ಎಪಿಎಲ್‌ಗೂ ಪಡಿತರ: ಕೇಂದ್ರ ಸರಕಾರದಿಂದ ಅಕ್ಕಿ , ಬೇಳೆ
Team Udayavani, May 1, 2020, 5:22 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ರಾಜ್ಯ ಸರಕಾರದ ಪಡಿತರದ ಜತೆಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ವತಿಯಿಂದಲೂ ಪಡಿತರ ಸಾಮಗ್ರಿ ದೊರೆಯಲಿದೆ.
ಮೇ ಮೊದಲ ವಾರದಿಂದ ವಿತರಣೆ ಆರಂಭವಾಗಲಿದ್ದು ಎಪ್ರಿಲ್ ತಿಂಗಳಲ್ಲಿ ರಾಜ್ಯ ಸರಕಾರದ ವತಿಯಿಂದ ನೀಡಿದ ಪಡಿತರವನ್ನು ವಿತರಿಸಲಾಗಿದೆ.
ಎ.27ರವರೆಗೆ ಪಡಿತರ ವಿತರಣೆ ಎಂದಿದ್ದರೂ ಎ.30ರವರೆಗೂ ಪಡೆಯಲು ಅವಕಾಶ ನೀಡಲಾಗಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಶೇ. 99ರಷ್ಟು ಮಂದಿಗೆ ವಿತರಣೆ ಮಾಡಲಾಗಿದೆ. ಇನ್ನುಳಿದವರು ಆದಾಯ ಮಿತಿಗಿಂತ ಹೆಚ್ಚಿದ್ದರೂ ಬಿಪಿಎಲ್ ಪಡಿತರ ಚೀಟಿ ಹೊಂದಿದವರಾಗಿದ್ದಾರೆ. ಎಪ್ರಿಲ್ ಕೊನೆಯವರೆಗೆ ಇವರಿಗೆ ಪಡಿತರ ಚೀಟಿ ಒಪ್ಪಿಸಲು ಅವಕಾಶ ಇದ್ದರೂ ಮಾ.24ರಿಂದ ಲಾಕ್‌ಡೌನ್ ಆರಂಭವಾದ ಕಾರಣ ಸಾಧ್ಯವಾಗಿರಲಿಲ್ಲ. ಈ ಎರಡು ತಾಲೂಕಿನಲ್ಲಿ 62,995 ಬಿಪಿಎಲ್, 13,320 ಅಂತ್ಯೋದಯ, 21,906 ಎಪಿಎಲ್ ಕಾರ್ಡುದಾರರಿದ್ದಾರೆ.
ರಾಜ್ಯ ಸರಕಾರ ಎರಡು ತಿಂಗಳ ಬಾಬ್ತು ಅಕ್ಕಿ ಹಾಗೂ ಗೋಧಿಯನ್ನು ನೀಡುತ್ತಿದ್ದು ಕೇಂದ್ರ ಸರಕಾರ ಅಕ್ಕಿ ಹಾಗೂ ತೊಗರಿಬೇಳೆಯನ್ನು ನೀಡಲಿದೆ.
ಬಿಪಿಎಲ್ ಪಡಿತರ ಚೀಟಿದಾರರಿಗೆ ಪೂರ್ಣಪ್ರಮಾಣದಲ್ಲಿ ಉಚಿತವಾಗಿದ್ದು ಎಪಿಎಲ್ ಪಡಿತರ ಚೀಟಿದಾರರಿಗೆ ನೋಂದಾಯಿಸಿದರೆ ಅಕ್ಕಿ ಕೆಜಿಗೆ 15 ರೂ.ದರದಲ್ಲಿ ವಿತರಿಸಲಾಗುತ್ತದೆ.
ಈ ಲೆಕ್ಕಾಚಾರದಲ್ಲೂ ಈ ತಿಂಗಳಲ್ಲಿ ಅನೇಕರಿಗೆ ನೀಡಲಾಗಿದೆ. ಆದರೆ ಮೇ ತಿಂಗಳಲ್ಲಿ ಅಕ್ಕಿ ಬೇಕೆಂದು ನೋಂದಾಯಿಸದೇ ಇದ್ದರೂ ಅಂತಹವರಿಗೂ ಅಕ್ಕಿ, ಬೇಳೆ, ಗೋಧಿ ದೊರೆಯಲಿದೆ. ಹಸಿವಿನಿಂದ ಇರಬಾರದು ಎನ್ನುವ ಉದ್ದೇಶದಿಂದ ಸರಕಾರ ಈ ಯೋಜನೆ ಮಾಡಿದ್ದು ಎಪಿಎಲ್ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ತೋರಿಸಿದರೆ ನಿಗದಿತ ಪ್ರಮಾಣದ ಪಡಿತರ ದೊರೆಯಲಿದೆ. ಎಪಿಎಲ್ ಪಡಿತರ ಚೀಟಿ ಇಲ್ಲದೇ ಆಧಾರ್ ಮಾತ್ರ ಇರುವ ಎಪಿಎಲ್ ಕುಟುಂಬಗಳಿಗೆ ಅವಶ್ಯವಿದ್ದರೆ ಅವರಿಗೆ ವಿತರಣೆ ಕ್ರಮ ಹೇಗೆ ಎನ್ನುವ ಕುರಿತು ಪರಿವರ್ತಿತ ಮಾರ್ಗಸೂಚಿಗಳಾವುದೂ ಬಂದಿಲ್ಲ.
ಗೋಧಿ ವಿಳಂಬವಾಗಿ ಬಂದ ಕಾರಣ ಎಪ್ರಿಲ್‌ನಲ್ಲಿ ಗೋಧಿ ವಿತರಿಸಿಲ್ಲ. ತೊಗರಿ ಬೇಳೆ ಇನ್ನೂ ಬರದ ಕಾರಣ ಒಂದು ವಾರ ಕಾದು ನಂತರ ಅಕ್ಕಿ, ಬೇಳೆ, ಗೋಧಿ ವಿತರಣೆ ಆರಂಭವಾಗಲಿದೆ. ಎರಡು ತಿಂಗಳ ಪಡಿತರ ಪಡೆಯಲು ಅವಕಾಶ ಇದೆ. ಮಧ್ಯಾಹ್ನವರೆಗೆ 50, ನಂತರ 50 ಎಂದು ದಿನಕ್ಕೆ 100 ಪಡಿತರದಾರರಿಗೆ ಮಾತ್ರ, ಸಾಮಾಜಿಕವಾಗಿ ದೈಹಿಕ ಅಂತರ ಕಾಯ್ದುಕೊಂಡೇ ಪಡಿತರ ವಿತರಣೆಯಾಗಲಿದೆ ಎಂದು ಆಹಾರ ನಿರೀಕ್ಷಕ ಪ್ರಕಾಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.