿರುವ ಕೊಠಡಿಯಲ್ಲಿ ಎಲ್‌ಕೆಜಿ ತರಗತಿಗಳನ್ನು ನಡೆಸಲಾಗುತ್ತಿದೆ. ಇದರಿಂದ ಅಂಗನವಾಡಿ ಮಕ್ಕಳಿಗೆ ಸಮಸ್ಯೆಯಾಗುತ್ತಿದ್ದು, ಬೇರೆ ಕೊಠಡಿ ನೀಡಿ ಎಂಬ ಬೇಡಿಕೆಗೆ ಶಾಲಾ ಆಡಳಿತ ಮಂಡಳಿ ಒಪ್ಪಿಲ್ಲ. ಹೀಗಾಗಿ ಬಹಳ ಸಮಸ್ಯೆಯಾಗುತ್ತಿದೆ. –ಫಿಲೋಮಿನಾ ಫೆರ್ನಾಂಡಿಸ್ ಜಿಲ್ಲಾಧ್ಯಕ್ಷರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ
ಪ್ರತ್ಯೇಕ ಕೊಠಡಿ ಕೇಳಲಾಗಿದೆ: ಗಂಗೊಳ್ಳಿಯ ಗುಡ್ಡೆಕೇರಿ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ತರಗತಿಗಳನ್ನು ನಡೆಸುತ್ತಿರುವುದು ಗಮನಕ್ಕೆ ಬಂದಿದ್ದು, ಅಂಗನವಾಡಿಗೆ ಪ್ರತ್ಯೇಕ ಕೊಠಡಿ ಅಥವಾ ಶಾಲಾ ವಠಾರದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಸ್ಥಳಾವಕಾಶ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. -ಶ್ವೇತಾ ಎನ್., ಸಿಡಿಪಿಒ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.