Kundapura: ಬನ್ಸ್ ರಾಘು ಕೊಲೆ ಪ್ರಕರಣ; ಶಿವಮೊಗ್ಗ ಮೂಲದ ಇಬ್ಬರ ಬಂಧನ
Team Udayavani, Oct 6, 2023, 2:02 PM IST
ಕುಂದಾಪುರ: ಇಲ್ಲಿನ ನಗರದಲ್ಲಿ ರವಿವಾರ ಸಂಜೆ ಚೂರಿ ಇರಿತದಿಂದ ರಾಘವೇಂದ್ರ ಶೇರುಗಾರ್ ಕೊಲೆಗೆ ಸಂಬಂಧಿಸಿದ ಶಿವಮೊಗ್ಗ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ನಗರದ ಚಿಕ್ಕನ್‌ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ರಾಘವೇಂದ್ರ ಶೇರುಗಾರ್ ಯಾನೆ ಬನ್ಸ್ ರಾಘು (42) ಸೋಮವಾರ ಮೃತಪಟ್ಟಿದ್ದರು.
ಅಪರಿಚಿತರಿಂದಲೇ ಕೃತ್ಯ
ಕೊಲೆಯಾದ ಬಳಿಕ ರಾಘವೇಂದ್ರ ಅವರಿಗೂ ಕೊಲೆಗಡುಕರಿಗೂ ಪರಿಚಯ ಇತ್ತು, ಹಳೆ ವೈಷಮ್ಯ ಇತ್ತು, ಹಣದ ವ್ಯವಹಾರದಲ್ಲಿ ತಕರಾರು ಇತ್ತು ಎಂದೆಲ್ಲ ಪುಕಾರುಗಳು ಹಬ್ಬಿದ್ದವು. ಆದರೆ ಕಾರುಗಳು ಪರಸ್ಪರ ಸ್ಪರ್ಶಿಸಿಕೊಂಡಲ್ಲಿಂದ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿತ್ತು ಎಂದು ಗೊತ್ತಾಗಿದೆ. ಕೊಲೆ ಆರೋಪಿಗಳು ಬನ್ಸ್ ರಾಘು ಅವರಿಗೆ ಪರಿಚಿತರಲ್ಲ ಎನ್ನುವುದೂ ತನಿಖೆ ವೇಳೆ ಬಯಲಾಗಿದೆ.
ಪೂರ್ವದ್ವೇಷ ಇರಲಿಲ್ಲ
ಮೊದಲಿಗೆ ಪೂರ್ವ ದ್ವೇಷದಿಂದಲೇ ರಾಘವೇಂದ್ರ ಅವರ ಹತ್ಯೆಗೆ ಸಂಚು ರೂಪಿಸಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದು ಪೂರ್ವ ದ್ವೇಷದ ಕೃತ್ಯವಲ್ಲ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
ಕ್ಷಿಪ್ರ ಪತ್ತೆಗೆ ಮೂರು ತಂಡ
ಆರೋಪಿ ಶಿವಮೊಗ್ಗ ಮೂಲದವ ಎಂದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಪಿ ಅವರು ಆರೋಪಿಗಳ ಪತ್ತೆಗೆ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ, ವೃತ್ತ ನಿರೀಕ್ಷಕ ನಂದಕುಮಾರ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ್ ನೇತೃತ್ವದಲ್ಲಿ 3 ವಿಶೇಷ ತಂಡಗಳನ್ನು ರಚಿಸಿದ್ದರು. ಕ್ಷಿಪ್ರ ಕಾರ್ಯಾಚರಣೆಯಲ್ಲಿ ಸೂಕ್ತ ಸುಳಿವು ಇಲ್ಲದಿದ್ದರೂ, ಸಾಕ್ಷ್ಯಗಳು ದೊರೆಯದಂತೆ ಆರೋಪಿಗಳು ಪರಾರಿಯಾಗಿದ್ದರೂ, ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಅಪಘಾತ ಕಾರಣ!
ಸಂಗಮ್ ಬಳಿಯಿಂದ ಬರುತ್ತಿದ್ದ ವ್ಯಾಗನರ್ ಕಾರು ಹಾಗೂ ರಾಘು ಅವರ ಕಾರು ತುಸು ಸ್ಪರ್ಶವಾಗಿತ್ತು. ಈ ಸಂದರ್ಭ ಸಣ್ಣ ಮಾತಿನ ಚಕಮಕಿಯಲ್ಲಿ ಮುಗಿಯಬಹುದಾಗಿದ್ದ ಪ್ರಕರಣ ಹಿಂಬಾಲಿಸಿಕೊಂಡು ಬಂದು ಜಗಳ ಮಾಡುವಲ್ಲಿಗೆ ತಲುಪಿದೆ. ಪರಸ್ಪರ ಹಲ್ಲೆ ನಡೆದಿತ್ತು. ನಡೆಯುತ್ತಿದ್ದ ಜಗಳವನ್ನು ಸ್ಥಳೀಯರು ಬಿಡಿಸಿ ಒಂದು ಹಂತದಲ್ಲಿ ಪ್ರಕರಣ ಮುಗಿವಲ್ಲಿಗೆ ತಲುಪಿತ್ತಾದರೂ, ಮತ್ತೆ ಹೊಡೆದಾಟ ನಡೆದು ಚೂರಿ ಹಾಕುವಲ್ಲಿಯವರೆಗೆ ಹೋಗಿ ಕೊಲೆಯಾಗುವ ಹಂತ ತಲುಪಿತ್ತು.
ದುಶ್ಚಟವೇ ಅವರ ಹವ್ಯಾಸ!
ಆರೋಪಿಗಳು ಶಿವಮೊಗ್ಗದವರಾಗಿದ್ದು, ಈ ಪೈಕಿ ಒಬ್ಬನಿಗೆ ಉಡುಪಿ ಜಿಲ್ಲೆಯಿಂದ ವಿವಾಹವಾಗಿದೆ. ಕುಂದಾಪುರ, ಭಟ್ಕಳ ಪರಿಸರ ಸೇರಿದಂತೆ ವಿವಿಧೆಡೆ ಜುಗಾರಿ, ಇಸ್ಪೀಟ್ ಆಡುವುದು ಇವರ ದುಶ್ಚಟ. ಹಾಗೆ ಸೆ. 29ರಂದು ಕುಂದಾಪುರಕ್ಕೆ ಬಂದು ಇಲ್ಲಿನ ನಗರದ ಲಾಡ್ಜ್ ಒಂದರಲ್ಲಿ ತಂಗಿದ್ದ ಆರೋಪಿಗಳು ಕೋಣಿ ಪ್ರದೇಶದ ಮನೆಯೊಂದರಲ್ಲಿ ನಡೆಯುತ್ತಿದ್ದ ಜುಗಾರಿ ಆಟದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಜುಗಾರಿ ಮುಗಿಸಿ ಮರಳಿ ಬರುವಾಗ ಈ ದುರ್ಘಟನೆ ನಡೆದಿದೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.
8ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣ
ಆರೋಪಿಗಳ ಪೈಕಿ ಒಬ್ಟಾತನ ಮೇಲೆ 8ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ ಎನ್ನಲಾಗಿದೆ. ಚೂರಿ ಹಿಡಿದುಕೊಂಡೇ ತಿರುಗಾಡುವ ಈತ ಸಣ್ಣಪುಟ್ಟ ಜಗಳಗಳಲ್ಲೂ ಚೂರಿ ಝಳಪಿಸುವವನಾಗಿದ್ದ. ಕೆಲವು ಸಮಯಗಳ ಹಿಂದೆ ಆಗುಂಬೆಯಲ್ಲಿ ಅಪಘಾತ ಸಂಭವಿಸಿದಾಗ ನಡೆದ ಜಗಳದಲ್ಲೂ ಒಬ್ಬರಿಗೆ ಚೂರಿಯಿಂದ ಈತ ಇರಿದಿದ್ದ ಎಂಬ ಮಾಹಿತಿಯಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಇಲ್ಲಿ ಕೊಲೆಯಲ್ಲಿ ಪರ್ಯಾವಸನವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.