ಬಹು ನಿರೀಕ್ಷಿತ ಸಿದ್ದಾಪುರ ಏತ ನೀರಾವರಿ ಯೋಜನೆಗೆ ಅನುಮೋದನೆ
ಸಂಸದರು, ಶಾಸಕರ ಮುತುವರ್ಜಿಯಲ್ಲಿ 165 ಕೋ.ರೂ. ಮಂಜೂರು
Team Udayavani, Apr 7, 2022, 11:00 AM IST
ಕುಂದಾಪುರ: ವಾರಾಹಿ ಬಲದಂಡೆ ಹಾದುಹೋಗುವ ಅಚ್ಚುಕಟ್ಟು ಪ್ರದೇಶದ ಸಾವಿರಾರು ಹೆಕ್ಟೇರ್ ಪ್ರದೇಶಗಳಿಗೆ ನೀರು ಒದಗಿಸುವ ಸಿದ್ದಾಪುರ ಏತ ನೀರಾವರಿ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ. 1,200 ಹೆಕ್ಟೇರ್ ಭೂ ಪ್ರದೇಶಗಳಿಗೆ ನೀರು ಒದಗಿಸುವ 165 ಕೋ.ರೂ. ವೆಚ್ಚದ ಯೋಜನೆಗೆ ಬಸವರಾಜ ಬೊಮ್ಮಾಯಿ ಮಂಜೂರಾತಿ ನೀಡಿದ್ದಾರೆ.
ಹೊಳೆ ಶಂಕರನಾರಾಯಣ ಬಳಿ ವಾರಾಹಿ ನದಿಯಿಂದ ಸುಮಾರು 53.67 ಕ್ಯೂಸೆಕ್ಸ್ ನೀರನ್ನು ಮೇಲಕ್ಕೆತ್ತಿ ಸಿದ್ದಾಪುರ, ಆಜ್ರಿ, ಕೊಡ್ಲಾಡಿ, ಹೊಸಂಗಡಿ, ಕರ್ಕುಂಜೆ ಆಸುಪಾಸಿನ 1,200 ಹೆಕ್ಟೇರ್ ಭೂ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ.
0.54 ಟಿಎಂಸಿ ನೀರು ಅಗತ್ಯ
ಈ ಯೋಜನೆಗೆ 0.54 ಟಿಎಂಸಿ ನೀರಿನ ಅವಶ್ಯಕತೆಯಿದೆ. ಸಿದ್ದಾಪುರ ಗ್ರಾಮದ ಮೂಲಕ ಹಾದು ಹೋಗುವ ವಾರಾಹಿ ಕಾಲುವೆಯ ನೀರನ್ನು ಕಾಶಿಕಾಲು ಕೆರೆಗೆ ಹಾಯಿಸಿ, ಕುಬ್ಜಾ ನದಿ ಮೂಲಕ ಹರಿಸುವ ಯೋಜನೆ ಇದಾಗಿದೆ. ವಾರಾಹಿ ಬಲದಂಡೆ ಕಾಲುವೆ ಹಾದುಹೋಗುವ ಸಿದ್ದಾಪುರ ಸುತ್ತಮುತ್ತಲಿನ ಕೆಲವೊಂದು ಗ್ರಾಮಗಳು ಎತ್ತರದ ಪ್ರದೇಶದಲ್ಲಿ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇದರಿಂದಾಗಿ ಈ ಎತ್ತರದ ಪ್ರದೇಶಗಳು ನೀರಾವರಿ ಸೌಲಭ್ಯದಿಂದ ವಂಚಿತರಾಗಿದ್ದು, ಇದಲ್ಲದೆ ಈ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯು ತಲೆದೋರುತ್ತದೆ. ಇಲ್ಲಿನ 1,200 ಹೆಕ್ಟೇರ್ ಪ್ರದೇಶಕ್ಕೆ ಸಿದ್ದಾಪುರ ಏತ ನೀರಾವರಿ ಯೋಜನೆ ವರದಾನವಾಗಲಿದೆ.
ಸಂಸದರ ಅವಿರತ ಪ್ರಯತ್ನ
ಸಿದ್ದಾಪುರ ಏತ ನೀರಾವರಿ ಯೋಜನೆಯನ್ನು 2019ರಲ್ಲಿ ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಆದರೆ ಬಳಿಕ ಮಾತ್ರ ಈ ಯೋಜನೆ ನೆನೆಗುದಿಗೆ ಬಿದ್ದಿತ್ತು. ಬಾಳ್ಕಟ್ಟು ನದಿ ನೀರು ಬಳಕೆದಾರರ ಸಮಿತಿ ಸಿದ್ದಾಪುರ, ಜಿಲ್ಲಾ ರೈತ ಸಂಘವು ಈ ಬಗ್ಗೆ ಅನೇಕ ಸಮಯದಿಂದ ಒತ್ತಾಯಿಸುತ್ತಲೇ ಇತ್ತು. ಆದರೆ ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗವ ಈ ಯೋಜನೆಯನ್ನು ಶತಾಯ – ಗತಾಯ ಅನುಷ್ಠಾನಕ್ಕೆ ತರಲೇಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಅವರು ನಿರಮತರವಾಗಿ ಪ್ರಯತ್ನಿಸುತ್ತಿದ್ದರು. ಬಜೆಟ್‌ಗೂ ಮೊದಲೇ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದರು. ಆದರೆ ಬಜೆಟ್‌ನಲ್ಲಿ ಘೋಷಣೆ ಮಾಡಿರಲಿಲ್ಲ. ಆ ಬಳಿಕವು ಯೋಜನೆ ಜಾರಿಗೆ ಸಂಸದರು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟರ ಸಹಕಾರದೊಂದಿಗೆ ಪ್ರಯತ್ನಿಸುತ್ತಲೇ ಇದ್ದರು. ಕೊನೆಗೂ ಬಹು ನಿರೀಕ್ಷೆಯ ನೀರಾವರಿ ಯೋಜನೆಗೆ ಅನುದಾನ ಮಂಜೂರಾಗಿದೆ.
ಕೃಷಿ ಗೆ ಪ್ರಯೋಜನ
ಸಿದ್ದಾಪುರ ಏತ ನೀರಾವರಿ ಯೋಜನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಒಪ್ಪಿಗೆ ನೀಡಿದ್ದು, ಈ ಕುರಿತಂತೆ ಬಜೆಟ್ ಮೊದಲು ಸಹ ಭೇಟಿ ನೀಡಿ ಮನವಿ ಸಲ್ಲಿಸಿದ್ದೆ. ಈಗ 165 ಕೋ.ರೂ. ಅನುದಾನ ಬಿಡುಗಡೆಯಾಗಲಿದೆ. ಮುಖ್ಯಮಂತ್ರಿಗೆ ಅಭಿನಂದನೆಗಳು. ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಪ್ರಯೋಜನವಾಗಲಿದೆ. – ಬಿ.ವೈ. ರಾಘವೇಂದ್ರ, ಸಂಸದ
ಮುಂದಿನ ಪ್ರಕ್ರಿಯೆ ತ್ವರಿತಗತಿ
ಸಿದ್ದಾಪುರ ಏತ ನೀರಾವರಿ ಯೋಜನೆಗೆ ರಾಜ್ಯ ಸರಕಾರ ಮಂಜೂರಾತಿ ನೀಡಿದ್ದು, ಇದರಿಂದ ಇಲ್ಲಿನ ಅನೇಕ ಊರುಗಳ ಕೃಷಿಕರಿಗೆ ಕೃಷಿಗೆ ವರದಾನವಾಗಲಿದೆ. ಅನುದಾನ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂ ಇದಕ್ಕಾಗಿ ಶ್ರಮಿಸಿದ ಸಂಸದ ರಾಘವೇಂದ್ರ ಅವರಿಗೆ ಕೃತಜ್ಞತೆಗಳು. ಶೀಘ್ರ ಮುಂದಿನ ಹಂತದ ಪ್ರಕ್ರಿಯೆ ತ್ವರಿತಗತಿಯಲ್ಲಿ ಆರಂಭವಾಗಲಿದೆ. – ಬಿ.ಎಂ. ಸುಕುಮಾರ್ ಶೆಟ್ಟಿ , ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.