Baindur; ಒತ್ತಿನೆಣೆ ತಿರುವಿನಲ್ಲಿ ಗುಡ್ಡ ಕುಸಿತ
Team Udayavani, Oct 18, 2024, 1:46 AM IST
ಬೈಂದೂರು: ರಾ.ಹೆ. 66ರ ಬೈಂದೂರು ಸಮೀಪದ ಒತ್ತಿನೆಣೆ ತಿರುವಿನಲ್ಲಿ ಬುಧವಾರ ರಾತ್ರಿ ಗುಡ್ಡದ ಮಣ್ಣು ಕುಸಿದಿದೆ.
ಬೈಂದೂರು ಭಾಗದಲ್ಲಿ ಹಲವು ದಿನಗಳಿಂದ ಅಲ್ಲಲ್ಲಿ ಮಳೆ ಸುರಿ ಯುತ್ತಿದ್ದು, ಬುಧವಾರ ರಾತ್ರಿ ಅಧಿಕ ಮಳೆ ಸುರಿದ ಪರಿಣಾಮ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡದ ಮೇಲ್ಭಾಗದಲ್ಲಿ ಮಣ್ಣು ಅಪಾಯಕಾರಿ ಸ್ಥಿತಿಯಲ್ಲಿದ್ದು, ಕೆಲವು ತಿಂಗಳ ಹಿಂದೆ ಅಗ್ನಿಶಾಮಕ ವಾಹನದ ಮೂಲಕ ನೀರು ಸಿಂಪಡಿಸಿ ಕುಸಿಯುವ ಭೀತಿ ಯಲ್ಲಿರುವ ಗುಡ್ಡದ ಮಣ್ಣನ್ನು ಸಮತಟ್ಟು ಮಾಡಲಾಗಿತ್ತು. ಈ ಹಿಂದೆಯೂ ಈ ಭಾಗದಲ್ಲಿ ಗುಡ್ಡ ಕುಸಿಯುವ ಸಂಭವವಿದ್ದಾಗ ಮಣ್ಣು ತೆರವುಗೊಳಿಸಿ ಮುಂಜಾಗ್ರತೆ ವಹಿಸ ಲಾಗಿತ್ತು. ಕಳೆದೆರಡು ದಿನದಿಂದ ಮಳೆಯ ಪ್ರಮಾಣ ಅಧಿಕವಾದ ಕಾರಣ ಗುಡ್ಡದ ಮಣ್ಣು ಕುಸಿದಿದೆ.
ಒಂದೆರಡು ಟಿಪ್ಪರ್‌ನಷ್ಟು ಮಣ್ಣು ಚರಂಡಿಗೆ ಕುಸಿದಿದ್ದು, ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಗುಡ್ಡದ ಮಣ್ಣು ಕುಸಿತದಿಂದ ಹೆದ್ದಾರಿ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಐಆರ್‌ಬಿ ಅಧಿಕಾರಿಗಳು ಮಣ್ಣು ತೆರವುಗೊಳಿಸಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ. ಒತ್ತಿನೆಣೆ ತಿರುವಿನ ರಾಘವೇಂದ್ರ ಮಠದ ಬಳಿ ಕುಸಿತ ಸಂಭವಿಸುವ ಆತಂಕ ಇರುವ ಕಾರಣ ಹೆದ್ದಾರಿ ಇಲಾಖೆ ಮತ್ತು ಕಂಪೆನಿ ಪ್ಲಾಸ್ಟರಿಂಗ್ ಮೂಲಕ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿದೆ. ಉತ್ತರ ಕನ್ನಡದ ಶಿರೂರು ಗುಡ್ಡ ಕುಸಿತ ಬಳಿಕ ದಿಲ್ಲಿಯಿಂದ ಹಿರಿಯ ಭೂ ವಿಜ್ಞಾನಿಗಳು ಈ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ದಿನದಿಂದ ದಿನಕ್ಕೆ ಕುಸಿತ ಪ್ರಮಾಣ ಹೆಚ್ಚುತ್ತಿರುವ ಸೋಮೇಶ್ವರ ಗುಡ್ಡ
ರಾ.ಹೆ.ಗುಡ್ಡದ ಮುಂಜಾಗ್ರತೆ ಒಂದೆಡೆಯಾದರೆ ಸೋಮೇಶ್ವರ ಗುಡ್ಡ ಮಳೆಯ ಅಬ್ಬರದಿಂದಾಗಿ ಮತ್ತಷ್ಟು ಕುಸಿಯುತ್ತಿದೆ.ಇಲ್ಲಿನ ಗುಡ್ಡ ಭಾಗದಲ್ಲಿ ಖಾಸಗಿ ವ್ಯಕ್ತಿಗಳು ರೆಸಾರ್ಟ್ ನಿರ್ಮಿಸಲು ಅನಧಿಕೃತವಾಗಿ ರಸ್ತೆ ನಿರ್ಮಿಸಿದ ಕಾರಣ ಮಳೆಗಾಲದಲ್ಲಿ ಗುಡ್ಡದ ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಆತಂಕ ಉಂಟು ಮಾಡಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರು ಆಗಮಿಸಿ ಪರಿಶೀಲಿಸಿದರು ಕೂಡ ಇದುವರಗೆ ಯಾವುದೆ ಕ್ರಮ ಕೈಗೊಂಡಿಲ್ಲ. ಬುಧವಾರ ಮಳೆಗೆ ಗುಡ್ಡ ಇನ್ನಷ್ಟು ಕುಸಿದಿದ್ದು, ಗುಡ್ಡದ ಮೇಲ್ಭಾಗದಲ್ಲಿರುವ ಕ್ಷಿತಿಜ ನೇಸರ ಧಾಮ ಕೂಡ ಅಪಾಯದಲ್ಲಿದೆ.ಈ ಬಗ್ಗೆ ಸ್ಥಳೀಯರು ನಿರಂತರ ಧ್ವನಿಎತ್ತಿದರೂ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.