ಕೋವಿಡ್ ಗೆದ್ದವರು; ಅಧೀರನಾದದ್ದು ಸಹಜ, ಈಗ ಸದೃಢನಾಗಿದ್ದೇನೆ
ಕುಂದಾಪುರ ಸಂಚಾರ ಠಾಣೆಯ ಎಎಸ್‌ಐ ಸುರೇಶ್ ಧೀರ ನುಡಿ
Team Udayavani, Jul 25, 2020, 8:26 AM IST
ರೋಗಿ ಎಂದು ಉಪೇಕ್ಷಿಸುವ ಬದಲು ಧೈರ್ಯ ತುಂಬುವ ಕೆಲಸವೇ ಅರ್ಧ ರೋಗ ಗುಣಪಡಿಸುತ್ತದೆ. ನನಗೆ ಎಲ್ಲ ಮೇಲಧಿಕಾರಿಗಳು ನಿತ್ಯವೂ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು.
ಕುಂದಾಪುರ: ವಾರಗಳ ಹಿಂದೆಯಷ್ಟೇ ಶಿರ್ವದಿಂದ ಕುಂದಾಪುರಕ್ಕೆ ವರ್ಗವಾಗಿತ್ತು. ಅವಿಭಜಿತ ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚಿನ ಕೊರೊನಾ ಸೋಂಕು ಪೀಡಿತರು ಇದ್ದಾರೆ ಎಂದು ತಿಳಿದಿತ್ತು. ಧೈರ್ಯ ಮಾಡಿ ಜೂ.18ಕ್ಕೆ ಕುಂದಾಪುರದಲ್ಲಿ ಕೆಲಸಕ್ಕೆ ಹಾಜರಾದೆ. ಹೈವೇ ಪೆಟ್ರೋಲ್ ವಾಹನದಲ್ಲಿ 8 ದಿನ ಕರ್ತವ್ಯ ನಿರ್ವಹಿಸಿದ್ದೆ. ಜು.4ರಂದು ಶೀತ ಆರಂಭವಾಯಿತು. ಅದಾಗಲೇ ಠಾಣೆಯಲ್ಲಿ ಒಬ್ಬರಿಗೆ ಪಾಸಿಟಿವ್ ಬಂದಿತ್ತು. ಆ ಅನುಮಾನದಿಂದ ತಪಾಸಣೆ ಮಾಡಿಸಿಕೊಳ್ಳಲು ಹಿರಿಯ ಅಧಿಕಾರಿಗಳು ಸಲಹೆ ನೀಡಿದರು. ಜು.6ರಂದು ಗಂಟಲ ದ್ರವ ಮಾದರಿ ನೀಡಲಾಯಿತು. ಈ ವೇಳೆ ಹೋಂ ಕ್ವಾರಂಟೈನ್‌ನಲ್ಲಿದ್ದೆ. ಜು.13ಕ್ಕೆ ಪಾಸಿಟಿವ್ ಎಂದು ವರದಿ ಬಂತು. ಆಗ ಸ್ವಲ್ಪ ಧೈರ್ಯಗುಂದಿತು. ಆಸ್ಪತ್ರೆಗೆ ಕರೆದೊಯ್ಯಲು ಮೂರು ದಿನಗಳಾದರೂ ಆ್ಯಂಬುಲೆನ್ಸ್ ಬಾರದೇ ಇದ್ದಾಗ ಅಧೀರನಾಗತೊಡಗಿದೆ. ಆದರೆ ಪೊಲೀಸ್ ಸೇವೆಯಲ್ಲಿದ್ದ ಕಾರಣ ಮನಸ್ಸು ವಿಚಲಿತವಾಗಲಿಲ್ಲ. ಹಾಗಾಗಿ ಧೈರ್ಯ ತಂದುಕೊಂಡೆ. ಜು.17ಕ್ಕೆ ಮಣಿಪಾಲ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾದೆ ಎಂದು ಕೊರೊನಾ ಗೆದ್ದಿರುವ ಕುಂದಾಪುರ ಸಂಚಾರ ಠಾಣೆಯ ಎಎಸ್‌ಐ ಸುರೇಶ್ ಅವರು ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಅನೇಕರು ಭಯದ ವಾತಾವರಣದಲ್ಲಿ ಇದ್ದರು. ಅವರನ್ನೆಲ್ಲ ನೋಡಿದಾಗ ನನಗೂ ಅರೆಕ್ಷಣ ಅಳುಕು ಮೂಡಿದ್ದು ಸುಳ್ಳಲ್ಲ. ಆದರೆ ಧೈರ್ಯ ಮಾಡಿಕೊಂಡೆ. ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಆಗಾಗ ವೈದ್ಯರು, ದಾದಿಯರು ಬಂದು ವಿಚಾರಿಸಿಕೊಂಡು ಹೋಗುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ಚಹಾ, ಹಣ್ಣು, ವಿಟಮಿನ್ ಮಾತ್ರೆ, ಸ್ನಾನಕ್ಕೆ ಬಿಸಿನೀರು ಎಲ್ಲ ದೊರೆಯುತ್ತಿತ್ತು. ಇವೆಲ್ಲದರಿಂದ ನನ್ನಲ್ಲಿ ಮನೋಸ್ಥೈರ್ಯ ತುಂಬಿತು. ಅಲ್ಲಿದ್ದ ಇತರ ಸೋಂಕಿತರಿಗೂ ನಾನೇ ಧೈರ್ಯ ಹೇಳತೊಡಗಿದೆ. ಪೊಲೀಸ್ ಎಂಬ ನೆಲೆಯಲ್ಲೋ ಏನೋ ಅವರಿಗೂ ನನ್ನ ಮಾತುಗಳ ಮೇಲೆ ವಿಶ್ವಾಸ ಮೂಡಿತು. ಎಸ್‌ಪಿ, ಎಎಸ್‌ಪಿ, ಎಸ್‌ಐ ಮೊದಲಾದವರು ಪ್ರತಿನಿತ್ಯ ಕರೆ ಮಾಡಿ ಕಾಳಜಿಯಿಂದ ನನ್ನ ಆರೋಗ್ಯ ವಿಚಾರಿಸುತ್ತಿದ್ದರು. ಇದರಿಂದ ನಾನು ಮತ್ತಷ್ಟು ನಿರಾಳನಾದೆ. ಐದೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ತಲುಪಿದೆ. ಮನೆಗೆ ಬಂದ ಬಳಿಕ ನೆಲನೆಲ್ಲಿ ಕಷಾಯ, ಉಪ್ಪು, ಅರಶಿನ ಮಿಶ್ರಣವನ್ನು ಹದ ಬಿಸಿನೀರಿಗೆ ಹಾಕಿ ಗಂಟಲು ಶುಚಿಗೊಳಿಸುತ್ತಿದ್ದೇನೆ ಎನ್ನುತ್ತಾರೆ ಸುರೇಶ್.
ಶೀತ, ಜ್ವರ ಕಾಣಿಸಿಕೊಂಡಾಗ ಭಯಪಟ್ಟರೆ ಅದು ಮತ್ತಷ್ಟು ಹೆಚ್ಚಾಗಬಹುದು. ಅಂತಹ ಭಯ ಅನಗತ್ಯ. ಸೋಂಕು ಪೀಡಿತನಾದಾಗ ಇಲಾಖೆಯ ಹಿರಿಯ ಅಧಿಕಾರಿಗಳು ನನಗೆ ಧೈರ್ಯ ತುಂಬಿದರು. ನಾನು ಆಸ್ಪತ್ರೆಯಲ್ಲಿದ್ದವರಿಗೆ, ಮನೆಯವರಿಗೆ ಧೈರ್ಯ ತುಂಬಿದೆ. ಈಗ ಎಲ್ಲರಿಗೂ ಧೈರ್ಯ ಹೇಳುವಷ್ಟು ಸದೃಢನಾಗಿದ್ದೇನೆ.
-ಸುರೇಶ್, ಎಎಸ್‌ಐ, ಸಂಚಾರ ಠಾಣೆ, ಕುಂದಾಪುರ
ಜಾಗೃತಿ ಮೂಡಿಸುವ ಪ್ರಯತ್ನ:ಡಿಸಿ
ಕೊರೊನಾ ಸೋಂಕಿನಿಂದ ಗುಣಮುಖರಾಗಿರುವವರ ಬಗ್ಗೆ ಉದಯವಾಣಿಯಲ್ಲಿ ಪ್ರಕಟಗೊಳ್ಳುತ್ತಿರುವ “ಕೊರೊನಾ ಗೆದ್ದವರು’ ಧನಾತ್ಮಕ ಚಿಂತನೆಯ ವರದಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಒಂದು ಉತ್ತಮ ಪ್ರಯತ್ನ. ಕೊರೊನಾ ಸೋಂಕಿತರಲ್ಲಿ ಇರುವ ಅನಗತ್ಯ ಭಯ ನಿವಾರಣೆಯಾಗಿ ಅವರಲ್ಲಿ ಧೈರ್ಯ ತುಂಬುವಲ್ಲಿ ಕೊರೊನಾದಿಂದ ಗುಣಮುಖರಾದವರು ಹೇಳುವ ಧೈರ್ಯದ ಮಾತುಗಳು ಈ ಹಂತದಲ್ಲಿ ಮಹತ್ವದ್ದಾಗಿರುತ್ತದೆ.
-ಸಿಂಧೂ ಬಿ.ರೂಪೇಶ್, ಜಿಲ್ಲಾಧಿಕಾರಿ ದಕ್ಷಿಣ ಕನ್ನಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.